ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ನೀಡಿರುವ ಸೂಚನೆಗಳನ್ನು ಕೆಲವರು ಕೋಮು ಪ್ರಚೋದನೆಗೆ ಬಳಸುತ್ತಿರುವುದನ್ನು ಖಂಡಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) [ಸಿಪಿಐ(ಎಂ)] ಮೈಸೂರು ಜಿಲ್ಲಾ ಸಮಿತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡ ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದೆ. ಟಿ. ನರಸೀಪುರ
ಸಿಪಿಐ(ಎಂ) ಜಿಲ್ಲಾ ಸಮಿತಿ ನಿಯೋಗವು ಇನ್ಸ್ಪೆಕ್ಟರ್ ಧನಂಜಯ್ ಅವರನ್ನು ಭೇಟಿ ಮಾಡಿ, ಗಣೇಶ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿತು. ಇದೇ ವೇಳೆ, ಪೊಲೀಸ್ ಅಧಿಕಾರಿಯೊಬ್ಬರು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ನೀಡಿರುವ ಸೂಚನೆಗಳನ್ನು ರಾಜಕೀಯವಾಗಿ ಬಳಸಿಕೊಂಡು ಕೋಮು ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನ ನಡೆಯಬಾರದು ಎಂದು ಪಕ್ಷ ಒತ್ತಾಯಿಸಿದೆ.
ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿ ವಲಯದಿಂದ ಇನ್ಸ್ಪೆಕ್ಟರ್ ಅವರ ಸೂಚನೆಗಳನ್ನು ಟೀಕಿಸಿ ಮಾಡಲಾಗುತ್ತಿರುವ ಹೇಳಿಕೆಗಳು ಕೋಮು ಪ್ರಚೋದನೆಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಪೊಲೀಸ್ ಇಲಾಖೆಯ ಕಾನೂನುಬದ್ಧ ಕ್ರಮಗಳಿಗೆ ರಾಜಕೀಯ ಬಣ್ಣ ನೀಡುವ ಮೂಲಕ ಶಾಂತಿ ಕದಡುವ ಪ್ರಯತ್ನವನ್ನು ತಡೆಯಬೇಕು ಎಂದು ಪಕ್ಷ ಆಗ್ರಹಿಸಿದೆ.
ಇದನ್ನೂ ಓದಿ : ಆಲೂರು ಕೊರಗರ ಭೂಮಿ ಸಮಸ್ಯೆ ಬಗೆಹರಿಸಲು ಕ್ರಮ: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭರವಸೆ
ಇದೇ ಸಂದರ್ಭದಲ್ಲಿ ಗಣೇಶ ವಿಸರ್ಜನೆ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ. ಈ ಬಾರಿ ಟಿ. ನರಸೀಪುರದಲ್ಲಿ ಹಿಂದು ಜಾಗರಣಾ ವೇದಿಕೆಯವರು ಉದ್ದೇಶಪೂರ್ವಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಾರೆ ಎಂಬ ಅನುಮಾನವಿದ್ದು, ವಿಸರ್ಜನೆ ಸಂದರ್ಭದಲ್ಲಿ ಗಲಭೆ ಅಥವಾ ಅಶಾಂತಿ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಪಕ್ಷ ಹೇಳಿದೆ.
ಗಲಭೆಗೆ ಪ್ರಚೋದನೆ ನೀಡುವ ಅಥವಾ ಸಾಮಾಜಿಕ ಶಾಂತಿಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಪೊಲೀಸ್ ಇಲಾಖೆ ಗುರುತಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದ ಒತ್ತಡಕ್ಕೆ ಒಳಗಾಗದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ನಿಯೋಗದಲ್ಲಿ ಸಿಪಿಐ(ಎಂ) ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಕೆ. ಬಸವರಾಜ್, ಜೆ. ಜಯರಾಂ, ಎನ್. ವಿಜಯ್ ಕುಮಾರ್, ಮುಖಂಡರಾದ ಜಿ. ರಾಮಕೃಷ್ಣ, ಪುಟ್ಟಮಲ್ಲಯ್ಯ, ನಾಗರಾಜ್, ರೇಖಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಕಸ್ತೂರಿ ರಂಗನ್ ವರದಿಯಿಂದ ಜನರ ಬದುಕಿಗೆ ಕುತ್ತೇ? | ಸಿಪಿಐ(ಎಂ) ಕೊಟ್ಟ ಎಚ್ಚರಿಕೆಗಳೇನು? Janashakthi Media
