ನವದೆಹಲಿ : ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅವರ ಪುತ್ರಿ ವೀಣಾ ಟಿ. ಸಂಬಂಧಿತ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಹಿನ್ನೆಲೆ, ದೇಶಾದ್ಯಂತ ಸಿಪಿಐ(ಎಂ) ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ವಿಶೇಷವಾಗಿ ಕೇರಳ ಮತ್ತು ದೆಹಲಿಯಲ್ಲಿ ನಡೆದ ಪ್ರತಿಭಟನೆಗಳು ರಾಜಕೀಯ ವಾತಾವರಣವನ್ನು ಕಾವೇರಿಸಿವೆ. ಪಿಣರಾಯಿ
ಸಿಎಂಆರ್ಎಲ್-ಎಕ್ಸಾಲಾಜಿಕ್ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಪಿಣರಾಯಿ ವಿಜಯನ್ ನಿವಾಸ, ಪುತ್ರಿ ವೀಣಾ ಟಿ.ಗೆ ಸೇರಿದ ಸಂಸ್ಥೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಈ ಕ್ರಮವನ್ನು “ರಾಜಕೀಯ ಪ್ರೇರಿತ ದಾಳಿ” ಎಂದು ಆರೋಪಿಸಿರುವ ಸಿಪಿಐ(ಎಂ), ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಕೇರಳ ರಾಜಧಾನಿ ತಿರುವನಂತಪುರಂ, ಕೊಚ್ಚಿ, ಕಣ್ಣೂರು, ಕೋಝಿಕ್ಕೋಡ್ ಸೇರಿದಂತೆ ಹಲವು ನಗರಗಳಲ್ಲಿ ಸಾವಿರಾರು ಸಿಪಿಐ(ಎಂ) ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕೆಲವೆಡೆ ಇಡಿ ಕಚೇರಿಗಳ ಎದುರು ಧರಣಿ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ತಿರುವನಂತಪುರಂನಲ್ಲಿ ಪ್ರತಿಭಟನೆ ವೇಳೆ ಕಾರ್ಯಕರ್ತರು ಇಡಿ ಅಧಿಕಾರಿಗಳ ವಾಹನಗಳನ್ನು ತಡೆಯಲು ಯತ್ನಿಸಿದ ಘಟನೆ ಕೂಡ ವರದಿಯಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ನೇತೃತ್ವದಲ್ಲಿ ರಾಜ್ಯದ 14 ಜಿಲ್ಲೆಗಳಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಹಲವೆಡೆ ಟಾರ್ಚ್ಲೈಟ್ ಮೆರವಣಿಗೆಗಳು, ಸಾರ್ವಜನಿಕ ಸಭೆಗಳು ಹಾಗೂ ಪ್ರತಿರೋಧ ರ್ಯಾಲಿಗಳು ನಡೆದವು. “ಪಿಣರಾಯಿ ವಿಜಯನ್ ಅವರನ್ನು ರಾಜಕೀಯವಾಗಿ ಕುಗ್ಗಿಸಲು ಬಿಜೆಪಿ ಸರ್ಕಾರ ಸಂಸ್ಥೆಗಳನ್ನು ಬಳಸುತ್ತಿದೆ” ಎಂದು ನಾಯಕರು ಆರೋಪಿಸಿದರು.
ಇದನ್ನೂ ಓದಿ : ಪಿಣರಾಯಿ ವಿಜಯನ್ ಮನೆ ಮೇಲೆ ಇಡಿ ದಾಳಿ: ಕೇಂದ್ರದ ರಾಜಕೀಯ ಪ್ರತೀಕಾರ – ಸಿಪಿಐ(ಎಂ) ಆರೋಪ

ಇನ್ನೊಂದೆಡೆ ದೆಹಲಿಯಲ್ಲೂ ಸಿಪಿಐ(ಎಂ) ಕಾರ್ಯಕರ್ತರು ಇಡಿ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು “ಪ್ರಜಾಪ್ರಭುತ್ವ ಉಳಿಸೋಣ”, “ಇಡಿ ದೌರ್ಜನ್ಯ ನಿಲ್ಲಿಸೋಣ” ಎಂಬ ಘೋಷಣೆಗಳನ್ನು ಕೂಗಿದರು. ಪಕ್ಷದ ಹಿರಿಯ ನಾಯಕರು ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಮೇಲೆ ತನಿಖಾ ಸಂಸ್ಥೆಗಳ ಮೂಲಕ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದರು.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಪ್ರತಿಕ್ರಿಯಿಸಿ, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡಿದೆ. ಆದರೆ ಇಂತಹ ದಾಳಿಗಳಿಂದ ಸಿಪಿಐ(ಎಂ) ಹೋರಾಟವನ್ನು ನಿಲ್ಲಿಸಲಾಗುವುದಿಲ್ಲ” ಎಂದು ಹೇಳಿದರು.
ಈ ನಡುವೆ ಕಾಂಗ್ರೆಸ್ ಸೇರಿದಂತೆ ಕೆಲವು ವಿರೋಧ ಪಕ್ಷಗಳ ನಾಯಕರು ಕೂಡ ತನಿಖಾ ಸಂಸ್ಥೆಗಳ ರಾಜಕೀಯ ಬಳಕೆಯ ಕುರಿತು ಪ್ರಶ್ನೆ ಎತ್ತಿದ್ದು, ಇಡಿ ಕ್ರಮದ ಸಮಯ ಹಾಗೂ ಉದ್ದೇಶದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಈಗಾಗಲೇ ಈ ವಿಚಾರ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿಭಟನೆಗಳು ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ನೋಡಿ : ಭಾರತದ ಪ್ರಜಾಪ್ರಭುತ್ವ ಮತ್ತು ನಾರ್ವೆ ಪತ್ರಕರ್ತರು:ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ? Janashakthi Media
