ದಾವಣಗೆರೆ: ಏಪ್ರಿಲ್ 9ರಂದು ನಡೆಯಲಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಸ್‌ಡಿಪಿಐ ಸೇರಿದಂತೆ ಕೋಮುವಾದಿ ಪಕ್ಷಗಳನ್ನು ತಿರಸ್ಕರಿಸುವಂತೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) [ಸಿಪಿಐ(ಎಂ)] ಕರ್ನಾಟಕ ರಾಜ್ಯ ಸಮಿತಿ ಮತದಾರರಿಗೆ ಕರೆ ನೀಡಿದೆ.
ಪಕ್ಷದ ಪ್ರಕಟಣೆಯಲ್ಲಿ, ದಾವಣಗೆರೆ ನಗರವು ಒಂದು ಕಾಲದಲ್ಲಿ ಕಾರ್ಮಿಕ ವರ್ಗದ ಸೌಹಾರ್ದ ಕೇಂದ್ರವಾಗಿದ್ದರೂ, ಕಳೆದ ಮೂರು ದಶಕಗಳಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನೇತೃತ್ವದಲ್ಲಿ ಹಿಂದುತ್ವ ಕೋಮುವಾದವು ಕಾರ್ಮಿಕ ವರ್ಗವನ್ನು ವಿಭಜಿಸಿ ಜನರ ಐಕ್ಯತೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. 1989 ಮತ್ತು 1994ರಲ್ಲಿ ನಡೆದ ಕೋಮು ಸಂಘರ್ಷಗಳಲ್ಲಿ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದು, ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು ಎಂಬುದನ್ನು ಪಕ್ಷ ಉಲ್ಲೇಖಿಸಿದೆ.
ಇತಿಹಾಸದಿಂದ ಪಾಠ ಕಲಿಸಿದ ದಾವಣಗೆರೆ ಜನರು ಇಂತಹ ಕೋಮು ಶಕ್ತಿಗಳನ್ನು ಹಿಂದೆ ತಳ್ಳಿದರೂ, ವಿಜಯದಶಮಿ ಮತ್ತು ಗಣೇಶ ಹಬ್ಬಗಳ ವೇಳೆ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನಗಳು ಮುಂದುವರಿದಿವೆ ಎಂದು ಸಿಪಿಐ(ಎಂ) ಹೇಳಿದೆ. ಮುಸ್ಲಿಂ ಸಮುದಾಯ ಮತ್ತು ವಿವಿಧ ಜಾತಿ-ಉಪಜಾತಿಯ ಹಿಂದೂಗಳು ಸೇರಿ ಬದುಕುತ್ತಿರುವ ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವುದು ಅತ್ಯಂತ ಅಗತ್ಯ ಎಂದು ತಿಳಿಸಿದೆ.
ಆರ್‌ಎಸ್‌ಎಸ್ ಮತ್ತು ಅದರ ಅಂಗ ಸಂಸ್ಥೆಗಳ ಹಿಂದುತ್ವ ರಾಜಕೀಯದ ಜೊತೆಗೆ ಎಸ್‌ಡಿಪಿಐ ಮತ್ತು ಜಮಾತೆ-ಇಸ್ಲಾಮಿ ಹಿಂದ್‌ನ ಮೂಲಭೂತವಾದವೂ ಜನರ ಐಕ್ಯತೆಯನ್ನು ಹಾಳು ಮಾಡಬಹುದು ಎಂದು ಪಕ್ಷ ಎಚ್ಚರಿಸಿದೆ. ಸಾಮಾನ್ಯ ಹಿಂದುಗಳು ಮತ್ತು ಮುಸ್ಲಿಮರು ಸಹಬಾಳ್ವೆಯಿಂದ ಬದುಕುವುದು ಮುಖ್ಯ ಎಂದು ಅಭಿಪ್ರಾಯಪಟ್ಟಿದೆ.
ಇದೇ ವೇಳೆ, ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಗೊಂದಲಕಾರಿ ಧೋರಣೆಯನ್ನು ಟೀಕಿಸಿದ ಸಿಪಿಐ(ಎಂ), ಇತಿಹಾಸದಲ್ಲಿಯೂ ಕಾಂಗ್ರೆಸ್ ಇಂತಹ ಅನ್ಯಾಯಗಳನ್ನು ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದೆ. ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಜಾತ್ಯಾತೀತ ಶಕ್ತಿಗಳು ಎಡ-ಪ್ರಜಾಸತ್ತಾತ್ಮಕ ಪರ್ಯಾಯಗಳತ್ತ ಮುಖ ಮಾಡಬೇಕಿದೆ ಎಂದು ಕರೆ ನೀಡಿದೆ.
ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲಾ ಪ್ರಗತಿಪರ ಶಕ್ತಿಗಳು ಒಗ್ಗೂಡಿ ಕೆಲಸ ಮಾಡಬೇಕೆಂದು ಪಕ್ಷ ಒತ್ತಾಯಿಸಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಮತದಾರರು ವಿವೇಕಬುದ್ಧಿಯಿಂದ ಯೋಚಿಸಿ ಮತ ಚಲಾಯಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.
ಈ ಪ್ರಕಟಣೆಯನ್ನು ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಮಹಾಂತೇಶ್ ಹಾಗೂ ಜಿಲ್ಲಾ ಸಂಘಟನಾ ಸಮಿತಿ ಕಾರ್ಯದರ್ಶಿ ಕೆ.ಎಚ್. ಆನಂದರಾಜ್ ಬಿಡುಗಡೆ ಮಾಡಿದ್ದಾರೆ.
