ಕೊಪ್ಪಳ: ಹಲವು ತಿಂಗಳುಗಳಿಂದ ಬಹುಅಂಗಾಂಗಗಳ ವೈಫಲ್ಯದ ಸಮಸ್ಯೆ ಎದುರಿಸುತ್ತಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ, ಮಾರ್ಚ್ 23ರ ಬೆಳಗಿನ ಜಾವ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರಿಗೆ ಪತ್ನಿ, ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಸ್ವಂತ ಊರಾದ ಕೊಪ್ಪಳ ತಾಲ್ಲೂಕಿನ ಯಲಮಗೇರಿ ಗ್ರಾಮದಲ್ಲಿ ಮಾರ್ಚ್ 24ರಂದು ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಪುತ್ರ ಮಹಾಂತೇಶ ಸಂಗಟಿ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಕರಿಯಣ್ಣ ಗುರುತಿಸಿಕೊಂಡಿದ್ದರು.
ಮೊದಲ ಅಧ್ಯಕ್ಷ: ರಾಯಚೂರು ಜಿಲ್ಲೆಯಿಂದ ಪ್ರತ್ಯೇಕಗೊಂಡು ಕೊಪ್ಪಳ 1998ರಲ್ಲಿ ಜಿಲ್ಲೆಯಾಯಿತು. ನೂತನ ಜಿಲ್ಲೆಯ ಮೊದಲ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ಕರಿಯಣ್ಣ ಸಂಗಟಿ ವಿದ್ಯಾರ್ಥಿ ಹಂತದಿಂದಲೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದರು. ಎಸ್.ಎಂ. ಕೃಷ್ಣ ಅವರಿಗೂ ಆಪ್ತರಾಗಿದ್ದರಿಂದ ಕರಿಯಣ್ಣ ಅವರನ್ನು 2000ನೇ ಇಸವಿಯಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. 2008ರ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಪಕ್ಷೇತರರಾಗಿ, 2018ರ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು.
ಇದನ್ನೂ ಓದಿ: ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ರೆಡ್ಡಿ ಗೆಲುವಿಗೆ ನೆರವು: ಒಂದೆಡೆ ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿದ್ದರೂ ಸ್ಥಳೀಯ ರಾಜಕಾರಣದಲ್ಲಿನ ಪಲ್ಲಟದಿಂದಾಗಿ ಶಾಸಕ ಜನಾರ್ದನ ರೆಡ್ಡಿ ರಾಜಕೀಯ ಪುನರ್ಜನ್ಮಕ್ಕೆ ಕರಿಯಣ್ಣ ನೆರವಾದರು.
ಕರಿಯಣ್ಣ ಜೊತೆಗಿನ ಒಡನಾಟ ಸ್ಮರಿಸಿಕೊಂಡಿರುವ ಜೆಡಿಎಸ್ ರಾಜ್ಯ ಕೋರ್‌ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ‘ಕರಿಯಣ್ಣ ಸಂಗಟಿ ಅವರಿಗೆ ರಾಜಕೀಯದಲ್ಲಿ ಸೇವೆ ಸಲ್ಲಿಸಲು ಇನ್ನೂ ಅವಕಾಶವಿತ್ತು. ಆದರೆ ಅನಾರೋಗ್ಯ ಕಾಡಿತು. ತಮ್ಮ ಕಾಲಾವಧಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ. ಅವರು ಪಕ್ಷ ರಾಜಕಾರಣದಲ್ಲಿದ್ದರೂ ಯಾರನ್ನೂ ದ್ವೇಷಿಸಲಿಲ್ಲ. ರಾಜಕೀಯದಾಚೆ ಉತ್ತಮ ವ್ಯಕ್ತಿಗತ ಸಂಬಂಧವನ್ನು ಎಲ್ಲರೊಂದಿಗೆ ಹೊಂದಿದ್ದರು. ಮಾದರಿ ರಾಜಕಾರಣದಕ್ಕೆ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ’ ಎಂದಿದ್ದಾರೆ.
ಕರಿಯಣ್ಣ ಸಂಗಟಿ 1982ರಿಂದ ಮೂರು ವರ್ಷ ರಾಯಚೂರು ಜಿಲ್ಲೆಯ ಸೇವಾದಳದ ಸಂಘಟಕರಾಗಿ, 1985ರಿಂದ 89ರ ತನಕ ಕೊಪ್ಪಳ ತಾಲ್ಲೂಕು ಯೂತ್ ಕಾಂಗ್ರೆಸ್ ಪ್ರಮುಖರಾಗಿ, 1990–92ರ ತನಕ ರಾಯಚೂರು ಜಿಲ್ಲೆಯ ಯೂತ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ, 1992ರಲ್ಲಿ ಕೊಪ್ಪಳ ತಾಲ್ಲೂಕು ಭೂ ಅಭಿವೃದ್ಧಿ ಬ್ಯಾಂಕ್ ಸದಸ್ಯರಾಗಿ, 1998ರಲ್ಲಿ ಕೊಪ್ಪಳ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿ, ಕಾಳಿದಾಸ ಪ್ರೌಢಶಾಲೆ ಹಾಗೂ ರಾಜೀವಗಾಂಧಿ ಯುವಕ ಮಂಡಳದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಇದನ್ನೂ ನೋಡಿ: ಓದು ಕಾರ್ಯಾಗಾರ | ವಿದ್ಯಾರ್ಥಿಗಳ ಕಣ್ಣಲ್ಲಿ ಕುವೆಂಪು Janashakthi Media
