ನೈತಿಕ ಪೊಳ್ಳುತನ ಎಲ್ಲ ಫ್ಯಾಸಿಸ್ಟ್ ಆಡಳಿತಗಳ ವಿಶಿಷ್ಟ ಲಕ್ಷಣ. ಇದನ್ನು ಎದುರಿಸಲು ಆದರ್ಶಪ್ರಾಯ ಸ್ಥಾನದಲ್ಲಿರುವ ಒಂದು ಸಾಮಾಜಿಕ ಗುಂಪು ಎಂದರೆ ವಿದ್ಯಾರ್ಥಿಗಳೇ. ಅವರು ಮುಗ್ಧರು, ಆದರ್ಶವಾದಿಗಳು, ಮಾಹಿತಿ ಹೊಂದಿರುವವರು, ಅಂಜಿಕೆಯಿಲ್ಲದವರು, ಹಾಗೂ ನೈತಿಕ ನಡವಳಿಕೆಯ ಬಗ್ಗೆ ಬಲವಾದ ಬದ್ಧತೆಯನ್ನು, ಗೌರವವನ್ನು ಹೊಂದಿರುವವರು. ಈ ಗುಣಗಳು, ಗೊಬೆಲ್ಸ್ ಪ್ರಚಾರದ ಮೂಲಕ ಜನರನ್ನು ಮರುಳುಮಾಡುವ ಆಡಳಿತಗಳ ನೈತಿಕ ಪೊಳ್ಳುತನದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ. ಆದರೆ, ಅದೇ ರೀತಿಯಲ್ಲಿ, ಒಂದು ನಿರ್ದಿಷ್ಟ ಪ್ರಸಂಗದಲ್ಲಿ ನೈತಿಕ ನಡವಳಿಕೆಯನ್ನು ಆಡಳಿತದ ಮೇಲೆ ಹೇರುವಲ್ಲಿ ವಿದ್ಯಾರ್ಥಿಗಳು ಕಂಡ ಯಶಸ್ಸು, ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿದೆ ಎಂಬುದನ್ನು ಸೂಚಿಸುವುದಿಲ್ಲ. ಪ್ರಸ್ತುತ ಆಂದೋಲನದಲ್ಲಿ ಯಾವುದೇ ಸಾಂಸ್ಥಿಕ ಬದಲಾವಣೆಗಳ ಪ್ರಶ್ನೆಯೇ ಇರಲಿಲ್ಲ. ಆದರೆ, ಹಲವು ವರ್ಷಗಳಿಂದ ದೇಶವನ್ನು ಆವರಿಸಿದ್ದ ಭಯದ ವಾತಾವರಣವನ್ನು ಬದಲಿಸುವಲ್ಲಿ ಒಂದು ಅದ್ಭುತವಾದ ಪಾತ್ರವನ್ನು ಇದು ವಹಿಸಿದೆ, ನವ–ಫ್ಯಾಸಿಸಂಗೆ ರಾಜಕೀಯ ಸವಾಲನ್ನು ಒಡ್ಡುವ ದಾರಿಯನ್ನು ತೆರೆದಿದೆ. ಆಳುವವರ
(ಶೀರ್ಷಿಕೆ ಚಿತ್ರ:ಎಂ.ಅಲಿ,ಫೇಸ್‌ಬುಕ್)
ಅನು: ಕೆ.ಎಂ.ನಾಗರಾಜ್
ವಿದ್ಯಾರ್ಥಿಗಳ ಬಂಡಾಯ ದೇಶವನ್ನೇ ಬೆಚ್ಚಿಬೀಳಿಸಿದೆ. ನಿರುದ್ಯೋಗದ ಸಮಸ್ಯೆ ವ್ಯಾಪಕವಾಗಿರುವ ಸಂದರ್ಭದಲ್ಲಿ ಮತ್ತು ತಡೆಯೇ ಇಲ್ಲದೆ ಹರಡುತ್ತಿರುವ ಭ್ರಷ್ಟಾಚಾರದಿಂದಾಗಿ ನೀಟ್-ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅದು ಲಭ್ಯವಿರುವ ಉದ್ಯೋಗವನ್ನು ಪಡೆಯುವ ಸಾಧ್ಯತೆಗಳನ್ನು ಕೂಡ ಹಾಳುಮಾಡುವ ಸನ್ನಿವೇಶದಲ್ಲಿ ಸಂಭವಿಸಿದ ಈ ಬಂಡಾಯದ ಕುರಿತ ಸಾಮಾನ್ಯ ವಿವರಣೆಯು ಯುವ ಪೀಳಿಗೆಯ (ಜೆನ್ ಝೀ) ಕೋಪದ ಮೇಲೆ ಗಮನ ಹರಿಸುತ್ತದೆ. ಅದೇನೋ ಸರಿ. ಆದರೆ, ಅದಷ್ಟೇ ಸಾಲುವುದಿಲ್ಲ. 15 ವರ್ಷದ ಒಬ್ಬ ಬಾಲಕಿ ತನ್ನ ತಾಯಿಗೆ ಸುಳ್ಳು ಹೇಳಿ ಜಂತರ್ ಮಂತರ್ ಪ್ರತಿಭಟನೆಗೆ ಬಂದಿದ್ದೇನೆ ಎಂದು ಸುದ್ದಿ ವಾಹಿನಿಗಳ ಮುಂದೆ ಒಪ್ಪಿಕೊಂಡಾಗ, ಅವಳನ್ನು ನಿಜಕ್ಕೂ ಕೆರಳಿಸಿದ ವಿಷಯವು ತನ್ನ ಉದ್ಯೋಗಾವಕಾಶದ ಮೇಲೆ ಅವಳು ಇಟ್ಟುಕೊಂಡಿರುವ ನಿರೀಕ್ಷೆಯಷ್ಟೇ ಅಲ್ಲ. ವಿಷಯ ಅದಕ್ಕಿಂತಲೂ ಆಳವಾಗಿದೆ. ಅದೇ ರೀತಿಯಲ್ಲಿ, ಜೆನ್ ಝಿ ಆಂದೋಲನವು ದೇಶಾದ್ಯಂತ ಹಲವಾರು ನಗರಗಳಿಗೆ ಸ್ವಯಂಪ್ರೇರಿತವಾಗಿ ಹರಡಿದಾಗ, ಇನ್ನೂ ಆಳವಾದುದು ಏನೋ ಇದೆ ಎಂಬುದನ್ನು ಸೂಚಿಸುತ್ತದೆ. ಆದರೆ, ಅದನ್ನು ಆಳುವ ಪಕ್ಷ ಮತ್ತು ಸರ್ಕಾರಕ್ಕೆ ಗ್ರಹಿಸಲೂ ಆಗುತ್ತಿಲ್ಲ.
ಇದು ಒಂದು ಖಚಿತ ರಾಜಕೀಯ ಚಳುವಳಿಯಲ್ಲ ಎಂಬುದು ಸ್ಪಷ್ಟ. ಈ ಆಂದೋಲನಕ್ಕೆ ಖಚಿತವಾಗಿಯೂ “ನಾಯಕರು” ಇಲ್ಲ. ಭಾರತೀಯ ಜನತಾ ಪಕ್ಷವು “ನಾಯಕರನ್ನು” ನಿಭಾಯಿಸುವ ಪರಿಣಿತಿಯನ್ನು ಹೊಂದಿದೆ- ಅವರಲ್ಲಿ ಒಡಕು ಹುಟ್ಟಿಸುವ ಮೂಲಕ, ಅವರ ಹೆಸರು ಕೆಡಿಸುವ ಮೂಲಕ, ಅವರನ್ನು ಭ್ರಷ್ಟಗೊಳಿಸುವ ಮೂಲಕ, ಅವರನ್ನು ಖರೀದಿಸುವ ಮೂಲಕ ಮತ್ತು ಜಾರಿ ನಿರ್ದೇಶನಾಲಯ ಮತ್ತು ವಿದೇಶಿ ವಂತಿಗೆ(ನಿಯಂತ್ರಣ) ಕಾಯ್ದೆಯ ಬೆದರಿಕೆಯ ಮೂಲಕ. ಈ ಚಳುವಳಿಯನ್ನು “ನಾಯಕರು” ಮುನ್ನಡೆಸಿದ್ದರೆ, ಅದು ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಆಳುವ ಪಕ್ಷವು ಎಂದಿನ ತನ್ನ ಎಲ್ಲ ತಂತ್ರಗಳನ್ನೂ ಬಳಸಿತು. ಅವೆಲ್ಲವೂ ಶೋಚನೀಯವಾಗಿ ವಿಫಲವಾದವು. ಏಕೆಂದರೆ, ಈ ಚಳುವಳಿಯು ಯಾರ “ನಾಯಕತ್ವ”ವನ್ನೂ ಅವಲಂಬಿಸಿಲ್ಲ. ಸೋನಮ್ ವಾಂಗ್ಚುಕ್ ಅವರು ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದು ಈ ಆಂದೋಲನಕ್ಕೆ ಯಾವುದೇ ಹಿನ್ನೆಡೆಯನ್ನೂ ಉಂಟುಮಾಡಲಿಲ್ಲ. ಅದೇ ರೀತಿಯಲ್ಲಿ, “ಜಿರಳೆ” ಜನತಾ ಪಕ್ಷದ ಇಬ್ಬರು ಸದಸ್ಯರು ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ ಮಾತುಕತೆ ನಡೆಸಲು ಅವರ ಮನೆಗೆ ಹೋದದ್ದು ವಿದ್ಯಾರ್ಥಿಗಳಿಗೆ ಅಷ್ಟೇನೂ ಇಷ್ಟವಾಗಲಿಲ್ಲ. ವಿದ್ಯಾರ್ಥಿಗಳ ಈ ಅಸಮ್ಮತಿಯು, ಆಂದೋಲನವು ತನ್ನ ಷರತ್ತುಗಳನ್ನು ಮಾತುಕತೆಗೆ ಮೊದಲೇ ನಿರ್ದಿಷ್ಟಪಡಿಸಿಕೊಳ್ಳದೆ ಮುಂದೆ ನಡೆಯಬಹುದಾದ ಮಾತುಕತೆಗಳನ್ನು ತಡೆಯಿತು ಎಂಬ ಅಂಶವು ಈ ಚಳುವಳಿಯ ಅಸಾಂಪ್ರದಾಯಿಕ ಸ್ವರೂಪವನ್ನು ಸೂಚಿಸುತ್ತದೆ. ಇದು “ಹಿಂಬಾಲಕರ” ಪರವಾಗಿ “ನಾಯಕರು” ಮುನ್ನೆಡೆಸುವ ವಾಡಿಕೆಯ ಚಳುವಳಿಗಳಂತೆ ಇರಲಿಲ್ಲ. ನಿಜ ಹೇಳಬೇಕೆಂದರೆ, ವಿದ್ಯಾರ್ಥಿಗಳು “ನಾಯಕರ” ಹಿಂದೆ ಅಲ್ಲ, ಮೂರು ಷರತ್ತುಗಳ ಹಿಂದೆ ಒಗ್ಗೂಡಿದ್ದರು. ಇದರಲ್ಲಿ ರಾಜಿ ಮಾಡಿಕೊಳ್ಳದಂತೆ ನೋಡಿಕೊಂಡರು. ಆಳುವವರ
ವ್ಯವಸ್ಥೆಯ ನೈತಿಕ ಪೊಳ್ಳುತನ
ಇಷ್ಟು ಕಡಿಮೆ ಸಮಯದಲ್ಲಿ ಇಷ್ಟು ವ್ಯಾಪಕ ಮತ್ತು ಸ್ವಯಂಪ್ರೇರಿತ ಬೆಂಬಲವನ್ನು ಈ ಆಂದೋಲನವು ಪಡೆದ ಒಂದು ಗಹನವಾದ ಕಾರಣವೆಂದರೆ, ಅದು ಪ್ರಸ್ತುತ ಆಳ್ವಿಕೆಯ ನೈತಿಕ ಪೊಳ್ಳುತನದ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ನೆಲೆಸಿದ್ದ ನಿರಾಶೆಯೇ. ಜಂತರ್ ಮಂತರ್ ಪ್ರತಿಭಟನೆಯಲ್ಲಿ ಅಪಾರ ಜನಸಮೂಹವನ್ನು ಒಗ್ಗೂಡಿಸಿದ ಅಂಶವೆಂದರೆ, ಅದು ಕೇವಲ ಉದ್ಯೋಗಾವಕಾಶಗಳ ಕೊರತೆಯ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆಯ ಪಿಡುಗು ಮಾತ್ರವೇ ಅಲ್ಲ; ಈ ವ್ಯವಸ್ಥೆಯಲ್ಲಿ ಜವಾಬುದಾರಿಕೆ ಇಲ್ಲ ಎಂಬ ಸಂಗತಿ; ಈ ವ್ಯವಸ್ಥೆಯ ವಿಕೃತ ವೈಫಲ್ಯಗಳಿಗೆ ನೈತಿಕ ಹೊಣೆ ಹೊರುವವರು ಯಾರೂ ಇಲ್ಲ ಎಂಬುದು. ಇದು ವ್ಯವಸ್ಥೆಯ ನೈತಿಕ ಪೊಳ್ಳುತನವನ್ನು ಸೂಚಿಸುತ್ತದೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯ ಬೇಡಿಕೆಯು, ಆ ರಾಜೀನಾಮೆಯು ಪ್ರಶ್ನೆ ಪತ್ರಿಕೆ ಸೋರಿಕೆಯ ಸಮಸ್ಯೆಯನ್ನು ಸರಿಪಡಿಸುತ್ತದೆ ಅಥವಾ ಮುರಿದ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುತ್ತದೆ ಎಂಬ ಕಾರಣಕ್ಕಾಗಿ ಬಂದದ್ದಲ್ಲ. ಜಂತರ್ ಮಂತರ್‌ನಲ್ಲಿ ಹಾಜರಿದ್ದ ಪ್ರತಿಯೊಬ್ಬ ವ್ಯಕ್ತಿಗೂ ಅದರ ಅರಿವಿತ್ತು. ಆದರೆ, ರಾಜೀನಾಮೆ ಚೌಕಾಸಿಯೇ ಇರಲಿಲ್ಲ ಏಕೆಂದರೆ ಅದು ಈ ನೈತಿಕ ಪೊಳ್ಳುತನವನ್ನು ಜಯಿಸುವ ಒಂದು ವಿಷಯವಾಗಿತ್ತು. ಕೆಲವು ಅಧಿಕಾರಿಗಳನ್ನು, ಅವರ ಕೈಕೆಳಗಿನವರನ್ನು ಮಾತ್ರವಲ್ಲದೆ ರಾಜಕೀಯ ಆಡಳಿತದ ವ್ಯವಸ್ಥೆಯಲ್ಲಿ ಯಾರಾದರೊಬ್ಬರನ್ನು ಪರೀಕ್ಷಾ ವೈಫಲ್ಯಕ್ಕೆ ಹೊಣೆಗಾರರನ್ನಾಗಿ ಮಾಡುವುದನ್ನು ಖಚಿತಪಡಿಸಬೇಕಾಗಿತ್ತು. ಇದೇ ಕಾರಣದಿಂದ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರನ್ನು ಶಿಕ್ಷಿಸಲು ತ್ವರಿತ ನ್ಯಾಯಾಲಯಗಳ ಸ್ಥಾಪನೆಯ ಬಗ್ಗೆ ಮೋದಿಯವರು ನೀಡಿದ ಭರವಸೆಯನ್ನೂ ತಿರಸ್ಕರಿಸಲಾಯಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಮನೆಯಿಂದ ಓಡಿಹೋಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ 15 ವರ್ಷದ ಬಾಲಕಿಯಿಂದ ಹಿಡಿದು ಪೆಲೆಟ್ ಗನ್ ಸಿಡಿ-ಗುಂಡುಗಳನ್ನು ಎದುರಿಸಿದ ನಿರ್ಭೀತ ಯುವಕ-ಯುವತಿಯರ ವರೆಗೆ ವಿದ್ಯಾರ್ಥಿಗಳನ್ನು ಮತ್ತು ಯುವಕರನ್ನು ಒಂದುಗೂಡಿಸಿದ್ದು ನೈತಿಕ ನಡವಳಿಕೆಯ ಆಗ್ರಹ. ಆಳುವವರ
ಜಂತರ್ ಮಂತರ್ ಪ್ರತಿಭಟನೆಯಲ್ಲಿ ಅಪಾರ ಜನಸಮೂಹವನ್ನು ಒಗ್ಗೂಡಿಸಿದ ಅಂಶವೆಂದರೆ, ಅದು ಕೇವಲ ಉದ್ಯೋಗಾವಕಾಶಗಳ ಕೊರತೆಯ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆಯ ಪಿಡುಗು ಮಾತ್ರವೇ ಅಲ್ಲ; ಈ ವ್ಯವಸ್ಥೆಯಲ್ಲಿ ಜವಾಬುದಾರಿಕೆ ಇಲ್ಲ ಎಂಬ ಸಂಗತಿ; ಈ ವ್ಯವಸ್ಥೆಯ ವಿಕೃತ ವೈಫಲ್ಯಗಳಿಗೆ ನೈತಿಕ ಹೊಣೆ ಹೊರುವವರು ಯಾರೂ ಇಲ್ಲ ಎಂಬುದು. ಇದು ವ್ಯವಸ್ಥೆಯ ನೈತಿಕ ಪೊಳ್ಳುತನವನ್ನು ಸೂಚಿಸುತ್ತದೆ.
ಹಾಗೆ ನೋಡಿದರೆ, ಒಂದು ನೈತಿಕ ಪೊಳ್ಳುತನ ಪ್ರಸ್ತುತ ಆಳ್ವಿಕೆಯ ಮೂಲದಲ್ಲೇ ಇದೆ. ಈ ಅಂಟು ಜಾಢ್ಯವು ರಾಜಕೀಯದ ಬಹುಭಾಗವನ್ನು ಮಲಿನಗೊಳಿಸಿದೆ. ಲಕ್ಷಾಂತರ ಮತದಾರರನ್ನು, ಅವರು ತನ್ನ ವಿರುದ್ಧ ಮತ ಚಲಾಯಿಸಬಹುದು ಎಂದು ನಂಬಿಕೊಂಡು ಸರ್ಕಾರವು ಅವರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸುವುದರಿಂದ ಹಿಡಿದು, ಚುನಾಯಿತರಾದ ವಿರೋಧ ಪಕ್ಷದ ಸದಸ್ಯರನ್ನು ಖರೀದಿಸಿ ತಕ್ಷಣವೇ ಅವರು ತಮ್ಮ ಪಕ್ಷವನ್ನು ತೊರೆದು ಆಳುವ ಪಕ್ಷವನ್ನು ಸೇರುವಂತೆ ಮಾಡುವ ಅಥವಾ ಬೆದರಿಸುವ ಮೂಲಕ ಚುನಾವಣಾ ಫಲಿತಾಂಶಗಳನ್ನು ಅಪ್ರಸ್ತುತಗೊಳಿಸುವ ವರೆಗೆ, ಅದೂ ಕೂಡ ಒಂದು ಅನೈತಿಕ ಪ್ರಕ್ರಿಯೆಯ ಮೂಲಕ ರಚಿಸಲ್ಪಟ್ಟ (ಪ್ರಧಾನ ಮಂತ್ರಿ ಮತ್ತು ಅವರ ನಾಮನಿರ್ದೇಶಿತರೊಬ್ಬರಿಂದ ರಚಿಸಲ್ಪಟ್ಟ) ಚುನಾವಣಾ ಆಯೋಗವನ್ನು ಬಳಸುವ ಮೂಲಕ ಅದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಿಜಕ್ಕೂ ನಾಟಕವಾಡುತ್ತಿದೆ. ಈ ಕಪಟ ನಾಟಕದ ವಿರುದ್ಧ ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಜಿಗುಪ್ಸೆಯನ್ನು ಈ ಪ್ರತಿಭಟನೆಯ ಮೂಲಕ ವ್ಯಕ್ತಪಡಿಸಿದರು. ‘ಮಡಿಲ’ ಮಾಧ್ಯಮ(ಗೋದಿ ಮೀಡಿಯ)ಗಳಲ್ಲಿ ಹೆಚ್ಚಿನವರು ಈ ಕಪಟ ನಾಟಕವನ್ನು ಶ್ಲಾಘಿಸುವವರು. ಈ ನಾಟಕದ ಬಗ್ಗೆ ತಿಳಿದಿರುವ ಹೆಚ್ಚಿನ ಸಂಖ್ಯೆಯ ಜನರು ಇದರ ಬಗ್ಗೆ ಭಯಭೀತರಾಗಿ ಮೌನವಾಗಿದ್ದಾರೆ. ಆದರೆ, ಅದನ್ನು ಬಹಿರಂಗವಾಗಿ ವಿರೋಧಿಸುವ ಧೈರ್ಯವನ್ನು ವಿದ್ಯಾರ್ಥಿಗಳು ತೋರಿಸಿದ್ದಾರೆ. ಪೋಸ್ಟರ್‌ಗಳು ಮತ್ತು ವ್ಯಂಗ್ಯಚಿತ್ರಗಳ ಮೂಲಕ ಮೋದಿ ವ್ಯಕ್ತಿಪೂಜೆಯ ಗೇಲಿ ಈ ವಿರೋಧದ ಒಂದು ಸ್ಪಷ್ಟ ಅಭಿವ್ಯಕ್ತಿಯಾಗಿತ್ತು ಮತ್ತು ಅದು ಅನೇಕ ಮಂದಿಯನ್ನು ಆವರಿಸಿದ್ದ ತರಗುಟ್ಟುವ ಭಯದಿಂದ ಅವರನ್ನು ಮುಕ್ತಗೊಳಿಸುವ ಪರಿಣಾಮ ಬೀರಿತು.
ಇದನ್ನೂ ಓದಿ : ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ – ಕಲಿಯಬೇಕಾದ ಪಾಠಗಳು
ಫ್ಯಾಸಿಸ್ಟ್ ಆಡಳಿತಗಳ ಲಕ್ಷಣ
ನಿಜ ಸಂಗತಿಯೆಂದರೆ, ಪೊಲೀಸ್ ದೌರ್ಜನ್ಯ, ಪೆಲೆಟ್ ಗನ್‌ಗಳು, ಮೊಳೆಗಳಿಂದ ಕೂಡಿದ ಲಾಠಿಗಳಿಂದ ಹೊಡೆತ, ಅಶ್ರುವಾಯು ಬಳಕೆ ಮತ್ತು ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವರಾಗಿ ಮುಂದುವರಿಯುತ್ತಾರೆ ಎನ್ನುವ ಅರ್ಥಹೀನ ಹಠ, ಇವೆಲ್ಲವನ್ನೂ ಈ ಭಯ ಜನರ ಮನಸ್ಸಿನಲ್ಲಿ ಸದಾ ಉಳಿಯುವಂತೆ ಮಾಡುವ ಉದ್ದೇಶದಿಂದ, ಈ ಸರ್ಕಾರ ಬಗ್ಗುವುದಿಲ್ಲ ಎಂಬ ಭಾವನೆಯನ್ನು ಜನರ ಮನಸ್ಸಿನಲ್ಲಿ ಮೂಡಿಸುವ ಉದ್ದೇಶದಿಂದ ಯೋಜಿಸಲಾಗಿತ್ತು. ಜನರನ್ನು ಮತ್ತೊಮ್ಮೆ ತುಚ್ಛೀಕರಿಸಿ, ಅವರನ್ನು ಬೇರೆ ಬೇರೆ ಮಾಡುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ತಾನು ನಿಷ್ಪರಿಣಾಮಕಾರಿ ಎಂಬ ಭಾವನೆಯಲ್ಲೇ ಉಳಿಯುವಂತೆ ಮಾಡುವ ಮತ್ತು ಸರ್ಕಾರವು ಅಜೇಯವಾಗಿ ಉಳಿಯುವಷ್ಟು ಬಲವಾದ ಬೆಂಬಲವನ್ನು ಹೊಂದಿದೆ ಎಂಬುದನ್ನು ಮನವರಿಕೆ ಮಾಡಿಸುವ ಗುರಿಯನ್ನು ಅದು ಹೊಂದಿತ್ತು.
ಈ ನೈತಿಕ ಪೊಳ್ಳುತನವು ನಿಜಕ್ಕೂ ಎಲ್ಲ ಫ್ಯಾಸಿಸ್ಟ್ ಆಡಳಿತಗಳ ವಿಶಿಷ್ಟ ಲಕ್ಷಣವೂ ಹೌದು. 1930ರ ದಶಕದಲ್ಲಿ ಜರ್ಮನಿಯಲ್ಲಿ ಒಂದು ಏಕಸ್ವಾಮ್ಯವಾದಿ ಬಂಡವಾಳದ ಗುಂಪಿನಿಂದ ರಹಸ್ಯವಾಗಿ ಹಣ ಪಡೆಯುತ್ತಿದ್ದರೂ ಸಹ, ಏಕಸ್ವಾಮ್ಯ ಬಂಡವಾಳದ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ಆರಂಭವಾದ ನಾಜಿ ಚಳುವಳಿಯು, ಅಧಿಕಾರ ಹಿಡಿದ ನಂತರ ಅದೇ ಏಕಸ್ವಾಮ್ಯ ಬಂಡವಾಳದೊಂದಿಗೆ ಒಂದು ಗುಪ್ತ ಒಪ್ಪಂದವನ್ನು ಮಾಡಿಕೊಂಡಿತು. ಈ ಗುಪ್ತ ಒಪ್ಪಂದವನ್ನು ಜಾರಿಗೆ ತರಲು ಅದು ಅರ್ನ್ಸ್ಟ್ ರೋಹ್ಮ್ ನೇತೃತ್ವದ ತನ್ನದೇ ಬೆಂಬಲಿಗರ ತಂಡವನ್ನು “ಉದ್ದ ಕತ್ತಿಗಳ ರಾತ್ರಿ”ಯಂದು (“Night of Long Knives”) ಹತ್ಯೆ ಮಾಡಿತು. ಒಂದು ಏಕಸ್ವಾಮ್ಯ ವಿರೋಧಿ ಎಂಬ ಉನ್ನತ ನೈತಿಕ ನೆಲೆಯಿಂದ ಅದು, ಏಕಸ್ವಾಮ್ಯ ಬಂಡವಾಳದೊಂದಿಗೆ ಮೈತ್ರಿ ಮಾಡಿಕೊಂಡ ಒಂದು ನೈತಿಕ ಪೊಳ್ಳುತನಕ್ಕೆ ಇಳಿಯಿತು. ಇಂದಿನ ನವ-ಫ್ಯಾಸಿಸ್ಟರು ಅಧಿಕಾರಕ್ಕೆ ಬರುವ ಮೊದಲೇ ಏಕಸ್ವಾಮ್ಯ ಬಂಡವಾಳದೊಂದಿಗೆ, ವಿಶೇಷವಾಗಿ ಅದರ ಒಂದು ಹೊಸ ಭಾಗದೊಂದಿಗೆ ಮುಕ್ತ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಏಕಸ್ವಾಮ್ಯವಾದಿಗಳಿಗೆ ಲೂಟಿ ಮಾಡಲು ಪರವಾನಗಿ ನೀಡುವ ಅಂತಹ ಒಪ್ಪಂದವು ಅನಿವಾರ್ಯವಾಗಿ ಅವರನ್ನು ನೈತಿಕ ಪೊಳ್ಳುತನಕ್ಕೆ ಇಳಿಸುತ್ತದೆ.
ಈ ಪೊಳ್ಳುತನ ಅವರಲ್ಲಿ ಇಲ್ಲದಿದ್ದರೆ, ಈ ಫ್ಯಾಸಿಸ್ಟರಿಗೆ ಗೊಬೆಲ್ಸ್ (ಹಿಟ್ಲರನ ಪ್ರಚಾರ ಮಂತ್ರಿ) ರೀತಿಯ ಪ್ರಚಾರದ ಅಗತ್ಯವಿಲ್ಲ. ತನ್ನ ಮೂಲದಲ್ಲಿ ನೈತಿಕ ಪೊಳ್ಳುತನವನ್ನು ಆಡಳಿತವು ಹೊಂದಿಲ್ಲದೇ ಇದ್ದರೆ, “ಮೋದಿ ಇದ್ದರೆ ಎಲ್ಲವೂ ಸಾಧ್ಯ” (“ಮೋದಿ ಹೈ ತೋ ಮುಮ್ಕಿನ್ ಹೈ”) ಎನ್ನುವ ಹಾಡುಗಳನ್ನು ಹಾಡುವಂತೆ ಬಾಲಿವುಡ್ ನಟರ ಮೇಲೆ ಒತ್ತಡ ಹೇರುತ್ತಿರಲಿಲ್ಲ (ಅವರಲ್ಲಿ ಒಬ್ಬರು ಈ ಒತ್ತಡವನ್ನು ಒಪ್ಪಿಕೊಂಡಿದ್ದಾರೆ).
ಇಂದಿನ ನವ-ಫ್ಯಾಸಿಸ್ಟರು ಅಧಿಕಾರಕ್ಕೆ ಬರುವ ಮೊದಲೇ ಏಕಸ್ವಾಮ್ಯ ಬಂಡವಾಳದೊಂದಿಗೆ, ವಿಶೇಷವಾಗಿ ಅದರ ಒಂದು ಹೊಸ ಭಾಗದೊಂದಿಗೆ ಮುಕ್ತ ಒಪ್ಪಂದ ಮಾಡಿಕೊಳ್ಳುತ್ತಾರೆ. ಈ ಏಕಸ್ವಾಮ್ಯವಾದಿಗಳಿಗೆ ಲೂಟಿ ಮಾಡಲು ಪರವಾನಗಿ ನೀಡುವ ಅಂತಹ ಒಪ್ಪಂದವು ಅನಿವಾರ್ಯವಾಗಿ ಅವರನ್ನು ನೈತಿಕ ಪೊಳ್ಳುತನಕ್ಕೆ ಇಳಿಸುತ್ತದೆ.ಈ ಪೊಳ್ಳುತನ ಅವರಲ್ಲಿ ಇಲ್ಲದಿದ್ದರೆ, ಈ ಫ್ಯಾಸಿಸ್ಟರಿಗೆ ಗೊಬೆಲ್ಸ್ ರೀತಿಯ ಪ್ರಚಾರದ ಅಗತ್ಯವಿಲ್ಲ. ತನ್ನ ಮೂಲದಲ್ಲಿ ನೈತಿಕ ಪೊಳ್ಳುತನವನ್ನು ಆಡಳಿತವು ಹೊಂದಿಲ್ಲದೇ ಇದ್ದರೆ, “ಮೋದಿ ಇದ್ದರೆ ಎಲ್ಲವೂ ಸಾಧ್ಯ” (“ಮೋದಿ ಹೈ ತೋ ಮುಮ್ಕಿನ್ ಹೈ”) ಎನ್ನುವ ಹಾಡುಗಳನ್ನು ಹಾಡುವಂತೆ ಬಾಲಿವುಡ್ ನಟರ ಮೇಲೆ ಒತ್ತಡ ಹೇರುತ್ತಿರಲಿಲ್ಲ.
ವಾಸ್ತವವಾಗಿ, ಈ ನೈತಿಕ ಪೊಳ್ಳನ್ನು ಎದುರಿಸಲು ಆದರ್ಶಪ್ರಾಯ ಸ್ಥಾನದಲ್ಲಿರುವ ಒಂದು ಸಾಮಾಜಿಕ ಗುಂಪು ಎಂದರೆ, ಅದು ವಿದ್ಯಾರ್ಥಿಗಳೇ. ಅವರು ಮುಗ್ಧರು, ಆದರ್ಶವಾದಿಗಳು, ಮಾಹಿತಿ ಹೊಂದಿರುವವರು, ಚಿಂತನಶೀಲರು ಮತ್ತು ಅಂಜಿಕೆಯಿಲ್ಲದವರು, ಹಾಗೂ ನೈತಿಕ ನಡವಳಿಕೆಯ ಬಗ್ಗೆ ಬಲವಾದ ಬದ್ಧತೆಯನ್ನು ಮತ್ತು ಗೌರವವನ್ನು ಹೊಂದಿರುವವರು. ಈ ಎಲ್ಲ ಗುಣಗಳು, ಗೊಬೆಲ್ಸ್ ರೀತಿಯ ಪ್ರಚಾರದ ಮೂಲಕ ಜನರನ್ನು ಮರುಳುಮಾಡುವ ಆಡಳಿತಗಳ ನೈತಿಕ ಪೊಳ್ಳುತನದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತವೆ. ಆದರೆ, ಅದೇ ರೀತಿಯಲ್ಲಿ, ಒಂದು ನಿರ್ದಿಷ್ಟ ಪ್ರಸಂಗದಲ್ಲಿ ನೈತಿಕ ನಡವಳಿಕೆಯನ್ನು ಆಡಳಿತದ ಮೇಲೆ ಹೇರುವಲ್ಲಿ ವಿದ್ಯಾರ್ಥಿಗಳು ಕಂಡ ಯಶಸ್ಸು, ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗಿದೆ ಎಂಬುದನ್ನು ಸೂಚಿಸುವುದಿಲ್ಲ. ಚಿರತೆಯನ್ನು ಬಲೆಗೆ ಬೀಳಿಸಿದರೆ ಅದರ ಚುಕ್ಕೆಗಳು ಬದಲಾಗುವುದಿಲ್ಲ. ಆಳುವವರ
ರಾಜಕೀಯ ಸವಾಲು ಒಡ್ಡಲು ದಾರಿ ತೆರೆದಿದೆ
ವಿದ್ಯಾರ್ಥಿಗಳು ಎತ್ತಿದ ಬೇಡಿಕೆಗಳು ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯನ್ನಾಗಲಿ ಅಥವಾ ಯಾವುದೇ ಸಾಂಸ್ಥಿಕ ಬದಲಾವಣೆಯನ್ನಾಗಲಿ ಒಳಗೊಂಡಿರಲಿಲ್ಲ. ಹಾಗೇನಾದರೂ ಅವರು ಮಾಡಿದ್ದರೆ, ಅದು ಹೆಚ್ಚು ಚರ್ಚೆಗಳಿಗೆ ಕಾರಣವಾಗುತ್ತಿತ್ತು ಮತ್ತು ಅವರ ಚಳುವಳಿಯು ಅಷ್ಟು ವೇಗವಾಗಿಯಾಗಲಿ ಅಥವಾ ಸ್ವಯಂಪ್ರೇರಿತವಾಗಿಯಾಗಲಿ ದೇಶಾದ್ಯಂತವೂ ಹರಡುತ್ತಿರಲಿಲ್ಲ. ರೈತ ಆಂದೋಲನದೊಂದಿಗೆ ಹೋಲಿಸಿದರೆ ಈ ಆಂದೋಲನದಲ್ಲಿ ಕಂಡುಬರುವ ವ್ಯತ್ಯಾಸವು ಗಮನಾರ್ಹವಾಗಿದೆ. ನೈತಿಕ ನಡವಳಿಕೆಯನ್ನು ಒತ್ತಾಯಪಡಿಸುವ ಒಂದು ಆಂದೋಲನಕ್ಕಿಂತ ಭಿನ್ನವಾಗಿ, ರೈತರ ಆಂದೋಲನವು ಒಂದು ಮೂಲ ವರ್ಗದ ಹಿತರಕ್ಷಣೆಯ ವರ್ಗ ಆಂದೋಲನವಾಗಿದ್ದುದರಿಂದ, ರೈತರ ಬೇಡಿಕೆಗಳು ಅನಿವಾರ್ಯವಾಗಿ ಸಾಂಸ್ಥಿಕವಾಗಿದ್ದವು. ಭಾರತದ ಏಕಸ್ವಾಮ್ಯ ಬಂಡವಾಳವು ಸಂಪೂರ್ಣವಾಗಿ ಬೆರೆತುಕೊಂಡಿರುವ ನವ-ಉದಾರವಾದಿ ವ್ಯವಸ್ಥೆಯನ್ನು ಮುನ್ನಡೆಸುವ ಸಾಮ್ರಾಜ್ಯಶಾಹಿಯ ಆಜ್ಞೆಯ ಮೇರೆಗೆ ಜಾರಿಗೆ ತರಲಾಗುತ್ತಿದ್ದ ಸಾಂಸ್ಥಿಕ ಬದಲಾವಣೆಗಳನ್ನು ರೈತರ ಆಂದೋಲನ ಹಿಮ್ಮೆಟ್ಟಿಸಿತು. ಪ್ರಸ್ತುತ ಆಂದೋಲನದಲ್ಲಿ ಯಾವುದೇ ಸಾಂಸ್ಥಿಕ ಬದಲಾವಣೆಗಳ ಪ್ರಶ್ನೆಯೇ ಇರಲಿಲ್ಲ. ಆದರೆ, ನವ-ಫ್ಯಾಸಿಸ್ಟ್ ಆಡಳಿತವು ತನ್ನ ಘನತೆ, ಗೌರವಗಳಿಗೆ, ಪ್ರತಿಷ್ಟೆಗೆ (image) ಹಾನಿಯನ್ನು ಅನುಭವಿಸಿದೆ. ಅದು ಸತತ ಶ್ರಮದಿಂದ ನಿರ್ಮಿಸಿದ್ದ ಭಯದ ವಾತಾವರಣವು ಹಿನ್ನಡೆಯನ್ನು ಅನುಭವಿಸಿದೆ. ಇವುಗಳನ್ನು ಮರಳಿ ಪಡೆಯಲು ಅದು ಸರ್ವಪ್ರಯತ್ನ ನಡೆಸುತ್ತದೆ.
ವಿದ್ಯಾರ್ಥಿ ಆಂದೋಲನವು ನವ-ಫ್ಯಾಸಿಸಂನ ಕುತಂತ್ರಗಳನ್ನು ಬಹಿರಂಗಪಡಿಸುವಲ್ಲಿ, ವಿಶೇಷವಾಗಿ ಕೋಮುವಾದನ್ನು ಬಳಸುವ ಅದರ ಸಿನಿಕತನವನ್ನು ಬಯಲಿಗೆಳೆಯುವಲ್ಲಿ; “ಸರ್ವೋಚ್ಚ ನಾಯಕ” ತಪ್ಪು ಮಾಡಲು ಸಾಧ್ಯವೇ ಇಲ್ಲದ ಅಮೋಘ ಅವತಾರ ಎಂಬ ಮಿಥ್ಯೆಯನ್ನು ಬಯಲುಮಾಡುವಲ್ಲಿ; ಮತ್ತು, ಹಲವು ವರ್ಷಗಳಿಂದ ದೇಶವನ್ನು ಆವರಿಸಿದ್ದ ಭಯದ ವಾತಾವರಣವನ್ನು ಬದಲಿಸುವಲ್ಲಿ ಒಂದು ಅದ್ಭುತವಾದ ಪಾತ್ರವನ್ನು ವಹಿಸಿದೆ. ಇದು ನವ-ಫ್ಯಾಸಿಸಂಗೆ ರಾಜಕೀಯ ಸವಾಲನ್ನು ಒಡ್ಡುವ ದಾರಿಯನ್ನು ತೆರೆದಿದೆ.
ಇದನ್ನು, ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುವ ಮೂಲಕ, ಕೋಮು ಗಲಭೆಗಳನ್ನು ಸೃಷ್ಟಿಸುವ ಮೂಲಕ, ಗಡಿ ಭಾಗದಲ್ಲಿ ಅಂತರರಾಷ್ಟ್ರೀಯ ಸಂಘರ್ಷಗಳನ್ನು ಪ್ರಚೋದಿಸುವ ಮೂಲಕ (ದಕ್ಷಿಣ ಏಷ್ಯಾ ದೇಶಗಳ ವ್ಯವಹಾರಗಳಲ್ಲಿ ಡೊನಾಲ್ಡ್ ಟ್ರಂಪ್ ಹೊಂದಿರುವ ಮೂಗು ತೂರಿಸುವ ಪ್ರವೃತ್ತಿಯೊಂದಿಗೆ ಈ ಕಾರ್ಯವು ಹೆಚ್ಚು ಕಷ್ಟಕರವಾಗುತ್ತದೆ), ಮತ್ತು ವಿದ್ಯಾರ್ಥಿ ಆಂದೋಲನದ “ನಾಯಕತ್ವ”ವನ್ನು ತನ್ನ ಕ್ಯಾಂಪಿಗೆ ಸೆಳೆಯುವ (ಈ ಪರಿಭಾಷೆಯಲ್ಲಿ ಮಾತ್ರವೇ ಅದು ಗ್ರಹಿಸಬಲ್ಲದು) ಅಥವಾ ಬೇರೆ ರೀತಿಯಲ್ಲಿ ಅವರ ಪ್ರಭಾವವನ್ನು ತಗ್ಗಿಸುವ ಮೂಲಕ, ಅದು ಮುಂದಿನ ದಿನಗಳಲ್ಲಿ ಮಾಡುತ್ತದೆ.
ಆದರೂ, ವಿದ್ಯಾರ್ಥಿ ಆಂದೋಲನವು ನವ-ಫ್ಯಾಸಿಸಂನ ಕುತಂತ್ರಗಳನ್ನು ಬಹಿರಂಗಪಡಿಸುವಲ್ಲಿ, ವಿಶೇಷವಾಗಿ ಕೋಮುವಾದನ್ನು ಬಳಸುವ ಅದರ ಸಿನಿಕತನವನ್ನು ಬಯಲಿಗೆಳೆಯುವಲ್ಲಿ; “ಸರ್ವೋಚ್ಚ ನಾಯಕ” ತಪ್ಪು ಮಾಡಲು ಸಾಧ್ಯವೇ ಇಲ್ಲದ ಅಮೋಘ ಅವತಾರ ಎಂಬ ಮಿಥ್ಯೆಯನ್ನು ಬಯಲುಮಾಡುವಲ್ಲಿ; ಮತ್ತು, ಹಲವು ವರ್ಷಗಳಿಂದ ದೇಶವನ್ನು ಆವರಿಸಿದ್ದ ಭಯದ ವಾತಾವರಣವನ್ನು ಬದಲಿಸುವಲ್ಲಿ ಒಂದು ಅದ್ಭುತವಾದ ಪಾತ್ರವನ್ನು ವಹಿಸಿದೆ. ಇದು ನವ-ಫ್ಯಾಸಿಸಂಗೆ ರಾಜಕೀಯ ಸವಾಲನ್ನು ಒಡ್ಡುವ ದಾರಿಯನ್ನು ತೆರೆದಿದೆ. ಅದನ್ನೀಗ ಕೈಗೆತ್ತಿಕೊಳ್ಳಬೇಕು.
ಇದನ್ನೂ ನೋಡಿ : ಕ್ಯಾಸ್ಟ್ರೊ 100 | ಕ್ಯೂಬಾದ ಮೇಲೆ 66 ವರ್ಷಗಳ ಯುಎಸ್ ಕ್ರೂರ ದಿಗ್ಬಂಧನ! ಪುಟ್ಟ ರಾಷ್ಟ್ರದ ಮೇಲೆ ಯಾಕಿಷ್ಟು ದ್ವೇಷ?
