ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಅವರು ಕಾನೂನುಬದ್ಧ ಸೋಲು ಎಂದು ಪರಿಗಣಿಸುವುದಿಲ್ಲ ಎಂದೂ ತಿಳಿಸಿದ್ದಾರೆ. ಹಿನ್ನಡೆಯಿದ್ದರೂ ತಮ್ಮ ರಾಜಕೀಯ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಪಶ್ಚಿಮ
ತೃಣಮೂಲ ಕಾಂಗ್ರೆಸ್ ಪಕ್ಷ ಭಾರೀ ಹಿನ್ನಡೆ ಅನುಭವಿಸಿದ ನಂತರ ಕೋಲ್ಕತ್ತಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬ್ಯಾನರ್ಜಿ, ಮತದಾನ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು. ಮತದಾರರ ಪಟ್ಟಿಯಲ್ಲಿ ತಿರುಚಾಟ, ವ್ಯಾಪಕ ಹಿಂಸಾಚಾರ ನಡೆದಿದೆ ಎಂದು ಅವರು ಹೇಳಿದರು. ಬಿಜೆಪಿ “ಸುಮಾರು 100 ಸ್ಥಾನಗಳನ್ನು ಅನ್ಯಾಯವಾಗಿ ಪಡೆದಿದೆ” ಎಂದು ಆರೋಪಿಸಿದರು.
ಈ ಫಲಿತಾಂಶವನ್ನು ತಿರಸ್ಕರಿಸಿರುವ ಬ್ಯಾನರ್ಜಿ, ತಮ್ಮ ಪಕ್ಷದ ಹೋರಾಟವು ಬಿಜೆಪಿ ವಿರುದ್ಧ ಮಾತ್ರವಲ್ಲ, ಸಮಗ್ರ ವ್ಯವಸ್ಥೆಯ ವಿರುದ್ಧವೂ ಆಗಿದೆ ಎಂದು ಹೇಳಿದ್ದಾರೆ. ಮತದಾನ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಭಾರತದ ಚುನಾವಣಾ ಆಯೋಗ ಮತ್ತು ಕೇಂದ್ರ ಭದ್ರತಾ ಪಡೆಗಳ ಪಾತ್ರದ ಬಗ್ಗೆ ಪಕ್ಷಪಾತದ ಆರೋಪಗಳನ್ನು ಅವರು ಪುನರುಚ್ಚರಿಸಿದರು.
ಇದನ್ನೂ ಓದಿ :ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಶಕ್ತಿಗಳಿಗೆ ಕಳವಳಕಾರಿ: ಎಂ ಎ ಬೇಬಿ
ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಲಕ್ಷಾಂತರ ಹೆಸರುಗಳನ್ನು ಕೈಬಿಟ್ಟಿದ್ದಾರೆ ಎಂದು ಅವರು ಹೇಳಿದ್ದು, ಹಲವಾರು ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಮತ್ತು ಪ್ರತಿನಿಧಿಗಳಿಗೆ ಒತ್ತಡ, ಬೆದರಿಕೆ ಉಂಟಾಗಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು.
ಸೋಲಿನ ನಡುವೆಯೂ ಪಕ್ಷ ಒಗ್ಗಟ್ಟಾಗಿ ಉಳಿದಿದೆ ಎಂದು ತಿಳಿಸಿದ ಬ್ಯಾನರ್ಜಿ, ಆರೋಪಗಳ ಪರಿಶೀಲನೆಗಾಗಿ 15 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. “ಪಕ್ಷದ ಏಕತೆ ಅಚಲವಾಗಿದೆ; ನಾವು ಹೋರಾಟ ಮುಂದುವರಿಸುತ್ತೇವೆ ಮತ್ತು ಮತ್ತೆ ಬಲವಾಗಿ ಹೊರಹೊಮ್ಮುತ್ತೇವೆ” ಎಂದು ಅವರು ಹೇಳಿದರು.
ಇದನ್ನೂ ನೋಡಿ : ವಿಧಾನಸಭಾ ಚುನಾವಣೆ : ಐದು ರಾಜ್ಯಗಳ ಫಲಿತಾಂಶ ಏನು ಹೇಳುತ್ತದೆ?
