ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ಬಾಲಕಿ ಹಾಗೂ ಆಕೆಯ ಕುಟುಂಬಕ್ಕೆ ಬೆದರಿಕೆ ಮತ್ತು ಕಿರುಕುಳ ನೀಡಲಾಗಿದೆ ಎಂಬ ಆರೋಪವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಬಾಲಕಿ ದಾಖಲಿಸಿರುವ ಎಫ್‌ಐಆರ್ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಸೂಚಿಸಿದೆ. ಅಪ್ರಾಪ್ತ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ್ ಅವರನ್ನೊಳಗೊಂಡ ಪೀಠವು ಬಾಲಕಿ ಮತ್ತು ಆಕೆಯ ಕುಟುಂಬಕ್ಕೆ ಅಗತ್ಯ ಭದ್ರತೆ ಒದಗಿಸುವಂತೆಯೂ ಸೂಚಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಂದ ವರದಿಯನ್ನು ಪಡೆಯಲು ನ್ಯಾಯಾಲಯ ನಿರ್ಧರಿಸಿದೆ. ಮಗುವಿನ ವಿರುದ್ಧದ ಹಿಂಸಾಚಾರ ಅಥವಾ ಆಕೆಯನ್ನು ಹಾಗೂ ಕುಟುಂಬವನ್ನು ಪ್ರಕರಣದಿಂದ ಹಿಂದೆ ಸರಿಯುವಂತೆ ಬೆದರಿಸುವ ಪ್ರಯತ್ನಗಳನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಲಾಗದು ಎಂದು ಪೀಠ ಎಚ್ಚರಿಸಿದೆ.
ಬಾಲಕಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿ, ಆಕೆ ಎಫ್‌ಐಆರ್ ದಾಖಲಿಸಿದ ಬಳಿಕ ಕಿರುಕುಳ ಎದುರಿಸಿದ್ದಾಳೆ ಮತ್ತು ಆಕೆಯ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಆರೋಪಿಸಿದರು. ಈ ಸಂಬಂಧದ ವಿಡಿಯೋ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದರು. ಬಾಲಕಿಯ ತಂದೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಸಾಮಾಜಿಕ ಜಾಲತಾಣದ ವಿಡಿಯೋದಲ್ಲಿ ಹೇಳಿಕೊಂಡಿರುವ ಹಿಂದೂತ್ವಪರ ಪ್ರಭಾವಿ ಸ್ವತಂತ್ರ ಭಾರದ್ವಾಜ್ ವಿರುದ್ಧ ಬಾಲಕಿ ದೂರು ದಾಖಲಿಸಿದ್ದಾಳೆ ಎಂದು ವಕೀಲರು ತಿಳಿಸಿದರು.
ಇದೇ ವೇಳೆ, ಆರೋಪಿಯೊಂದಿಗೆ ಇದ್ದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಾಲಕಿ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ ಎಂಬ ಆರೋಪವನ್ನೂ ಆಕೆಯ ಪರ ವಕೀಲರು ಮಾಡಿದರು. ಈ ಕ್ರಮವು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಕ್ಕೆ ವಿರುದ್ಧವಾಗಿದೆ ಎಂದು ಅವರು ವಾದಿಸಿದರು. ಪ್ರಕರಣದ ವ್ಯಾಪಕ ವಿಚಾರಣೆಗೆ ಈಗಾಗಲೇ ಉನ್ನತ ಮಟ್ಟದ ಸಮಿತಿ ರಚನೆಯಾಗಿದ್ದು, ಆ ಸಮಿತಿ ತನ್ನ ವರದಿ ನೀಡಲು ಸಮಯ ಬೇಕಾಗಬಹುದು. ಆದರೆ ಅದುವರೆಗೆ ಬಾಲಕಿಗೆ ಏನಾದರೂ ಅನಾಹುತವಾದರೆ ನಂತರ ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಅಪ್ರಾಪ್ತ
ಇದನ್ನೂ ನೋಡಿ : “ಆಪರೇಷನ್ ನಂತರ ಗಂಭೀರ ಸಮಸ್ಯೆ! ವೈದ್ಯರ ನಿರ್ಲಕ್ಷ್ಯವೇ?” Janashakthi Media
ಈ ಪ್ರಕರಣದ ಕೇಂದ್ರಬಿಂದುವಾಗಿರುವ ಸ್ವತಂತ್ರ ಭಾರದ್ವಾಜ್ ವಿರುದ್ಧ ಸೆಪ್ಟೆಂಬರ್ 5ರಂದು ದಾಖಲಿಸಲಾಗಿದ್ದ ಎಫ್‌ಐಆರ್‌ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳನ್ನೂ ಸೇರಿಸಲಾಗಿತ್ತು. ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ CJP ಪ್ರತಿಭಟನೆಯ ಸಂದರ್ಭದಲ್ಲಿ ಬಾಲಕಿ ನಿಶು ಆಜಾದ್ ಅವರ ತಂದೆ ಸಂಜಯ್ ಕುಮಾರ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣ ದಾಖಲಾಗಿದೆ.
ಭಾರದ್ವಾಜ್ ವಿರುದ್ಧ ಬಾಲಕಿ ಮತ್ತೊಂದು ದೂರು ನೀಡಿದ್ದು, ಆನ್‌ಲೈನ್ ಮೂಲಕ ಬೆದರಿಕೆ, ಕಿರುಕುಳ ಮತ್ತು ಲೈಂಗಿಕ ಬೆದರಿಕೆಗಳು ಬರುತ್ತಿವೆ ಎಂದು ಆರೋಪಿಸಿದ್ದಾಳೆ. ಈ ದೂರಿನ ಆಧಾರದ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ. ಬಳಿಕ ಭಾರದ್ವಾಜ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಅವರ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 9ರಂದು ತಿರಸ್ಕರಿಸಿದೆ.
ಇದಕ್ಕೂ ಮುನ್ನ ಜುಲೈನಲ್ಲಿ CJP ನಡೆಸಿದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದೇಶದ ವಿವಿಧೆಡೆ ದಾಖಲಾಗಿದ್ದ ಎಫ್‌ಐಆರ್‌ಗಳನ್ನು ಸೆಪ್ಟೆಂಬರ್ 1ರಂದು ಸುಪ್ರೀಂ ಕೋರ್ಟ್ ತನ್ನ ಸಂವಿಧಾನದ 142ನೇ ವಿಧಿಯ ವಿಶೇಷ ಅಧಿಕಾರ ಬಳಸಿ ರದ್ದುಪಡಿಸಿತ್ತು. ಜೊತೆಗೆ ಪ್ರತಿಭಟನೆ, ವಿದ್ಯಾರ್ಥಿಗಳ ಅಹವಾಲುಗಳು ಮತ್ತು ಪೊಲೀಸರ ಕ್ರಮಗಳ ಕುರಿತು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನೂ ರಚಿಸಿತ್ತು. ಆದರೆ ಅಪ್ರಾಪ್ತ ಬಾಲಕಿಯ ಸುರಕ್ಷತೆ ಮತ್ತು ಆಕೆಯ ಪ್ರತ್ಯೇಕ ಕ್ರಿಮಿನಲ್ ದೂರಿನ ವಿಚಾರದಲ್ಲಿ ಸಮಿತಿಯ ವರದಿಗಾಗಿ ಕಾಯಲು ಸಾಧ್ಯವಿಲ್ಲ ಎಂಬ ನಿಲುವನ್ನು ಇದೀಗ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಅಪ್ರಾಪ್ತ
ಇದನ್ನೂ ಓದಿ : ಕೆಎಸ್‌ಆರ್‌ಟಿಸಿ ಟಿಕೆಟ್‌ಗೆ ಹೊಸ ದಾರಿ: ವಾಟ್ಸಾಪ್‌ನಲ್ಲೇ ಬುಕ್ಕಿಂಗ್
