ಕರ್ನಾಟಕ ಪ್ರಕಾಶಕರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ; ಯಮುನಾ ಗಾಂವ್ಕರ್ ಆಯ್ಕೆ

ಬೆಂಗಳೂರು: ಕರ್ನಾಟಕ ಪ್ರಕಾಶಕರ ಸಂಘವು ನೀಡುವ 2025-2026ನೆಯ ಸಾಲಿನ ವಾರ್ಷಿಕ ಪ್ರಶಸ್ತಿಗಳಿಗೆ ಕೆಳಕಂಡವರನ್ನು ಡಾ. ವಸುಂಧರಾ ಭೂಪತಿ ಅವರ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಿದೆ.

ಡಾ. ಗೋಪಾಲಕೃಷ್ಣ ಪುಸ್ತಕ ಪರಿಚಾರಕ ಪ್ರಶಸ್ತಿಗೆ ಶ್ರೀ ವೆಂಕಟೇಶ್, ಪಲ್ಲವ ಪ್ರಕಾಶನ, ಚನ್ನಪಟ್ಟಣ ಬಳ್ಳಾರಿ ಜಿಲ್ಲೆ, ಶ್ರೀಮತಿ ನಂಜನಗೂಡು ತಿರುಮಲಾಂಬ ಮಹಿಳಾ ಪ್ರಕಾಶನ ಪ್ರಶಸ್ತಿ ಗೆ ಶ್ರೀಮತಿ ಯಮುನಾ ಗಾಂವ್ಕರ್, ಬಂಡಾಯ ಪ್ರಕಾಶನ ಕೆರೆಕೋಣ ಉ. ಕ. ಎರಡೂ ಪ್ರಶಸ್ತಿಗಳು ರೂ. 15 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.

ಇದೇ ಸಂದರ್ಭದಲ್ಲಿ ಪ್ರಕಾಶನೋದ್ಯಮಕ್ಕೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಕ್ಷೇತ್ರಗಳ ಐವರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: ಭೂಮಾಪಕರ ಮುಷ್ಕರದಿಂದ ಭೂ ವ್ಯವಹಾರ ಸ್ಥಗಿತ: ಸಾರ್ವಜನಿಕರಿಗೆ ಹೆಚ್ಚಿದ ಸಂಕಷ್ಟ

ಮುದ್ರಣ ಗೌರವ: ಶ್ರೀ ವೆಂಕಟೇಶ್, ರೀಗಲ್ ಪ್ರಿಂಟ್ಸ್, ಬೆಂಗಳೂರು

ಪುಸ್ತಕ ವಿನ್ಯಾಸ ಗೌರವ: ಶ್ರೀ ಜಿ. ಅರುಣ್ ಕುಮಾರ್, ಬೆಂಗಳೂರು

ಪುಸ್ತಕ ಪರಿಚಾರಿಕೆ ಗೌರವ 1: ಶ್ರೀ ಪುರುಷೋತ್ತಮ ರಾವ್, ಕೋಲಾರ

ಪುಸ್ತಕ ಪರಿಚಾರಿಕೆ ಗೌರವ 2: ಶ್ರೀಮತಿ ವಿಜಯಲಕ್ಷ್ಮೀ ಕಟ್ಟಿ, ಬೆರಗು ಪ್ರಕಾಶನ, ವಿಜಯಪುರ.

ಪುಸ್ತಕ ಅರಿವಿನ ಗೌರವ: ಕಾನೂನು ಪರಿಣಿತ ಶ್ರೀ ವೈ. ಜಿ. ಮುರಳೀಧರನ್

ವಿಶ್ವ ಪುಸ್ತಕ ದಿನಾಚರಣೆಯ ಸಂದರ್ಭದಲ್ಲಿ ದಿನಾಂಕ ಏಪ್ರಿಲ್‌ 23ರಂದು ಸಂಜೆ 5ಕ್ಕೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಅಧಿಕಾರಿಗಳಾಗಿದ್ದ ಶ್ರೀ ಐ. ಎಂ. ವಿಟ್ಠಲಮೂರ್ತಿ ಅವರು ಪ್ರಶಸ್ತಿ ವಿತರಿಸುವರು. ಸಂಘದ ಅಧ್ಯಕ್ಷರಾದ ಡಾ. ವಸುಂಧರ ಭೂಪತಿ ಅವರು ಅಧ್ಯಕ್ಷತೆ ವಹಿಸುವರು.

ಯಮುನಾ ಗಾಂವ್ಕರ್ :

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗುಂದದವರು. ಕಾನೂನು ಪದವಿಧರರು ಮತ್ತು ಮಹಿಳಾ ಅಧ್ಯಯನದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪೂರೈಸಿದ್ದಾರೆ. ವಿದ್ಯಾರ್ಥಿ-ಯುವಜನ ಸಂಘಟನೆ ಎಸ್.ಎಫ್.ಐ – ಡಿವೈಎಫೈ ಹಾಗೂ ಸಾಕ್ಷರತೆ ಆಂದೋಲನ ಮತ್ತು ಉತ್ತರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘಟನೆ ಚಿಂತನ ಮೂಲಕ ಸಾರ್ವಜನಿಕವಾಗಿ ತೊಡಗಿಸಿಕೊಂಡಿರುವರು.

ಸಹಯಾನ (ಡಾ. ಆರ್. ವಿ. ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ,) ಕೆರೆಕೋಣ ಟ್ರಸ್ಟಿ. ಪ್ರೀತಿಪದ (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ)ದ ಸಂಸ್ಥಾಪಕ ಕಾರ್ಯದರ್ಶಿ, ಬಂಡಾಯ ಪ್ರಕಾಶನ, ಹೊನ್ನಾವರ ಈ ಸಂಸ್ಥೆಯಲ್ಲಿ ನಿರ್ದೇಶಕರಾಗಿ, ವ್ಯವಸ್ಥಾಪಕರಾಗಿ ಕೆಲಸ. ವಿದ್ಯಾರ್ಥಿ ಯುವಜನರಿಗೆ, ಪೌರ ಕಾರ್ಮಿಕರಿಗೆ ಸ್ವಂತ ಗ್ರಂಥಾಲಯ ಹೊಂದಲು ಪುಸ್ತಕ ಸಂಗ್ರಹಿಸಿ ಸಹಾಯ.

ಶಾಲೆ ಕಾಲೇಜಿಗೆ ಪುಸ್ತಕ ಜೋಳಿಗೆ ಸಹಾಯ. ನಾಡಿನ ಪ್ರಗತಿಪರ ಪ್ರಕಾಶನಗಳ/ಸಾಹಿತಿಗಳ ಪುಸ್ತಕಗಳನ್ನು ಖರೀದಿಸಿ ಓದುಗರಿಗೆ ತಲುಪಿಸಲು ಸಹಾಯ. ಬಸ್ಸು, ಸಭೆ, ಸಮಾರಂಭ, ಮದುವೆ ಮನೆ ಇತ್ಯಾದಿ ಗಳಲ್ಲಿ ಪುಸ್ತಕ ಪರಿಚಯ ಮತ್ತು ಮಾರಾಟಕ್ಕೆ ಪ್ರಯತ್ನ.

ಉಯಿಲಿಗೆ ಸಹಿ ಹಾಕಿ, ಅಬ್ಬೆ ಮಡಿಲು, ಬೆಂದ ಅಕ್ಕಿಯ ಘಮಲು(ಕವನ ಸಂಕಲನಗಳು) ಕಣ್ಮುಚ್ಚಿದ ಗುಬ್ಬಚ್ಚಿ ಸುತ್ತಮುತ್ತ ಒಂದು ಸುತ್ತು – (ಲೇಖನಗಳ ಸಂಕಲನ) ಜೋಯ್ಡಾ: ಕಾಡೊಳಗಿನ ಒಡಲು (ಮಾನವಿಕ ಅಧ್ಯಯನ) ಮತ್ತು ಹೋರಾಟದ ಬಾವುಟ ಹಿಡಿದ ಉ ಕ ಅರಣ್ಯಭೂಮಿ ಅತಿಕ್ರಮಣ ಸಾಗುವಳಿದಾರರ ಕತೆ ಮುಂತಾದವು ಇವರ ಕೃತಿಗಳು.

ಹೂವಿನಹಡಗಲಿಯ ಸಿಂಚನ ಕಾವ್ಯ ಪ್ರಶಸ್ತಿ. ಧಾರವಾಡದ ವೀಣಾ ಕುಲ್ಕರ್ಣಿ ಸ್ಮರಣಾರ್ಥ ಸಾಧನಾ ಮಹಿಳಾ ಸಾಹಿತಿ ಪ್ರಶಸ್ತಿ ಪಡೆದಿದ್ದಾರೆ. ಈಗ ಕರ್ನಾಟಕ ಪ್ರಕಾಶರ ಸಂಘವು ನೀಡುವ 2026ನೆಯ ಸಾಲಿನ ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಕಾಶಕಿ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದು 15 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.

ಪಲ್ಲವ ಪ್ರಕಾಶನ ಬಳ್ಳಾರಿ

ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣದಲ್ಲಿ 2005ನೆಯ ಇಸವಿಯಲ್ಲಿ ಜನ್ಮ ತಳೆದ ಪಲ್ಲವ ಪ್ರಕಾಶನ ಈವರೆಗೆ 220 ಪುಸ್ತಕಗಳನ್ನು ಪ್ರಕಟಿಸಿದೆ. ಕಥೆ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ ಹೀಗೆ ಭಿನ್ನ ಪ್ರಕಾರಗಳಿಗೆ ಸೇರಿದ ವೈಚಾರಿಕ ಕೃತಿಗಳನ್ನು ಪ್ರಕಟಿಸುತ್ತಾ ಬಂದಿರುವ ಪಲ್ಲವ ಪ್ರಕಾಶನ, ಪ್ರಕಟಣೆಯನ್ನು ವ್ಯವಹಾರವೆಂದು ತಿಳಿಯದೆ, ಪುಸ್ತಕ ಸಂಸ್ಕೃತಿಯ ಮೂಲಕ ವೈಚಾರಿಕಜಗತ್ತನ್ನು ವಿಸ್ತರಿಸುವ ಕೆಲಸವೆಂದು ಭಾವಿಸಿದೆ.

ಹಿರಿಯ ಲೇಖಕರ ಕೃತಿಗಳ ಪ್ರಕಟಣೆಗಳಿಗೆ ತೋರುವ ಕಾಳಜಿಯನ್ನು ಹೊಸ ಬರಹಗಾರರ ಕೃತಿಗಳಿಗೂ ನೀಡಲಾಗುತ್ತದೆ. ಕವನ ಸಂಕಲನಗಳನ್ನು ಪ್ರಕಟ ಮಾಡಲು ಹಿಂದೇಟು ಹಾಕುತ್ತಿರುವ ಇಂದಿನ ದಿನಗಳಲ್ಲಿ ಹೊಸತಲೆಮಾರಿನ ಕವಿಗಳ ಮೊದಲ ಸಂಕಲನಗಳನ್ನು ಪ್ರಕಟಿಸಿ ಕನ್ನಡಕಾವ್ಯದ ಓದುಗರಿಗೆ ಪಲ್ಲವ ನೀಡುತ್ತಿದೆ

ಪಲ್ಲವ ಪ್ರಕಾಶನದ ಕೃತಿಗಳು ವಿಚಾರ, ವಿನ್ಯಾಸ ಮತ್ತು ಸುಂದರ ಮುದ್ರಣದ ಕಾರಣಕ್ಕಾಗಿ ಕನ್ನಡ ನಾಡಿನಾದ್ಯಂತ ಹರಡಿಕೊಂಡಿರುವ ಪುಸ್ತಕಪ್ರಿಯರ ವಿಶ್ವಾಸವನ್ನು ಗಳಿಸಿಕೊಂಡಿವೆ. ಹೀಗಾಗಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನಾಲ್ಕುಬಾರಿ ಪಲ್ಲವದ ಪುಸ್ತಕಗಳಿಗೆ ಪುಸ್ತಕ ಸೊಗಸು ಬಹುಮಾನಗಳು ದೊರೆತಿದೆ. ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅಂಕಿತ ಪುಸ್ತಕ ಪುರಸ್ಕಾರ ಹಾಗೂ ಕರ್ನಾಟಕ ಕನ್ನಡ ಬರಹಗಾರರು ಮತ್ತು ಪ್ರಕಾಶಕರ ಸಂಘವು ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ನೀಡಿ ಗೌರವಿಸಿದೆ. ಪಲ್ಲವದ ಪ್ರಕಟಣೆಗಳಿಗೆ ಕರ್ನಾಟಕ ಸಾಹಿತ್ಯಆಕಾಡಮಿ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣಕಥಾ ಪುರಸ್ಕಾರ, ಕರ್ನಾಟಕ ಸಂಘದ ಬಹುಮಾನ, ಬೇಂದ್ರೆ ಪ್ರಶಸ್ತಿ, ಅಮ್ಮ ಪ್ರಶಸ್ತಿ, ಪುತಿನಕಾವ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ದೊರೆತಿವೆ. ಇತ್ತೀಚೆಗೆ ನಾಡಿನ ಹೆಸರಾಂತ ಕತೆಗಾರರಾದ ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ ಕೃತಿಗೆ ಕೇAದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಲಭಿಸಿದೆ.

ಈಗ ಕರ್ನಾಟಕ ಪ್ರಕಾಶಕರ ಸಂಘವು 2026ನೆಯ ಸಾಲಿನ ಎಂ. ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಪ್ರಶಸ್ತಿಯು ರೂ 15 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.

ಇದನ್ನೂ ನೋಡಿ: ಡಿಲಿಮಿಟೇಶನ್ ಎನ್ನುವ ಟಿಕ್ ಟಿಕ್ ಬಾಂಬ್.. ಇದು ಸ್ಪೋಟಿಸುವುದೇ? Janashakthi Media

Donate Janashakthi Media

Leave a Reply

Your email address will not be published. Required fields are marked *