ಉಳ್ಳಾಲ: ಸೋಮವಾರ ಸಂಜೆ ಕುತ್ತಾರು ಭಾಗದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದ ಡಿವೈಎಫ್ಐಯ ಸಕ್ರಿಯ ಕಾರ್ಯಕರ್ತ ವರ್ಷಿತ್ ಕುಲಾಲ್ (21) ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ. ಆದರೆ, ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ ತಂದೆ ಗೋಪಾಲ, ತಾಯಿ ವೇದಾವತಿ ಹಾಗೂ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಹಲವು ಜೀವಗಳಿಗೆ ಹೊಸ ಬದುಕಿನ ಅವಕಾಶ ಕಲ್ಪಿಸಿದ್ದಾರೆ.
ಕುತ್ತಾರಿನ ಬಟ್ಟೆದಡಿ ಪ್ರದೇಶದ ನಿವಾಸಿಯಾಗಿದ್ದ ವರ್ಷಿತ್, ಆಯೆರೆಬೆಟ್ಟುವಿನ ಗೋಪಾಲ ಮತ್ತು ವೇದಾವತಿ ದಂಪತಿಯ ಕಿರಿಯ ಪುತ್ರ. ಫ್ಯಾಬ್ರಿಕೇಶನ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಡಿವೈಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದು, ಜನಪರ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದರು.
ಸೋಮವಾರ ರಾತ್ರಿ ಸುಮಾರು 7.30ರ ವೇಳೆಗೆ ವರ್ಷಿತ್ ಅವರು ಕುತ್ತಾರುವಿನಿಂದ ಮನೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಬಳಿಯ ದುರ್ಗಾ ಆಟೋ ವರ್ಕ್ಸ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟರ್ಗೆ ಅವರ ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ವರ್ಷಿತ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮತ್ತೆ ಗುಣಮುಖನಾಗಿ ತಮ್ಮ ನಡುವೆ ಮರಳಿ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ವೈದ್ಯರು ವರ್ಷಿತ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದಾಗ ಆಘಾತ ಎದುರಾಯಿತು. ಕಣ್ಣೆದುರೇ ಬೆಳೆಸಿದ ಮಗನನ್ನು ಕಳೆದುಕೊಂಡ ನೋವು ಒಂದೆಡೆಯಾದರೆ, ಅದೇ ನೋವಿನ ನಡುವೆಯೂ ಅಂಗಾಂಗ ದಾನ ಮಾಡುವ ನಿರ್ಧಾರ ಕೈಗೊಳ್ಳುವುದು ಕುಟುಂಬಕ್ಕೆ ಸುಲಭದ ವಿಚಾರವಾಗಿರಲಿಲ್ಲ. ಆದರೆ, ವರ್ಷಿತ್ ಅವರ ತಂದೆ, ತಾಯಿ ಮತ್ತು ಸಹೋದರರು ಮಗನ ಅಂಗಾಂಗಗಳನ್ನು ದಾನ ಮಾಡಲು ಸಮ್ಮತಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ : ಕರಾವಳಿ ಜಿಲ್ಲೆಗಳ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ ಘೋಷಣೆ

ವೈದ್ಯಕೀಯ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ವರ್ಷಿತ್ ಅವರ ಯಕೃತ್, ಎರಡು ಮೂತ್ರಪಿಂಡಗಳು ಹಾಗೂ ಶ್ವಾಸಕೋಶಗಳನ್ನು ಅಗತ್ಯವಿರುವ ರೋಗಿಗಳ ಚಿಕಿತ್ಸೆಗಾಗಿ ಸಂಬಂಧಪಟ್ಟ ಆಸ್ಪತ್ರೆಗಳಿಗೆ ರವಾನಿಸುವ ಕಾರ್ಯ ನಡೆದಿದೆ. ಅಂಗಾಂಗಗಳನ್ನು ತ್ವರಿತವಾಗಿ ತಲುಪಿಸಲು ‘ಝೀರೋ ಟ್ರಾಫಿಕ್’ ವ್ಯವಸ್ಥೆ ಬಳಸಲಾಗಿದೆ. ತಮ್ಮ ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ಕುಟುಂಬದ ನಿರ್ಧಾರ ಹಲವು ಕುಟುಂಬಗಳಿಗೆ ಹೊಸ ಭರವಸೆ ನೀಡುವಂತಾಗಿದೆ.
ವರ್ಷಿತ್ ದೇಹತಃ ನಮ್ಮೊಂದಿಗಿಲ್ಲದಿದ್ದರೂ, ಅವರ ಅಂಗಾಂಗಗಳ ಮೂಲಕ ಹಲವು ಜೀವಗಳಲ್ಲಿ ಬದುಕು ಮುಂದುವರಿಯಲಿದೆ. ಜನರಿಗಾಗಿ ಹಾಗೂ ಸಮಾಜಕ್ಕಾಗಿ ಸದಾ ಮುಂಚೂಣಿಯಲ್ಲಿ ನಿಂತಿದ್ದ ಯುವ ಹೋರಾಟಗಾರ, ಸಾವಿನಲ್ಲೂ ತನ್ನ ಬದುಕಿಗೆ ಒಂದು ಅರ್ಥವನ್ನು ಬಿಟ್ಟುಹೋಗಿದ್ದಾರೆ. ಅವರ ಆದರ್ಶ, ಕನಸು ಮತ್ತು ಜನಪರ ಚಿಂತನೆಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಡಿವೈಎಫ್ಐ ಕಾರ್ಯಕರ್ತರು ತಿಳಿಸಿದ್ದಾರೆ.
ವರ್ಷಿತ್ ಅವರ ಅಂಗಾಂಗ ದಾನಕ್ಕೆ ಸಂಬಂಧಿಸಿದಂತೆ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕುಟುಂಬಕ್ಕೆ ಅಗತ್ಯ ಮಾರ್ಗದರ್ಶನ ನೀಡಿತು. ಸಂಘಟನೆಯ ವತಿಯಿಂದ ವರ್ಷಿತ್ ಅವರ ಅಗಲಿಕೆಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಂಗಾಂಗ ದಾನದ ಮಹತ್ವವನ್ನು ಸಮಾಜಕ್ಕೆ ಸಾರಿದ ವರ್ಷಿತ್ ಕುಟುಂಬದ ಮಾನವೀಯ ನಿರ್ಧಾರಕ್ಕೆ ಸಂಘಟನೆ ಗೌರವ ಸಲ್ಲಿಸಿದೆ.
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವಕೇಟ್ ನಿತಿನ್ ಕುತ್ತಾರ್, ಕಾರ್ಯದರ್ಶಿ ರಿಜ್ವಾನ್ ಹರೇಕಳ, ಸುನೀಲ್ ತೇವುಲ, ಸಂಕೇತ್ ಕಂಪ, ಮಿಥುನ್ ಕುತ್ತಾರ್, ಧೀಕ್ಷಿತ್ ಕುತ್ತಾರ್ ಸೇರಿದಂತೆ ಅಪಾರ ಸಂಖ್ಯೆಯ ಡಿವೈಎಫ್ಐ ಕಾರ್ಯಕರ್ತರು, ಬಂಧು-ಮಿತ್ರರು ಕುಟುಂಬದೊಂದಿಗೆ ನಿಂತು ಸಾಂತ್ವನ ಹೇಳಿದರು.
ವರ್ಷಿತ್ ಅವರ ಪಾರ್ಥಿವ ಶರೀರದ ಅಂತಿಮ ವಿಧಿವಿಧಾನಗಳು ಬುಧವಾರ ಸಂಜೆ 5 ಗಂಟೆಗೆ ಕುತ್ತಾರಿನ ನಿವಾಸದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಇದನ್ನೂ ನೋಡಿ : ಕಸ್ತೂರಿ ರಂಗನ್ ವರದಿಯಿಂದ ಜನರ ಬದುಕಿಗೆ ಕುತ್ತೇ? | ಸಿಪಿಐ(ಎಂ) ಕೊಟ್ಟ ಎಚ್ಚರಿಕೆಗಳೇನು? Janashakthi Media
