ತೋರಣಗಲ್ಲು: ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಅರ್ಹ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಬೇಕು ಸೇರಿದಂತೆ ಗ್ರಾಮದಲ್ಲಿನ ವಿವಿಧ ಮೂಲಸೌಲಭ್ಯಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕೆಂದು ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ಒತ್ತಾಯಿಸಿದೆ. ತೋರಣಗಲ್ಲು
ಈ ಕುರಿತು ಡಿವೈಎಫ್ಐ ಮುಖಂಡರು ತೋರಣಗಲ್ಲು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹನುಮಂತಪ್ಪ ಮಾಗಿ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದರೂ ಸ್ಥಳೀಯ ಬಡಜನರಿಗೆ ಸಮರ್ಪಕ ಉದ್ಯೋಗ, ಆರೋಗ್ಯ ಹಾಗೂ ಶಿಕ್ಷಣದಂತಹ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ. ವಿಶೇಷವಾಗಿ ಮಹಿಳೆಯರು ಸೇರಿದಂತೆ ಅನೇಕ ಕುಟುಂಬಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್ಆರ್ಇಜಿಎಸ್) ಕೆಲಸವನ್ನೇ ಅವಲಂಬಿಸಿವೆ. ಹೀಗಾಗಿ ಎಲ್ಲ ಅರ್ಹ ಕಾರ್ಮಿಕರಿಗೆ ಕೂಡಲೇ ಕೆಲಸ ಒದಗಿಸಿ, ಕಾನೂನುಬದ್ಧ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇದೇ ವೇಳೆ, ಹಿಂದೆ ಕೆಲಸ ಮಾಡಿದ ಕಾರ್ಮಿಕರಿಗೆ ಬಾಕಿ ಉಳಿದಿರುವ ಕೂಲಿಯನ್ನು ಪರಿಶೀಲಿಸಿ ತಕ್ಷಣವೇ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು. ಗ್ರಾಮ ಪಂಚಾಯಿತಿ ಬಳಿಯಿರುವ ಆರ್ಒ ನೀರು ಶುದ್ಧೀಕರಣ ಘಟಕವನ್ನು ಪಂಚಾಯಿತಿ ವಶಕ್ಕೆ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಕಾರ್ಯನಿರ್ವಹಿಸದ ಆರ್ಒ ಘಟಕಗಳನ್ನು ದುರಸ್ತಿಗೊಳಿಸಿ ಪುನಃ ಚಾಲನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ : ಎಸ್ಐಆರ್ ಕರ್ತವ್ಯದಲ್ಲಿರುವ ಚುನಾವಣಾ ಸಿಬ್ಬಂದಿಗೆ ₹6,000 ವಿಶೇಷ ಗೌರವಧನ ಘೋಷಿಸಿದ ಚುನಾವಣಾ ಆಯೋಗ
ಜಲ್ ಜೀವನ್ ಮಿಷನ್ (ಜೆಜೆಎಂ) ಕಾಮಗಾರಿಗಳಿಂದ ಹದಗೆಟ್ಟಿರುವ ಸಿಸಿ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದಲ್ಲಿನ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಾಲುವೆ ಗುಡ್ಡದ ಸಮೀಪ ವಾಸಿಸುವ ಕುಟುಂಬಗಳಿಗೆ ನಿರಂತರ ನೀರು ಪೂರೈಕೆ ಹಾಗೂ ಕಸ ವಿಲೇವಾರಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಲಾಗಿದೆ. ನಿರ್ಮಾಣ ಪೂರ್ಣಗೊಂಡಿದ್ದರೂ ಉದ್ಘಾಟನೆಯಾಗದ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಶೀಘ್ರ ಸಾರ್ವಜನಿಕ ಬಳಕೆಗೆ ತೆರೆಯಬೇಕು. ಅದರ ಆವರಣದಲ್ಲಿ ಉದ್ಯಾನ ನಿರ್ಮಿಸಿ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಲಾಗಿದೆ.
ವಸತಿ ನಿವೇಶನವಿಲ್ಲದ ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿವೇಶನಗಳನ್ನು ಮಂಜೂರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಡಿವೈಎಫ್ಐ ಮನವಿ ಮಾಡಿದೆ.
ಐತಿಹಾಸಿಕ ಕ್ರೀಡಾ ಪರಂಪರೆ ಹೊಂದಿರುವ ತೋರಣಗಲ್ಲು ಗ್ರಾಮದಲ್ಲಿ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮೊದಲ ವಾರ್ಡ್ ಹೊರವಲಯದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕು. ಜೊತೆಗೆ ಯುವಜನರಲ್ಲಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಳೆಸಲು ತರಬೇತಿ ಕೇಂದ್ರ ಸ್ಥಾಪಿಸಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿವೈಎಫ್ಐ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಸ್ವಾಮಿ, ತಾಲೂಕು ಕಾರ್ಯದರ್ಶಿ ನಾಗಭೂಷಣ, ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಮಹಿಳಾ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎ. ಸ್ವಾಮಿ, ಉದ್ಯೋಗ ಖಾತ್ರಿ ಕಾರ್ಮಿಕ ಮುಖಂಡರಾದ ಮರಿಯಮ್ಮ, ಶಕುಂತಲಾ, ಹುಲಿಗೇಮ್ಮ, ವೆಂಕುಮಾರಿ, ನೀಲಮ್ಮ, ಸುಶೀಲಮ್ಮ, ವಂಡ್ರಮ್ಮ, ದುರುಗಮ್ಮ, ನಿಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ರಾಜ್ಯದ ನಿರುದ್ಯೋಗ ಪ್ರಮಾಣ ಶೇ.8.6: ಕಂಬಳದ ಉದ್ಯೋಗ ಕೊಡುವಿರಾ ಮುಖ್ಯಮಂತ್ರಿಗಳೇ? Janashakthi Media
