ಕನಿಷ್ಟ ವೇತನ ತಕ್ಷಣ ಜಾರಿಗಾಗಿ, ಖಾಯಂಗಾಗಿ ಮತ್ತು ಕೆಲಸದ ಭದ್ರತೆಗಾಗಿ ಒತ್ತಾಯಿಸಿ ಹೋರಾಟ

ಬೆಂಗಳೂರು: ಕನಿಷ್ಠ ವೇತನ ಜಾರಿ, ಕೆಲಸದ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳ ಹೊರಗುತ್ತಿಗೆ ನೌಕರರು ಮೇ 26( ಸೋಮವಾರ) ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿ, ಸಹಾಯಕರು, ಸ್ವಚ್ಛತಾ ಕಾರ್ಮಿಕರು, ಕಾವಲುಗಾರರು, ಡಿ ಗ್ರೂಪ್‌ ನೌಕರರು, ಕಂಪ್ಯೂಟರ್‌ ಆಪರೇಟರ್‌ಗಳು ಸೇರಿದಂತೆ ವಿವಿಧ ವರ್ಗದ ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

ಈ ಹೋರಾಟವನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌ ವರಲಕ್ಷ್ಮಿ ಉದ್ಘಾಟಿಸಿ ಮಾತನಾಡಿದರು. ಹಲವು ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಯಾವುದೇ ಉದ್ಯೋಗ ಭದ್ರತೆ ಇಲ್ಲದೆ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು. ಕನಿಷ್ಠ ವೇತನವನ್ನು ತಕ್ಷಣ ಜಾರಿಗೆ ತಂದು, ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು 2025ರ ಏಪ್ರಿಲ್‌ 11ರಿಂದಲೇ ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ತರಬೇಕು, ಮಾಸಿಕ ಕನಿಷ್ಠ ₹36 ಸಾವಿರ ವೇತನ ನಿಗದಿ ಮಾಡಬೇಕು, ನೇರ ವೇತನ ಪಾವತಿ ವ್ಯವಸ್ಥೆ ಜಾರಿಗೆ ತರಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಇದಲ್ಲದೆ, ಹೊರಗುತ್ತಿಗೆ ನೌಕರರಿಗೆ ಇಎಸ್‌ಐ, ಪಿಎಫ್‌, ಗುರುತಿನ ಚೀಟಿ ಸೇರಿದಂತೆ ಕಾರ್ಮಿಕ ಕಾಯ್ದೆಯ ಸೌಲಭ್ಯಗಳನ್ನು ನೀಡಬೇಕು. ಮಹಿಳಾ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಕೆಲಸದ ಸ್ಥಳದಲ್ಲಿ ಶೋಷಣೆ ಮತ್ತು ಕಿರುಕುಳ ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಎಂ. ಜಂಬಯ್ಯ ನಾಯಕ, ಪ್ರಧಾನ ಕಾರ್ಯದರ್ಶಿ ಕೆ. ಹನುಮೇಗೌಡ, ಖಜಾಂಚಿ ಚಂದ್ರಪ್ಪ ಹೊಸ್ಕೇರಾ ಸೇರಿದಂತೆ ಸಾವಿರಾರು ಹೊರಗುತ್ತಿಗೆ ನೌಕರರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ರಾಜೌರಿ ಭಯೋತ್ಪಾದಕರ ಶೋಧಕ್ಕೆ ಹೆಚ್ಚುವರಿ ಪಡೆ ನಿಯೋಜನೆ

ಬೇಡಿಕೆಗಳು

1. ಮೇ 22ರಂದು ರಂದು ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಪರಿಷ್ಕರಣೆ ಕರಡು ಅಧಿಸೂಚನೆ ಹೊರಡಿಸಿರುವ ಕನಿಷ್ಠ ವೇತನ 2025 ಏಪ್ರಿಲ್ 11ರಿಂದಲೇ ಜಾರಿ ಮಾಡಬೇಕು. ಒಂದು ವರ್ಷದ ಅರಿರ‍್ಸ್ ಕೊಡಬೇಕು. ಪರಿಷ್ಕರಣೆ ಮಾಡಿರುವ ಕನಿಷ್ಠ ವೇತನದ ಆದೇಶವನ್ನು ರಾಜ್ಯ ಸರ್ಕಾರ ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.

2. ತಿಂಗಳಿಗೆ ಕನಿಷ್ಠ ವೇತನ ಮಾಸಿಕ ರೂ. 36 ಸಾವಿರ ಕೊಡಬೇಕು.

3. ಎಲ್ಲಾ ಹಾಸ್ಟೆಲ್ ಮತ್ತು ವಸತಿ ನಿಲಯ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲೇ ಖಾಯಂ ನೇಮಕ ಮಾಡಬೇಕು.

4. ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು.

5. ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐ.ಡಿ.ಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ESI ಮತ್ತು PF ಹಣ ತುಂಬಿದ ರಶೀದಿ ಕೊಡಬೇಕು.

6. ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ಕೊಡಬೇಕು. ಕೆಲಸದ ಸಮಯ ನಿಗಧಿ ಆಗಬೇಕು. ಅಪಘಾತವಾದಾಗ ಇಲಾಖೆಯೆ ಚಿಕಿತ್ಸೆ ಹಾಗೂ ಪರಿಹಾರ ಕೊಡಬೇಕು.

7. ಪ್ರತಿ ತಿಂಗಳು 5ನೇ ತಾರೀಖು ಸಂಬಳ ಕೊಡಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣ ಪಾವತಿ ಮಾಡಬೇಕು.

8. ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿರುವ ಆದೇಶ ರದ್ದಾಗಬೇಕು. 50 ವಿದ್ಯಾರ್ಥಿಗಳಿಗೆ 3 ಜನ ಸಿಬ್ಬಂದಿಯಂತೆ ಹಿಂದಿನ ಪದ್ದತಿ ಮುಂದುವರಿಸಬೇಕು.

9. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ 2017ರ ನಂತರ ಪ್ರಾರಂಭ ಮಾಡಿದ ವಸತಿ ಶಾಲೆಗಳಿಗೆ ಸಿಬ್ಬಂಧಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು. ಪ್ರಥಮ ದರ್ಜೆ ಸಹಾಯಕರು ಹಾಗೂ ಸ್ಟಾಫ್ ನರ್ಸ್ಗೆ ಸೇವಾ ಕೃಪಾಂಕ ನೀಡಿ ಖಾಯಂ ಮಾಡಬೇಕು. ಪ್ರಥಮ ದರ್ಜೆ ಸಹಾಯಕರನ್ನು ಏಪ್ರಿಲ್, ಮೇ ತಿಂಗಳಲ್ಲಿ ಮುಂದುವರಿಸಬೇಕು.

10. ಹೊರಗುತ್ತಿಗೆ ಅತಿಥಿ ಶಿಕ್ಷಕರನ್ನು ಸೇವಾ ಭದ್ರತೆ ಕೊಟ್ಟು ಖಾಯಂ ಮಾಡಬೇಕು, ಇವರಿಗೂ ಕನಿಷ್ಠ ವೇತನ ಜಾರಿ ಮಾಡಬೇಕು.

11. ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದ ಅಡಿಯಲ್ಲಿ ಎಲ್ಲರನ್ನೂ ತರಬೇಕು.

12. ಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದು ಕೊಂಡಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಮತ್ತೆ ಮರು ನೇಮಕ ಮಾಡಿಕೊಳ್ಳಬೇಕು. ಹೊಸದಾಗಿ ಪ್ರಾರಂಭ ಮಾಡುವ ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ಕೆಲಸಕ್ಕೆ ತೆಗೆದುಕೊಳ್ಳಬೇಕು.

13. ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರಿಂದ ಶೌಚಾಲಯ ಸ್ವಚ್ಛ ಮಾಡಿಸಬಾರದು.

14. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಕಛೇರಿಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್, ಡಿ ಗ್ರೂಪ್ ಜವಾನರಿಗೆ ಕಾರ್ಮಿಕ ಕಾಯ್ದೆಗಳ ಪ್ರಕಾರ ಎಲ್ಲಾ ಸೌಲಭ್ಯಗಳನ್ನು ಕೊಡಬೇಕು.

15. ವಸತಿ ನಿಲಯ ಮತ್ತು ಹಾಸ್ಟೆಲ್‌ಗಳಿಗೆ ವಾರ್ಡನ್ ರವರು ಮಕ್ಕಳ ಅಡುಗೆಗೆ ಅಗತ್ಯವಾಗಿ ಬೇಕಾದ ಗುಣಮಟ್ಟದ ಅಹಾರ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ತಂದು ಕೊಡಬೇಕು.

16. ನಿವೃತ್ತಿ ನಂತರ ಜೀವನ ನಿರ್ವಹಣೆಗೆ 10 ಲಕ್ಷ ಪರಿಹಾರ ಕೊಡಬೇಕು.

17. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು.

18. ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ತಕ್ಷಣ ಜಾರಿ ಮಾಡಬೇಕು.

19. ಕನ್ನಡ ವಿಶ್ವವಿದ್ಯಾಲಯ ಹಂಪಿ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು ಮತ್ತು 8 ತಿಂಗಳ ಬಾಕಿ ವೇತನ ಪಾವತಿ ಮಾಡಬೇಕು.

20. ಮಹಿಳಾ ಹೊರಗುತ್ತಿಗೆ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು.

21. ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ದಸರಾ ರಜೆಯ 15 ದಿನ ಮತ್ತು ಬೇಸಿಗೆ ರಜೆ ಏಪ್ರಿಲ್, ಮೇ ತಿಂಗಳ ಸಂಬಳ ಕೊಡಬೇಕು.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 172 | ‘ಪ್ಯಾಲೆಸ್ಟೀನ್ 36’ – ಮೊದಲ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ | ಎನ್‌ ಕೆ. ವಸಂತರಾಜ್‌

Donate Janashakthi Media

Leave a Reply

Your email address will not be published. Required fields are marked *