ಗೋರಖ್‌ಪುರ: ತಾಯಿಯ ಪಕ್ಕದಲ್ಲಿ ಮಲಗಿದ್ದ ಒಂಬತ್ತು ತಿಂಗಳ ಶಿಶುವನ್ನು 12 ವರ್ಷದ ಬಾಲಕನೊಬ್ಬ ಅಪಹರಿಸಿ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 19ರ ರಾತ್ರಿ ನಡೆದ ಈ ಘಟನೆಯಲ್ಲಿ, ಮದ್ಯಪಾನ ಮಾಡಿದ ಬಳಿಕ ಅಶ್ಲೀಲ ವಿಷಯಗಳನ್ನು ಮೊಬೈಲ್‌ನಲ್ಲಿ ವೀಕ್ಷಿಸಿದ್ದ ಬಾಲಕ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಾಣೆಯಾದ ಮಗು ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿ, ಹೊಲದಲ್ಲಿನ ತವರದ ಶೆಡ್ ಬಳಿ ರಕ್ತಸ್ರಾವದಿಂದ ಪತ್ತೆಯಾಗಿದೆ. ಕುಟುಂಬ ಸದಸ್ಯರು ತಕ್ಷಣವೇ ಮಗುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಿಆರ್‌ಡಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ವೈದ್ಯಕೀಯ ವರದಿಯಲ್ಲಿ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್‌ಐಆರ್ ಪ್ರಕ್ರಿಯೆ ಹೆಸರಲ್ಲಿ ಮತದಾನದ ಹಕ್ಕು ಕಸಿಯುವ ಪ್ರಯತ್ನ: ಸರ್ಕಾರದ ಮಧ್ಯಪ್ರವೇಶಕ್ಕೆ ಸಿಪಿಐ(ಎಂ) ಆಗ್ರಹ
ತನಿಖೆಯ ವೇಳೆ, ಘಟನೆಯಲ್ಲಿ ಶಂಕಿತನಾಗಿ ಗುರುತಿಸಲಾದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರಂಭದಲ್ಲಿ ಅಸ್ಪಷ್ಟ ಹೇಳಿಕೆ ನೀಡಿದ ಆತ, ಬಳಿಕ ಘಟನೆಯನ್ನು ಒಪ್ಪಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಘಟನೆಯು ಸ್ಥಳೀಯರಲ್ಲಿ ಆಘಾತ ಉಂಟುಮಾಡಿದ್ದು, ಮಕ್ಕಳ ಸುರಕ್ಷತೆ ಮತ್ತು ಅಂತರ್ಜಾಲದಲ್ಲಿನ ಅಶ್ಲೀಲ ವಿಷಯಗಳ ಸುಲಭ ಲಭ್ಯತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಶಿಶುವಿಗೆ ಚಿಕಿತ್ಸೆ ಮುಂದುವರಿದಿದ್ದು, ಆರೋಗ್ಯದ ಮೇಲೆ ವೈದ್ಯರು ನಿಗಾ ವಹಿಸಿದ್ದಾರೆ.
ಇದನ್ನೂ ನೋಡಿ: ಭೂಮಿ ಹೋಯ್ತು, ಉದ್ಯೋಗ ಸಿಗಲಿಲ್ಲ! 13 ವರ್ಷ ಕಳೆದರೂ ಸಿಗದ ನ್ಯಾಯ! Janashakthi Media
