ಸ್ವಾತಂತ್ರ್ಯದ ಕನಸುಗಳನ್ನು ನನಸಾಗಿಸುವ ನೂರು ಹೂಗಳು ಅರಳಲಿ

 ನೀಲೋತ್ಪಲ್ ಬಸು

ಐಕ್ಯತೆಗಾಗಿ ಹೋರಾಟಕ್ಕೆ ಮತ್ತು ನಮ್ಮ ಎಲ್ಲ ಜನರನ್ನು ಒಳಗೊಳ್ಳುವುದಕ್ಕೆ ಮರುಸಮರ್ಪಿಸಿಕೊಳ್ಳಲು ಈ ಸ್ವಾತಂತ್ರ್ಯ ದಿನ ನಮ್ಮನ್ನು ಕರೆಯುತ್ತಿದೆ. 79 ವರ್ಷಗಳ ಹಿಂದೆ ನಾವು ಪರಿಭಾವಿಸಿದ ಸ್ವಾತಂತ್ರ್ಯವನ್ನು ನನಸು ಮಾಡಲು ಮುಂಬರುವ ವರ್ಷದಲ್ಲಿ ನೂರು ಹೂವುಗಳು ಅರಳಲೆಂದು ಆಶಿಸೋಣ. ಸವಾಲುಗಳು ಅಗಾಧವಾಗಿವೆ, ಆದರೆ ಒಂದು ಆಶಾಕಿರಣ ನಮ್ಮನ್ನು ಕೈಮಾಡಿ ಕರೆಯುತ್ತಿದೆ.
ಕನ್ನಡಕ್ಕೆ: ವಿಶ್ವ

 

79 ವರ್ಷಗಳ ಹಿಂದೆ ನಾವು ನಿರೀಕ್ಷೆಯ ವಸಂತದ ಸಂಭ್ರಮದಲ್ಲಿದ್ದೆವು. ಪ್ರಧಾನಿ ಜವಾಹರಲಾಲ್ ನೆಹರೂ ನಮ್ಮೆಲ್ಲರ ಸಾಮೂಹಿಕ ಭಾವವನ್ನು ಮಧ್ಯರಾತ್ರಿ ಆಗುತ್ತಲೇ ಧ್ವನಿಸಿದರು: ‘ಅದೃಷ್ಟದೊಂದಿಗೆ ಸಮಾಗಮ’ದ ‘ನಮ್ಮ ಪ್ರತಿಜ್ಞೆಯನ್ನು ಈಡೇರಿಸುವ ಕಾಲ ಈಗ ಬಂದಿದೆ’ ಎಂದರು. ಒಂದು ಹೊಸ ರಾಷ್ಟçವನ್ನು ಸೃಷ್ಟಿಸಬೇಕೆನ್ನುವುದು, ಯಾವತ್ತಿಗಿಂತಲೂ ಹೆಚ್ಚು ಒಗ್ಗಟ್ಟಾದ ಒಂದು ಬೃಹತ್ ಹಾಗೂ ವೈವಿಧ್ಯತೆಯ ಭಾರತವನ್ನು ವಿಕಾಸಗೊಳಿಸುವ ಕನಸನ್ನು ನನಸು ಮಾಡಬೇಕೆನ್ನುವುದು ನಮ್ಮಿಂದ ಅಪೇಕ್ಷಿಸಿದ್ದ ಗುರಿಯಾಗಿತ್ತು. ವಸಾಹತುಶಾಹಿಯ ನೊಗವನ್ನು ಕಿತ್ತೊಗೆದ ನಾವು, ವಿಭಜನಕಾರಿ ಶಕ್ತಿಗಳು ಮತ್ತು ವಿಭಜನೆಯ ದುರಂತವನ್ನು ಮೆಟ್ಟಿನಿಂತು ಒಗ್ಗಟ್ಟಾಗುವ ಗುರಿ ನಮ್ಮ ಮುಂದಿತ್ತು.

ನಾವು ಕೈಗೆತ್ತಿಕೊಂಡ ಬೃಹತ್ ಕಾರ್ಯದತ್ತ ಜಗತ್ತಿನಾದ್ಯಂತÀ ಜನರು ಕೌತುಕದಿಂದ ನೋಡುತ್ತಿದ್ದರು. ನಮ್ಮ ಜನಸಂಖ್ಯೆಯ ಅಗಾಧತೆ ಮತ್ತು ಅದರ ವೈವಿಧ್ಯತೆಯು ಬಹಳ ದೊಡ್ಡ ಸವಾಲುಗಳಾಗಿದ್ದವು. ಸಂವಿಧಾನ ಸಭೆಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅದಕ್ಕೆ ಸರಳ ಪರಿಹಾರವನ್ನು ಮುಂದಿಟ್ಟರು. ಪೌರತ್ವ ಅದಕ್ಕೆ ಅವರು ಆರಿಸಿದ ಸಾಧನ. ಧರ್ಮ, ಭಾಷೆ, ಜಾತಿ, ಸಂಸ್ಕೃತಿ ಮತ್ತು ಮತ್ತು ಪ್ರಾದೇಶಿಕ ತಾರತಮ್ಯಗಳಿಂದ ಜರ್ಜರಿತರಾಗಿದ್ದ ವೈವಿಧ್ಯತೆಯಿಂದ ಕೂಡಿದ್ದ ಜನರು ಭಾರತದ ಸಮಾನ ಮತ್ತು ಸರ್ವಸಾಮಾನ್ಯ ಪೌರರಾಗಿರುತ್ತಾರೆÀ. ಇಂದು ನಾವು ಹಿಂದಿರುಗಿ ನೋಡುವಾಗ, ಆ ವಸಂತದ ನಿರೀಕ್ಷೆಗೆ ಹೋಲಿಸಿದರೆ ಅಸಮಾಧಾನದ ಮಾಗಿಯಿಂದ ಬಾಧಿತರಾಗಿದ್ದೇವೆ. ಅತ್ಯಂತ ಕೆಟ್ಟ ಕಾಲ ಎಂದು ವರ್ಣಿಸಬಹುದಾದ ಪರಿಸ್ಥಿತಿ ನಮ್ಮ ಬಹುತೇಕ ಜನರನ್ನು ಬಾಧಿಸುತ್ತಿದೆೆ.

ಅತ್ಯಧಿಕ ಆರ್ಥಿಕ ಅಸಮಾನತೆ

ಜಗತ್ತಿನಲ್ಲೇ ಅತ್ಯಧಿಕ ಆರ್ಥಿಕ ಅಸಮಾನತೆಯಿಂದ ನಾವು ಬಳಲುತ್ತಿರುವುದು ವಾಸ್ತವವಾಗಿದೆ. ಸರಕಾರದ ಕಾರ್ಪೊರೇಟ್ ಬಂಟರುಗಳÀ ಸಹಿತ ಕೆಲವೇ ಜನರು ಆದಾಯ ಮತ್ತು ಸಂಪತ್ತಿನ ಅಪಾರ ಕೇಂದ್ರೀಕರಣವನ್ನು ಅನುಭವಿಸುತ್ತಿದ್ದಾರೆ. ಕೇವಲ ಶೇಕಡ ಒಂದರಷ್ಟು ಜನರು ದೇಶದ ಶೇಕಡ 40 ಸಂಪತ್ತನ್ನು ಹೊಂದಿದ್ದಾರೆ. ಉಳಿದ ಅರ್ಧದಷ್ಟು ಜನರು ಅನಾಥ ಜೀವನ ಸಾಗಿಸುತ್ತಿದ್ದಾರೆ, ಹೇಗಾದರೂ ಬದುಕುಳಿಯುವುದಕ್ಕಿಂತಲೂ ಕೆಳಗಿನ ಮಟ್ಟದಲ್ಲಿ ಜೀವಿಸುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯದ ಅವಕಾಶಗಳು ಕ್ಷೀಣಿಸುತ್ತಿವೆ. ದುಡಿಯಬಲ್ಲ ಶರೀರಗಳಿದ್ದರೂ ಅವರು ಉದ್ಯೋಗರಹಿತರು, ಅಥವಾ ನಿರುದ್ಯೋಗಿಗಳು. ಸದಾ ಮಾಯಾಮೃಗವಾಗಿ ಕಾಡುವ ಉದ್ಯೋಗದ ಅವಕಾಶಕ್ಕಾಗಿ ಕಾಯುವವರ ಸಾಲಿನಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಡಾಕ್ಟರೇಟ್ ಹೊಂದಿದವರು ಜಗತ್ತಿನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವುದು ಬಹುಶಃ ಭಾರತದಲ್ಲಿಯೇ.

ನಾವು ವಿಕಾಸಗೊಳಿಸಲು ನಿರ್ಧರಿಸಿದ್ದ ಹಾಗೂ ನಮ್ಮ ಸಂವಿಧಾನದಲ್ಲಿ ಸಂಸ್ಕರಿಸಲು ಯೋಜಿಸಿದ್ದ ಪ್ರಜಾಪ್ರಭುತ್ವದ ಚಿಂತನೆಯನ್ನು ಈಗಿನ ಆಳುವ ವ್ಯವಸ್ಥೆ ಒಪ್ಪಿಕೊಳ್ಳುತ್ತಿಲ್ಲ. ಅದು ಅರ್ಥವಾಗುವಂಥದ್ದೇ. ಪ್ರಸ್ತುತ ಆಡಳಿತ ನಡೆಸುತ್ತಿರುವವರ ಸೈದ್ಧಾಂತಿಕ ಪೂರ್ವಜರಿಗೆ ಪ್ರಜಾಪ್ರಭುತ್ವ ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಎಂದರೆ ಸದಾ ಅಸಹ್ಯ. ಅವರು ಏಕಪಕ್ಷೀಯತೆ ಮತ್ತು ಕೇಂದ್ರೀಕರಣದ ಅನುಯಾಯಿಗಳು, ಜನರು ಮತ್ತು ಪ್ರಾಂತ್ಯಗಳಿಗೆ ಕನಿಷ್ಠ ಅಧಿಕಾರವಷ್ಟೇ ಇರಬೇಕೆನ್ನುವವರು. ದೇಶವನ್ನು 100 ಸಣ್ಣ ಘಟಕಗಳಾಗಿ ವಿಭಜಿಸಬೇಕೆಂದು ಆರೆಸ್ಸೆಸ್ ಕೇಳಿತ್ತು. ಅದು ಭಾರತೀಯ ಸಮಾಜದಲ್ಲಿ ಅಂತರ್ಗತವಾದ ವೈವಿಧ್ಯತೆಯನ್ನು ನಿರ್ಲಕ್ಷಿಸಿ ಭಾರತವನ್ನು ಆ ಏಕರೂಪತೆಯ ನಿಟ್ಟಿನತ್ತ ತಳ್ಳುವುದಕ್ಕಾಗಿ ಎಂಬುದು ಸ್ವಯಂವೇದ್ಯ.

ಈ ಪರಿಸ್ಥಿತಿಯು ಸರಿಹೊಂದಿಸಲಾಗದ ಸಂಘರ್ಷಗಳನ್ನು ಹುಟ್ಟುಹಾಕುತ್ತದೆ ಮತ್ತು ದೇಶದ ಆಂತರಿಕ ಸಂರಚನಾತ್ಮಕ ಸಂಕೀರ್ಣತೆಗಳನ್ನು ಉಲ್ಬಣಗೊಳಿಸುತ್ತದೆ ಎಂದು ಹೇಳಲು ಯಾವುದೇ ರಾಕೆಟ್ ವಿಜ್ಞಾನದ ಅಗತ್ಯವೂ ಇಲ್ಲ. ಇಂಥ ಸಂಘರ್ಷಗಳನ್ನು ಮತ್ತು ಉದ್ವಿಗ್ನತೆಗಳನ್ನು ಕೂಡ ಹೆಚ್ಚು ಮುಕ್ತತೆ ಮತ್ತು ಸಂವಾದದ ಮೂಲಕ ಮಾತ್ರವೇ ನಿಭಾಯಿಸಬಹುದು.

ನಾವು ವಿಕಾಸಗೊಳಿಸಲು ನಿರ್ಧರಿಸಿದ್ದ ಹಾಗೂ ನಮ್ಮ ಸಂವಿಧಾನದಲ್ಲಿ ಸಂಸ್ಕರಿಸಲು ಯೋಜಿಸಿದ್ದ ಪ್ರಜಾಪ್ರಭುತ್ವದ ಚಿಂತನೆಯನ್ನು ಈಗಿನ ಆಳುವ ವ್ಯವಸ್ಥೆ ಒಪ್ಪಿಕೊಳ್ಳುತ್ತಿಲ್ಲ. ಅದು ಅರ್ಥವಾಗುವಂಥದ್ದೇ. ಪ್ರಸ್ತುತ ಆಡಳಿತ ನಡೆಸುತ್ತಿರುವವರ ಸೈದ್ಧಾಂತಿಕ ಪೂರ್ವಜರಿಗೆ ಪ್ರಜಾಪ್ರಭುತ್ವ ಮತ್ತು ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಎಂದರೆ ಸದಾ ಅಸಹ್ಯ. ಅವರು ಏಕಪಕ್ಷೀಯತೆ ಮತ್ತು ಕೇಂದ್ರೀಕರಣದ ಅನುಯಾಯಿಗಳು, ಜನರು ಮತ್ತು ಪ್ರಾಂತ್ಯಗಳಿಗೆ ಕನಿಷ್ಠ ಅಧಿಕಾರವಷ್ಟೇ ಇರಬೇಕೆನ್ನುವವರು. ದೇಶವನ್ನು 100 ಸಣ್ಣ ಘಟಕಗಳಾಗಿ ವಿಭಜಿಸಬೇಕೆಂದು ಆರೆಸ್ಸೆಸ್ ಕೇಳಿತ್ತು. ಅದು ಭಾರತೀಯ ಸಮಾಜದಲ್ಲಿ ಅಂತರ್ಗತವಾದ ವೈವಿಧ್ಯತೆಯನ್ನು ನಿರ್ಲಕ್ಷಿಸಿ ಭಾರತವನ್ನು ಆ ಏಕರೂಪತೆಯ ನಿಟ್ಟಿನತ್ತ ತಳ್ಳುವುದಕ್ಕಾಗಿ ಎಂಬುದು ಸ್ವಯಂವೇದ್ಯ.

ಒಡೆದಾಳುವ ನೀತಿ

ಬಹುದೊಡ್ಡ ಜನವಿಭಾಗದ ಮೇಲೆ ಅಸಮಾನತೆ ಮತ್ತು ಸಂಕಷ್ಟಗಳನ್ನು ಹೇರಿ ಆರ್ಥಿಕ ಅವ್ಯವಸ್ಥೆ ಸೃಷ್ಟಿಸಿದ ನಂತರ, ಅಧಿಕಾರದಲ್ಲಿ ಮುಂದುವರಿಯುವುದಕ್ಕಾಗಿ ಜನರನ್ನು ಒಡೆಯಬೇಕು ಎನ್ನುವುದು ಅವರ ನಂಬಿಕೆ. ಆದ್ದರಿಂದ ಹೆಚ್ಚುತ್ತಿರುವ ಅಸಮಾನತೆಗಳಿಂದ ಬಾಧಿತರಾದ ಜನವಿಭಾಗಗಳ ಆರ್ಥಿಕ ಮತ್ತು ಸಾಮಾಜಿಕ ಒಳಿತಿನ ಕೊರತೆಯಿಂದÀ ದೇಶದ ಸ್ವಾತಂತ್ರ್ಯ ಮತ್ತು ರಾಜಕೀಯ ಸಾರ್ವಭೌಮತೆಗೆ ಬೆದರಿಕೆ ಎದುರಾಗಿದೆ.

ನಮ್ಮ ಸ್ವಾತಂತ್ರ್ಯದ ಹೊತ್ತಿನಲ್ಲಿ, ನಮ್ಮ ಸಾರ್ವಭೌಮತ್ವವನ್ನು ಬಲಪಡಿಸುವ ಉದ್ದೇಶದಿಂದ ನಾವು ನಿರ್ವಸಾಹತೀಕರಣದ ಹಾದಿಯನ್ನು ತುಳಿದೆವು ಮತ್ತು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿದೆವು. ಆ ಧೋರಣೆಗೆ ಭಾರೀ ಯಶಸ್ಸು ಸಿಕ್ಕಿತು. ಬಡತನ ಮತ್ತು ಅನಭಿವೃದ್ಧಿಯಿಂದ ಪೀಡಿತವಾದ ಹೊಸದಾಗಿ ವಿಮೋಚನೆಗೊಂಡ ದೇಶಗಳ ಮುಂಚೂಣಿಯಲ್ಲಿ ಇರಲು ನಮಗೆ ಇದರಿಂದ ಸಾಧ್ಯವಾಯಿತು. ಸಾಮ್ರಾಜ್ಯಶಾಹಿಯ ಹಿಡಿತದ ವಿರುದ್ಧ ಮತ್ತು ಶಾಂತಿಗಾಗಿನ ಹೋರಾಟವು ಆ ಧೋರಣೆಯ ಕೇಂದ್ರ ಬಿಂದುವಾಗಿದ್ದುದು ಕೇವಲ ಕಾಕತಾಳೀಯವಲ್ಲ.

ಆದರೆ ಇಂದು, ಆರೆಸ್ಸೆಸ್ ನೇತೃತ್ವದ ಬಿಜೆಪಿ ಸರಕಾರ ಆ ಧೋರಣೆಯನ್ನು ಕೈಬಿಟ್ಟು ಅಮೆರಿಕ ಸಾಮ್ರಾಜ್ಯಶಾಹಿಯತ್ತ ಹೆಚ್ಚೆಚ್ಚಾಗಿ ವಾಲುತ್ತಿದೆ. ಇಸ್ರೇಲನ್ನು ಗಟ್ಟಿಯಾಗಿ ಅಪ್ಪಿಕೊಳ್ಳುವುದು ಅದಕ್ಕಾಗಿ ಆಯ್ದುಕೊಂಡಿರುವ ಮಾರ್ಗಗಳಲ್ಲಿ ಒಂದಾಗಿದೆ. ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಹತ್ಯೆ ಮತ್ತು ಪಶ್ಚಿಮ ದಂಡೆ ಹಾಗೂ ಜೆರುಸಲೇಂ ಅನ್ನು ಕಿತ್ತುಕೊಳ್ಳುವ ಅದರ ಯೋಜನೆಗೆ ದೃಢವಾದ ಪ್ರತಿರೋಧ ವ್ಯಕ್ತವಾಗುತ್ತಿದೆ. ಇಸ್ರೇಲ್ ಮತ್ತು ಅಮೆರಿಕ-ಇಸ್ರೇಲ್ ಕೂಟದ ಜತೆ ಕೈಜೋಡಿಸಿರುವ ಕೆಲವು ದೇಶಗಳು ಕೂಡ ವಿರೋಧಿಸುವವರಲ್ಲಿ ಸೇರಿವೆ. ಆದರೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ಯುದ್ಧ ನಡೆಸಿದಾಗಿನಿಂದ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಇರಾನ್ ಮಿಲಿಟರಿಯ ಪ್ರತಿರೋಧದ ಮಟ್ಟ ಮತ್ತು ಇಸ್ರೇಲ್ ಮಾತ್ರವಲ್ಲದೆ ಇಡೀ ಕೊಲ್ಲಿ ವಲಯದಲ್ಲಿನ ಅಮೆರಿಕದ ಮಿಲಿಟರಿ ಸಂಸ್ಥಾಪನೆಗಳ ಮೇಲೆ ಇರಾನ್ ಬಲವಾದ ದಾಳಿ ನಡೆಸಿದ್ದರಿಂದ ಈ ವಲಯದಲ್ಲಿ ದೀರ್ಘಕಾಲದಿಂದ ಅಮೆರಿಕ ಹೊಂದಿದ್ದ ಪ್ರಾಬಲ್ಯಕ್ಕೆ ಸವಾಲು ಎದುರಾಗಿದೆ.

ರಾಜಕೀಯ ಸಾರ್ವಭೌಮತೆಗೆ ಧಕ್ಕೆ

ಒಂದು ವೇಳೆ ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿದ್ದಿದ್ದರೆ ಭಾರತದ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರಲು ಆರಂಭಿಸಿರುವ ಮಿಲಿಟರಿ ಸಂಘರ್ಷವನ್ನು ಪರಿಹರಿಸುವಲ್ಲಿ ರಾಜತಾಂತ್ರಿಕ ಪಾತ್ರವನ್ನು ನಿರ್ವಹಿಸಬಹುದಾಗಿತ್ತು. ಇಂಧನ ಭದ್ರತೆ ಮೇಲಿನ ಪರಿಣಾಮವು ನಮ್ಮ ಅಡುಗೆಕೋಣೆಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ, ಅಮೆರಿಕಕ್ಕೆ ಶರಣಾಗಿರುವುದು ಮತ್ತು ಇಸ್ರೇಲ್ ಜತೆ ಕೈಜೋಡಿಸಿರುವುದರಿಂದ ನಮ್ಮ ಪರಿಸ್ಥಿತಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ರಾಜಕೀಯ ಸಾರ್ವಭೌಮತೆಯೇ ಇಂಥ ಹೀನಾಯ ಸ್ಥಿತಿಯಲ್ಲಿರುವುದರಿಂದ ಸುಂಕಗಳು ಮತ್ತು ವಾಣಿಜ್ಯ ನೀತಿಗಳ ವಿಚಾರದಲ್ಲಿ ಅಮೆರಿಕ ಸಾಮ್ರಾಜ್ಯಶಾಹಿ ನಿಶ್ಚಿತವಾಗಿಯೂ ನಮ್ಮನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಿದೆ. ಇದು ನಮ್ಮ ರಫ್ತು ಮತ್ತು ದೇಶೀಯ ಮಾರುಕಟ್ಟೆ ಲಭ್ಯತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ನಮ್ಮ ದುಡಿಯುವ ಜನಗಳು ಅದರಲ್ಲೂ ಮುಖ್ಯವಾಗಿ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ ಮಾಡಿದೆ.

ಆರೆಸ್ಸೆಸ್ ಯಾವಾಗಲೂ ಬಹುಸಂಖ್ಯಾಕವಾದೀ ಸಿದ್ಧಾಂತವನ್ನು ಪ್ರತಿಪಾದಿಸಿದೆ ಮತ್ತು ಸಾಮಾಜಿಕ ದೃಷ್ಟಿಕೋನದಲ್ಲಿ ಬ್ರಾಹ್ಮಣ್ಯವನ್ನು ಆಚರಿಸುತ್ತದೆ. ಅಪಾರ ಪ್ರಮಾಣದ ವಿಭಿನ್ನ ಅಸ್ಮಿತೆಗಳಿದ್ದರೂ, ನಮಗೆ ಸ್ವಾತಂತ್ರ್ಯ ಸಿಗುವ ವರೆಗೆ ಎಲ್ಲರನ್ನು ಒಂದುಗೂಡಿಸುವ ಮತ್ತು ಒಳಗೊಳಿಸುವ ಪ್ರಯತ್ನ ನಡೆದಿತ್ತು. ಆದರೆ ಆರೆಸ್ಸೆಸ್ ಧೋರಣೆ ವಿಭಜನೆ ಮತ್ತು ಹೊರಗಿಡುವುದೇ ಆಗಿದೆ. ಬಿಜೆಪಿ ಮೂಲಕ ಅಧಿಕಾರದ ಮೇಲಿನ ಪ್ರಸಕ್ತ ಪ್ರಾಬಲ್ಯ ಮತ್ತು ಬಹುತೇಕ ಎಲ್ಲ ಸಾಂವಿಧಾನಿಕ ಹುದ್ದೆಗಳ ಮೇಲಿನ ನಿಯಂತ್ರಣದಿಂದಾಗಿ ಆಂತರಿಕ ತಿಕ್ಕಾಟಗಳು ತುತ್ತ ತುದಿಯನ್ನು ತಲುಪುತ್ತಿವೆ. ಇದರಿಂದ ಅತಿ ಹೆಚ್ಚು ಸಂಕಟಗಳಿಗೆ ಒಳಗಾಗಿರುವವರು ಬುಡಕಟ್ಟು ಜನಗಳು, ವಿದ್ಯಾರ್ಥಿಗಳು, ಮುಸ್ಲಿಮರು ಮತ್ತು ಮಹಿಳೆಯರು.

ಪ್ರಸ್ತುತ ನೀತಿಗಳನ್ನು ಸಮರ್ಥಿಸಲು ಅವರು ಹಳೆಯ ಗೊಡ್ಡುಪುರಾಣಗಳನ್ನು ಮುಂದಿಡುತ್ತಾರೆ, ತಮ್ಮ ಸಿದ್ಧಾಂತಕ್ಕೆ ಬೇಕಾದ ರೀತಿಯಲ್ಲಿ ಅವನ್ನು ಇನ್ನಷ್ಟು ವಿರೂಪಗೊಳಿಸುತ್ತಾರೆ. ಆದ್ದರಿಂದ, ಐಕ್ಯತೆಗಾಗಿ ಹೋರಾಟಕ್ಕೆ ಮತ್ತು ನಮ್ಮ ಎಲ್ಲ ಜನರನ್ನು ಒಳಗೊಳ್ಳುವುದಕ್ಕೆ ಮರುಸಮರ್ಪಿಸಿಕೊಳ್ಳಲು ಈ ಸ್ವಾತಂತ್ರ್ಯ ದಿನ ನಮ್ಮನ್ನು ಕರೆಯುತ್ತಿದೆ.

ಒಂದು ವೇಳೆ ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿದ್ದಿದ್ದರೆ ಭಾರತದ ಇಂಧನ ಭದ್ರತೆಯ ಮೇಲೆ ಪರಿಣಾಮ ಬೀರಲು ಆರಂಭಿಸಿರುವ ಮಿಲಿಟರಿ ಸಂಘರ್ಷವನ್ನು ಪರಿಹರಿಸುವಲ್ಲಿ ರಾಜತಾಂತ್ರಿಕ ಪಾತ್ರವನ್ನು ನಿರ್ವಹಿಸಬಹುದಾಗಿತ್ತು. ರಾಜಕೀಯ ಸಾರ್ವಭೌಮತೆಯೇ ಹೀನಾಯ ಸ್ಥಿತಿಯಲ್ಲಿರುವುದರಿಂದ ಸುಂಕಗಳು ಮತ್ತು ವಾಣಿಜ್ಯ ನೀತಿಗಳ ವಿಚಾರದಲ್ಲಿ ಅಮೆರಿಕ ಸಾಮ್ರಾಜ್ಯಶಾಹಿ ನಿಶ್ಚಿತವಾಗಿಯೂ ನಮ್ಮನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸಿದೆ. 

ಬಹುಸಂಖ್ಯಾಕವಾದೀ ನೀತಿಗಳು ಪ್ರಾಬಲ್ಯ ಹೇರುವುದನ್ನು, ಅದೂ ಮುಖ್ಯವಾಗಿ ಬಲಪ್ರಯೋಗದಿಂದ ಹೇರುವುದನ್ನು ಸೂಚಿಸುತ್ತವೆ. ಸ್ವತಂತ್ರ ಸಂಸ್ಥೆಗಳೆಂದು ಸಂವಿಧಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಂಸ್ಥೆಗಳನ್ನು ತಿರುಚುವ ಮೂಲಕ ಈ ಪ್ರಾಬಲ್ಯವನ್ನು ಸ್ಥಾಪಿಸಲಾಗುತ್ತಿದೆ. ಈಗಿನ ಆಳರಸರಿಗೆ ಅವು ತಮ್ಮ ಪ್ರಾಬಲ್ಯವನ್ನು ಹೇರಲಾಗದಿರುವ ವರೆಗೆ ಅಂತಹ ಸ್ವಾತಂತ್ರ್ಯದಲ್ಲಿ ನಂಬಿಕೆಯಿಲ್ಲ. ಭಾರತೀಯ ಚುನಾವಣಾ ಆಯೋಗ (ಇಸಿಐ) ಈ ರೀತಿಯ ವಂಚನೆಯ ಅತಿದೊಡ್ಡ ತಾಣವಾಗಿದೆ. ಮತದಾರರ ಪಟ್ಟಿಯಲ್ಲಿ ಮೋಸ ಮಾಡುವ ಪ್ರಕ್ರಿಯೆಯು ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ ಮತದಾರರು ಸರಕಾರವನ್ನು ಆಯ್ಕೆ ಮಾಡುವುದಲ್ಲ, ಅದರ ಬದಲಿಗೆ ಸರಕಾರವೇ ಪರೋಕ್ಷವಾಗಿ ತನ್ನ ಮತದಾರರನ್ನು ಆಯ್ಕೆ ಮಾಡುತ್ತದೆ. ಮತದಾನದ ಹಕ್ಕಿನ ವಂಚನೆಯೇ ಇದಕ್ಕೆ ಜನರು ತೆರುವ ಬೆಲೆಯಾಗಿದೆ.

ಈ ಸೈದ್ಧಾಂತಿಕ ಚೌಕಟ್ಟಿನಲ್ಲಿ ಪೂರ್ಣ ಪ್ರಮಾಣದಲ್ಲಿ ನವ ಫ್ಯಾಸಿಸ್ಟ್ ಸ್ವರೂಪಗಳಲ್ಲಿ ಭಯವನ್ನು ಹುಟ್ಟಿಸುವ ಮೂಲಕವೂ ಪ್ರಾಬಲ್ಯವನ್ನು ಹೇರಲಾಗುತ್ತಿದೆ. ದೈಹಿಕವಾಗಿ ಹಾಗೂ ಕಾರ್ಪೊರೇಟ್ ಮುಖ್ಯವಾಹಿನಿ ಮಡಿಲ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮ ವಲಯದಲ್ಲಿ ಬಿಜೆಪಿ ಐಟಿ ವಿಭಾಗ ಸುಳ್ಳು ಸುದ್ದಿಗಳನ್ನು ಹರಡಿಸಿ ಮಿದುಳುಗಳನ್ನು ನಿಷ್ಕಿçಯಗೊಳಿಸುವ ಮೂಲಕ ವಿರೋಧ ಮತ್ತು ಟೀಕೆಯ ಬಾಯಿ ಮುಚ್ಚಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಪ್ರತಿರೋಧವು ಅನಿವಾರ್ಯ

ವಿರೋಧ ಮತ್ತು ಪ್ರತಿರೋಧವು ಈಗ ಅನಿವಾರ್ಯ ಎಂಬ ಸಂದರ್ಭವನ್ನು ನಾವು ಎದುರಿಸುತ್ತಿದ್ದೇವೆ. ಈ ಪ್ರಶ್ನೆಯ ಮೇಲೆಯೇ ಯುವಜನರ ಜೆನ್‌ಜೀ ಪ್ರತಿಭಟನೆಯನ್ನು ಇತ್ತೀಚೆಗೆ ಕಂಡಿದ್ದೇವೆ. ಅವರಿಗೆ ತಮ್ಮ ಪರಿಸ್ಥಿತಿಯನ್ನು ಸುಧಾರಿಸಲು ಪರೀಕ್ಷೆಗಳೇ ಕೊನೆಯ ಅವಕಾಶವಾಗಿದ್ದರಿಂದ ಸಾಮಾಜಿಕ ಮಾಧ್ಯಮದಿಂದ ಪ್ರತಿಭಟನೆಯು ಹೊರಹೊಮ್ಮಿತು. ಪ್ರತಿಭಟನೆಯು ಪ್ರಮುಖವಾಗಿ ಡಿಜಿಟಲ್ ವೇದಿಕೆಗಳಿಂದ ಪ್ರಕಟಗೊಂಡ ಹಾಡು, ರೀಲ್ಸ್, ಮೆಮೆ ಮತ್ತು ಜೋಕ್ ಮೊದಲಾದವುಗಳೊಂದಿಗೆ, ನಮ್ಮ ಸ್ವಾತಂತ್ರ್ಯ ಮತ್ತು ಸಂವಿಧಾನದ ಕಲ್ಪನೆಗೇ ಬೆದರಿಕೆಯೊಡುವ ಆಡಳಿತವನ್ನು ಸಂಪೂರ್ಣವಾಗಿ ಪರಿಹಾಸ್ಯಕ್ಕೆ ಗುರಿ ಮಾಡಿದವು.

ಭಯವು ಕರಗಿ ಅಪರೂಪದ ಸಾಮೂಹಿಕ ಧೈರ್ಯದ ಪ್ರದರ್ಶನವಾಗಿದ್ದರಿಂದ ಬಹುಶಃ ಸರಕಾರಕ್ಕೆ ದಿಕ್ಕೇ ತೋಚದಂತಾಗಿದೆ. ೭೯ ವರ್ಷಗಳ ಹಿಂದೆ ನಾವು ಪರಿಭಾವಿಸಿದ ಸ್ವಾತಂತ್ರ್ಯವನ್ನು ನನಸು ಮಾಡಲು ಮುಂಬರುವ ವರ್ಷದಲ್ಲಿ ನೂರು ಹೂವುಗಳು ಅರಳಲೆಂದು ಆಶಿಸೋಣ. ಸವಾಲುಗಳು ಅಗಾಧವಾಗಿವೆ, ಆದರೆ ಒಂದು ಆಶಾಕಿರಣ ನಮ್ಮನ್ನು ಕೈಮಾಡಿ ಕರೆಯುತ್ತಿದೆ.

ಚಿತ್ರ ಕೃಪೆ: ಎಂ ಆಲಿ, ಫೇಸ್‌ಬುಕ್

Donate Janashakthi Media

Leave a Reply

Your email address will not be published. Required fields are marked *