ಹೈದರಾಬಾದ್: “ಮಿಲಿಟೆಂಟ್ ಚಟುವಟಿಕೆಗಳು” ನಡೆಸುವಂತೆ ಮತ್ತು ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚುವಂತೆ ಕರೆ ನೀಡಿದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಬಿಆರ್‌ಎಸ್ ನಾಯಕ ಹಾಗೂ ಚೆನ್ನೂರು ಮಾಜಿ ಶಾಸಕ ಬಾಲ್ಕಾ ಸುಮನ್ ವಿರುದ್ಧ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ನಾಂಪಳ್ಳಿ ಪೊಲೀಸರು ಮೇ 27ರಂದು ಪ್ರಕರಣ ದಾಖಲಿಸಿದ್ದಾರೆ.
ಮಂಗಳವಾರ ಹೈದರಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸುಮನ್, ಪಕ್ಷದ ಕಾರ್ಯಕರ್ತರಿಗೆ ಮಿಲಿಟೆಂಟ್ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಕರೆ ನೀಡಿದ್ದರು. ಈ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
“ಮಂದಮರ್ರಿಯಲ್ಲಿ ಒಂದು ಚಟುವಟಿಕೆ ಕೈಗೊಂಡು ಸಿಂಗರೆಣಿ ಜನರಲ್ ಮ್ಯಾನೇಜರ್ ಕಚೇರಿಗೆ ಬೆಂಕಿ ಹಚ್ಚಿ. ಇಂತಹ ಕೆಲಸ ಮಾಡಿದರೆ ತಿಂಗಳಷ್ಟು ಜೈಲಿಗೆ ಹೋಗಬಹುದು. ಹೈದರಾಬಾದ್‌ನ ಸಿಂಗರೆಣಿ ಭವನಕ್ಕೂ ಬೆಂಕಿ ಹಚ್ಚಿ. ನಮ್ಮ ಪ್ರದೇಶದಲ್ಲಿ ರೈಲು ಮಾರ್ಗಗಳು ಹೆಚ್ಚು — ಅವನ್ನು ಕತ್ತರಿಸಿ ‘ರೈಲು ರೋಕೋ’ ನಡೆಸಿ,” ಎಂದು ಸುಮನ್ ಕಾರ್ಯಕರ್ತರಿಗೆ ಹೇಳಿದ್ದಾರೆ.
ಇದನ್ನೂ ಓದಿ: ಪ್ರಜಾಪ್ರಭುತ್ವದ ಸಾಂಸ್ಥಿಕ ಅಗ್ನಿಪರೀಕ್ಷೆ- ಎಸ್‌ಐಆರ್
ಈ ರೀತಿಯ ಚಟುವಟಿಕೆಗಳಿಗೆ ಹಣದ ವ್ಯವಸ್ಥೆ ಹೇಗೆ ಎಂಬ ಪ್ರಶ್ನೆಗೆ, ಒಂದು ಕಚೇರಿಗೆ ಬೆಂಕಿ ಹಚ್ಚಿದರೆ ಹಣ ತಕ್ಷಣ ಸಿಗುತ್ತದೆ ಎಂದು ಸುಮನ್ ಉತ್ತರಿಸಿದ್ದಾರೆಯೆಂದು ವರದಿಯಾಗಿದೆ.
ಇದಕ್ಕೂ ಮುನ್ನ, ನಗರಸಭೆ ಚುನಾವಣೆಯ ವೇಳೆ ಕಲ್ಲು ತೂರಾಟ ಪ್ರಕರಣದಲ್ಲಿ ಸುಮನ್ ಬಂಧಿತರಾಗಿ ಬಳಿಕ ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಸುಮನ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಪೊನ್ನಂ ಪ್ರಭಾಕರ್, ಈ ವಿವಾದಾತ್ಮಕ ವಿಡಿಯೋವನ್ನು ಪೊಲೀಸರಿಗೂ ಹಾಗೂ ರೈಲ್ವೆ ಅಧಿಕಾರಿಗಳಿಗೆ ಕಳುಹಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಿಂಗರೆಣಿ ಕೊಲಿಯರೀಸ್ ಕಂಪನಿ ಲಿಮಿಟೆಡ್ ತೆಲಂಗಾಣಕ್ಕೆ “ತಾಯಿ” ಸಮಾನವಾಗಿದ್ದು, ಅದರ ಕಚೇರಿಗಳಿಗೆ ಬೆಂಕಿ ಹಚ್ಚುವಂತೆ ಕರೆ ನೀಡುವುದು ಅನ್ಯಾಯಕರ ಎಂದು ಅವರು ಹೇಳಿದ್ದಾರೆ. “ಸುಮನ್ ರಾಜಕೀಯ ಅತಿರೇಕಿಯಂತೆ ಮಾತನಾಡಿದ್ದಾರೆ,” ಎಂದು ಪ್ರಭಾಕರ್ ಆರೋಪಿಸಿದ್ದಾರೆ. ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಕೂಡ ಸುಮನ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದಕ್ಕೂ ಮಧ್ಯೆ, ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮನ್, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ಮಾಡಲು ಮಾತ್ರ ಕರೆ ನೀಡಿದ್ದೆನೆಂದು ಹೇಳಿದ್ದಾರೆ.
“ನನ್ನ 30 ನಿಮಿಷಗಳ ಭಾಷಣದಲ್ಲಿನ ಕೇವಲ 30 ಸೆಕೆಂಡ್ ವಿಡಿಯೋವನ್ನು ಮಾತ್ರ ತೆಗೆದು ವೈರಲ್ ಮಾಡಲಾಗಿದೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಕಾಂಗ್ರೆಸ್ ಕಾರ್ಯಕರ್ತರು ನೀಡಿದ ದೂರಿನ ಮೇರೆಗೆ ನಾಂಪಳ್ಳಿ ಪೊಲೀಸರು ಸುಮನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ನೋಡಿ: IPL 2026 | ಪ್ಲೇಆಫ್ ಪೈಪೋಟಿ: ನಾಲ್ಕು ತಂಡಗಳ ಪ್ಲಸ್, ಮೈನಸ್ ಮತ್ತು ಕಪ್ ಲೆಕ್ಕಾಚಾರ Janashakthi Media
