69 ಶಾಸಕರು ಮತ್ತು ಅವಲಂಬಿತ ಕುಟುಂಬ ಸದಸ್ಯರ ಚಿಕಿತ್ಸೆಗೆ ತೆರಿಗೆ ಹಣದಿಂದ ಮರುಪಾವತಿ
ಬೆಂಗಳೂರು: ಕರ್ನಾಟಕದ 69 ಶಾಸಕರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ 2023ರಿಂದ 2026ರ ಅವಧಿಯಲ್ಲಿ ಸರ್ಕಾರದಿಂದ ಸುಮಾರು ₹7.46 ಕೋಟಿ ಮರುಪಾವತಿ ಮಾಡಿರುವುದು ಆರ್ಟಿಐ ದಾಖಲೆಗಳ ಮೂಲಕ ಬಹಿರಂಗವಾಗಿದೆ. ಸಾಮಾಜಿಕ ಹೋರಾಟಗಾರ ಎಚ್.ಎಂ. ವೆಂಕಟೇಶ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗೆ ಕರ್ನಾಟಕ ವಿಧಾನಸಭೆಯ ಲೆಕ್ಕಪತ್ರ ಶಾಖೆ ನೀಡಿರುವ ಮಾಹಿತಿಯಲ್ಲಿ ಈ ವಿವರಗಳು ದಾಖಲಾಗಿವೆ.
ಮೇ 20, 2023ರಿಂದ ಸೆಪ್ಟೆಂಬರ್ 30, 2026ರವರೆಗೆ ಶಾಸಕರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಪಡೆದ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಸರ್ಕಾರ ಮರುಪಾವತಿ ಮಾಡಿದೆ. ಈ ಅವಧಿಯಲ್ಲಿ ಒಟ್ಟು 69 ಶಾಸಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ ಎಂದು ಆರ್ಟಿಐ ಮಾಹಿತಿಯಲ್ಲಿ ತಿಳಿಸಲಾಗಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಹೆಚ್.ಕೆ. ಸುರೇಶ್ ಮತ್ತು ಅವರ ಕುಟುಂಬಕ್ಕೆ ₹98.78 ಲಕ್ಷ, ಕೆ. ಹರೀಶ್ ಗೌಡ ಮತ್ತು ಕುಟುಂಬಕ್ಕೆ ₹85.91 ಲಕ್ಷ ಹಾಗೂ ಡಾ. ಹೆಚ್.ಡಿ. ರಂಗನಾಥ್ ಮತ್ತು ಕುಟುಂಬಕ್ಕೆ ₹85.27 ಲಕ್ಷ ವೈದ್ಯಕೀಯ ವೆಚ್ಚ ಮರುಪಾವತಿಯಾಗಿದೆ.
ಇದೇ ಪಟ್ಟಿಯಲ್ಲಿ ದಿವಂಗತ ಶಾಮನೂರು ಶಿವಶಂಕರಪ್ಪ ಅವರಿಗೆ ₹69.78 ಲಕ್ಷ ಹಾಗೂ ಪ್ರಸಾದ್ ಅಬ್ಬಯ್ಯ ಮತ್ತು ಕುಟುಂಬಕ್ಕೆ ₹35.39 ಲಕ್ಷ ಮರುಪಾವತಿಯಾಗಿರುವುದಾಗಿ ವರದಿಯಾಗಿದೆ.
ಇತರ ಪ್ರಮುಖ ನಾಯಕರ ವೈದ್ಯಕೀಯ ಬಿಲ್ ವಿವರಗಳು:
- ಶಾಮನೂರು ಶಿವಶಂಕರಪ್ಪ: ಹಿರಿಯ ಶಾಸಕರಾದ ಇವರಿಗೆ ₹69.78 ಲಕ್ಷ ಮರುಪಾವತಿ ಮಾಡಲಾಗಿದೆ.
- ಎಸ್. ಸುರೇಶ್ ಕುಮಾರ್: ₹22.26 ಲಕ್ಷ
- ಕೆ. ಗೋಪಾಲಯ್ಯ: ₹21.05 ಲಕ್ಷ
- ಎಚ್. ಡಿ. ರೇವಣ್ಣ: ₹13.02 ಲಕ್ಷ
- ಬಸವರಾಜ ಬೊಮ್ಮಾಯಿ (ಮಾಜಿ ಸಿಎಂ): ₹10.45 ಲಕ್ಷ
- ಆರಗ ಜ್ಞಾನೇಂದ್ರ: ₹10.21 ಲಕ್ಷ
- ಲಕ್ಷ್ಮಣ ಸವದಿ: ₹4.86 ಲಕ್ಷ
- ಡಾ. ಸಿ. ಎನ್. ಅಶ್ವತ್ಥ ನಾರಾಯಣ: ₹4.58 ಲಕ್ಷ
ಇದನ್ನೂ ಓದಿ : ದೇಶದಲ್ಲಿ ಮತ್ತೆ ವಿದ್ಯುತ್ ಸಂಕಷ್ಟದ ಭೀತಿ: ಹಲವು ರಾಜ್ಯಗಳು ಕೇಂದ್ರದತ್ತ
ವೈದ್ಯಕೀಯ ವೆಚ್ಚ ಮರುಪಾವತಿಗೆ ನಿಯಮಗಳಲ್ಲಿ ಅವಕಾಶ
ಕರ್ನಾಟಕ ವಿಧಾನಸಭೆಯ ಅಧಿಕೃತ ಮಾಹಿತಿಯ ಪ್ರಕಾರ, ಶಾಸಕರು ಹಾಗೂ ಅವರ ಕುಟುಂಬ ಸದಸ್ಯರು ಸರ್ಕಾರಿ ಆಸ್ಪತ್ರೆ ಅಥವಾ ವಿಧಾನಸಭೆಯಿಂದ ಅಧಿಸೂಚಿತ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಯ ವೆಚ್ಚವನ್ನು ನಿಯಮಾನುಸಾರ ಮರುಪಾವತಿ ಪಡೆಯಲು ಅವಕಾಶವಿದೆ. ಕೆಲವು ಸಂದರ್ಭಗಳಲ್ಲಿ ಅಧಿಸೂಚಿತ ಆಸ್ಪತ್ರೆಗಳ ಹೊರತಾಗಿಯೂ ನಿಯಮಗಳಲ್ಲಿ ನಿಗದಿಪಡಿಸಿರುವ ಷರತ್ತುಗಳಂತೆ ಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ.
ಹೀಗಾಗಿ ಆರ್ಟಿಐಯಲ್ಲಿ ಬಹಿರಂಗವಾಗಿರುವ ₹7.46 ಕೋಟಿ ಮೊತ್ತವು ನಿಯಮಬಾಹಿರ ಪಾವತಿ ಎಂದು ದಾಖಲೆಗಳು ಹೇಳುವುದಿಲ್ಲ. ಆದರೆ, ಶಾಸಕರು ಮತ್ತು ಅವರ ಕುಟುಂಬದ ವೈದ್ಯಕೀಯ ಚಿಕಿತ್ಸೆಗೆ ಸಾರ್ವಜನಿಕ ಹಣ ಎಷ್ಟರ ಮಟ್ಟಿಗೆ ಖರ್ಚಾಗುತ್ತಿದೆ ಎಂಬ ವಿಚಾರ ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳು
ಒಂದೆಡೆ ಸಾಮಾನ್ಯ ಜನರು ದುಬಾರಿ ಚಿಕಿತ್ಸಾ ವೆಚ್ಚ, ಔಷಧಿ, ಪರೀಕ್ಷೆ ಹಾಗೂ ಆಸ್ಪತ್ರೆ ಸೇವೆಗಳಿಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಜನಪ್ರತಿನಿಧಿಗಳ ವೈದ್ಯಕೀಯ ವೆಚ್ಚಕ್ಕೆ ಸಾರ್ವಜನಿಕ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ಮರುಪಾವತಿಯಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ಪೂರ್ಣ ಪಾರದರ್ಶಕತೆ, ಬಿಲ್ಗಳ ಪರಿಶೀಲನೆ, ಚಿಕಿತ್ಸೆ ಪಡೆದ ಆಸ್ಪತ್ರೆ, ಮರುಪಾವತಿ ಮಾಡಿದ ಮೊತ್ತ ಮತ್ತು ಫಲಾನುಭವಿಗಳ ವಿವರಗಳನ್ನು ನಿಯಮಿತವಾಗಿ ಸಾರ್ವಜನಿಕಗೊಳಿಸುವ ವ್ಯವಸ್ಥೆ ಇರಬೇಕೇ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.
ಶಾಸಕರು ಹಾಗೂ ಅವರ ಕುಟುಂಬಕ್ಕೆ ದೊರೆಯುವ ವೈದ್ಯಕೀಯ ಸೌಲಭ್ಯ ಕಾನೂನುಬದ್ಧವಾಗಿದ್ದರೂ, ಅದರ ವೆಚ್ಚ ಸಾರ್ವಜನಿಕರ ತೆರಿಗೆ ಹಣದಿಂದ ಭರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ಪಾರದರ್ಶಕತೆಯ ಕುರಿತು ಚರ್ಚೆ ನಡೆಯುವುದು ಅಗತ್ಯವಾಗಿದೆ.
ಇದನ್ನೂ ನೋಡಿ : SIR | ಕಿತ್ತುಹಾಕುವವರಿಗೆ ಸಂತಸ, ಹೊರಹೋಗುವವರಿಗೆ ಆತಂಕ! ಫಾರ್ಮ್–7ರ ಆಟದ ಸೂತ್ರಧಾರರು ಯಾರು? Janashakthi Media
