ತ್ಯಾಜ್ಯ ನಿರ್ವಹಣೆ ಉಲ್ಲಂಘನೆ: PVR, ಫೋರಂ ಮಾಲ್ ಸಿಬ್ಬಂದಿಗೆ ₹1.25 ಲಕ್ಷ ದಂಡ

ಬೆಂಗಳೂರು: ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ ಎರಡು ಪ್ರಮುಖ ವಾಣಿಜ್ಯ ಸಂಸ್ಥೆಗಳ ವಿರುದ್ಧ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕ್ರಮ ಕೈಗೊಂಡಿದೆ. ಹೊಸೂರು ಮುಖ್ಯರಸ್ತೆಯ ಲಕ್ಕಸಂದ್ರದಲ್ಲಿರುವ PVR INOXಗೆ ₹75 ಸಾವಿರ ಹಾಗೂ ಉತ್ತರಹಳ್ಳಿಯ ಫೋರಂ ಮಾಲ್‌ಗೆ ಸಂಬಂಧಿಸಿದ ಸಿಬ್ಬಂದಿಗೆ ₹50,839 ದಂಡ ವಿಧಿಸಲಾಗಿದ್ದು, ಒಟ್ಟು ₹1,25,839 ದಂಡ ವಸೂಲಿ ಮಾಡಲಾಗಿದೆ. ತ್ಯಾಜ್ಯ

ಲಕ್ಕಸಂದ್ರ ವಾರ್ಡ್‌ನ ಹೊಸೂರು ಮುಖ್ಯರಸ್ತೆಯಲ್ಲಿರುವ PVR INOXನಲ್ಲಿ ತ್ಯಾಜ್ಯ ನಿರ್ವಹಣೆ ಪರಿಶೀಲನೆ ನಡೆಸಿದ ವೇಳೆ ತೇವ ಮತ್ತು ಒಣ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸುವ ನಿಯಮ ಪಾಲನೆಯಾಗದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಪಾಲಿಕೆ ತಿಳಿಸಿದೆ. ಇದರ ಜೊತೆಗೆ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಸಿರುವುದೂ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ₹75 ಸಾವಿರ ದಂಡ ವಿಧಿಸಿ ಸ್ಥಳದಲ್ಲೇ ವಸೂಲಿ ಮಾಡಲಾಗಿದೆ.

ಇನ್ನೊಂದು ಪ್ರಕರಣದಲ್ಲಿ ಉತ್ತರಹಳ್ಳಿ-ಕನಕಪುರ ಮುಖ್ಯರಸ್ತೆಯ ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‌ನಲ್ಲಿರುವ ಶಾಪ್‌ವೆಲ್ ಸೂಪರ್‌ಮಾರ್ಕೆಟ್ ಸಮೀಪ ಒಳಚರಂಡಿ ಸಂಸ್ಕರಣಾ ಘಟಕದ (STP) ತ್ಯಾಜ್ಯವನ್ನು ಅಕ್ರಮವಾಗಿ ವಿಲೇವಾರಿ ಮಾಡಲಾಗಿದೆ ಎಂಬ ದೂರು ಪಾಲಿಕೆಗೆ ಬಂದಿತ್ತು. ಸ್ಥಳೀಯ ನಿವಾಸಿಗಳ ದೂರಿನ ಆಧಾರದ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ವಿಲೇವಾರಿ ಮಾಡಲಾಗಿದ್ದ ತ್ಯಾಜ್ಯವು ಫೋರಂ ಮಾಲ್‌ನಿಂದ ಬಂದಿರುವುದು ತಿಳಿದುಬಂದಿದೆ ಎಂದು ಪಾಲಿಕೆ ಹೇಳಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಸಿಬ್ಬಂದಿಗೆ ₹50,839 ದಂಡ ವಿಧಿಸಿ ವಸೂಲಿ ಮಾಡಲಾಗಿದೆ. ತ್ಯಾಜ್ಯ

ಇದನ್ನೂ ಓದಿ : ₹2,000 ಮೀರಿದ UPI ವಹಿವಾಟು ಶುಲ್ಕಕ್ಕೆ ಕಾಂಗ್ರೆಸ್ ವಿರೋಧ

ವಾಣಿಜ್ಯ ಸಂಸ್ಥೆಗಳು ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಎಚ್ಚರಿಕೆ ನೀಡಿದ್ದಾರೆ. ತೇವ ಮತ್ತು ಒಣ ತ್ಯಾಜ್ಯವನ್ನು ಮೂಲದಲ್ಲೇ ಪ್ರತ್ಯೇಕಿಸುವುದು, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಹಾಗೂ ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯಿಂದ ದೂರವಿರುವುದು ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು ಸೇರಿದಂತೆ ಎಲ್ಲ ವಾಣಿಜ್ಯ ಸಂಸ್ಥೆಗಳ ಮೇಲೂ ತ್ಯಾಜ್ಯ ನಿರ್ವಹಣೆ ನಿಯಮಗಳ ಪಾಲನೆಗಾಗಿ ಪರಿಶೀಲನೆ ಮತ್ತು ಕ್ರಮ ಮುಂದುವರಿಯಲಿದೆ ಎಂದು ಪಾಲಿಕೆ ತಿಳಿಸಿದೆ.

PVR INOX ಮತ್ತು ಫೋರಂ ಮಾಲ್ ವಿರುದ್ಧದ ಈ ಕ್ರಮವು ಬೆಂಗಳೂರಿನಲ್ಲಿ ವಾಣಿಜ್ಯ ಸಂಸ್ಥೆಗಳ ತ್ಯಾಜ್ಯ ನಿರ್ವಹಣೆ ಕುರಿತು ಪಾಲಿಕೆ ಕೈಗೊಂಡಿರುವ ಜಾರಿ ಕ್ರಮಗಳ ಭಾಗವಾಗಿದೆ. ಈ ದಂಡದ ಕುರಿತು PVR INOX ಅಥವಾ ಫೋರಂ ಮಾಲ್‌ನಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ. ತ್ಯಾಜ್ಯ

ಇದನ್ನೂ ನೋಡಿ : ಹೈ.ಕ. ವಿಲೀನ ದಿನ | ಜಗತ್ತಿಗೆ ಭತ್ತ, ತೊಗರಿ, ಚಿನ್ನ ಕೊಟ್ಟ ಪ್ರದೇಶಕ್ಕೆ ಸಿಕ್ಕಿದ್ದು ಕಹಿಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *