ಎರಡು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ : ಸಮಾಜ ಕಲ್ಯಾಣ ಇಲಾಖೆಗೆ ಎಚ್ಚರಿಕೆ
ಕುಕನೂರು : ತಾಲೂಕಿನ ದ್ಯಾಮಾಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ತೀವ್ರವಾಗಿದ್ದು, ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಬದುಕುತ್ತಿದ್ದಾರೆ ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಆಕ್ರೋಶ ವ್ಯಕ್ತಪಡಿಸಿದೆ. ಶೀಘ್ರದಲ್ಲೇ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ. ತಿಪ್ಪೆಗುಂಡಿ
ಎಸ್‌ಎಫ್‌ಐ ನಿಯೋಗವು ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ ವೇಳೆ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿವೆ. ಕುಡಿಯುವ ನೀರಿನ ಕೊರತೆ, ಅಸ್ವಚ್ಛ ಪರಿಸರ, ದುಸ್ಥಿತಿಯ ಶೌಚಾಲಯಗಳು, ಕೊಠಡಿಗಳ ನಿರ್ವಹಣೆಯ ಕೊರತೆ ಹಾಗೂ ಕಳಪೆ ಗುಣಮಟ್ಟದ ಆಹಾರದಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ವಸತಿ ನಿಲಯದಲ್ಲಿ ಸ್ವಚ್ಛತಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಹಲವೆಡೆ ನೀರು ಸೋರಿಕೆ ಸಮಸ್ಯೆ ಇರುವುದರಿಂದ ಕೊಠಡಿಗಳಲ್ಲಿ ದುರ್ವಾಸನೆ ಉಂಟಾಗುತ್ತಿದೆ. ಬೇಸಿಗೆಯ ಬಿಸಿಲಿನ ನಡುವೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ವಿದ್ಯಾರ್ಥಿಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ತಿಪ್ಪೆಗುಂಡಿ
ಆಹಾರದ ಗುಣಮಟ್ಟದ ಬಗ್ಗೆಯೂ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಸಮರ್ಪಕ ಪೌಷ್ಟಿಕ ಆಹಾರ ನೀಡದೇ ನಿರ್ಲಕ್ಷ್ಯ ತೋರಲಾಗುತ್ತಿದೆ. ಕೆಲವೊಮ್ಮೆ ಸರಿಯಾದ ಸಮಯಕ್ಕೆ ಊಟ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ಹೊರಹಾಕಿದ್ದಾರೆ. ವಸತಿ ನಿಲಯದಲ್ಲಿ ಓದಲು ಅಗತ್ಯವಾದ ಶಾಂತ ಮತ್ತು ಆರೋಗ್ಯಕರ ವಾತಾವರಣವೇ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಇದನ್ನೂ ಓದಿ : ಡೊನೇಷನ್ ಹಾವಳಿ ತಡೆಗೆ ಡೇರಾ ಸಮಿತಿ ಸಭೆ ಕರೆಯಲು ಎಸ್‌ಎಫ್‌ಐ ಆಗ್ರಹ
ಈ ಕುರಿತು ಮಾತನಾಡಿದ ಎಸ್‌ಎಫ್‌ಐ ಮುಖಂಡರು, “ಬಡ ಮತ್ತು ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸರ್ಕಾರ ವಸತಿ ನಿಲಯಗಳನ್ನು ಸ್ಥಾಪಿಸಿದೆ. ಆದರೆ ಇಲ್ಲಿ ವಿದ್ಯಾರ್ಥಿಗಳ ಸ್ಥಿತಿ ತಿಪ್ಪೆಗುಂಡಿಯಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುವಂತಾಗಿದೆ” ಎಂದು ಕಿಡಿಕಾರಿದರು.
“ವಸತಿ ನಿಲಯಗಳಲ್ಲಿ ಕುಡಿಯುವ ನೀರು, ಸ್ವಚ್ಛ ಶೌಚಾಲಯ, ಸುರಕ್ಷಿತ ವಾಸಸ್ಥಳ ಹಾಗೂ ಗುಣಮಟ್ಟದ ಆಹಾರ ಒದಗಿಸುವುದು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿ. ಆದರೆ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ತೋರಿಸುತ್ತಿದೆ. ಎರಡು ದಿನಗಳೊಳಗೆ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಎಸ್‌ಎಫ್‌ಐ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಮುಖಂಡರಾದ ಮಾರುತಿ ವಿಠಲಪುರ, ಮಹೇಶ್, ಗಣೇಶ್ ಬಡಿಗೇರ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಸುಳ್ಳಿನ ಭರವಸೆಗಳು, ಜನರ ಮೇಲಾಗುತ್ತಿರುವ ಬೆಲೆ ಏರಿಕೆಯ ಹೊರೆ | ವಿಶ್ಲೇಷಣೆ – ಟಿ.ಆರ್.ಭಟ್ Janashakthi Media
