ರಸಗೊಬ್ಬರ ನಿಯಂತ್ರಣವು ಕೃಷಿ ವಲಯವನ್ನು ನಾಶಪಡಿಸುತ್ತದೆ

“ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ನೈಸರ್ಗಿಕ ಕೃಷಿಯತ್ತ ಸಾಗುಬೇಕು”ಎಂದು ರೈತರಿಗೆ ನೀಡಿರುವ ಸಲಹೆಯು ಪ್ರಧಾನ ಮಂತ್ರಿಯವರ ಸಂಪೂರ್ಣ ಬೇಜವಾಬ್ದಾರಿಯುತ ಧೋರಣೆಯಾಗಿದೆ. ಇದು ಖಂಡಿತವಾಗಿಯೂ ವಿಪತ್ತಿಗೆ ದಾರಿ ಮಾಡಿಕೊಡುತ್ತದೆ. ಭತ್ತ, ಜೋಳ, ಸೋಯಾಬೀನ್, ದ್ವಿದಳ ಧಾನ್ಯಗಳು ಮತ್ತು ಹತ್ತಿಯಂತಹ ಖಾರಿಫ್ ಬೆಳೆಗಳ ಬಿತ್ತನೆ ಪ್ರಾರಂಭವಾಗಲಿರುವ ಸಮಯದಲ್ಲಿ ಮೋದಿಯವರ ಕರೆ ಬಂದಿದೆ. ಯೂರಿಯಾ ಮತ್ತು ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ) ಸಮಯಕ್ಕೆ ಲಭ್ಯವಿಲ್ಲದಿದ್ದರೆ, ಬೆಳೆ ಹಾನಿಯಾಗುತ್ತದೆ.

ವಿಜು ಕೃಷ್ಣನ್

ಕನ್ನಡಕ್ಕೆ: ಸಿ. ಸಿದ್ದಯ್ಯ

ಇಂಧನ, ಅಡುಗೆ ಎಣ್ಣೆ ಮತ್ತು ರಸಗೊಬ್ಬರ ಸೇರಿದಂತೆ ಅಗತ್ಯ ವಸ್ತುಗಳ ಬಳಕೆಯನ್ನು ತೀವ್ರವಾಗಿ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಭಾರತದ ದುಡಿಯುವ ಜನರಿಗೆ ಕರೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಪ್ರಧಾನಿ ತಮ್ಮ ಅಸಮರ್ಥತೆ, ಆಡಳಿತ ವೈಫಲ್ಯ ಮತ್ತು ಕರುಣಾಜನಕ ವಿದೇಶಾಂಗ ನೀತಿ ವೈಫಲ್ಯವನ್ನು ಇಷ್ಟು ಸ್ಪಷ್ಟವಾಗಿ ಒಪ್ಪಿಕೊಂಡಿಲ್ಲ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಮಧ್ಯೆ ವಿದೇಶಿ ವಿನಿಮಯ ಮೀಸಲುಗಳನ್ನು ಸಂರಕ್ಷಿಸುವ ತಮ್ಮ ಎಂದಿನ ಅಸಂಬದ್ಧ ಪ್ರಸ್ತಾಪಗಳಲ್ಲಿ ಪ್ರಧಾನಿಯವರು, “ರಾಷ್ಟ್ರೀಯ ಹಿತಾಸಕ್ತಿ”ಯ ನೆಪದಲ್ಲಿ ಇದನ್ನು “ದೇಶಭಕ್ತಿಯ” ಕರ್ತವ್ಯವೆಂದು ಪ್ರಸ್ತುತಪಡಿಸಿದರು. “ನನ್ನ ಸರ್ಕಾರ ಭಾರತ: ರಾಷ್ಟ್ರ ಮೊದಲು” ಎಂಬ ಶೀರ್ಷಿಕೆಯ ಪೋಸ್ಟರ್‌ ನಲ್ಲಿ, ಕಠಿಣ ಕ್ರಮಗಳಿಗೆ ಬಲವಾದ ಪ್ರಸ್ತಾಪಗಳಾಗಿ ಪ್ರಧಾನಿ ಏಳು ಪ್ರಸ್ತಾಪಗಳನ್ನು ಮುಂದಿಟ್ಟರು.

ಅತ್ಯಂತ ನಿರ್ದಯ ಸಲಹೆ

“ನೈಸರ್ಗಿಕ ಕೃಷಿಯತ್ತ ಸಾಗಿ ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ” ಎಂದು ರೈತರಿಗೆ ನೀಡಿರುವ ಸಲಹೆಯು ಪ್ರಧಾನ ಮಂತ್ರಿಯವರ ಅತ್ಯಂತ ನಿರ್ದಯ ಸಲಹೆಯಾಗಿದೆ. ಕೃಷಿ ವೆಚ್ಚಗಳು ಹೆಚ್ಚಾಗಿವೆ, ಆದಾಯ ಕಡಿಮೆಯಾಗುತ್ತಿದೆ. ಇದರಿಂದ ಸಾಲದ ಹೊರೆಯಿಂದಾಗಿ ರೈತರು ಆತ್ಮಹತ್ಯೆಯ ಅಂಚಿನಲ್ಲಿರುವ ಸಮಯದಲ್ಲಿ ಇಂತಹ ಸಲಹೆ ಬಂದಿರುವುದನ್ನು ಗಮನಿಸಬೇಕಿದೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳಾಗಿ ಶ್ರೀನೇಟ್, ಖೇರಾ ಹೆಸರುಗಳು ಚರ್ಚೆಯಲ್ಲಿ

ರಸಗೊಬ್ಬರಗಳನ್ನು ಆಮದು ಮಾಡಿಕೊಳ್ಳುವ ದೇಶಗಳಲ್ಲಿ ವಿಶ್ವದ ಮೊದಲ ದೇಶ ಭಾರತ; ಮತ್ತು ಬಳಕೆಯ ವಿಷಯದಲ್ಲಿ ಎರಡನೇ ಸ್ಥಾನ ಭಾರತಕ್ಕಿದೆ. ದೇಶೀಯ ಕೈಗಾರಿಕೆಗಳ ಸಾಮರ್ಥ್ಯ ಮತ್ತು ಸ್ವಾವಲಂಬನೆಯ ನೀತಿಯನ್ನು ನಾಶಪಡಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ನೀತಿಗಳಿಂದಾಗಿ ರಸಗೊಬ್ಬರ ಬಿಕ್ಕಟ್ಟು ಪ್ರಾರಂಭವಾಯಿತು. ಅಮೇರಿಕನ್ ಸಾಮ್ರಾಜ್ಯಶಾಹಿಗೆ ನಿಷ್ಠೆಯು ವ್ಯಾಪಾರ ಸಂಬಂಧಗಳಲ್ಲಿ ಪ್ರತಿಫಲಿಸುತ್ತದೆ ಮತ್ತು ಭಾರತವು ಪ್ರಸ್ತುತ ಬಿಕ್ಕಟ್ಟು, ಒತ್ತಡಗಳು ಮತ್ತು ಬೆದರಿಕೆಗಳ ಸಂಕೀರ್ಣತೆಗಳಿಗೆ ನೂಕಲ್ಪಟ್ಟಿದೆ.

ಈಗಾಗಲೇ ರಸಗೊಬ್ಬರ ಕೊರತೆಯನ್ನು ಎದುರಿಸುತ್ತಿದ್ದಾರೆ

ರಸಗೊಬ್ಬರ ಬಳಕೆಯನ್ನು ಶೇ. 50 ರಷ್ಟು ಕಡಿಮೆ ಮಾಡಿ ನೈಸರ್ಗಿಕ ಕೃಷಿ ವಿಧಾನಗಳಿಗೆ ಮರಳಬೇಕು ಎಂದು ರೈತರಿಗೆ ಮೋದಿ ಕರೆ ನೀಡುತ್ತಿದ್ದಾರೆ. ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ರಸಗೊಬ್ಬರ ಕೊರತೆಯೂ ಒಂದು. ಪ್ರಧಾನಿಯವರ ಈ ಕರೆಯು ಇದನ್ನು ಮರೆಮಾಚುವ ಪ್ರಯತ್ನವಾಗಿದೆ. ಒಂದೆಡೆ, ರಸಗೊಬ್ಬರ ಲಭ್ಯತೆಯ ಬಗ್ಗೆ ಯಾವುದೇ ಸಮಸ್ಯೆ ಇಲ್ಲ, ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಪೂರೈಕೆ ಮುಂದುವರಿಯಲಿದೆ ಎಂದು ಹೇಳಲಾಗುತ್ತದೆ.

ವಿಪರ್ಯಾಸವೆಂದರೆ, ಮಧ್ಯಪ್ರಾಚ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತಾದ ಅಂತರ-ಸಚಿವಾಲಯಗಳ ಬ್ರೀಫಿಂಗ್, ಖಾರಿಫ್ ಬೆಳೆಗೆ ಅಂದಾಜು ಮಾಡಲಾದ 390.54 ಲಕ್ಷ ಟನ್ ರಸಗೊಬ್ಬರದಲ್ಲಿ ಶೇಕಡಾ 51 ರಷ್ಟು ಬಂದಿದೆ ಎಂದು ಹೇಳುತ್ತದೆ. ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿ ಇತ್ತೀಚಿನ ಬೆಳವಣಿಗೆಗಳಿಂದಾಗಿ, ಅದು ಮೊದಲಿನಂತೆ ಸರಾಗವಾಗಿ ಹರಿಯುವ ಮಾರ್ಗವಿಲ್ಲ. ಹೀಗಾಗಿ ಹಿಂದಿನ ವರ್ಷಗಳೊಂದಿಗೆ ಈಗಿರುವ ದಾಸ್ತಾನನ್ನು ಹೋಲಿಸುವುದು ಅರ್ಥಹೀನ; ಹಾರ್ಮುಜ್ ಜಲಸಂಧಿಯು ಪ್ರತಿದಿನ 2 ಮಿಲಿಯನ್ ಬ್ಯಾರೆಲ್ ತೈಲ ಮತ್ತು ಹೆಚ್ಚಿನ ಪ್ರಮಾಣದ ದ್ರವೀಕೃತ ನೈಸರ್ಗಿಕ ಅನಿಲವನ್ನು (LNG) ಸಾಗಿಸುತ್ತದೆ.

ಮಧ್ಯಪ್ರಾಚ್ಯ ಸಂಘರ್ಷವು ರಸಗೊಬ್ಬರ ವ್ಯಾಪಾರದ ಮೇಲೆ 1.5 ಮಿಲಿಯನ್‌ ನಿಂದ 3 ಮಿಲಿಯನ್ ಟನ್‌ ಗಳಷ್ಟು ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ. ಯೂರಿಯಾ, ಫಾಸ್ಫೇಟ್, ಅಮೋನಿಯಾ ಮತ್ತು ಪೊಟ್ಯಾಶ್ ಜೊತೆಗೆ, ತೈಲ ಮತ್ತು LNG ಸಾಗಣೆಯೂ ಸಹ ಅಡ್ಡಿಪಡಿಸಲ್ಪಟ್ಟಿದೆ. ಇರಾನ್‌ ನೊಂದಿಗೆ ವ್ಯಾಪಾರ ಮಾಡಿದರೆ ಅಮೆರಿಕದಿಂದ ಪ್ರತೀಕಾರದ ನಿರ್ಬಂಧಗಳಿಗೆ ಹೆದರಿ ಭಾರತವು ಹಾರ್ಮುಜ್ ಜಲಸಂಧಿಯ ಮೂಲಕ ಅಗತ್ಯ ರಸಗೊಬ್ಬರಗಳನ್ನು ಸಾಗಿಸುವ ಹಡಗುಗಳನ್ನು ಕಳುಹಿಸುವುದನ್ನು ನಿಲ್ಲಿಸಿದೆ ಎಂದು ವರದಿಯಾಗಿದೆ.

ಸಮಯಕ್ಕೆ ಲಭ್ಯವಿಲ್ಲದಿದ್ದರೆ ಬೆಳೆ ಹಾನಿಯಾಗುತ್ತದೆ

ಬಿಕ್ಕಟ್ಟನ್ನು ಹಗುರವಾಗಿ ಪರಿಗಣಿಸುತ್ತಿರುವ ಪ್ರಧಾನಿ ಮತ್ತು ಅವರ ವಕ್ತಾರರು ಅಪಾಯಕಾರಿಯಾದ ನಕಾರಾತ್ಮಕ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಭತ್ತ, ಜೋಳ, ಸೋಯಾಬೀನ್, ದ್ವಿದಳ ಧಾನ್ಯಗಳು, ಹತ್ತಿಯಂತಹ ಖಾರಿಫ್ ಬೆಳೆಗಳ ಬಿತ್ತನೆ ಆರಂಭವಾದ ಸಮಯದಲ್ಲಿ ಮೋದಿಯವರ ಕರೆ ಬಂದಿದೆ. ಯೂರಿಯಾ ಮತ್ತು ಡೈ ಅಮೋನಿಯಂ ಫಾಸ್ಫೇಟ್ (DAP) ಸಮಯಕ್ಕೆ ಸರಿಯಾಗಿ ಲಭ್ಯವಿಲ್ಲದಿದ್ದರೆ, ಇಳುವರಿ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದು ಕೃಷಿ ಬರ ಮತ್ತು ಆಹಾರ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ; ಇದು ಆಹಾರ ಸಾರ್ವಭೌಮತ್ವವನ್ನು ಹಾಳು ಮಾಡುತ್ತದೆ.

ರಸಗೊಬ್ಬರ ಬಳಕೆಯ ಕುರಿತು ಶಿಫಾರಸು ಮಾಡಲಾದ ಪೋಷಕಾಂಶಗಳ ಬಳಕೆಯ ಮಟ್ಟಗಳಿಗೆ ಹೋಲಿಸಿದರೆ ಅತಿಯಾದ ಬಳಕೆಗಿಂತ, ಪ್ರಮುಖ ರಸಗೊಬ್ಬರಗಳ ನಿಜವಾದ ಬಳಕೆಯಲ್ಲಿ ಕೊರತೆಯಿದೆ ಎಂದು ಲಭ್ಯವಿರುವ ಅಂಕಿಅಂಶಗಳು ತೋರಿಸುತ್ತದೆ. ಈ ಕೊರತೆಯು ಮುಖ್ಯವಾಗಿ ರಂಜಕ ಮತ್ತು ಪೊಟ್ಯಾಸಿಯಮ್ ಬಳಕೆಯಲ್ಲಿದೆ. 2024-2025ರಲ್ಲಿ ಪೊಟ್ಯಾಶ್ ರಸಗೊಬ್ಬರಗಳ ನಿಜವಾದ ಬಳಕೆ 23,84,000 ಟನ್‌ಗಳಷ್ಟಿತ್ತು. ಇದು ಇತ್ತೀಚಿನ ಶಿಫಾರಸು ಮಾಡಲಾದ 66,75,000 ಟನ್‌ ಗಳ ಮಾನದಂಡಕ್ಕಿಂತ 64 ಪ್ರತಿಶತ ಕಡಿಮೆಯಾಗಿದೆ. ಅದೇ ರೀತಿ, ರಂಜಕ- ಭರಿತ ರಸಗೊಬ್ಬರಗಳ ಬಳಕೆಯು ಶಿಫಾರಸು ಮಾಡಿದ ಮಟ್ಟಕ್ಕಿಂತ 11 ಪ್ರತಿಶತ ಕಡಿಮೆಯಾಗಿದೆ. ಅನೇಕ ರಾಜ್ಯಗಳಲ್ಲಿ ಸಾರಜನಕ ರಸಗೊಬ್ಬರಗಳ ಲಭ್ಯತೆ ಕಡಿಮೆಯಾಗಿದೆ.

ಪ್ರಧಾನಿಯವರ ಬೇಜವಾಬ್ದಾರಿಯುತ ವಿಧಾನ

ಮುಂಬರುವ ಖಾರಿಫ್ ಋತುವಿಗೆ ರಸಗೊಬ್ಬರಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಶೂನ್ಯ ಬಜೆಟ್ ನೈಸರ್ಗಿಕ ಕೃಷಿಗೆ (ZBNF) ಬದಲಾಯಿಸಲು ರೈತರಿಗೆ ಕರೆ ನೀಡುವುದು ಪ್ರಧಾನಮಂತ್ರಿಯವರ ಸಂಪೂರ್ಣ ಬೇಜವಾಬ್ದಾರಿಯುತ ವಿಧಾನವಾಗಿದೆ.

ಇದು ಖಂಡಿತವಾಗಿಯೂ ವಿಪತ್ತಿಗೆ ಒಂದು ಮಾರ್ಗವಾಗಿದೆ. ಇದು ಮಣ್ಣಿನಲ್ಲಿನ ಪೋಷಕಾಂಶಗಳ ಅಸಮತೋಲನವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಮಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಇದು ಇಳುವರಿಯನ್ನು ಸಹ ಕಡಿಮೆ ಮಾಡುತ್ತದೆ.

ಸಿಕ್ಕಿಂ ಮತ್ತು ಶ್ರೀಲಂಕಾದ ಹಿಂದಿನ ಅನುಭವಗಳಿಂದ ಪಾಠ ಕಲಿಯಬೇಕು

ಭಾರತದ 100 ಪ್ರತಿಶತ ಸಾವಯವ ರಾಜ್ಯವೆಂದು ಹೇಳಲಾಗುವ ಸಿಕ್ಕಿಂ ಮತ್ತು ಶ್ರೀಲಂಕಾದ ಹಿಂದಿನ ಅನುಭವಗಳು ಮತ್ತು ವರದಿಗಳು ಪ್ರಮುಖ ಪಾಠಗಳನ್ನು ನೀಡುತ್ತವೆ. ರಾಸಾಯನಿಕ ಗೊಬ್ಬರಗಳಿಗೆ ಪರ್ಯಾಯವಾಗಿ ಸಾವಯವ ಗೊಬ್ಬರಗಳನ್ನು ಉತ್ಪಾದಿಸುವ ಸಾಮರ್ಥ್ಯ ಅಥವಾ ಸಾಕಷ್ಟು ಜೀವರಾಶಿ ಸಂಪನ್ಮೂಲಗಳಿಲ್ಲದೆ ಶ್ರೀಲಂಕಾ ಸಾವಯವ ಕೃಷಿಗೆ ಸ್ಥಳಾಂತರಗೊಂಡಿತು. ಬೆಳೆ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳ ತೀವ್ರ ಕೊರತೆಯ ವರದಿಯಾಗಿದೆ. ಉತ್ಪಾದಕತೆಯಲ್ಲಿ ಭಾರಿ ಕುಸಿತ ಕಂಡುಬಂದಿತು, ಇದು ದೊಡ್ಡ ವಿಪತ್ತಾಗಿ ಮಾರ್ಪಟ್ಟಿತು. ಕೃಷಿ ಕ್ಷೇತ್ರದ ಮೇಲಿನ ಈ ಪರಿಣಾಮವು ರೈತರನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ ಮತ್ತು ಆಹಾರ ಆಮದುಗಳು, ಆಹಾರ ಪದಾರ್ಥಗಳ ಬೆಲೆಗಳು ಗಗನಕ್ಕೇರಿದವು. ಇದು ಕ್ರಮೇಣ ಆರ್ಥಿಕ ಕುಸಿತ ಮತ್ತು ರಾಜಕೀಯ ಕ್ರಾಂತಿಗೆ ಕಾರಣವಾಯಿತು.

ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆಯುತ್ತಿರುವ, ದುರ್ಬಲ ಮಾನ್ಸೂನ್ ಮುನ್ಸೂಚನೆ ಇದೆ. ಜೊತೆಗೆ ಇಂಧನ ಕೊರತೆ ತೀವ್ರವಾಗಿದ್ದು, ನೀರಾವರಿಯನ್ನು ಸೀಮಿತಗೊಳಿಸುತ್ತಿರುವ ಸಮಯದಲ್ಲಿ ಪ್ರಧಾನಿಯವರ ಕಠಿಣ ಕ್ರಮಗಳ ಕರೆ ಬಂದಿದೆ. ಈ ಕಠಿಣ ಕ್ರಮಗಳು ದೊಡ್ಡ ಕಾರ್ಪೊರೇಟ್‌ ಗಳ ಮೇಲೆ ಪರಿಣಾಮ ಬೀರುವುದಿಲ್ಲ; ಅವು ಕಾರ್ಮಿಕ ವರ್ಗ ಮತ್ತು ರೈತರನ್ನು ಮಾತ್ರ ನೋಯಿಸುತ್ತವೆ. ಈ ನೀತಿಗಳ ವಿರುದ್ಧ ರೈತರು ಮತ್ತು ಕಾರ್ಮಿಕರಿಂದ ಕೇಂದ್ರ ಸರ್ಕಾರವು ಬಲವಾದ ಪ್ರತಿಭಟನೆಗಳನ್ನು ಎದುರಿಸಲಿದೆ.

ಇದನ್ನೂ ನೋಡಿ: ಸುಳ್ಳಿನ ಭರವಸೆಗಳು, ಜನರ ಮೇಲಾಗುತ್ತಿರುವ ಬೆಲೆ ಏರಿಕೆಯ ಹೊರೆ | ವಿಶ್ಲೇಷಣೆ – ಟಿ.ಆರ್.ಭಟ್ Janashakthi Media

Donate Janashakthi Media

Leave a Reply

Your email address will not be published. Required fields are marked *