SIR ಕರ್ತವ್ಯದಿಂದ ಶಿಕ್ಷಕರನ್ನು ಮುಕ್ತಗೊಳಿಸಿ: ಮಧು ಬಂಗಾರಪ್ಪ

ಬೆಂಗಳೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯಕ್ಕೆ ನಿಯೋಜಿಸಿರುವ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರನ್ನು ಕೂಡಲೇ ಕರ್ತವ್ಯದಿಂದ ಮುಕ್ತಗೊಳಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಒತ್ತಾಯಿಸಿದ್ದಾರೆ. SIR ಕೆಲಸದಿಂದ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. SIR 

ಬೆಂಗಳೂರಿನ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು SIR ಕಾರ್ಯದಿಂದ ಹೊರಗಿಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ತಿಳಿಸಿದರು. “ಮಕ್ಕಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗುತ್ತಿದೆ. ಶಿಕ್ಷಕರನ್ನು SIR ಕರ್ತವ್ಯದಿಂದ ಮುಕ್ತಗೊಳಿಸಿ” ಎಂದು ಅವರು ಆಗ್ರಹಿಸಿದರು.

SIR ಕಾರ್ಯದ ಒತ್ತಡದಿಂದ ಶಿಕ್ಷಕರು ಶಾಲೆಗಳಲ್ಲಿ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೋಧನಾ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಧ್ಯಾಹ್ನದ ಊಟದ ಬಳಿಕ ಮಕ್ಕಳನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಸಚಿವರು ಹೇಳಿದರು. ಮುಂದಿನ ದಿನಗಳಲ್ಲಿ ಇದು ಮಕ್ಕಳ ಪರೀಕ್ಷಾ ಫಲಿತಾಂಶದ ಮೇಲೂ ಪರಿಣಾಮ ಬೀರುವ ಆತಂಕವಿದೆ ಎಂದರು.

ಇದನ್ನೂ ಓದಿ : ತುಮಕೂರಿನ ಮುಸ್ಲಿಂ ಕಾಲೋನಿಗೆ ಪ್ರಕಾಶ್‌ ರೈ ಭೇಟಿ: SIR ಸಮಸ್ಯೆ ಆಲಿಕೆ

ಶಿಕ್ಷಕರಿಗೆ ಬೋಧನೆಯೇ ಪ್ರಮುಖ ಜವಾಬ್ದಾರಿ

ಜಾತಿ ಗಣತಿ, ವಿವಿಧ ಸಮೀಕ್ಷೆಗಳು ಹಾಗೂ ಚುನಾವಣಾ ಕಾರ್ಯ ಸೇರಿದಂತೆ ಹಲವು ಬೋಧನೇತರ ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸುವ ವ್ಯವಸ್ಥೆಯನ್ನು ಬದಲಾಯಿಸಬೇಕಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಶಿಕ್ಷಕರನ್ನು ಇಂತಹ ಕೆಲಸಗಳಿಗೆ ಬಳಸಿಕೊಳ್ಳುವುದನ್ನು ನಿಯಂತ್ರಿಸಲು ಪ್ರತ್ಯೇಕ ವಿಧೇಯಕ ರೂಪಿಸಲಾಗುತ್ತಿದೆ. ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಚಿವ ಸಂಪುಟದ ಮುಂದೆ ಮಸೂದೆ ಮಂಡಿಸಿ ಮುಂದಿನ ಅಧಿವೇಶನದಲ್ಲಿ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಚುನಾವಣಾ ಕಾರ್ಯಕ್ಕೆ ಕೆಲ ಸಂದರ್ಭಗಳಲ್ಲಿ ಸರ್ಕಾರಿ ನೌಕರರ ಸೇವೆ ಅಗತ್ಯವಾಗಬಹುದು. ಆದರೆ ಶಾಲೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಶಿಕ್ಷಕರನ್ನು ನಿರಂತರವಾಗಿ SIRನಂತಹ ಕಾರ್ಯಗಳಿಗೆ ನಿಯೋಜಿಸುವುದರಿಂದ ಮಕ್ಕಳ ಶಿಕ್ಷಣಕ್ಕೆ ಧಕ್ಕೆಯಾಗುತ್ತಿದೆ ಎಂದು ಅವರು ಹೇಳಿದರು.

ಇತ್ತೀಚೆಗೆ ಬೆಂಗಳೂರಿನ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದ CJP ತಂಡವೂ SIR ಕರ್ತವ್ಯಕ್ಕೆ ಶಿಕ್ಷಕರ ನಿಯೋಜನೆಯಿಂದ ಉಂಟಾಗಿರುವ ಶಿಕ್ಷಕರ ಕೊರತೆ ಮತ್ತು ಶೈಕ್ಷಣಿಕ ಅಡಚಣೆಗಳ ಬಗ್ಗೆ ಗಮನ ಸೆಳೆದಿತ್ತು. ಕೆಲವು ಶಾಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶಿಕ್ಷಕರು SIR ಕಾರ್ಯಕ್ಕೆ ನಿಯೋಜಿತರಾಗಿರುವುದನ್ನು ತಂಡ ವರದಿ ಮಾಡಿತ್ತು.

ಮುಂದಿನ ದಿನಗಳಲ್ಲಿ ಮಧ್ಯವಾರ್ಷಿಕ ಹಾಗೂ ಪೂರ್ವಭಾವಿ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗಳಲ್ಲಿ ಲಭ್ಯವಿಲ್ಲದಿದ್ದರೆ ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಪರೀಕ್ಷಾ ಸಿದ್ಧತೆಗೆ ತೊಂದರೆಯಾಗಬಹುದು ಎಂದು ಮಧು ಬಂಗಾರಪ್ಪ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ : ಮತ ಹಾಕಿದವರ ಮತ ಕಸಿದು, ಜೀವಂತ ವ್ಯಕ್ತಿಯನ್ನೇ ‘ಕೊಂದ’ SIR! Janashakthi Media

 

 

Donate Janashakthi Media

Leave a Reply

Your email address will not be published. Required fields are marked *