ಸಿಬಿಐ ತನಿಖೆಗೆ ಸಹಕರಿಸದಿದ್ದರೆ ಜಾಮೀನು ರದ್ದು: ನೆಕ್ಕಂಟಿ ನಾಗರಾಜ್‌ಗೆ ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ದುರ್ಬಳಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ ಅವರ ಆಪ್ತ ನೆಕ್ಕಂಟಿ ನಾಗರಾಜ್‌ಗೆ ಕರ್ನಾಟಕ ಹೈಕೋರ್ಟ್ ಗಂಭೀರ ಎಚ್ಚರಿಕೆ ನೀಡಿದೆ. ತನಿಖೆ

ಸಿಬಿಐ ತನಿಖೆಗೆ ಪೂರ್ಣ ಸಹಕಾರ ನೀಡದಿದ್ದರೆ, ಅವರಿಗೆ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ರದ್ದುಪಡಿಸಲಾಗುವುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ನೆಕ್ಕಂಟಿ ನಾಗರಾಜ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ಹಾಗೂ ಮಾಜಿ ಸಚಿವ ನಾಗೇಂದ್ರ ಅವರಿಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಸಿಬಿಐ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿತು.

ಇದನ್ನೂ ಓದಿ: ಗೋರಖ್‌ಪುರದಲ್ಲಿ ಆಘಾತಕಾರಿ ಘಟನೆ: ಶಿಶುವಿನ ಮೇಲೆ ಅತ್ಯಾಚಾರ, ಬಾಲಕ ವಶಕ್ಕೆ

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, “ನೆಕ್ಕಂಟಿ ನಾಗರಾಜ್ ತನಿಖೆಗೆ ಸಹಕರಿಸುತ್ತಿಲ್ಲ. ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯ” ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ನೆಕ್ಕಂಟಿ ನಾಗರಾಜ್ ಜೂನ್ 23ರಂದು ಸಿಬಿಐ ಮುಂದೆ ಹಾಜರಾಗಿ, ಕೇಳಲಾಗುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಸೂಚಿಸಿತು. ಸಹಕರಿಸದಿದ್ದರೆ ಮಧ್ಯಂತರ ರಕ್ಷಣೆಯನ್ನು ಹಿಂಪಡೆಯುವುದಾಗಿ ಎಚ್ಚರಿಸಿತು.

ಇದೇ ವೇಳೆ, ಆರೋಪಿಯಿಂದ ಪಡೆದ ಉತ್ತರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಲಾಗಿದ್ದು, ಆರೋಪಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಲಾಯಿತು.

ಮತ್ತೊಂದೆಡೆ, ನಾಗೇಂದ್ರ ಪ್ರಕರಣದ ವಿಚಾರಣೆಯಲ್ಲಿ ಸಿಬಿಐ ಪರ ವಕೀಲರು, ನಿಗಮದ ಬ್ಯಾಂಕ್ ಖಾತೆಯಿಂದ ಮುಂಬೈನ ಇಬ್ಬರು ಮಹಿಳೆಯರಿಗೆ ₹2.50 ಕೋಟಿ ವರ್ಗಾವಣೆಯಾಗಿರುವುದಾಗಿ ಮಾಹಿತಿ ನೀಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದೃಶ್ಯಾಧಾರಗಳು ಕೂಡ ಲಭ್ಯವಿದ್ದು, ಅವುಗಳ ಕುರಿತು ಆರೋಪಿಗಳು ಸ್ಪಷ್ಟನೆ ನೀಡುತ್ತಿಲ್ಲ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ, ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಸಿಬಿಐ ಮನವಿ ಮಾಡಿತು. ಇದನ್ನು ಪರಿಗಣಿಸಿದ ನ್ಯಾಯಾಲಯ, ನಾಗೇಂದ್ರ ಅವರು ಜೂನ್ 29ರಂದು ಸಿಬಿಐ ಮುಂದೆ ಹಾಜರಾಗುವಂತೆ ಸೂಚಿಸಿತು.

ನಾಗೇಂದ್ರ ಪರ ವಕೀಲರು ವಾದ ಮಂಡನೆಗೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಾಲಯ ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿದೆ.

ಇದನ್ನೂ ನೋಡಿ: ಕಾಂಗ್ರೆಸ್‌ ಸರ್ಕಾರಕ್ಕೆ 3 ವರ್ಷ | ಮಹಿಳಾ ಮತ್ತು ಮಕ್ಕಳ ಕಲ್ಯಾಣ: ಘೋಷಣೆ ಎಷ್ಟು? ಸಾಧನೆ ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *