ಮಂಗಳೂರು : ಡಾ. ನಿತ್ಯಾನಂದ ಬಿ. ಶೆಟ್ಟಿ ಅವರ ಬಹುಚರ್ಚಿತ ಕೃತಿ ‘ಅಳವು ಅರಿಯದ ಭಾಷೆ’ಯ ಹಿನ್ನೆಲೆಯಲ್ಲಿ “ಕರಾವಳಿಯ ಸಾಂಸ್ಕೃತಿಕ ರಾಜಕಾರಣ” ವಿಷಯದ ಕುರಿತು ಒಂದು ದಿನದ ವಿಚಾರ ಮಥನ ಕಾರ್ಯಕ್ರಮವು 2026ರ ಆಗಸ್ಟ್ 1ರಂದು (ಶನಿವಾರ) ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ಮಂಗಳೂರಿನ ಶಕ್ತಿನಗರದ ಕಲಾಂಗಣ್‌ನಲ್ಲಿ ‘ಡಿಎಸ್ಎಸ್ ಮುಖಂಡ ಎಂ. ದೇವದಾಸ್ ವೇದಿಕೆ’ಯಲ್ಲಿ ನಡೆಯಲಿದೆ. ಆಗಸ್ಟ್
ಹೋರಾಟಗಾರ ಮುನೀರ್ ಕಾಟಿಪಳ್ಳ ಅವರ ಪ್ರಾಸ್ತಾವಿಕ ಮಾತುಗಳ ಮೂಲಕ ಆರಂಭವಾಗುವ ವಿಚಾರ ಮಥನದಲ್ಲಿ ಕರಾವಳಿಯ ಕಲೆ, ಭಾಷೆ, ಇತಿಹಾಸ, ಕೋಮುವಾದ, ಸಾಂಸ್ಕೃತಿಕ ರಾಜಕಾರಣ, ಯಕ್ಷಗಾನ, ಸಾಹಿತ್ಯ ಮತ್ತು ಬಹುಸಾಂಸ್ಕೃತಿಕ ಸಹಬಾಳ್ವೆಯ ಕುರಿತ ವಿವಿಧ ಆಯಾಮಗಳ ಬಗ್ಗೆ ಆರು ಪ್ರಮುಖ ಗೋಷ್ಠಿಗಳು ನಡೆಯಲಿವೆ. ಆಗಸ್ಟ್
ಮೊದಲ ಗೋಷ್ಠಿಯಲ್ಲಿ “ಶ್ರಮಿಕರ ದೈವ -ಯಕ್ಷಗಾನ ಮತ್ತು ಅಳವರಿಯದ ಭಾಷೆ (ತುಳು ಮತ್ತು ಬ್ಯಾರಿ)” ವಿಷಯದ ಕುರಿತು ನಿವೃತ್ತ ಪ್ರಾಂಶುಪಾಲರು ಹಾಗೂ ಜನಪದ ವಿದ್ವಾಂಸರಾದ ಡಾ. ಗಣನಾಥ ಎಕ್ಕಾರು ವಿಷಯ ಮಂಡನೆ ಮಾಡಲಿದ್ದಾರೆ. ಎರಡನೇ ಗೋಷ್ಠಿಯಲ್ಲಿ “ನಾಲ್ಕು ದಶಕಗಳ ಕೋಮುವಾದ: ಕಾನೂನು ಸುವ್ಯವಸ್ಥೆಯ ವೈಫಲ್ಯ ಮತ್ತು ಮುಂದಿನ ದಾರಿ” ವಿಷಯದ ಕುರಿತು ಪತ್ರಕರ್ತ ಹಾಗೂ ಬರಹಗಾರ ನವೀನ್ ಸೂರಿಂಜೆ ಮಾತನಾಡಲಿದ್ದಾರೆ. ಆಗಸ್ಟ್
ಇದನ್ನೂ ಓದಿ: ವಿದ್ಯಾರ್ಥಿಗಳ ವಿರುದ್ಧ ಹಿಂಸೆಗೆ ಕರೆ: ಟಿ.ಜಿ. ಮೋಹನ್‌ದಾಸ್ ವಿರುದ್ಧ ಪ್ರಕರಣ ದಾಖಲಿಸಲು ಮಹಿಳಾ ಸಂಘಟನೆ ಆಗ್ರಹ
ಮೂರನೇ ಗೋಷ್ಠಿಯಲ್ಲಿ “ಹಿಂದುತ್ವ/ಆರ್‌ಎಸ್‌ಎಸ್ ಸಾಂಸ್ಕೃತಿಕ ರಾಜಕಾರಣ ಮತ್ತು ಕನ್ನಡ ಸಾಹಿತಿಗಳು” ವಿಷಯದ ಕುರಿತು ಕವಿಗಳಾದ ರಘುನಂದನ ವಿಚಾರ ಮಂಡನೆ ಮಾಡಲಿದ್ದಾರೆ. ನಾಲ್ಕನೇ ಗೋಷ್ಠಿಯಲ್ಲಿ “ಯಕ್ಷಗಾನದ ಬಹುತ್ವ: ಮುಸ್ಲಿಂ ಪಾತ್ರಗಳು ಮತ್ತು ಸಹಭಾಗಿತ್ವ” ವಿಷಯದ ಕುರಿತು ಪ್ರಾಂಶುಪಾಲರಾದ ಡಾ. ವಾಸುದೇವ ಬೆಳ್ಳೆ ಉಪನ್ಯಾಸ ನೀಡಲಿದ್ದಾರೆ.
ಐದನೇ ಗೋಷ್ಠಿಯಲ್ಲಿ “ಮಾರ್ಕ್ಸ್‌ವಾದಿ–ಸ್ತ್ರೀವಾದಿ ನೆಲೆಯಲ್ಲಿ ‘ಅಳವು ಅರಿಯದ ಭಾಷೆ’ ಪುಸ್ತಕದ ಸಾಂಸ್ಕೃತಿಕ ವಿಮರ್ಶೆ” ವಿಷಯವನ್ನು ಚಿಂತಕ ಹಾಗೂ ವಿಮರ್ಶಕ ಪ್ರೊ. ಕೆ. ಫಣಿರಾಜ್ ಮಂಡಿಸಲಿದ್ದಾರೆ. ಕಾರ್ಯಕ್ರಮದ ಅಂತಿಮ ಅಧಿವೇಶನದಲ್ಲಿ ‘ಅಳವು ಅರಿಯದ ಭಾಷೆ’ ಕೃತಿಕಾರ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರೊಂದಿಗೆ ಸಂವಾದ ನಡೆಯಲಿದ್ದು, ಚಿಂತಕ ಡಾ. ನಾಗೇಗೌಡ ಕೆ.ಎಸ್. ಹಾಗೂ ಡಾ. ಕಿರಣ್ ಗಾಜನೂರು ಅವರು ಸಂವಾದ ನಡೆಸಲಿದ್ದಾರೆ.
ಕರಾವಳಿಯ ಬಹುಭಾಷಿಕ, ಬಹುಸಾಂಸ್ಕೃತಿಕ ಪರಂಪರೆ, ಯಕ್ಷಗಾನದ ಸಾಮಾಜಿಕ ಇತಿಹಾಸ, ಕೋಮು ರಾಜಕಾರಣ, ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಹಾಗೂ ಸಮಕಾಲೀನ ಸಾಂಸ್ಕೃತಿಕ ಸವಾಲುಗಳ ಕುರಿತು ಗಂಭೀರ ಚರ್ಚೆಗೆ ಈ ವಿಚಾರ ಮಥನ ವೇದಿಕೆಯಾಗಲಿದೆ.
ವಿಚಾರ ಮಥನದಲ್ಲಿ ಕರಾವಳಿಯ ಹಲವು ಭಾಷೆಗಳ ಸಾಂಸ್ಕೃತಿಕ ಪರಂಪರೆ, ವಿವಿಧ ಸಮುದಾಯಗಳ ಪಾಲ್ಗೊಳ್ಳುವಿಕೆ, ಕರಾವಳಿಯ ಸಹಬಾಳ್ವೆಯ ಇತಿಹಾಸ, ಸಮಕಾಲೀನ ಕೋಮು ರಾಜಕಾರಣದ ಪರಿಣಾಮಗಳು ಹಾಗೂ ಜನಪದ ಕಲೆಯ ಮೇಲಿನ ಅದರ ಪ್ರಭಾವವನ್ನು ವಿಮರ್ಶಾತ್ಮಕವಾಗಿ ಚರ್ಚಿಸಲಾಗುತ್ತದೆ.
ಜೊತೆಗೆ, ಡಾ. ನಿತ್ಯಾನಂದ ಬಿ. ಶೆಟ್ಟಿಯವರ ‘ಅಳವು ಅರಿಯದ ಭಾಷೆ’ ಕೃತಿಯನ್ನು ಮಾರ್ಕ್ಸ್‌ವಾದಿ ಸ್ತ್ರೀವಾದಿ ನೆಲೆಯಲ್ಲಿ ಅವಲೋಕಿಸಿ, ಕರಾವಳಿಯ ಸಮಾಜ, ಭಾಷೆ, ಸಂಸ್ಕೃತಿ, ಶ್ರಮ, ವರ್ಗ, ಜಾತಿ, ಲಿಂಗ, ಅಧಿಕಾರದ ರಾಜಕಾರಣ ಮತ್ತು ಸಾಂಸ್ಕೃತಿಕ ಸಂಘರ್ಷಗಳ ವಿವಿಧ ಆಯಾಮಗಳನ್ನು ವಿಶ್ಲೇಷಿಸಲಾಗುತ್ತದೆ. ಸಾಹಿತ್ಯ, ಸಮಾಜ ಮತ್ತು ಸಾಂಸ್ಕೃತಿಕ ರಾಜಕಾರಣದ ಪರಸ್ಪರ ಸಂಬಂಧಗಳ ಕುರಿತು ಸಂಶೋಧನೆ, ದಾಖಲೆಗಳು ಮತ್ತು ಅನುಭವಗಳ ಆಧಾರದ ಮೇಲೆ ಗಂಭೀರ ಸಂವಾದವನ್ನು ರೂಪಿಸುವ ಉದ್ದೇಶದಿಂದ ಈ ವಿಚಾರ ಮಥನ ಆಯೋಜಿಸಲಾಗಿದೆ.
ಕರಾವಳಿ ಕರ್ನಾಟಕ ಹಾಗು ನಾಡಿನ ಪ್ರಮುಖ ಸಾಹಿತಿಗಳು, ಸಂಶೋಧಕರು, ಕಲಾವಿದರು, ಪತ್ರಕರ್ತರು, ವಿದ್ಯಾರ್ಥಿಗಳು, ಬರಹಗಾರರು, ಸಾಮಾಜಿಕ ಕಾರ್ಯಕರ್ತರು ವಿಚಾರ ಮಥನದಲ್ಲಿ ಭಾಗಿಗಳಾಗಲಿದ್ದಾರೆ ಎಂದು ಆಯೋಜಕರು ಪ್ರಕರಟನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ನೋಡಿ: NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi
