ಬೆಂಗಳೂರು: ಕಾರ್ಪೊರೇಟ್ ರಿಯಲ್ ಎಸ್ಟೇಟ್ ಭೂ ಕಬಳಿಕೆ ವಿರುದ್ಧ, ತಮ್ಮ ಫಲವತ್ತಾದ, ನೀರಾವರಿ ಸಮೃದ್ಧ, ಬಹು ವಾರ್ಷಿಕ ಬೆಳೆ ಇರುವ ಕೃಷಿ ಭೂಮಿ ಉಳಿಸಿಕೊಳ್ಳಲು ಹೋರಾಡುತ್ತಿರುವ ರಾಮನಗರ ಜಿಲ್ಲೆ ಬಿಡದಿ ಹೋಬಳಿ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರನ್ನು ಬೆಂಬಲಿಸಿ, ಬಿಡದಿ ಟೌನ್ ಶಿಪ್ ಯೋಜನೆಗೆ ನೀಡಿರುವ ಸಂಪುಟ ಅನುಮೋದನೆ ವಾಪಸು ಪಡೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಆಗ್ರಹಿಸಿ, ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ರದ್ದುಪಡಿಸಲು ಒತ್ತಾಯಿಸಿ ಮೇ 29, 2026 ರಂದು ಬೈರಮಂಗಲ ಚಲೋ ಹಮ್ಮಿಕೊಳ್ಳಲಾಗಿದೆ.
ಬೈರಮಂಗಲ ಕ್ರಾಸ್ ಹಾರೋಹಳ್ಳಿ ಮುಖ್ಯರಸ್ತೆಯ ಅಬ್ಬನಕುಪ್ಪೆ ಬಿಎಂಟಿಸಿ ಬಸ್ ಡಿಪೋ ದಿಂದ ಅಂದು ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗುವ ಮೆರವಣಿಗೆಯನ್ನು ಅಖಿಲ ಭಾರತ ಕಿಸಾನ್ ಸಭಾ (AIKS) ರಾಷ್ಟ್ರೀಯ ಸಹ ಕಾರ್ಯದರ್ಶಿ ಕಾಂ.ಡಿ ರವೀಂದ್ರನ್ ಉದ್ಘಾಟಿಸಲಿದ್ದು, ಸಿಐಟಿಯು ರಾಜ್ಯ ಪ್ರದಾನ ಕಾರ್ಯದರ್ಶಿ ಎಸ್ ವರಲಕ್ಷ್ಮಿ, ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯಾಧ್ಯಕ್ಷರಾದ ಯು ಬಸವರಾಜ, ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ ಟಿ., ಹಿರಿಯ ರೈತ ಮುಖಂಡರಾದ ಎನ್. ವೆಂಕಟಾಚಲಯ್ಯ ಸೇರಿದಂತೆ ಎಲ್ಲಾ ರಾಜ್ಯ ಪದಾಧಿಕಾರಿಗಳು ಹಾಗೂ ರಾಜ್ಯದಾದ್ಯಂತ ನೂರಾರು ಕರ್ನಾಟಕ ಪ್ರಾಂತ ರೈತ ಸಂಘ (KPRS)ದ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಕಳೆದ 435 ದಿನಗಳಿಂದ ಆಹೋ ರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಕಂದಾಯ ಗ್ರಾಮಗಳಾದ ಅರಳಾಳುಸಂದ್ರ, ಬನ್ನಿಗಿರಿ, ಭೈರಮಂಗಲ, ಕೆ.ಜಿ ಗೊಲ್ಲರಪಾಳ್ಯ, ಹೊಸೂರು, ಮಂಡಲಹಳ್ಳಿ, ಕೆಂಪಯ್ಯನಪಾಳ್ಯ, ಕಂಚುಗಾರನಹಳ್ಳಿ ಹಾಗೂ ವಡೇರಹಳ್ಳಿ ಹಾಗೂ ಈ ಕಂದಾಯ ಗ್ರಾಮಗಳಿಗೆ ಹೊಂದಿಕೊಂಡ 16 ದಾಖ್ಲೆ ಗ್ರಾಮಗಳ ರೈತರು ಕಾರ್ಪೊರೇಟ್ ಭೂ ಕಬಳಿಕೆ ವಿರುದ್ಧ ಸಮರಶೀಲ ಸಂಘರ್ಷ ನಡೆಸುತ್ತಿದ್ದು, ಅಂದು ಬೈರಮಂಗಲ ವೃತ್ತದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಲಾಗುವುದು.
ಇದನ್ನೂ ಓದಿ: ರಾಜೌರಿ ಭಯೋತ್ಪಾದಕರ ಶೋಧಕ್ಕೆ ಹೆಚ್ಚುವರಿ ಪಡೆ ನಿಯೋಜನೆ
ಫಲವತ್ತಾದ ಬಹು ವಾರ್ಷಿಕ ಸಮೃದ್ಧ ನೀರಾವರಿ ಕೃಷಿ ಭೂಮಿಯನ್ನು ನಾಶ ಮಾಡಿ ನಿರ್ಮಿಸಲು ಉದ್ದೇಶಿಸಿರುವ ಬಿಡದಿ ಟೌನ್ ಶಿಪ್ ಯೋಜನೆ ರೈತ ವಿರೋಧಿ ಹಾಗೂ ಜೀವ ಪರಿಸರ ವ್ಯವಸ್ಥೆಗೆ ವಿನಾಶಕಾರಿಯಾಗಿದ್ದು ಇಂತಹ ಪರಿಸರ ವಿನಾಶದ ಬಿಡದಿ ಟೌನ್ ಶಿಪ್ ಯೋಜನೆಗೆ ಇರುವ ರೈತರ ಪಕ್ಷಾತೀತ ವಿರೋಧವನ್ನು ಪರಿಗಣಿಸದೇ ಏಪ್ರಿಲ್ 30, 2026 ರಂದು ರಾಜ್ಯ ಸರ್ಕಾರದ ಸಂಪುಟ ಅನುಮೋದನೆ ನೀಡಿರುವುದು ರೈತರ ಸಂವಿಧಾನ ಬದ್ದ ಹಕ್ಕುಗಳ ಉಲ್ಲಂಘನೆ ಹಾಗೂ ಸರ್ವಾಧಿಕಾರಿ ಕ್ರಮವಾಗಿದೆ.
ಈ ಯೋಜನೆಗಾಗಿ ಸುಮಾರು 9640 ಎಕರೆ ಕೃಷಿ ಭೂಮಿಯನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿ ರಿಯಲ್ ಎಸ್ಟೇಟ್ ಪಟಾಲಂ ಅನ್ನು ಪ್ರಚೋದಿಸಿ ರಾಜ್ಯ ಸರ್ಕಾರದ ಅಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡು ಹೋರಾಡುತ್ತಿರುವ ರೈತರನ್ನು ಬೆದರಿಸುತ್ತಾ ವಿವಿಧ ರೀತಿಯ ಕಿರುಕುಳ ಹಾಗೂ ದೌರ್ಜನ್ಯವನ್ನು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರೈತರ ಹೋರಾಟವನ್ನು ಬಲಪಡಿಸಲು ಹಾಗೂ ಹೋರಾಡುತ್ತಿರುವ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಕರ್ನಾಟಕ ಪ್ರಾಂತ ರೈತ ಸಂಘ (KPRS) ಬೈರಮಂಗಲ ಚಲೋ ಹಮ್ಮಿಕೊಂಡಿದೆ.
ಬಿಡದಿ ಟೌನ್ ಶಿಪ್ ಯೋಜನೆಗಾಗಿ ಗುರುತಿಸಿರುವ ಎಲ್ಲಾ ಕೃಷಿ ಭೂಮಿಯು ವರ್ಷಪೂರ್ತಿ ನೀರಾವರಿ ಹೊಂದಿರುವ ತೆಂಗು, ಅಡಿಕೆ, ಬಾಳೆ, ಮಾವು ಸೇರಿದಂತೆ ವಿವಿಧ ರೀತಿಯ ತೋಟಗಾರಿಕೆ ಬೆಳೆಗಳನ್ನು, ರೇಷ್ಮೆ, ಹೈನುಗಾರಿಕೆ, ಜೋಳ, ರಾಗಿ ಸೇರಿದಂತೆ ವಿವಿಧ ರೀತಿಯ ಹಣ್ಣು, ತರಕಾರಿಗಳನ್ನು ಬೆಳೆಯುತ್ತಿರುವ ಸಮೃದ್ಧ ಹಸಿರು ಪ್ರದೇಶವಾಗಿದೆ.

ಈ ಪ್ರದೇಶವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗಡಿಗೆ ಹೊಂದಿಕೊಂಡಂತೆ ಇದ್ದು ಬೆಂಗಳೂರು ಮಹಾನಗರಕ್ಕೆ ಹಾಲು, ಹಣ್ಣು, ತರಕಾರಿ ಮುಂತಾದ ದಿನನಿತ್ಯದ ಅಗತ್ಯಗಳನ್ನು ಪೂರೈಸುವ ಅಮೂಲ್ಯ ಆಹಾರದ ಕಣಜವಾಗಿದೆ. ಇಲ್ಲಿನ ಎಲ್ಲಾ ಕೃಷಿ ಕುಟುಂಬಗಳು ತಮ್ಮ ಸಣ್ಣ ಹಿಡುವಳಿಯಲ್ಲೇ ಮಿಶ್ರ ಬೆಳೆ ಪದ್ದತಿಯನ್ನು ಅಳವಡಿಸಿಕೊಂಡು ಅಡಿಕೆ ತಟ್ಟೆ ತಯಾರಿಕೆ ಮುಂತಾದ ಕೃಷಿ ಆಧಾರಿತ ಸಣ್ಣ ಉದ್ದಿಮೆಗಳನ್ನು ಕಟ್ಟಿಕೊಂಡು ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ.
ಇಂತಹ ಸುಸ್ಥಿರ ಬದುಕಿನ ಮೇಲೆ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನವನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ವಿವಿಧ ಮಾದರಿಯಲ್ಲಿ ತಮ್ಮ ಬಲವಾದ ವಿರೋಧವನ್ನು ಇಲ್ಲಿನ ರೈತರು ದಾಖಲಿಸಿದ್ದು ಸುಮಾರು 435 ಕ್ಕೂ ಹೆಚ್ಚು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಾ ಬಂದಿದ್ದರೂ ಭಾಧಿತ ರೈತರ ಜೊತೆ ಯಾವುದೇ ಸಮಾಲೋಚನೆ ನಡೆಸದೇ ಸಂಪುಟ ಅನುಮೋದನೆ ನೀಡಿರುವುದನ್ನು ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲ.
ಬೆಂಗಳೂರು ಮಹಾನಗರದ ದಟ್ಟಣೆ ಕಡಿಮೆಗೊಳಿಸುವ ಹೆಸರಿನಲ್ಲಿ ಈಗಾಗಲೇ ಬೆಂಗಳೂರು ಸುತ್ತ ಮುತ್ತ ಇದ್ದ ಹಸಿರು ಕೃಷಿ ಪ್ರದೇಶವನ್ನು ನಾಶ ಮಾಡಿ ನಿರ್ಮಾಣಗೊಂಡ ಲೇ ಔಟ್ ಹಾಗೂ ಬಡಾವಣೆಗಳು ಯಾವುದೇ ಅಗತ್ಯ ಮೂಲಭೂತ ಸೌಕರ್ಯಗಳು ಇಲ್ಲದೇ ಬೆಂಗಳೂರು ಮಹಾನಗರದ ಭೂ ತಾಪಮಾನವನ್ನು ಗಣನೀಯವಾಗಿ ಹೆಚ್ಚಿಸಿ ರಿಯಲ್ ಎಸ್ಟೇಟ್ ಕಾಂಕ್ರೀಟ್ ಕಾಡಾನ್ನಾಗಿಸಿದೆ.
ಲಕ್ಷಾಂತರ ನಿವೇಶನಗಳು, ನೂರಾರು ಅಪಾರ್ಟ್ಮೆಂಟ್ ಗಳು ಹತ್ತಾರು ವರ್ಷಗಳಿಂದ ಖಾಲಿ ಬಿದ್ದಿವೆ. ಇಂತಹ ದುಸ್ಥಿತಿಯನ್ನು ವಿಸ್ತರಿಸಿ ಬೆಂಗಳೂರು ಮಹಾನಗರದ ಜನ ಜೀವನವನ್ನು ಮತ್ತಷ್ಟು ಕಷ್ಟಕ್ಕೆ ಸಿಲುಕಿಸುವ ಬಿಡದಿ ಟೌನ್ ಶಿಪ್ ನಂತಹ ಪರಿಸರ ವಿರೋಧಿ ಯೋಜನೆಗಳನ್ನು ಯಾವುದೇ ನಾಚಿಕೆ ಇಲ್ಲದೇ ರಾಜ್ಯ ಸರ್ಕಾರ ಸಮರ್ಥಿಸುತ್ತಿರುವುದು ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಈ ಯೋಜನೆ ಜಾರಿಗೊಳಿಸಲು ಹಠ ಮಾಡುತ್ತಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ತೀವ್ರವಾಗಿ ಖಂಡಿಸುತ್ತದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಅನುಷ್ಠಾನಗೊಳಿಸುತ್ತಿರುವ ಬಿಡದಿ ಸಮಗ್ರ ಉಪ ನಗರ ಯೋಜನೆಗಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987 ರ ಕಲಂ 17(1) ರ ಅಡಿಯಲ್ಲಿ ದಿನಾಂಕ 13-03-25 ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ತಕ್ಷಣವೇ ಸುಮಾರು 3500 ಕ್ಕೂ ಹೆಚ್ಚು ಸಣ್ಣ್ ಮತ್ತು ಅತಿ ಸಣ್ಣ ರೈತರು ಈ ಭೂ ಸ್ವಾಧೀನಕ್ಕೆ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.
ಇದುವರೆಗೂ ಈ ಯಾವ ರೈತರ ಆಕ್ಷೇಪಣೆಗಳನ್ನು ಆಲಿಸಿಲ್ಲ. 2013 ರ ಭೂ ಸ್ವಾಧೀನ ಕಾಯ್ದೆ ಕಡ್ಡಾಯಗೊಳಿಸಿರುವ ಸಾಮಾಜಿಕ ಪರಿಣಾಮ ಅಧ್ಯಯನದಿಂದ ಈ ಭೂ ಸ್ವಾಧೀನವನ್ನು ಹೊರಗಿಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಮೂಲಕ ಭೂ ಸ್ವಾಧೀನವನ್ನು ಅನುಷ್ಠಾನಗೊಳಿಸುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ರಿಯಲ್ ಎಸ್ಟೇಟ್ ಮಾಫಿಯಾ ದುರುದ್ದೇಶಕ್ಕೆ ಬಿಡದಿ ಟೌನ್ ಶಿಪ್ ಯೋಜನೆ ಎಂದು ಬಣ್ಣ ಬಣ್ಣದ ಕಥೆಗಳನ್ನು ಹೆಣಿದಿದೆ.
ಸ್ವತಃ ರಿಯಲ್ ಎಸ್ಟೇಟ್ ಉದ್ದಿಮೆ ನಡೆಸುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ರೈತರ ಬಲವಾದ ವಿರೋಧವನ್ನು ಕಡೆಗಣಿಸಿ ಈ ಯೋಜನೆ ಪರವಾಗಿ ರಾಜ್ಯ ಸರ್ಕಾರದ ಮೇಲೆ ಹಾಗೂ ಅಧಿಕಾರಿಗಳ ಮೇಲೆ ಪ್ರಭಾವ ಹಾಗೂ ಒತ್ತಡವನ್ನು ಉಂಟು ಮಾಡುತ್ತಾ ಆಡಳಿತ ಯಂತ್ರದ ದೌರ್ಜನ್ಯ ಹಾಗೂ ದಮನ ಕ್ರಮ ಅನುಸರಿಸುತ್ತಿರುವುದು ಜನ ಸೇವೆಯ ಅಧಿಕಾರದ ಸ್ಪಷ್ಟ ದುರ್ಬಳಕೆಯಾಗಿದೆ.
ಇಂತಹ ದೌರ್ಜನ್ಯ ಹಾಗೂ ದಮನಗಳಿಗೆ ಹೆದರದೇ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಅಮೂಲ್ಯವಾದ ಕೃಷಿ ಭೂಮಿ ರಕ್ಷಿಸಿಕೊಳ್ಳಲು ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ಹೋರಾಡುತ್ತಿರುವುದು ಅಭಿನಂದನಾರ್ಹ ಕರ್ನಾಟಕ ಪ್ರಾತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲಿಸುತ್ತಿದ್ದು ಹೋರಾಟ ಜಯಗಳಿಸಲು ಎಲ್ಲಾ ರೀತಿಯ ನೆರವು ನೀಡಲಿದೆ.
ಇದನ್ನೂ ನೋಡಿ: ಬಿಡದಿ ಉಪನಗರ ಯೋಜನೆಗೆ ವಿರೋಧ – ದಿನವಿಡೀ ರಸ್ತೆ ಬಂದ್ ಮಾಡಿದ ರೈತರು Janashakthi Media
