ಪ್ರೊ.ಪ್ರಭಾತ್ ಪಟ್ನಾಯಕ್
ಭಾರತದಂತಹ ದೇಶಗಳು ತಮ್ಮ “ಅಂತರ್ಮುಖಿ” ಆಮದು-ಬದಲಿ ಅಭಿವೃದ್ಧಿ ಕಾರ್ಯತಂತ್ರವನ್ನು ತೊರೆದು, ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರಕ್ಕೆ ತಮ್ಮನ್ನು ತಾವು ತೆರೆದುಕೊಂಡು, ಬೆಲೆ ನಿಗದಿ ಅಂಶದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಗಡಿಯಾಚೆಗೆ ಸರಕು-ಸಾಮಗ್ರಿಗಳು ಹಾಗೂ ಬಂಡವಾಳವು ಮುಕ್ತವಾಗಿ ಚಲಿಸುವುದಕ್ಕೆ ಅವಕಾಶ ನೀಡಬೇಕು ಎಂಬ ಶ್ರೀಮಂತ ದೇಶಗಳ ಕೂಟವಾಗಿರುವ ಒ.ಇ.ಸಿ.ಡಿ.ಯ ಪಥ್ಯವು ಕೇವಲ ಒಂದು ಕೈಚಳಕವೇ ಸರಿ. ಪೂರ್ವ ಏಷ್ಯಾದ ದೇಶಗಳ ಮಾರುಕಟ್ಟೆಗಳು ಹೊಂದಿದ ರಕ್ಷಣೆಯನ್ನು ಮತ್ತು ಅದನ್ನು ಒದಗಿಸಿದ ಪ್ರಭುತ್ವದ ಪಾತ್ರವನ್ನು ನಿರ್ಲಕ್ಷಿಸಿರುವುದರಿಂದ, ಈ ವಾದವು ಪೂರ್ವ ಏಷ್ಯಾದ ದೇಶಗಳ ಅನುಭವದ ತಪ್ಪು ವ್ಯಾಖ್ಯಾನ ಮಾತ್ರವಲ್ಲ, ಒಂದು ದೇಶದ ರಫ್ತಿಗೆ ಅನಿಯಮಿತ ವಿಶ್ವ ಬೇಡಿಕೆ ಇದೆ ಎಂಬ ಊಹನೆಯನ್ನೂ ಆಧರಿಸಿರುವುದರಿಂದ ತರ್ಕಸಂಗತವೂ ಅಲ್ಲ. ನವ-ಉದಾರವಾದ ಕಟ್ಟಕಡೆಯದಾಗಿ ಒಇಸಿಡಿಯ ಈ ವಾದವನ್ನೇ ಆಧರಿಸಿರುವುದರಿಂದ, ಅದೂ ಸಹ ದಾರಿತಪ್ಪಿಸುವಂಥದ್ದಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಸತತವಾಗಿ ಯುಎಸ್ ಆಡಳಿತಗಳ, ಈಗ ನಿರ್ದಿಷ್ಟವಾಗಿ ಟ್ರಂಪ್ ವರ್ತನೆಗಳು ಇದನ್ನೇ ತೋರಿಸುತ್ತಿವೆ.
ಅನು:ಕೆ.ಎಂ.ನಾಗರಾಜ್
ವಸಾಹತುಶಾಹಿಯನ್ನು ಕೊನೆಗೊಳಿಸಿದ ನಂತರ, ಹೊಸದಾಗಿ ವಿಮೋಚನೆಯಾದ ಮೂರನೇ ಜಗತ್ತಿನ ದೇಶಗಳು ಅಂತರರಾಷ್ಟ್ರೀಯ ಶ್ರಮ ವಿಭಜನೆಯ ವಸಾಹತುಶಾಹಿ ಮಾದರಿಯಿಂದ ಪ್ರಜ್ಞಾಪೂರ್ವಕವಾಗಿ ಹೊರಬಂದು ತಮ್ಮದೇ ಆದ ಅಭಿವೃದ್ಧಿ ಪಥವನ್ನು ಅನುಸರಿಸಲು ಪ್ರಯತ್ನಿಸಿದವು. ಈ ನಿಟ್ಟಿನಲ್ಲಿ ಆಮದು-ಬದಲಿ ಕೈಗಾರಿಕೀಕರಣದ ನೀತಿಯನ್ನು ಅವು ಅನುಸರಿಸಿದವು. ಈ ಕ್ರಮವನ್ನು ಹಿಂದಿನ ವಸಾಹತುಶಾಹಿ ಯಜಮಾನರು ಇಷ್ಟಪಡದಿದ್ದರೂ ಅದರ ಬಗ್ಗೆ ಅವರು ಏನೂ ಮಾಡುವಂತಿರಲಿಲ್ಲ. ಮುಂದುವರೆದ ದೇಶಗಳಿಂದ ಪೂರ್ವ ಏಷ್ಯಾದ ದೇಶಗಳಿಗೆ ಬಂಡವಾಳಶಾಹಿ ಕೈಗಾರಿಕೀಕರಣ ಸ್ವಲ್ಪ ಮಟ್ಟಿಗೆ ಹರಡಿದಾಗ ಅವುಗಳ ಮೇಲೆ ದಾಳಿ ಮಾಡುವ ಅವಕಾಶ ಅವರಿಗೆ ದೊರಕಿತು. ಅದಿರಲಿ. ಆರಂಭದಲ್ಲಿ ವಿಯೆಟ್ನಾಂ ಯುದ್ಧದ ಪರಿಣಾಮದ ಕಾರಣದಿಂದ, ನಂತರ ಈ ದೇಶಗಳಲ್ಲಿದ್ದ ಕಡಿಮೆ ಕೂಲಿಯ ಲಾಭ ಪಡೆಯುವ ಉದ್ದೇಶದಿಂದ ಮುಂದುವರೆದ ದೇಶಗಳು ತಮ್ಮ ಉತ್ಪಾದನಾ ಚಟುವಟಿಕೆಗಳನ್ನು ಪ್ರಜ್ಞಾಪೂರ್ವಕವಾಗಿ ಈ ದೇಶಗಳಿಗೆ ಸ್ಥಳಾಂತರಿಸಿದ ಕಾರಣದಿಂದ ಈ ದೇಶಗಳ ರಫ್ತುಗಳು ವೃದ್ಧಿಸಿದವು. ಈ ದೇಶಗಳ ಪೈಕಿ ಕೆಲವು ಉನ್ನತ ದರದ ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದವು. ಈ ದೇಶಗಳು ಸಣ್ಣ ಸಣ್ಣ ದೇಶಗಳೇ ಆಗಿದ್ದರಿಂದ ಅಲ್ಲಿದ್ದ ಶ್ರಮ ಮೀಸಲುಗಳ (ನಿರುದ್ಯೋಗಿಗಳ) ಒಂದು ದೊಡ್ಡ ಭಾಗವನ್ನು ಹೀರಿಕೊಂಡವು.
ಆಮದು-ಬದಲಿ ನೀತಿಯನ್ನು ಒಂದು ಅವಿಭಾಜ್ಯ ಅಂಗವಾಗಿ ಹೊಂದಿರುವ ದೇಶಗಳು ತಮ್ಮ “ಅಂತರ್ಮುಖಿ” ಅಭಿವೃದ್ಧಿ ಕಾರ್ಯತಂತ್ರವನ್ನು ತೊರೆದು, ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರಕ್ಕೆ ತಮ್ಮನ್ನು ತಾವು ತೆರೆದುಕೊಂಡು, ಬೆಲೆ ನಿಗದಿ ಅಂಶದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಗಡಿಯಾಚೆಗೆ ಸರಕು-ಸಾಮಗ್ರಿಗಳು ಹಾಗೂ ಬಂಡವಾಳವು ಮುಕ್ತವಾಗಿ ಚಲಿಸುವುದಕ್ಕೆ ಅವಕಾಶ ನೀಡಿದರೆ, ಪೂರ್ವ ಏಷ್ಯಾದ ದೇಶಗಳು ಸಾಧಿಸಿದ ಯಶಸ್ಸನ್ನು ಮೂರನೆಯ ಜಗತ್ತಿನ ಎಲ್ಲ ದೇಶಗಳೂ ಸಾಧಿಸಬಹುದು ಎಂಬ ದಾವೆಯನ್ನು ಮುಂದಿಡಲಾಯಿತು. ಮೂರನೆಯ ಜಗತ್ತಿನ ದೇಶಗಳ ಈ ಆಮದು-ಬದಲಿ ಕೈಗಾರಿಕೀಕರಣದ ಮೇಲೆ ಮುಂದುವರೆದ ದೇಶಗಳು ಮಾಡಿದ ದಾಳಿ ಈ ರೂಪವನ್ನು ಪಡೆದುಕೊಂಡಿತು. ಮುಂದೆ ಬರಲಿದ್ದ ನವ-ಉದಾರವಾದಿ ಕಾರ್ಯತಂತ್ರಕ್ಕೆ ಇದೊಂದು ಸೈದ್ಧಾಂತಿಕ ಸಮರ್ಥನೆಯಾಗಿತ್ತು. ಮೊದಲು ಇದು 1970ರಲ್ಲಿ ಪ್ರಕಟವಾದ ಏಳು ಸಂಪುಟಗಳ ಅಧ್ಯಯನದಲ್ಲಿ ರೂಪ ಪಡೆದಿತ್ತು. ಈ ಅಧ್ಯಯನವನ್ನು ಮೂಲತಃ ಒ.ಇ.ಸಿ.ಡಿಗಾಗಿ (OECD- ಇದು ಸುಮಾರು 38 ಶ್ರೀಮಂತ ದೇಶಗಳ ಒಂದು ಕ್ಲಬ್) ಸಿದ್ಧಪಡಿಸಲಾಗಿತ್ತು. ಐ ಎಂ ಡಿ ಲಿಟಲ್, ಟಿಬೋರ್ ಸಿಟೋವ್ಸ್ಕಿ ಮತ್ತು ಎಂ ಎಫ್ಜಿ ಸ್ಕಾಟ್ ಇವರುಗಳು ಬರೆದ ಒಂದು ಸಂಪುಟವು ಈ ಅಧ್ಯಯನದ ಒಟ್ಟಾರೆ ತೀರ್ಮಾನಗಳನ್ನು ಒಳಗೊಂಡಿದೆ ಮತ್ತು ಆರು ಇತರ ಸಂಪುಟಗಳು ನಿರ್ದಿಷ್ಟ ದೇಶಗಳ ನಿರ್ದಿಷ್ಟ ಅಧ್ಯಯನಗಳಾಗಿವೆ.
ʼಅಂತರ್ಮುಖಿʼ ಕಾರ್ಯತಂತ್ರದ ಟೀಕೆ
ಈ ಅಧ್ಯಯನಕ್ಕೊಳಗಾದ ದೇಶಗಳಲ್ಲಿ ಭಾರತವೂ ಒಂದು. ಭಾರತದಲ್ಲಿ ಬಂಡವಾಳ ಸರಕುಗಳನ್ನು ನಿರ್ಮಿಸುವ ಭಾರೀ ಕೈಗಾರಿಕೆಗಳ ನೆಹರೂ-ಮಹಾಲನೋಬಿಸ್ ಕಾರ್ಯತಂತ್ರವು ಅವರ ದಾಳಿಯ ಗುರಿಯಾಗಿದ್ದುದು ನಿರೀಕ್ಷಿತವೇ. ನೆಹರೂ-ಮಹಾಲನೋಬಿಸ್ ಕಾರ್ಯತಂತ್ರವನ್ನು ಎಡಪಕ್ಷಗಳೂ ಸಹ ಟೀಕಿಸಿದ್ದವು. ಆದರೆ ಆ ಟೀಕೆಯು ಒಂದು ಸಂಪೂರ್ಣ ವಿಭಿನ್ನ ನೆಲೆಯನ್ನು ಆಧರಿಸಿತ್ತು. ಅಂದರೆ, ಭೂಸುಧಾರಣೆಗಳನ್ನು ಕೈಗೊಳ್ಳದೆ, ಕೃಷಿ ವಲಯದ, ವಿಶೇಷವಾಗಿ ಆಹಾರ ಧಾನ್ಯ ವಲಯದ ಬೆಳವಣಿಗೆಯ ದರವನ್ನು ಕೆಳ ಮಟ್ಟದಲ್ಲಿ ಇರಿಸಿದ್ದುದು ಎರಡನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಅರ್ಥವ್ಯವಸ್ಥೆಯನ್ನು ಆವರಿಸಿದ್ದ ಹಣದುಬ್ಬರಕ್ಕೆ ಕೊಡುಗೆ ನೀಡಿತು ಎಂಬ ನೆಲೆಯಲ್ಲಿ ಎಡಪಕ್ಷಗಳು ಟೀಕಿಸಿದ್ದವು. ಆದರೆ ಒಇಸಿಡಿಯ ಟೀಕೆಯು ಸಂಪೂರ್ಣವಾಗಿ ಭಿನ್ನವಾಗಿತ್ತು: ಭೂಸುಧಾರಣೆಗಳನ್ನು ಅದು ಒತ್ತಾಯಿಸಲಿಲ್ಲ, ಆ ಬಗ್ಗೆ ಮೌನವಾಗಿತ್ತು; ಅದರ ಟೀಕೆಯು ವಸಾಹತುಶಾಹಿ ಕಾಲದಿಂದ ಪಾರಂಪರ್ಯವಾಗಿ ಪಡೆದ ಅಂತರರಾಷ್ಟ್ರೀಯ ಶ್ರಮ ವಿಭಜನೆಯ ಮಾದರಿಯಿಂದ ಪ್ರಜ್ಞಾಪೂರ್ವಕವಾಗಿ ಹೊರಬರುವ ಪ್ರಯತ್ನದ ವಿರುದ್ಧ ನಿರ್ದೇಶಿತವಾಗಿತ್ತು.
ಒಇಸಿಡಿಯ ಈ ವಾದ ಸಾಮ್ರಾಜ್ಯಶಾಹಿ ಅಪೇಕ್ಷೆಗಳಿಗೆ ಅನುಗುಣವಾಗಿದ್ದವು ಎಂದು ಎಡಪಕ್ಷಗಳು ಅದನ್ನು ಉಗ್ರವಾಗಿ ಟೀಕಿಸಿದವು. ಈ ಟೀಕೆಯು ನಿರೀಕ್ಷಿತವೇ. ಎಡ ಪಂಥದ ವಾದವು ಈ ಹೀಗಿತ್ತು : ಮೂರನೇ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ವಾಡಿಕೆಯಲ್ಲಿದ್ದ ಉತ್ಪಾದನೆಯ ಮತ್ತು ರಫ್ತುಗಳ ಮಾದರಿಯಲ್ಲಿ ಪ್ರಾಥಮಿಕ ಸರಕುಗಳು ಮತ್ತು ಕೃಷಿ ಸರಕುಗಳು ಪ್ರಧಾನವಾಗಿದ್ದವು. ಅವುಗಳಿಗೆ ವಿಶ್ವ ಬೇಡಿಕೆ ವೇಗವಾಗಿ ಬೆಳೆಯಲಿಲ್ಲ. ಆದ್ದರಿಂದ ಈ ದೇಶಗಳ ಅರ್ಥವ್ಯವಸ್ಥೆಯ ಬೆಳವಣಿಗೆಯ ದರವನ್ನು ಎತ್ತರಿಸಲು ಅವುಗಳ ಉತ್ಪಾದನಾ ಮಾದರಿಯನ್ನು ಒಂದು ರಕ್ಷಣಾ ಕವಚವನ್ನು ಹೊಂದಿರುವ ರೀತಿಯಲ್ಲಿ ಬದಲಾಯಿಸಲು ಪ್ರಭುತ್ವದ ಪ್ರಜ್ಞಾಪೂರ್ವಕ ಮಧ್ಯಪ್ರವೇಶವನ್ನು ಅವಲಂಬಿಸಬೇಕಾಯಿತು. ಈ ಮಧ್ಯಪ್ರವೇಶವನ್ನು ಬುದ್ಧಿವಂತಿಕೆಯಿಂದ ಮತ್ತು ವಿವೇಚನೆಯಿಂದ ಮಾಡುವುದು ಮುಖ್ಯವಾಗಿತ್ತು. ಏಕೆಂದರೆ, ಅದಾಗಲೇ ಅಪಾಯದಲ್ಲಿದ್ದ ದುಡಿಯುವ ಜನರ ಜೀವನ ಪರಿಸ್ಥಿತಿಗಳನ್ನು ಇನ್ನಷ್ಟು ಹದಗೆಡಿಸುವ ಹಣದುಬ್ಬರದ ಒತ್ತಡಗಳು ಉದ್ಭವಿಸದಂತೆ ವಿವಿಧ ವಲಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾಗಿತ್ತು, ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಭೂ ಸುಧಾರಣೆಗಳು ಅತ್ಯಗತ್ಯವಾಗಿದ್ದವು ಎಂಬುದು ಎಡಪಂಥೀಯರ ವಾದವಾಗಿತ್ತು.
ಮೂರನೇ ಜಗತ್ತಿನ ರಫ್ತುಗಳು ಬೇಡಿಕೆಯ ಬದಿಯಿಂದ ನಿರ್ಬಂಧಿಸಲ್ಪಟ್ಟಿವೆ ಎನ್ನುವ ಎಡ ಪಂಥದ ದಾವೆಯನ್ನು ಪ್ರಶ್ನಿಸುವುದು ಒಇಸಿಡಿಯ ವಾದದ ಪ್ರಧಾನ ಅಂಶವಾಗಿತ್ತು. ಬದಲಾಗಿ, ಮೂರನೇ ಜಗತ್ತಿನ ಯಾವುದೇ ದೇಶವು ವಿಶ್ವ ಮಾರುಕಟ್ಟೆಯಲ್ಲಿ ಯಾವುದೇ ಅವಧಿಯಲ್ಲಿ ಅದು ಇಷ್ಟಪಡುವಷ್ಟು ಪ್ರಮಾಣದ ಸರಕುಗಳನ್ನು ಮಾರಾಟ ಮಾಡಬಹುದು ಎಂದು ಅದು ಪ್ರತಿಪಾದಿಸಿತು. ಕೈಗಾರಿಕೀಕರಣದ ಅಧ್ಯಯನದ ಒಇಸಿಡಿಯ ಸಂಪುಟಗಳ ಜೊತೆಗೆ, ಒಇಸಿಡಿಯ ಅಧ್ಯಯನ ಗ್ರಂಥಕರ್ತರು ಯೋಜನೆಗಳನ್ನು ಆಯ್ಕೆ ಮಾಡಲು ಒಂದು ಮಾನದಂಡವನ್ನೂ ಸಹ ಹೊರತಂದರು: ಎರಡು ಯೋಜನೆಗಳಲ್ಲಿ ಒಂದನ್ನು ಸರ್ಕಾರ ಆಯ್ಕೆ ಮಾಡಬೇಕಾದರೆ, ಅದು ಯಾವ ಯೋಜನೆಯನ್ನು ಆಯ್ಕೆ ಮಾಡಬೇಕು ಎಂಬುದನ್ನು ಯಾವ ಆಧಾರದ ಮೇಲೆ ನಿರ್ಧರಿಸುತ್ತದೆ? ಅವರು ಸೂಚಿಸಿದ ಮಾನದಂಡವೆಂದರೆ, ಲಾಗುವಾಡು ವಸ್ತುಗಳ ಮತ್ತು ಉತ್ಪತ್ತಿಯ ಮೌಲ್ಯವನ್ನು ಜಾಗತಿಕ ಬೆಲೆಗಳಲ್ಲಿ ಮಾಪನ ಮಾಡಿದಾಗ ಹೆಚ್ಚಿನ ಲಾಭದ ದರವನ್ನು ಯಾವ ಯೋಜನೆ ನೀಡುತ್ತದೆಯೋ ಅದನ್ನು ಆಯ್ಕೆ ಮಾಡುವುದು. ನಿಜ, ಈ ನಿಯಮಕ್ಕೆ ಕೆಲವು ಹೊಂದಾಣಿಕೆಗಳನ್ನು ಮಾಡಲಾಗಿತ್ತು. ಆದರೆ ಅದು ಕೆಲವು ಅಸಾಧಾರಣ ಪ್ರಕರಣಗಳಲ್ಲಿ ಮಾತ್ರ. ಲಾಗುವಾಡು ವಸ್ತುಗಳ ಮತ್ತು ಉತ್ಪತ್ತಿಯ ಮೌಲ್ಯವನ್ನು ಜಾಗತಿಕ ಬೆಲೆಗಳಲ್ಲಿ ಮಾಪನ ಮಾಡುವ ಸಾಮಾನ್ಯ ನಿಯಮವನ್ನು ಅಳವಡಿಸಿಕೊಂಡದ್ದು ವಿಶ್ವ ಮಾರುಕಟ್ಟೆಯಲ್ಲಿ ರಫ್ತುಗಳ ಮೇಲೆ ಯಾವುದೇ ಬೇಡಿಕೆಯ ನಿರ್ಬಂಧಗಳಿಲ್ಲ ಎಂಬ ಊಹನೆಯ ಆಧಾರದ ಮೇಲೆ.
ಇದನ್ನೂ ಓದಿ : ಮೋದಿ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳನ್ನೂ ಬಳಕೆ? | ವಿದ್ಯಾರ್ಥಿ, ಶಿಕ್ಷಕರಿಗೆ ಕಾರ್ಯಕ್ರಮದ ಸೂಚನೆ
ಸಾಕಷ್ಟು ವಿಮರ್ಶೆಗೊಳಗಾಗದ ಅಸಂಬದ್ಧ ಊಹನೆ
ರಫ್ತುಗಳ ಮೇಲೆ ಯಾವುದೇ ಬೇಡಿಕೆಯ ನಿರ್ಬಂಧಗಳಿಲ್ಲ ಎಂಬುದು ಒಂದು ಅಸಂಬದ್ಧ ಊಹನೆಯಾಗಿದ್ದರೂ ಸಹ ಅದರ ಬಗ್ಗೆ ಸಾಕಷ್ಟು ವಿಮರ್ಶೆಗಳು ಬಂದಿಲ್ಲ. ಒಇಸಿಡಿಯ ವಾದವನ್ನು ಪೂರ್ವ ಏಷ್ಯಾದ ದೇಶಗಳಲ್ಲಿಯೂ ಸಹ ಕೈಗಾರಿಕಾ ಅಭಿವೃದ್ಧಿಯಲ್ಲಿ ಪ್ರಭುತ್ವವು ಪ್ರಮುಖ ಪಾತ್ರ ವಹಿಸಿದೆ ಎಂಬ ನೆಲೆಯಲ್ಲಿ ಮತ್ತು ಅಭಿವೃದ್ಧಿಯ ಪ್ರಶ್ನೆಯು “ಮಾರುಕಟ್ಟೆ”ಯ ಮರ್ಜಿಗೆ ಬಿಡುವ ವಿಷಯವಲ್ಲ ಎಂಬ ನೆಲೆಯಲ್ಲಿ ಟೀಕೆ ಮಾಡಿರುವುದು ಸರಿಯಾಗಿಯೇ ಇದೆ. ಈ ದೇಶಗಳ ಮಾರುಕಟ್ಟೆಯನ್ನು ರಕ್ಷಿಸಲಾಗಿತ್ತು ಮತ್ತು ಈ ಸಂರಕ್ಷಿತ ಮಾರುಕಟ್ಟೆಯನ್ನು ಬಳಸಿಕೊಂಡು ಸರಕುಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಅಗ್ಗವಾಗಿ ಮಾರಾಟ ಮಾಡುವ ಮೂಲಕ ಭಾರೀ ಲಾಭ ಗಳಿಸಲಾಯಿತು ಎಂಬುದು ಪೂರ್ವ ಏಷ್ಯಾದ ಯಶಸ್ಸಿನ ಹಿಂದಿನ ಒಂದು ಪ್ರಮುಖ ಅಂಶ. ಆದರೆ ಬೇಡಿಕೆಯ ಬದಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಒಇಸಿಡಿಯ ವಾದವನ್ನು ಸಾಕಷ್ಟು ಬಯಲುಮಾಡಲಾಗಿಲ್ಲ.
ಬೇಡಿಕೆಯ ಬದಿಯ ನಿರ್ಲಕ್ಷ್ಯವನ್ನು “ಸಣ್ಣ ದೇಶ-ಊಹನೆ”ಯ ಮೂಲಕ ಸಮರ್ಥಿಸಲಾಗಿದೆ, ಅಂದರೆ, ಮೂರನೇ ಜಗತ್ತಿನ ಪ್ರತಿ ದೇಶವೂ ತುಂಬಾ ಸಣ್ಣದೇ ಇದ್ದು, ಅದು ವಿಶ್ವ ಮಾರುಕಟ್ಟೆಯಲ್ಲಿ ತನಗೆ ಸಾಧ್ಯವಾದಷ್ಟನ್ನು ಮಾರಾಟ ಮಾಡಬಹುದು ಎಂದು ಊಹಿಸಿಕೊಳ್ಳಬಹುದು ಎನ್ನುತ್ತ ಸಮರ್ಥಿಸಿಕೊಳ್ಳಲಾಗಿದೆ. ಆದರೆ, ದೇಶ ಸಣ್ಣದು ಎಂಬ ಊಹನೆಯ ಸಮಸ್ಯೆಯೆಂದರೆ, ಅದನ್ನು ಒಂದು ದೇಶಕ್ಕೆ ಅನ್ವಯಿಸಬಹುದಾದರೂ, ಬಹಳಷ್ಟು ದೇಶಗಳಿಗೆ ಏಕಕಾಲದಲ್ಲಿಯೇ ಅದು ಅನ್ವಯಿಸುತ್ತದೆ ಎಂದು ಭಾವಿಸಲಾಗದು: ಪ್ರತಿಯೊಂದೂ ದೇಶವೂ ಸಣ್ಣದೇ ಎಂದು ಊಹಿಸಿಕೊಂಡು ಯಾವುದೇ ಸರ್ವಸಾಮಾನ್ಯ ಪಥ್ಯವನ್ನು ಬಹು ಸಂಖ್ಯೆಯ ದೇಶಗಳಿಗೆ ಅನ್ವಯಿಸಲಾಗದು. ಹಾಗೆ ಮಾಡಿದಾಗ ಒಂದು ತಾರ್ಕಿಕ ವಿರೋಧಾಭಾಸ ಸೃಷ್ಟಿಯಾಗುತ್ತದೆ.
ಒಇಸಿಡಿಯ ವಾದವನ್ನು ಪೂರ್ವ ಏಷ್ಯಾದ ದೇಶಗಳಲ್ಲಿಯೂ ಸಹ ಕೈಗಾರಿಕಾ ಅಭಿವೃದ್ಧಿಯಲ್ಲಿ ಪ್ರಭುತ್ವವು ಪ್ರಮುಖ ಪಾತ್ರ ವಹಿಸಿದೆ ಎಂಬ ನೆಲೆಯಲ್ಲಿ ಮತ್ತು ಅಭಿವೃದ್ಧಿಯ ಪ್ರಶ್ನೆಯು “ಮಾರುಕಟ್ಟೆ”ಯ ಮರ್ಜಿಗೆ ಬಿಡುವ ವಿಷಯವಲ್ಲ ಎಂಬ ನೆಲೆಯಲ್ಲಿ ಟೀಕೆ ಮಾಡಿರುವುದು ಸರಿಯಾಗಿಯೇ ಇದೆ. ಪೂರ್ವ ಏಷ್ಯಾದ ದೇಶಗಳ ಮಾರುಕಟ್ಟೆಯನ್ನು ರಕ್ಷಿಸಲಾಗಿತ್ತು ಮತ್ತು ಈ ಸಂರಕ್ಷಿತ ಮಾರುಕಟ್ಟೆಯನ್ನು ಬಳಸಿಕೊಂಡು ಸರಕುಗಳನ್ನು ವಿಶ್ವ ಮಾರುಕಟ್ಟೆಯಲ್ಲಿ ಅಗ್ಗವಾಗಿ ಮಾರಾಟ ಮಾಡುವ ಮೂಲಕ ಭಾರೀ ಲಾಭ ಗಳಿಸಲಾಯಿತು ಎಂಬುದು ಪೂರ್ವ ಏಷ್ಯಾದ ಯಶಸ್ಸಿನ ಹಿಂದಿನ ಒಂದು ಪ್ರಮುಖ ಅಂಶ.
ಈ ಪರಿಸ್ಥಿತಿಯು “ಮಿತವ್ಯಯ”ದ ವಿರೋಧಾಭಾಸ”ವನ್ನು ಹೋಲುತ್ತದೆ. ತನ್ನ “ಉಳಿತಾಯ”ವನ್ನು ಅಧಿಕಗೊಳಿಸಲು ಒಬ್ಬನು ಬಳಕೆಯಿಂದ ದೂರವಿರುವುದು ಶ್ರೀಮಂತನಾಗುವ ಒಂದು ಮಾರ್ಗ ಎಂದು ಭಾವಿಸಲಾಗಿದೆ. ಒಬ್ಬ ವ್ಯಕ್ತಿಯು ಉಳಿತಾಯ ಮಾಡುವುದರಿಂದ ಅದು ಆ ವ್ಯಕ್ತಿಯನ್ನು ನಿಜಕ್ಕೂ ಶ್ರೀಮಂತನನ್ನಾಗಿ ಮಾಡಬಹುದು. ಆದರೆ, ಎಲ್ಲರೂ ಏಕಕಾಲದಲ್ಲಿ ಉಳಿತಾಯ ಮಾಡುವುದರಿಂದ ಒಟ್ಟು ಬೇಡಿಕೆಯ ಮಟ್ಟದಲ್ಲಿ ಇಳಿಕೆ ಉಂಟಾಗುತ್ತದೆ. ಬೇಢಿಕೆಯ ಈ ಇಳಿಕೆಗೆ ಬೇರೆ ಯಾವ ಅಂಶಗಳೂ ಇಲ್ಲದಿದ್ದರೆ, ಇಂತಹ ಇಳಿಕೆಯ ಕಾರಣದಿಂದ ಎಲ್ಲರ ವರಮಾನವನ್ನು ಇಳಿಸುವ ಮತ್ತು ಆ ಮೂಲಕ ಉದ್ಯೋಗವನ್ನು ಇಳಿಸುವ ಆರ್ಥಿಕ ಹಿಂಜರಿತ ಉಂಟಾಗುತ್ತದೆ; ಸಮಾಜದ ಒಟ್ಟು ಸಂಪತ್ತಿನ ಮಟ್ಟವು ಬದಲಾಗದೆ ಉಳಿಯುತ್ತದೆ. ಈ ರೀತಿಯಲ್ಲಿ ಒಬ್ಬ ವ್ಯಕ್ತಿಗೆ ಯಾವುದು ಸೂಕ್ತವಾಗಿರುತ್ತದೆಯೋ ಅದು ಎಲ್ಲ ವ್ಯಕ್ತಿಗಳಿಗೆ ಒಟ್ಟಾಗಿ ಪ್ರತಿಕೂಲವಾಗಿರುವ ವಿರೋಧಾಭಾಸ ಕಂಡುಬರುತ್ತದೆ. ಅದೇ ರೀತಿಯಲ್ಲಿ, ಒಂದು ದೇಶಕ್ಕೆ ಯಾವುದು ಸೂಕ್ತವಾಗುತ್ತದೆಯೋ ಅದೇ ಸಂಗತಿ ಎಲ್ಲ ದೇಶಗಳಿಗೂ ಸೂಕ್ತವಾಗುತ್ತದೆ ಎಂಬ ಒಇಸಿಡಿಯ ವಾದದ ಊಹನೆಯನ್ನು ನಂಬುವುದು ಒಂದು ದೊಡ್ಡ ತಪ್ಪಾಗುತ್ತದೆ.
ಮೂರನೇ ಜಗತ್ತಿನ ದೇಶಗಳು ಅವು ಬಯಸಿದಷ್ಟನ್ನು ರಫ್ತು ಮಾಡಬಹುದು ಎನ್ನುವ ಈ ಊಹನೆಯನ್ನು ಬೆಂಬಲಿಸುವ ಅಕ್ರಮವಾದ ಎರಡನೆಯ ವಾದವನ್ನು ಮುಂದಿಡಲಾಯಿತು. ಈ ವಾದವು “ಅಂತರ್ಮುಖಿ” ಎಂದು ಕರೆಯಲ್ಪಡುವ ಅಭಿವೃದ್ಧಿ ಕಾರ್ಯತಂತ್ರವನ್ನು ಅನುಸರಿಸುವ ಭಾರತದಂತಹ ದೇಶಗಳಿಗೆ ಆ ಮೊದಲು ವಿಶ್ವ ಮಾರುಕಟ್ಟೆಯಲ್ಲಿ, ಅದರಲ್ಲೂ ರಫ್ತು ಸರಕುಗಳಲ್ಲಿ ಎದ್ದುಕಾಣುತ್ತಿದ್ದ ಅವುಗಳ ಪಾಲು ಇಳಿಯುತ್ತಿದೆ ಎಂದು ಉಲ್ಲೇಖಿಸಲಾಯಿತು. ಈ ಮೂಲಕ, ಅವರ ರಫ್ತುಗಳು ಬೇಡಿಕೆಯ ಬದಿಯಿಂದಲ್ಲ, ಪೂರೈಕೆಯ ಬದಿಯಿಂದ ನಿರ್ಬಂಧಿಸಲ್ಪಟ್ಟಿವೆ ಎಂದು ಹೇಳಲಾಯಿತು.
ದಾರಿ ತಪ್ಪಿಸುವ ವಾದ
ಇದೂ ಸಹ ದಾರಿತಪ್ಪಿಸುವ ವಾದವೇ ಆಗಿತ್ತು. ಏಕೆ ಇದು ದಾರಿತಪ್ಪಿಸುವ ವಾದವಾಗುತ್ತದೆ ಎಂಬುದನ್ನು ಒಂದು ಉದಾಹರಣೆಯ ಮೂಲಕ ಸ್ಪಷ್ಟಪಡಿಸಬಹುದು. ಒಂದು ದೇಶದ ರಫ್ತುಗಳು ಬೇಡಿಕೆಯ ಬದಿಯಿಂದ ಒಂದು ರೀತಿಯ ಒತ್ತಾಯಕ್ಕೆ ಎಷ್ಟರ ಮಟ್ಟಿಗೆ ಒಳಪಟ್ಟಿವೆ ಎಂದರೆ, ರಫ್ತುಗಳು ವಾರ್ಷಿಕವಾಗಿ ಕೇವಲ ಶೇ. 1ರಷ್ಟು ಮಾತ್ರ ಬೆಳೆಯುವ ನಿರೀಕ್ಷೆಯಿದೆ ಎಂದು ಭಾವಿಸೋಣ. ಈ ಕಾರಣದಿಂದಾಗಿ ದೇಶವು “ಆಂತರ್ಮುಖಿ”ಯಾಗುತ್ತದೆ ಅಥವಾ ಆಮದು-ಬದಲಿ ಕಾರ್ಯತಂತ್ರವನ್ನು ಅನುಸರಿಸುತ್ತದೆ. ಆಗ, ರಫ್ತು ವಿಷಯವು ದೇಶದ ಆದ್ಯತೆಯಾಗುವುದಿಲ್ಲ. ಪರಿಣಾಮವಾಗಿ ದೇಶದ ರಫ್ತುಗಳು ಬೆಳೆಯುವುದೇ ಇಲ್ಲ. ಹಾಗಾಗಿ ವಿಶ್ವ ಮಾರುಕಟ್ಟೆಯಲ್ಲಿ ಆ ದೇಶದ ರಫ್ತುಗಳ ಪಾಲು ಇಳಿಯುತ್ತದೆ. ಆದರೆ ಇದರಿಂದ ದೇಶದ ರಫ್ತುಗಳು ವಾರ್ಷಿಕ ಶೇ. 1ಕ್ಕಿಂತ ಹೆಚ್ಚಿನ ದರದಲ್ಲಿ ಬೆಳೆಯುವುದು ಸಾಧ್ಯವಿಲ್ಲ ಎನ್ನುವ ಮೂಲ ಊಹೆಯೇ ತಪ್ಪು ಎಂದೇನೂ ಹೇಳಲು ಸಾಧ್ಯವಿಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಒಂದು ಊಹೆಯನ್ನು ಅಲ್ಲಗಳೆಯುವಂತೆ ತೋರುವ ನಿರ್ದಿಷ್ಟ ಊಹೆಯನ್ನು ಆಧರಿಸಿದ ಒಂದು ಕ್ರಿಯೆಯ ಪರಿಣಾಮಗಳನ್ನು ವೀಕ್ಷಿಸಿ, ಆ ಊಹನೆ ತಪ್ಪಾಗಿತ್ತು ಎಂಬ ತೀರ್ಮಾನಕ್ಕೆ ಬರುವುದು ತರ್ಕಸಂಗತವಲ್ಲ. ಗಮನಿಸಿದ ಸಂಗತಿಗಳಿಂದ ಈ ರೀತಿಯ ಯಾವುದೇ ತೀರ್ಮಾನಕ್ಕೆ ಬರಲು ಯಾವ ಆಧಾರವೂ ಇಲ್ಲ.
ಒಇಸಿಡಿಯ ಈ ರೀತಿಯ ವಾದವು ಕೇವಲ ಒಂದು ಕೈಚಳಕವೇ ಸರಿ. ಪೂರ್ವ ಏಷ್ಯಾದ ದೇಶಗಳ ಮಾರುಕಟ್ಟೆಗಳು ಹೊಂದಿದ ರಕ್ಷಣೆಯನ್ನು ಮತ್ತು ಅದನ್ನು ಒದಗಿಸಿದ ಪ್ರಭುತ್ವದ ಪಾತ್ರವನ್ನು ಸಾಮಾನ್ಯವಾಗಿ ನಿರ್ಲಕ್ಷಿಸಿರುವುದರಿಂದ, ಈ ವಾದವು ಪೂರ್ವ ಏಷ್ಯಾದ ದೇಶಗಳ ಅನುಭವದ ತಪ್ಪು ವ್ಯಾಖ್ಯಾನ ಮಾತ್ರವಲ್ಲ, ಒಂದು ದೇಶದ ರಫ್ತಿಗೆ ಅನಿಯಮಿತ ವಿಶ್ವ ಬೇಡಿಕೆ ಇದೆ ಎಂಬ ಊಹನೆಯನ್ನೂ ಆಧರಿಸಿರುವುದರಿಂದ ತರ್ಕಸಂಗತವೂ ಅಲ್ಲ. ಮತ್ತು, ನವ-ಉದಾರವಾದಿ ವಾದವು ಕಟ್ಟಕಡೆಯದಾಗಿ ಒಇಸಿಡಿಯ ಈ ಮೂಲ ವಾದವನ್ನೇ ಆಧರಿಸಿರುವುದರಿಂದ, ಅದೂ ಸಹ ತರ್ಕಸಂಗತವಾಗಿರಲಿಲ್ಲ.
ಖಚಿತವಾಗಿ ಹೇಳುವುದಾದರೆ, ನವ-ಉದಾರವಾದಿ ವಾದವನ್ನು ಸಮರ್ಥಿಸಿಕೊಳ್ಳುತ್ತ, ಈ ಕಾರ್ಯತಂತ್ರವನ್ನು ಅನುಸರಿಸಿದರೆ, ಆ ಮೂಲಕ ಮುಂದುವರೆದ ದೇಶಗಳ ಉತ್ಪಾದನಾ ಚಟುವಟಿಕೆಗಳು ಕಡಿಮೆ ಕೂಲಿಯ ಮೂರನೇ ಜಗತ್ತಿಗೆ ಸ್ಥಳಾಂತರಗೊಳ್ಳುತ್ತವೆ, ಆಗ ಮುಂದುವರೆದ ದೇಶಗಳ ವೆಚ್ಚದಲ್ಲಿ ಮೂರನೆಯ ಜಗತ್ತಿನ ಎಲ್ಲ ದೇಶಗಳೂ ಲಾಭ ಪಡೆಯಬಹುದು ಎಂದು ಹೇಳಲಾಗುತ್ತದೆ. ಆದರೆ ಈ ಅಭಿಪ್ರಾಯವು, ಮುಂದುವರೆದ ದೇಶಗಳ ಪ್ರಭುತ್ವಗಳು ತಮ್ಮ ಅರ್ಥವ್ಯವಸ್ಥೆಗಳು ಹಿಂದಕ್ಕೆ ಜಾರುವುದನ್ನು ಸುಮ್ಮನೆ ಕುಳಿತು ನೋಡುತ್ತಾ ಇರುತ್ತವೆ ಎಂದು ಭಾವಿಸುತ್ತದೆ. ಆದರೆ, ಅವರು ಖಂಡಿತಾ ಈ ರೀತಿ ಹಿಂದಕ್ಕೆ ಜಾರಲು ಕಾರಣವಾಗುವ ಸ್ಥಳಾಂತರವನ್ನು ತಡೆಯಲು ಅವರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಯು.ಎಸ್. ಆಡಳಿತಗಳು ಸತತವಾಗಿ ಕಳೆದ ಕೆಲವು ವರ್ಷಗಳಿಂದ ಮಾಡುತ್ತಿರುವುದು ಇದನ್ನೇ. ನಿರ್ದಿಷ್ಟವಾಗಿ ಡೊನಾಲ್ಡ್ ಟ್ರಂಪ್ ಈ ಅಂಶದ ಬಗ್ಗೆ ವಿಶೇಷ ಒತ್ತು ನೀಡುತ್ತ ಬಂದಿದ್ದಾರೆ.
ಇದನ್ನೂ ನೋಡಿ : ಹೈ.ಕ. ವಿಲೀನ ದಿನ | ಜಗತ್ತಿಗೆ ಭತ್ತ, ತೊಗರಿ, ಚಿನ್ನ ಕೊಟ್ಟ ಪ್ರದೇಶಕ್ಕೆ ಸಿಕ್ಕಿದ್ದು ಕಹಿಯೇ? Janashakthi Media
