ವಸಂತರಾಜ ಎನ್.ಕೆ
ಅಗಸ್ಟ್ 10 ರಂದು ಫಿಡೆಲ್ ಕ್ಯಾಸ್ಟ್ರೋ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ, ಕ್ಯೂಬಾದ ರಾಜಧಾನಿಯಲ್ಲಿ “ಮೊದಲ ಅಂತರರಾಷ್ಟ್ರೀಯ ಸಂವಾದ – ಫಿಡೆಲ್ಃ ಪರಂಪರೆ ಮತ್ತು ಭವಿಷ್ಯ” ವನ್ನು ಉದ್ಘಾಟಿಸಲಾಯಿತು. ಕ್ರಾಂತಿಯ ಐತಿಹಾಸಿಕ ನಾಯಕನಿಗೆ ಗೌರವ ಸಲ್ಲಿಸಲು ಕ್ಯೂಬಾದ ಜನರೊಂದಿಗೆ ಸೇರಲು, ಬೆದರಿಕೆಗಳು ಮತ್ತು ಅಪಾಯಗಳನ್ನು ಧಿಕ್ಕರಿಸಿದ 63 ದೇಶಗಳ 900 ಕ್ಕೂ ಹೆಚ್ಚು ವಿದೇಶಿಯರು ಸೇರಿದಂತೆ 1,500 ಕ್ಕೂ ಹೆಚ್ಚು ಪ್ರತಿನಿಧಿಗಳು, ಉದ್ಘಾಟನಾ ಅಧಿವೇಶನದಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಮೀನಾಕ್ಷಿಸುಂದರಂ ಸೇರಿದಂತೆ ಭಾರತದ ಸಿಪಿಐ(ಎಂ) ನ ಏಳು ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ ಸೇರಿದಂತೆ ವಿಶ್ವದಾದ್ಯಂಯ ಫಿಡೆಲ್ ಕ್ಯಾಸ್ಟ್ರೋ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ದೆಹಲಿಯಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಕ್ಯೂಬಾ ಸೌಹಾರ್ದತಾ ಸಮಿತಿ ರಚಿಸಲಾಗಿದ್ದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
‘ಫಿಡೆಲ್ ಕ್ಯಾಸ್ಟ್ರೋ ರುಜ್ ಕೇಂದ್ರ’ದ ನಿರ್ದೇಶಕ ಡಾ. ರೆನೆ ಗೊನ್ಜಾಲೆಜ್ ಬ್ಯಾರಿಯೋಸ್ ಸಭೆಯನ್ನು ಅಗಾಧ ತುಮುಲಗಳಿರುವ ಜಾಗತಿಕ ಸನ್ನಿವೇಶದ ಸಂದರ್ಭವನ್ನು ನೆನಪಿಸುತ್ತಾ ಸ್ವಾಗತ ಭಾಷಣ ಮಾಡಿದರು.
“ಕ್ಯೂಬನ್ ಕ್ರಾಂತಿಯ ಐತಿಹಾಸಿಕ ನಾಯಕ ಈ ಸಭೆಗಾಗಿ ನಮ್ಮನ್ನು ಒಗ್ಗೂಡಿಸಿದ್ದಾರೆ. ಮನುಕುಲದ ಇತಿಹಾಸದ ಈ ನಿರ್ಣಾಯಕ ಕ್ಷಣದಲ್ಲಿ ಫಿಡೆಲ್ ನಮಗೆ ಕರೆ ಕೊಟ್ಟಿದ್ದಾರೆ “ಎಂದು ಗೊನ್ಜಾಲೆಜ್ ಬ್ಯಾರಿಯೋಸ್ ಹೇಳಿದ್ದಾರೆ, ಈ ಗ್ರಹವು ಹಿಂದೆಂದೂ ಸ್ವಯಂ-ವಿನಾಶಕ್ಕೆ ಇಷ್ಟು ಹತ್ತಿರದಲ್ಲಿರಲಿಲ್ಲ ಎಂದು ಎಚ್ಚರಿಸಿದ್ದಾರೆ.
ಫಿಡೆಲ್ ಕ್ಯಾಸ್ಟ್ರೋ ರುಜ್ ಕೇಂದ್ರವನ್ನು ನವೆಂಬರ್ 25,2021 ರಂದು ಅಧಿಕೃತವಾಗಿ ಉದ್ಘಾಟಿಸಲಾಯಿತು. ಅಂದಿನಿಂದ ಇದು ಉದಾತ್ತ ಮತ್ತು ದೃಢನಿಶ್ಚಯದ ಜನತೆ ತನ್ನ ಐತಿಹಾಸಿಕ ನಾಯಕನೊಂದಿಗೆ, ಹೊಸ, ಮುಕ್ತ ಮತ್ತು ಸಾರ್ವಭೌಮ ತಾಯ್ನಾಡನ್ನು ರೂಪಿಸಿದ ನಿರ್ಮಿಸಿದ ವಿಮೋಚನೆಯ ಕಾರ್ಯವನ್ನು ಮೆಚ್ಚುವ, ವಿಶ್ವದ ಎಲ್ಲರಿಗೂ, ಒಂದು ಹೆಮ್ಮೆಯ ತಾಣವಾಗಿದೆ ಎಂದು ಕೇಂದ್ರದ ನಿರ್ದೇಶಕರು ನೆನಪಿಸಿಕೊಂಡರು.
ಸಮಾರಂಭದಲ್ಲಿ ಕ್ಯೂಬಾದ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಗಣರಾಜ್ಯದ ಅಧ್ಯಕ್ಷ ಡಾ. ಮಿಗುಯೆಲ್ ಡಿಯಾಜ್-ಕ್ಯಾನೆಲ್ ಬರ್ಮುಡೆಜ್ ಭಾಗವಹಿಸಿದ್ದರು. ಅವರ “ಫಿಡೆಲ್ಃ ಪರಂಪರೆ ಮತ್ತು ಭವಿಷ್ಯ ” ಎಂಬ ಮೊದಲ ಅಂತರರಾಷ್ಟ್ರೀಯ ಸಂವಾದದ ಆಶಯ ಭಾಷಣವು ಕ್ಯೂಬನ್ ಕ್ರಾಂತಿಯ ಐತಿಹಾಸಿಕ ನಾಯಕನ ಜೀವನ, ಚಿಂತನೆ ಮತ್ತು ಚಿರಂತನ ಪ್ರಸ್ತುತತೆಯನ್ನು ಪರಿಶೀಲಿಸುವ ವಿವರವಾದ ಮತ್ತು ಆಳವಾದ ಭಾಷಣವಾಗಿತ್ತು.

ಫಿಡೆಲ್ ಮತ್ತು ಕ್ಯೂಬಾ ಕ್ರಾಂತಿ
“ಅನ್ಯಾಯ, ಅಸಮಾನತೆ ಮತ್ತು ಅವಲಂಬನೆಯಿಂದ ಗುರುತಿಸಲ್ಪಟ್ಟ ದೇಶ” ವಾಗಿದ್ದ 1959ಕ್ಕಿಂತ ಮೊದಲಿನ ಕ್ಯೂಬಾವನ್ನು ತನ್ನ ವಿಶ್ವವಿದ್ಯಾನಿಲಯದ ವರ್ಷಗಳಿಂದಲೇ ಬದಲಿಸಲು ಪ್ರಾರಂಭಿಸಿದ ಫಿಡೆಲ್ ಗೆ ಮೊದಲ ಗೌರವವನ್ನು ನೀಡುವ ಮೂಲಕ ಡಿಯಾಜ್-ಕ್ಯಾನೆಲ್ ತನ್ನ ಭಾಷಣ ಪ್ರಾರಂಭಿಸಿದರು.
ತನ್ನ ಆತ್ಮರಕ್ಷಣೆಯನ್ನು ಜುಲೈ 26ರ ಚಳವಳಿಯ ರಾಜಕೀಯ ಕಾರ್ಯಕ್ರಮವನ್ನಾಗಿ ಪರಿವರ್ತಿಸಿದ ಯುವ ವಕೀಲನನ್ನು; ಸೆರೆವಾಸವನ್ನು ಹೋರಾಟದ ಶಾಲೆಯಾಗಿ ಪರಿವರ್ತಿಸಿದ ಕೈದಿಯನ್ನು; ಮತ್ತು ಕೇವಲ 34ನೇ ವಯಸ್ಸಿನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಕ್ಯೂಬಾ “ಗಣರಾಜ್ಯದ ಸಂವಿಧಾನದ ರಕ್ಷಣೆಯಲ್ಲಿ ನೀಡಿದ ಅತ್ಯಂತ ಸುದೀರ್ಘ ಮತ್ತು ಪರಿಣಾಮಕಾರಿ ಭಾಷಣ”ವನ್ನು ಮಾಡಿದ ಕ್ರಾಂತಿಕಾರಿ ನಾಯಕನನ್ನು ಅವರು ನೆನಪಿಸಿಕೊಂಡರು.
ಕ್ಯೂಬಾದ ಅಧ್ಯಕ್ಷರು ಕ್ರಾಂತಿ-ಪೂರ್ವ ಕ್ಯೂಬಾದ ವಿವರವಾದ ಚಿತ್ರಣವನ್ನು ನೀಡಿದರುಃ ಉದ್ಯೋಗವಿಲ್ಲದ 6 ಲಕ್ಷ ಕ್ಯೂಬನ್ನರು, ವಿದ್ಯುತ್ ನಿಂದ ವಂಚಿತರಾದ 30 ಲಕ್ಷ ಜನರು, ಜನಸಂಖ್ಯೆಯ 37.5 %ದಷ್ಟು ಅನಕ್ಷರಸ್ಥರು, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಕರಿಲ್ಲದ 60 %ದಷ್ಟು ಮಕ್ಕಳು, ಅತ್ಯಂತ ಹೆಚ್ಚಿನ ಶಿಶು ಮರಣ ಪ್ರಮಾಣ ಮತ್ತು ಕಡಿಮೆ ಆಯುಷ್ಯ.
“ಶೇಕಡಾ 85 ರಷ್ಟು ಸಣ್ಣ ರೈತರು ಗೇಣಿದಾರರಾಗಿದ್ದರೆ, ಒಬ್ಬ ಪ್ರಮುಖ ಭೂಮಾಲೀಕ ಶೇಕಡಾ 46 ರಷ್ಟು ಜನಸಂಖ್ಯೆಯನ್ನು ನಿಯಂತ್ರಿಸುತ್ತಿದ್ದರು” ಎಂದು ಅವರು ವಿವರಿಸಿದರು. ಕ್ಯೂಬಾದ ಹೆಚ್ಚಿನ ಸಾರ್ವಜನಿಕ ಸೇವೆಗಳು, ಬ್ಯಾಂಕಿಂಗ್, ವಾಣಿಜ್ಯ, ತೈಲ ಸಂಸ್ಕರಣ ಘಟಕಗಳು ಮತ್ತು ಅತ್ಯುತ್ತಮ ಭೂಮಿ U.S. ಕಂಪನಿಗಳ ಒಡೆತನದಲ್ಲಿದ್ದವು ಎಂದು ಅವರು ಹೇಳಿದರು.
ಡಿಯಾಜ್-ಕ್ಯಾನೆಲ್ ಆ ಕ್ರಾಂತಿ-ಪೂರ್ವ ಪರಿಸ್ಥಿತಿಗಳನ್ನು ಕ್ಯೂಬಾದ ಪ್ರಸ್ತುತ ಆರೋಗ್ಯ, ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಕ್ರೀಡಾ ಸೂಚಕಗಳೊಂದಿಗೆ ಹೋಲಿಸಿದರು. ಇದು ಯು.ಎಸ್ ಆರ್ಥಿಕ, ಆರ್ಥಿಕ ಮತ್ತು ವಾಣಿಜ್ಯ ದಿಗ್ಬಂಧನದ ಅಡಿಯಲ್ಲಿಯೂ ಸಹ ಖಂಡದ ಇತರ ದೇಶಗಳಿಗಿಂತ ಹೆಚ್ಚಾಗಿದೆ. ಪ್ರತಿ 1,000 ನಿವಾಸಿಗಳಿಗೆ ಒಂಬತ್ತು ಕ್ಕೂ ಹೆಚ್ಚು ವೈದ್ಯರನ್ನು ಹೊಂದಿರುವ ಕ್ಯೂಬಾದಲ್ಲಿ ತಲಾ ಅತಿ ಹೆಚ್ಚು ವೈದ್ಯರ ಪ್ರಮಾಣವಿದೆ ಮತ್ತು 77.7 ವರ್ಷಗಳ ಸರಾಸರಿ ಆಯುಷ್ಯವನ್ನು ಹೊಂದಿರುವ ಅಮೆರಿಕಾ ಖಂಡದ ಹತ್ತು ದೇಶಗಳಲ್ಲಿ ಒಂದಾಗಿದೆ ಎಂದು ಅವರು ಗಮನಿಸಿದರು. “ಮತ್ತು ದೇಶವು ತನ್ನದೇ ಮತ್ತು ಇತರ ರಾಷ್ಟ್ರಗಳ ಜನತೆಯ ಆರೋಗ್ಯ ಮತ್ತು ಶಿಕ್ಷಣಕ್ಕೆ ಅತ್ಯಂತ ಹೆಚ್ಚಿನ ಕೊಡುಗೆ ನೀಡಿದೆ” ಎಂದು ಅವರು ಹೇಳಿದರು.

ಫಿಡೆಲ್ ಪರಂಪರೆ
1960ರ ಸೆಪ್ಟೆಂಬರ್ ನಲ್ಲಿ ವಿಶ್ವದ ಸಮಸ್ಯೆಗಳ ಬಗ್ಗೆ ಫಿಡೆಲ್ ರ ಅತ್ಯಂತ ನಿಖರವಾದ ಟಿಪ್ಪಣಿಯೊಂದನ್ನು ಅಧ್ಯಕ್ಷರು ಉಲ್ಲೇಖಿಸಿ,. ಸೋವಿಯೆಟ್ ಒಕ್ಕೂಟ ಮತ್ತು ಸಮಾಜವಾದಿ ಶಿಬಿರದ ಕಣ್ಮರೆ ಗಳಿಂದ ಈ ಸಮಸ್ಯೆಗಳು ಇನ್ನಷ್ಟು ಹದಗೆಡುತ್ತವೆಂದರು. “ಯುದ್ಧಗಳು, ವಸಾಹತುಗಳು, ದೇಶಗಳ ಶೋಷಣೆ ತೊಲಗಲಿ, ಮತ್ತು ಆಗ ಮಾತ್ರ ಮನುಕುಲ ಅನಂತ ಪ್ರಗತಿಯ ನಿಜವಾದ ಹಂತವನ್ನು ದಾಟುತ್ತದೆ “ಎಂಬ ಫಿಡೆಲ್ ಮಾತುಗಳನ್ನು ನೆನಪಿಸಿಕೊಂಡರು.
ಫಿಡೆಲ್ ನ ಮೂಲಭೂತ ಪರಂಪರೆಗಳೆಂದು ಪರಿಗಣಿಸಿದ್ದನ್ನು ಅವರು ಹಂಚಿಕೊಂಡರು: “ವಿಚಾರಗಳನ್ನು ಸಂರಕ್ಷಿಸುವ ಮೂಲಕ ಕನಸುಗಳನ್ನು ಸಾಧಿಸಬಹುದು ಎಂಬ ಖಚಿತತೆಯನ್ನು, ಅಂತರಾಷ್ಟ್ರೀಯತೆಯು ನಮ್ಮ ವಿಶಿಷ್ಟತೆಯಾಗಬೇಕು ಎಂಬ ದೃಢವಿಶ್ವಾಸವನ್ನು – ಫಿಡೆಲ್ ನಮಗೆ ಬಿಟ್ಟು ಹೋಗಿದ್ದಾರೆ. ಮನುಕುಲವನ್ನು ಬಡತನದಿಂದ ಮೇಲೆತ್ತಲು ಸಮಾಜವಾದವೇ ಏಕೈಕ ಮಾರ್ಗ ಎಂಬ ನಂಬಿಕೆಯನ್ನು ಅವರು ನಮಗೆ ಕಲಿಸಿದರು.”
ನವ ಉದಾರವಾದಿ ಜಾಗತೀಕರಣವನ್ನು ‘ಸಾವಿನ ಸಾಮ್ರಾಜ್ಯ’ ಎಂದು ಖಂಡಿಸಿದ ಮೊದಲ ವ್ಯಕ್ತಿ ಫಿಡೆಲ್ ಮತ್ತು “ಎಲ್ಲರಿಗೂ ಜಗತ್ತನ್ನು” ಪ್ರತಿಪಾದಿಸಿದ ಮೊದಲ ವ್ಯಕ್ತಿ ಎಂದು ಅವರು ನೆನಪಿಸಿಕೊಂಡರು. ಅವರು ಫಿಡೆಲ್ ಅವರ ಪರಿಸರ ಕಾಳಜಿಯ ಪರಂಪರೆ, ಕ್ರಾಂತಿಕಾರಿಗಳ ಐಕ್ಯತೆಗೆ ಅವರ ಬದ್ಧತೆ ಮತ್ತು ಜನರ ಸೇವೆಯಲ್ಲಿ ವಿಜ್ಞಾನದ ಅವರ ಕಾಣ್ಕೆಯನ್ನು ಎತ್ತಿ ತೋರಿಸಿದರು.
ಅವರು ಅಕ್ಟೋಬರ್ 17, 1953 ರಂದು ಫಿಡೆಲ್ ಅವರ ಐತಿಹಾಸಿಕ ಕೋರ್ಟು (‘ಇತಿಹಾಸ ನನ್ನನ್ನು ಕ್ಷಮಿಸುತ್ತದೆ’) ಹೇಳಿಕೆಯನ್ನು ನೆನಪಿಸಿಕೊಂಡರು, ಇದರಲ್ಲಿ ಫಿಡೆಲ್ ಐದು ಕ್ರಾಂತಿಕಾರಿ ನಿಯಮಗಳನ್ನು ರೂಪಿಸಿದರು – ಕಾರ್ಮಿಕ ಹಕ್ಕುಗಳು, ಕಾರ್ಷಿಕ ಸುಧಾರಣೆ, ಕೃಷಿ ಮಾಡದ ಭೂಮಿಗಳ ಹಂಚಿಕೆ ಮತ್ತು ಹಣಕಾಸಿನ ಭಾಗವಹಿಸುವಿಕೆ. ಅವರು ಪ್ರಾಥಮಿಕ ವಿಶ್ವವಿದ್ಯಾನಿಲಯ-ಥರದ ಕಾರ್ಯಕ್ರಮವನ್ನು ಮಂಡಿಸಿದ್ದಲ್ಲ. ಬದಲಿಗೆ ಅಭಿವೃದ್ಧಿ ಕಾಣದ ಮತ್ತು ಅವಲಂಬಿತ ಆರ್ಥಿಕತೆಯ ಸಾಂಸ್ಕೃತಿಕ ಕಾಯಿಲೆಗಳ ರೋಗನಿರ್ಣಯವನ್ನು ಮಾಡಿದರು.
“ಆರ್ಥಿಕತೆಯು ರಾಜಕೀಯದಿಂದ ಪ್ರತ್ಯೇಕವಾದ ಸ್ವಾಯತ್ತ ಕ್ಷೇತ್ರವಲ್ಲ, ಬದಲಿಗೆ ಅದರ ಭೌತಿಕ ಅಭಿವ್ಯಕ್ತಿ ಎಂದು ಅಧ್ಯಕ್ಷರು ಫಿಡೆಲ್ ಅವರ ದೃಷ್ಟಿಕೋನವನ್ನು ಎತ್ತಿ ತೋರಿಸಿದರು. “ಇದನ್ನು ಪರಿಗಣಿಸದೆ, ರಾಜಕೀಯವಿಲ್ಲದೆ ಆರ್ಥಿಕತೆ ಇಲ್ಲ, ಅಥವಾ ಆರ್ಥಿಕತೆ ಇಲ್ಲದೆ ರಾಜಕೀಯವಿಲ್ಲ.” ಬಡತನ ಮತ್ತು ನೈತಿಕತೆಯ ಬಗ್ಗೆ ಫಿಡೆಲ್ ಅವರ ಪರಂಪರೆಯನ್ನು ಅವರು ಒತ್ತಿ ಹೇಳುತ್ತಾ, ಅವರು ನುಡಿದಂತೆ ನಡೆದರು ಎಂದರು.

ಕರ್ನಾಟಕದ ಮೀನಾಕ್ಷಿಸುಂದರಂ ಸೇರಿದಂತೆ ಭಾರತದ 7 ಪ್ರತಿನಿಧಿಗಳು ಅಧಿವೇಶನದಲ್ಲಿ
ಇದನ್ನೂ ಓದಿ :ಆಳುವವರ ನೈತಿಕ ಪೊಳ್ಳುತನವನ್ನು ಬಯಲಿಗೆಳೆದ ವಿದ್ಯಾರ್ಥಿಗಳ ಬಂಡಾಯ-ಪ್ರೊ. ಪ್ರಭಾತ್ ಪಟ್ನಾಯಕ್
ಅಂತರರಾಷ್ಟ್ರೀಯತೆ, ಕ್ರಾಂತಿಕಾರಿ ಆಶಾವಾದ
ಡಿಯಾಜ್-ಕ್ಯಾನೆಲ್ ಅವರು ಫಿಡೆಲ್ ಅವರ ಅಂತರರಾಷ್ಟ್ರೀಯತೆ, ಕ್ರಾಂತಿಕಾರಿ ಆಶಾವಾದ ಮತ್ತು ಮಿಲಿಟರಿ ಕಾರ್ಯವ್ಯೂಹದ ಪರಂಪರೆಯನ್ನು ಸಹ ಉದ್ದೇಶಿಸಿ ಮಾತನಾಡಿದರು. ಫಿಡೆಲ್ ಗೆ ತಾಯ್ನಾಡು ಕ್ಯೂಬಾ ಆಗಿದ್ದರೂ, ಕ್ಯೂಬನ್ ಕ್ರಾಂತಿ ಮಾತ್ರ ಅವರ ಗುರಿಯಾಗಿರಲಿಲ್ಲ. “ಹಾಗಾಗಿಯೇ ಅವರು ಆಫ್ರಿಕಾ ಮತ್ತು ಪ್ಯಾಲೆಸ್ಟೈನ್ ಜನರ ವಿಮೋಚನೆಯ ಹೋರಾಟಗಳನ್ನು ಬೆಂಬಲಿಸಿದರು, ನರಮೇಧವನ್ನು ಖಂಡಿಸಿದರು, ಯುದ್ಧದ ವಿರುದ್ಧ ಮತ್ತು ವಿಶ್ವದ ಯಾವುದೇ ಜನರ ವಸಾಹತುಶಾಹಿ ಅತಿಕ್ರಮಣದ ವಿರುದ್ಧ ಧ್ವನಿ ಎತ್ತಿದರು” ಎಂದರು.
“ಕರಾಳ ದಿನಗಳಲ್ಲಿ, ಸಮಾಜವಾದಿ ಶಿಬಿರವು ಕುಸಿಯುತ್ತಿರುವಾಗ, ಅವರು ಮನುಷ್ಯರಲ್ಲಿ ಮತ್ತು ಇತಿಹಾಸದಲ್ಲಿ ತಮ್ಮ ನಂಬಿಕೆಯನ್ನು ಉಳಿಸಿಕೊಂಡರು.” ಎಂದು ಫಿಡೆಲ್ ರ ಆಶಾವಾದದ ಬಗ್ಗೆ ಉದ್ಗರಿಸಿದರು. ಅವರ ಮಿಲಿಟರಿ ಚಿಂತನೆಗೆ ಸಂಬಂಧಿಸಿದಂತೆ, ಫಿಡೆಲ್ “ಜನವರಿ 1, 1959 ರ ವಿಜಯದತ್ತ ನಮ್ಮನ್ನು ಒಯ್ದ ಗೆರಿಲ್ಲಾ ಯುದ್ಧದ ಮಾಸ್ಟರ್” ಮತ್ತು “ಸಮಕಾಲೀನ ಮಿಲಿಟರಿ ಕಲೆಯ ಗಂಭೀರ ವಿದ್ಯಾರ್ಥಿ.” ಎಂದು ಬಣ್ಣಿಸಿದರು.
ಕ್ಯೂಬನ್ ಅಧ್ಯಕ್ಷರು ನಾಲ್ಕು ತತ್ವಗಳ ಆಧಾರದ ಮೇಲೆ ಫಿಡೆಲ್ ರ ಕೆಲಸದ ವ್ಯವಸ್ಥೆಯನ್ನು ಪರಿಶೀಲಿಸಿದರು: ರಾಜಕೀಯದ ಆದ್ಯತೆ – ಪ್ರತಿಯೊಂದು ಆರ್ಥಿಕ ನಿರ್ಧಾರವು ಒಂದು ರಾಜಕೀಯ ನಿರ್ಧಾರ; ಕಾರ್ಯತಂತ್ರ ಮತ್ತು ಕಾರ್ಯವ್ಯೂಹದ ಅನುಕ್ರಮ —“ಕಾರ್ಯತಂತ್ರ ಬದಲಾಗಬಹುದು, ತತ್ವಗಳು ಅಲ್ಲ”; ಕಾರ್ಯವ್ಯೂಹದ ಸಂಪನ್ಮೂಲವಾಗಿ ಜನಸಮೂಹಗಳ ಅಣಿ ನೆರೆಸುವಿಕೆ; ಮತ್ತು ನಿರ್ಬಂಧಗಳ ಪರಿಸ್ಥಿತಿಯಲ್ಲಿ ನಾವೀನ್ಯತೆಯ ಅವಿಷ್ಕಾರ – “ಕೊರತೆ ಕೇವಲ ಅಭಾವವಲ್ಲ; ಅದು ಸೃಜನಶೀಲತೆಗೆ ಪ್ರಚೋದನೆ“.
ಜೋಸ್ ಮಾರ್ಟಿ ಶತಮಾನದ ಪೀಳಿಗೆಗೆ ಡಿಯಾಜ್-ಕ್ಯಾನೆಲ್ ಗೌರವ ಸಲ್ಲಿಸುತ್ತಾ, “ಆ ಪೀಳಿಗೆಯು ಅವರು ಸಾಧಿಸಿದ ಏಕತೆಗಾಗಿ ತಮ್ಮ ಜೀವನವನ್ನೇ ಅರ್ಪಿಸಲು ಸಿದ್ದರಿದ್ದ ಐತಿಹಾಸಿಕ ವ್ಯಕ್ತಿಗಳೊಂದಿಗೆ – ಫಿಡೆಲ್, ರೌಲ್, ಚೆ, ಅಲೆಂಡೆ, ಕ್ಯಾಮಿಲೊ, ಸೆಲಿಯಾ ಮತ್ತು ಇತರ ಅನೇಕರು,- ಯುವಜನರನ್ನು ಒಗ್ಗೂಡಿಸಿತು.” ಸೈದ್ಧಾಂತಿಕ ದೃಢತೆಯನ್ನು ಪ್ರಾಯೋಗಿಕ ಸೂಕ್ಷ್ಮತೆಯೊಂದಿಗೆ ಸಂಯೋಜಿಸುವ ಅಗತ್ಯವನ್ನು ಫಿಡೆಲ್ ಅರ್ಥಮಾಡಿಕೊಂಡರು ಮತ್ತು ಲೆನಿನ್ ಅನ್ನು ಉಲ್ಲೇಖಿಸಿದರು: “ಮಾರ್ಕ್ಸವಾದವು ಸತ್ತ ಸಿದ್ಧಾಂತವಲ್ಲ, ಅದು ಬಂಡವಾಳಶಾಹಿ ಅಲ್ಲ, ಬದಲಿಗೆ ಜೀವನದ ಸಮಸ್ಯೆಗಳನ್ನು ಸಂಪೂರ್ಣವಾಗಿ ಪರಿಹರಿಸುವ ಮಾರ್ಗದರ್ಶಿಯಾಗಿದೆ.”

ಫಿಡೆಲ್ ಭವಿಷ್ಯ ಚಿಂತನೆ
ಅಧ್ಯಕ್ಷರು ಫಿಡೆಲ್ ಅವರ ತಣಿಸಲಾಗದ ಕುತೂಹಲ ಮತ್ತು ಇತಿಹಾಸ ಮತ್ತು ಜ್ಞಾನದ ಬಗ್ಗೆ ಅವರ ಅದಮ್ಯ ಉತ್ಸಾಹವನ್ನು ಒತ್ತಿಹೇಳಿದರು, ಪೈನ್ಸ್ ದ್ವೀಪದ ಜೈಲಿನಿಂದ ಬರೆದ ಪತ್ರದ ಆಯ್ದ ಭಾಗವನ್ನು ಅವರು ನೆನಪಿಸಿದರು : “ನಾನು ಇಲ್ಲಿಗೆ ಬಂದಾಗಿನಿಂದ ನನ್ನ ದೊಡ್ಡ ಹೋರಾಟವೆಂದರೆ, ನನಗೆ ಪುಸ್ತಕಗಳನ್ನು ಬಿಟ್ಟರೆ ಯಾವುದೂ ಅಗತ್ಯವಿಲ್ಲವೆಂದು ನನಗೆ ನಾನೇ ಮತ್ತು ಎಂದಿಗೂ ಆಯಾಸಗೊಳ್ಳದೆ ಆಗ್ರಹಿಸುವುದು. ಪುಸ್ತಕಗಳು ನನ್ನ ಅಗತ್ಯವಾಗಿದ್ದವು, ಮತ್ತು ನಾನು ಪುಸ್ತಕಗಳನ್ನು ಆಧ್ಯಾತ್ಮಿಕ ಆಸ್ತಿ ಎಂದು ಪರಿಗಣಿಸುತ್ತಾ ಬಂದಿದ್ದೇನೆ.”
ಮಾರ್ಚ್ 28, 2007 ಮತ್ತು ಅಕ್ಟೋಬರ್ 9, 2016 ರ ನಡುವೆ ಪ್ರಕಟವಾದ 84 ಪಠ್ಯಗಳಲ್ಲಿ ಫಿಡೆಲ್ ಅವರ ಚಿಂತನೆಗಳ ದಾಖಲೆಯನ್ನು ಬಿಟ್ಟಿದ್ದಾರೆ ಮತ್ತು ಅವರ ಭೌತಿಕ ನಿರ್ಗಮನದ ಹತ್ತು ವರ್ಷಗಳ ನಂತರ, ಒಂಬತ್ತು ಪುಸ್ತಕಗಳು ಅವರ ಚಿಂತನೆಗಳನ್ನು ಸಂಗ್ರಹಿಸಿವೆ ಎಂದು ಅವರು ಹೇಳಿದರು.
ಅಧ್ಯಕ್ಷ ಡಿಯಾಜ್ ಕ್ರಾಂತಿಯ ಸಾಧನೆಗಳನ್ನು ನೆನಪಿಸಿಕೊಂಡರು: ಒಂದುವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸಜ್ಜುಗೊಳಿಸಿದ ಸಾಕ್ಷರತಾ ಅಭಿಯಾನ; ಮೂರನೇ ಜಗತ್ತಿನಲ್ಲಿ ಅತ್ಯಂತ ಮುಂದುವರಿದ ಸಾರ್ವತ್ರಿಕ ಆರೋಗ್ಯ ವ್ಯವಸ್ಥೆ; 6 ಲಕ್ಷ ಕ್ಕೂ ಹೆಚ್ಚು ವೈದ್ಯರನ್ನು ಆರೋಗ್ಯ ಕಾರ್ಯಕರ್ತರನ್ನು 165 ದೇಶಗಳಿಗೆ ಕಳುಹಿಸಿದ್ದು; ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದ ವರೆಗೆ ಉಚಿತ ಶಿಕ್ಷಣ ವ್ಯವಸ್ಥೆ; ಮತ್ತು ಜಗತ್ತಿಗೆ ಮಾದರಿಯಾಗಿರುವ ಸಾಂಸ್ಕೃತಿಕ ಮತ್ತು ಕ್ರೀಡಾ ವ್ಯವಸ್ಥೆ. “ಬಹಳ ಕಡಿಮೆ ಸಮಯದಲ್ಲಿ, ವಿಶ್ವದ ಅತ್ಯಂತ ಅಸಮಾನ ದೃಷ್ಟಿಕೋನವನ್ನು ಹೊಂದಿರುವ ಸರ್ಕಾರಗಳು ಮತ್ತು ಜನರ ನಡುವಿನ ಸಂಬಂಧಗಳನ್ನು ಪರಿವರ್ತಿಸಿದ ಘಟನೆಗಳು ನಿರ್ಣಾಯಕ ಕ್ಷಣಗಳಾಗಿ 20 ನೇ ಶತಮಾನದ ಇತಿಹಾಸವನ್ನು ಖಚಿತವಾಗಿ ಪ್ರವೇಶಿಸಿದವು,” ಎಂದು ಅವರು ಹೇಳಿದರು.
ನಂತರ ಅಧ್ಯಕ್ಷರು ಪ್ರಸ್ತುತ ಸಂದರ್ಭದ ಕುರಿತು ಟಿಪ್ಪಣಿ ಮಾಡಿದರು. “ಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿ ಬದುಕುತ್ತಿದೆ. ಹವಾಮಾನ ಬಿಕ್ಕಟ್ಟು ಮತ್ತು ನವೀಕರಿಸಲಾಗದ ಸಂಪನ್ಮೂಲಗಳ ಬಿಕ್ಕಟ್ಟು, ಆರ್ಥಿಕ ಬಿಕ್ಕಟ್ಟು, ಸಮುದ್ರಗಳನ್ನು ಸ್ಮಶಾನಗಳಾಗಿ ಪರಿವರ್ತಿಸುತ್ತಿರುವ ಬಲವಂತದ ವಲಸೆ. ಇದರಲ್ಲಿ ಬಡವರನ್ನು ಸಂಕಷ್ಟಕ್ಕೆ ತಳ್ಳಿ ಕೆಲವರಲ್ಲಿ ಸಂಪತ್ತು ಸಂಗ್ರಹಗೊಳ್ಳುತ್ತಿದ್ದು, ಸಾಮಾಜಿಕ ವಿಘಟನೆಯಾಗುತ್ತಿದೆ. ಅಂತರಾಷ್ಟ್ರೀಯ ವ್ಯವಸ್ಥೆಯು ಬಿಕ್ಕಟ್ಟಿನಲ್ಲಿದೆ. ಸಾಮ್ರಾಜ್ಯಶಾಹಿ ಏಕಪಕ್ಷೀಯತೆಯ ತನ್ನ ಕಾನೂನನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತದೆ, ಆದರೆ ಬಹುಧ್ರುವೀಯ ವಿಶ್ವವು ಉಳಿದು ಬೆಳೆಯಲಿದೆ ಎಂದು ಅವರು ದೃಢಪಡಿಸಿದರು.

ಸಾಮ್ರಾಜ್ಯಶಾಹಿ ದಾಳಿ
ಸಾಮ್ರಾಜ್ಯವು ಕ್ಯೂಬಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸುತ್ತಿದೆ. ದಿಗ್ಬಂಧನವನ್ನು ಬಿಗಿಗೊಳಿಸುವುದರೊಂದಿಗೆ, ಭಯೋತ್ಪಾದನೆಯ ಪ್ರಾಯೋಜಕರ ಪಟ್ಟಿಯಲ್ಲಿ ಕ್ಯೂಬಾದ ಬೇಕಾಬಿಟ್ಟಿ ಸೇರ್ಪಡೆಯೊಂದಿಗೆ ಮತ್ತು ಬೃಹತ್ ಮಾಧ್ಯಮ ಪ್ರಚಾರಗಳೊಂದಿಗೆ, ಕ್ಯೂಬಾ ಸಾಮ್ರಾಜ್ಯಶಾಹಿ ಕೋಪದ ಆದ್ಯತೆಯ ಗುರಿಗಳಲ್ಲಿ ಒಂದಾಗಿ ಮುಂದುವರೆದಿದೆ ಎಂಬ ಅಂಶವನ್ನು ಅವರು ಖಂಡಿಸಿದರು.
ಕ್ಯೂಬಾದ ಸರಕಾರದ ಬದಲಾವಣೆಯನ್ನು ಉತ್ತೇಜಿಸಲು ಯು.ಎಸ್ ಕೋಟ್ಯಾಂತರ ಡಾಲರುಗಳನ್ನು ನಿಗದಿಪಡಿಸಿದೆ ಎಂದು ಅವರು ಖಂಡಿಸಿದರು ಮತ್ತು. “ಸಾಮ್ರಾಜ್ಯದ ನೊಗಕ್ಕೆ ಅಧೀನವಾಗದಿದ್ದರೆ ಗತಿ ಕಾಣಿಸುತ್ತೇವೆ ಎಂಬ ಯು.ಎಸ್ ಸರ್ಕಾರದ ಬಹಿರಂಗ ಬೆದರಿಕೆ” ಹಾಕಿದ ಯು.ಎಸ್ ವಿದೆಶಾಂಗ ಸಚಿವರ ಹೇಳಿಕೆಗಳನ್ನು ಅವರು ಉಲ್ಲೇಖಿಸಿದರು
ಆದಾಗ್ಯೂ, “ನಮ್ಮಲ್ಲಿ ಅಂತರ್ಗತವಾಗಿರುವ ಪ್ರತಿರೋಧದೊಂದಿಗೆ ಮತ್ತು ನಮ್ಮ ಪ್ರಮುಖ ಲಕ್ಷಣವಾದ ಘನತೆಯೊಂದಿಗೆ ಕ್ಯೂಬಾ ಪ್ರತಿಕ್ರಿಯಿಸಿದೆ” ಎಂದು ಅವರು ದೃಢಪಡಿಸಿದರು.” ಅವರು ಕ್ಯೂಬಾ ಎದುರಿಸುತ್ತಿರುವ ಸಂಕಷ್ಟಗಳನ್ನು ಒಪ್ಪಿಕೊಂಡರು: “ದೈನಂದಿನ ಜೀವನ ಮತ್ತು ಕುಟುಂಬ ಜೀವನವನ್ನು ಅಡ್ಡಿಪಡಿಸುವ ಬ್ಲ್ಯಾಕ್-ಓಟ್ ಗಳು, ನೀರಿನ ಕೊರತೆ, ವೇತನದ ಕೊಳ್ಳುವ ಶಕ್ತಿಯ ಕ್ಷೀಣತೆ, ಆರ್ಥಿಕತೆ ಮತ್ತು ಸಾರಿಗೆಯನ್ನು ಗರ ಬಡಿದಂತೆ ಮಾಡಿರುವ ಇಂಧನ ಕೊರತೆ ಮತ್ತು ಅಗತ್ಯ ಆಹಾರವನ್ನೂ ಪೂರೈಸಲು ಕಷ್ಟವಾಗುವ ಪರಿಸ್ಥಿತಿ”. ಆದರೆ “ನಾವು ನಮ್ಮ ಸಂಕಷ್ಟಗಳನ್ನು ನಿಮ್ಮ ಬಳಿ ತೋಡಿಕೊಳ್ಳಲು ಬಂದಿಲ್ಲ, ಬದಲಿಗೆ ನಮ್ಮ ಸಂಕಷ್ಟಗಳಿಗೆ ಕಾರಣವಾದ ಅಂಶಗಳನ್ನು ಬದಲಾಯಿಸಲು ಬಂದಿದ್ದೇವೆ.” ಎಂದು ಒತ್ತಿಹೇಳಿದರು:
ಕೊವಿದ್ ಮಹಾಸಾಂಕ್ರಾಮಿಕಕ್ಕೆ ಸರಕಾರದ ಪ್ರತಿಕ್ರಿಯೆ, ನಗರ ಮತ್ತು ಉಪನಗರ ಕೃಷಿಯ ಬಲವರ್ಧನೆ ಮತ್ತು ಪ್ರತಿಕೂಲತೆಯನ್ನು ಅವಕಾಶವಾಗಿ ಪರಿವರ್ತಿಸುವ ಸಾಮರ್ಥ್ಯ ಸೇರಿದಂತೆ ಬಿಕ್ಕಟ್ಟಿನ ಮಧ್ಯೆ ಸಾಧಿಸಿದ ಸಾಧನೆಗಳನ್ನು ಅವರು ಎತ್ತಿ ತೋರಿಸಿದರು. ಇತರ ದೇಶಗಳ 705 ಸೇರಿದಂತೆ ಇತ್ತೀಚಿನ ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ವೃತ್ತಿಪರರು ಪದವಿ ಪಡೆದಿದ್ದಾರೆ ಎಂದು ಡಿಯಾಜ್-ಕ್ಯಾನೆಲ್ ಘೋಷಿಸಿದರು.

ರಾಷ್ಟ್ರ ಮಟ್ಟದಲ್ಲಿ ದೆಹಲಿಯಲ್ಲಿ ಕ್ಯೂಬಾ ಸೌಹಾರ್ದತಾ ಸಮಿತಿ
ಕ್ಯೂಬಾ ಶರಣಾಗದ ಕ್ರಾಂತಿಯ ಮಾದರಿ
ಕ್ಯೂಬಾದ ನಾಯಕರು ಸಂಪತ್ತನ್ನು ಸಾಧ್ಯವಾದಷ್ಟು ಸಾಮಾಜಿಕ ನ್ಯಾಯದೊಂದಿಗೆ ವಿತರಿಸಲು ಮತ್ತು ಕ್ರಾಂತಿಯ ಐತಿಹಾಸಿಕ ಸಾಧನೆಗಳನ್ನು ಸಂರಕ್ಷಿಸಲು, ಅದನ್ನು ಉತ್ಪಾದನೆಯನ್ನು ಮತ್ತು ಸಂಪತ್ತನ್ನು ಸೃಷ್ಟಿಸುವ ಅಗತ್ಯವನ್ನು ಒತ್ತಿ ಹೇಳಿದರು. ಆರ್ಥಿಕ ನವೀಕರಣ ಪ್ರಕ್ರಿಯೆ “ಆರ್ಥಿಕತೆಯನ್ನು ಚುರುಕುಗೊಳಿಸಲು ಉದ್ದೇಶಿಸಿದೆಯೇ ಹೊರತು ಬಂಡವಾಳಶಾಹಿಯನ್ನು ಪುನಃಸ್ಥಾಪಿಸಲು ಅಲ್ಲ. ಉದ್ಯಮಗಳ ಖಾಸಗೀಕರಣ ಇರುವುದಿಲ್ಲ; ಮೂಲಭೂತ ಉತ್ಪಾದಕ ಸಲಕರಣೆಗಳ ಖಾಸಗೀಕರಣ ಇರುವುದಿಲ್ಲ, ಅದು ಜನರ ನಿಯಂತ್ರಣದಲ್ಲಿ ಉಳಿಯುತ್ತದೆ, ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನು ಎಲ್ಲ ರೀತಿಯಲ್ಲೂ ಸಂರಕ್ಷಿಸಲಾಗುತ್ತದೆ.” ಎಂದು ಅವರು ಸ್ಪಷ್ಟಪಡಿಸಿದರು.
ಕ್ಯೂಬಾ ಮತ್ತು ನಮ್ಮ ಅಮೆರಿಕದ ಎಲ್ಲಾ ಜನರ ವಾಸ್ತವವನ್ನು ಚರ್ಚಿಸಲು ಸಂವಾದದಲ್ಲಿ ಭಾಗವಹಿಸುವವರಿಗೆ ಡಿಯಾಜ್- ಕರೆ ನೀಡಿದರು. “ದೊಡ್ಡ ಸವಾಲುಗಳು ಎದುರಾಗಿವ ಜಗತ್ತಿನಲ್ಲಿ, ಕ್ಯೂಬಾದ ಮತ್ತು ನಮ್ಮ ಅಮೆರಿಕದ ವಾಸ್ತವವನ್ನು ಚರ್ಚಿಸಲು ನಾವು ನಿಮಗೆ ಕರೆಕೊಡುತ್ತೇವೆ. ಹೊರಗಿನಿಂದ ಬಂದಿರುವ ನೀವು ಅದನ್ನು ಎದುರಿಸುವ ಜವಾಬ್ದಾರಿಯನ್ನು ಹೊಂದಿರುತ್ತೀರಿ” ಎಂದು ಅವರು ಹೇಳಿದರು.
ಯುವಕರನ್ನು ಉದ್ದೇಶಿಸಿ ಮಾತನಾಡಿದ ಅವರು: “ನಿಮ್ಮ ದೇಶಗಳಲ್ಲಿ ನಡೆಯುವ ಪ್ರತಿಯೊಂದು ಸಮ್ಮೇಳನದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಯುವಕ, ಪ್ರತಿಯೊಬ್ಬ ಕ್ಯೂಬನ್ ಯುವಕ, ಕ್ರಾಂತಿಯ ಮುಂಚೂಣಿಯಲ್ಲಿ ಇರುತ್ತಾನೆ. ವಿಚಾರಗಳ ಯುದ್ಧವು ಸೈದ್ಧಾಂತಿಕ ಅಸ್ಪಷ್ಟತೆ ಮತ್ತು ಪ್ರಗತಿಗೆ ವಿರುದ್ಧವಾಗಿ ನಿಂತಿರುವ ಎಲ್ಲದರ ಬಲದ ವಿರುದ್ಧ ಅತ್ಯಂತ ಪ್ರಮುಖವಾದ ಮುಂಚೂಣಿಯಾಗಿರುತ್ತದೆ.”
“ನಮ್ಮ ಮಕ್ಕಳ ಭವಿಷ್ಯ, ನಾವು ಸಾಧಿಸಬೇಕಾದ ಕನಸುಗಳು ನಮ್ಮ ಕೈಯಲ್ಲಿವೆ.. ..ಸಾಮ್ರಾಜ್ಯಶಾಹಿಯ ದಿಗ್ಬಂಧನವನ್ನು ಅಗತ್ಯವಿರುವಷ್ಟು ವರ್ಷಗಳವರೆಗೆ ಘನತೆ ಮತ್ತು ಮಹಾನತೆಯಿಂದ ವಿರೋಧಿಸಲು ನಾವು ಸಿದ್ಧರಿದ್ದೇವೆ. ಶರಣಾಗದ ಕ್ರಾಂತಿಯ ಮಾದರಿಯಾಗಿ ಉಳಿಯುವುದು ಹೇಗೆ ಎಂದು ಕ್ಯೂಬಾ ತಿಳಿಯುತ್ತದೆ.” ಅಧ್ಯಕ್ಷ ಡಿಯಾಝ್ ತತ್ವಗಳ ಘೋಷಣೆಯೊಂದಿಗೆ ಮತ್ತು ಫಿಡೆಲ್ ರ ಉಲ್ಲೇಖದೊಂದಿಗೆ ತಮ್ಮ ಆಶಯ ಭಾಷಣ ಮುಕ್ತಾಯಗೊಳಿಸಿದರು:
***************
ಇದನ್ನೂ ನೋಡಿ : ಕ್ಯಾಸ್ಟ್ರೊ 100 | ಕ್ಯೂಬಾದ ಮೇಲೆ 66 ವರ್ಷಗಳ ಯುಎಸ್ ಕ್ರೂರ ದಿಗ್ಬಂಧನ! ಪುಟ್ಟ ರಾಷ್ಟ್ರದ ಮೇಲೆ ಯಾಕಿಷ್ಟು ದ್ವೇಷ?
