ಎಲ್‌ಪಿಜಿ ಹಾಹಾಕಾರ: ಸಂಕಷ್ಟದಲ್ಲಿ ಸಿಲುಕಿರುವ ಆಟೋಚಾಲಕರು

ನೆರವಿಗೆ ಬಾರದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು
ಆಟೋ ಗ್ಯಾಸ್ (ಎಲ್‌ಪಿಜಿ)ಗಾಗಿ ಕಿಲೋಮೀಟರ್ ಉದ್ದದ ಆಟೋರಿಕ್ಷಾಗಳ ಸರತಿ ಸಾಲುಗಳು. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಂಡುಬುರುತ್ತಿರುವ ಕರುಳು ಹಿಂಡುವ ದೃಶ್ಯಗಳಿವು. ಸಿಲಿಂಡರ್ ಗಳಿಗಾಗಿ ಸಾಲುಗಟ್ಟಿ ನಿಂತಿರುವ ದೃಶ್ಯಗಳು ನೋಟು ರದ್ಧತಿ ಸಮಯದಲ್ಲಿ ಬ್ಯಾಂಕುಗಳ ಮುಂದೆ ನಿಂತ ಜನರ ಸಾಲುಗಳನ್ನು ನೆನಪಿಸುತ್ತವೆ. ಇದಕ್ಕೆ ಕಾರಣ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳಿ ಕೈ ಚೆಲ್ಲಿ ಕುಳಿತಿವೆ. ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಆಟೋಚಾಲಕರ ನೆರವಿಗೆ ಬಾರದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿ ಮರೆತಿವೆ. ಪ್ರಕೃತಿ ವಿಕೋಪ, ಯುದ್ದದ ಸಂದರ್ಭದಲ್ಲಿ ಜನತೆಗೆ ಎದುರಾಗುವ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಒದಗಿಸಿಕೊಡುವುದು ಪ್ರಭುತ್ವದ ಕರ್ತವ್ಯ ಎಂಬುದನ್ನು ಇಂದಿನ ಆಳುವ ರಾಜಕೀಯ ಪಕ್ಷಗಳು ಮರೆತಂತಿವೆ. ಸಂಕಷ್ಟ

– ಸಿ. ಸಿದ್ದಯ್ಯ

ಸಂಕಷ್ಟದಲ್ಲಿ ಸಿಲುಕಿದ ಆಟೋ ಚಾಲಕರು

ಎಸ್‌ಪಿಜಿ (ಆಟೋಗ್ಯಾಸ್) ಅಭಾವದಿಂದ ದೇಶದ ಜನತೆ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆಟೋ ಚಾಲಕರ ಬದುಕಿನ ಮೇಲೆ ಇದು ಎರಡು ರೀತಿಯಲ್ಲಿ ಸಂಕಷ್ಟ ತಂದೊಡ್ಡಿದೆ. ಒಂದು ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಗಾಗಿ, ಮತ್ತೊಂದು ತಮ್ಮ ದುಡಿಮೆಗಾಗಿ ಅಗತ್ಯವಾಗಿರುವ ಆಟೋ ಗ್ಯಾಸ್ ಗಾಗಿ. ಬೆಂಗಳೂರಿನಲ್ಲಿ ಆಟೋ ಗ್ಯಾಸ್ ಸಿಗುವ ಕೆಲವೇ ಬಂಕುಗಳ ಬಳಿ ಆಟೋರಿಕ್ಷಾಗಳು ಕಿಲೋಮೀಟರ್ ಗಟ್ಟಲೆ ಸಾಲುಗಟ್ಟಿ ನಿಂತ ದೃಶ್ಯಗಳು ಕಾಣುತ್ತಿವೆ.

ಇಂಧನವನ್ನು ಹುಡುಕುವ ಮೊದಲು ಚಾಲಕರು ಮೂರರಿಂದ ನಾಲ್ಕು ಬಂಕ್ ಗಳನ್ನು ಪರಿಶೀಲಿಸಬೇಕಾಗುತ್ತದೆ, ನಂತರವೂ ದೀರ್ಘ ಸಮಯ ಕಾಯಬೇಕಾಗುತ್ತದೆ. ಇಷ್ಟು ಸಮಯ ಕಾದರೂ ಅವರಿಗೆ ಸಿಗುವ ಗ್ಯಾಸ್ 200 ರೂ.ಗಳಿಂದ 500 ರೂಗಳಿಗೆ ಮಾತ್ರ. ಅಂದರೆ, 2ರಿಂದ 5 ಲೀಟರ್ ಮಾತ್ರ. ಲೀಟರ್ ಗೆ 15ರಿಂದ 20 ಕಿಲೋಮೀಟರ್ ಸಂಚರಿಸಲು ಸಾಧ್ಯ. ಇದರಿಂದ ದುಡಿಮೆ ಮಾಡಿ ಬದುಕು ಸಾಗಿಸುವುದಾದರೂ ಹೇಗೆ ಎಂಬ ಅಳಲು ಚಾಲಕರದು. ಮತ ಕೇಳಲು ಬರುವ ರಾಜಕಾರಣಿಗಳು ಇಂದು ನಮ್ಮ ನೆರವಿಗೆ ಯಾಕೆ ಬರುತ್ತಿಲ್ಲ? ಎಂದು ಆಕ್ರೋಶದಿಂದ ಪ್ರಶ್ನಿಸುತ್ತಿದ್ದಾರೆ. ಸಂಕಷ್ಟ

ಇದನ್ನೂ ಓದಿ: ಬೆಂಗಳೂರು| ಎಲ್‌ಪಿಜಿ ಬಿಕ್ಕಟ್ಟು; ಆಟೋ ಚಾಲಕರ ಸಂಕಷ್ಟ ಹೆಚ್ಚಳ

ಹಲವು ಗಂಟೆಗಳು, ದಿನವೆಲ್ಲಾ ಕಾದರೂ ಕೆಲವೊಮ್ಮೆ ಗ್ಯಾಸ್ ಖಾಲಿಯಾದ ಕಾರಣದಿಂದ ಚಾಲಕರು ನಿರಾಸೆಯಿಂದ ಮುಂದಿನ ಬಂಕುಗಳಲ್ಲಿ ಸಿಗಬಹುದೇನೋ ಎಂಬ ಆಸೆಯಿಂದ ಹೊರಟರೆ, ಸಂಪೂರ್ಣ ಗ್ಯಾಸ್ ಖಾಲಿಯಾಗಿರುವ ಆಟೋಗಳು ಬಂಕುಗಳ ಬಳಿಯೇ ಕಾದು ಕುಳಿತ ದೃಶ್ಯಗಳು ಅಲ್ಲಲ್ಲಿ ಕಾಣುತ್ತವೆ. ರಾತ್ರಿಯಲ್ಲಾ ಬಂಕ್ ಮುಂದೆ ಸಾಲಿನಲ್ಲಿ ಆಟೋ ನಿಲ್ಲಿಸಿ, ಚಾಲಕರು ಊಟ, ತಿಂಡಿ ಬಿಟ್ಟು ಅಲ್ಲೇ ಮಲಗುವ ಪರಿಸ್ಥಿತಿ ಬಂದಿದೆ. ಸಂಕಷ್ಟ

ಕೆಲವು ಬಂಕ್‌ಗಳ ಬಳಿ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದ್ದು, ಇಂಧನಕ್ಕಾಗಿ ಸಾಲುಗಟ್ಟಿ ನಿಲ್ಲುವಾಗ ರಸ್ತೆಗಳನ್ನು ನಿರ್ಬಂಧಿಸದಂತೆ ಚಾಲಕರನ್ನು ಒತ್ತಾಯಿಸಿದ್ದಾರೆ. ಸಂಚಾರ ಒತ್ತಡ ಇರುವ ಕಡೆಗಳಲ್ಲಿ ಚಾಲಕರನ್ನು ಬೇರೆ ನಿಲ್ದಾಣಗಳಿಗೆ ತೆರಳುವಂತೆ ಪೊಲೀಸರು ಸೂಚಿಸಿದ ಘಟನೆಯೂ ನಡೆದಿವೆ. ಗ್ಯಾಸ್‌ ಸಂಪೂರ್ಣವಾಗಿ ಖಾಲಿ ಆದ ಕಾರಣದಿಂದ ಮನೆ ಕಡೆಗೆ ಅಥವಾ ಮತ್ತೊಂದು ಗ್ಯಾಸ್‌ ಬಂಕ್‌ ಕಡೆಗೆ ಆಟೋರಿಕ್ಷಾ ತಳ್ಳಿಕೊಂಡು ಹೋಗುತ್ತಿರುವ ದೃಶ್ಯಗಳೂ ಅಲ್ಲಲ್ಲಿ ಕಾಣುತ್ತಿವೆ. ಸಂಕಷ್ಟ

ಒಂದೊಂದು ಬಂಕ್‌ಗಳಲ್ಲಿ ಒಂದೊಂದು ದರ!!

ಫೆಬ್ರವರಿ ತಿಂಗಳಲ್ಲಿ ಒಂದು ಲೀಟರ್ ಆಟೋ ಗ್ಯಾಸ್‌ಗೆ 60 ರೂ ಇದ್ದ ದರ ಏಪ್ರಿಲ್ 6ರಂದು ಸರ್ಕಾರಿ ಒಡೆತನದ ಪೆಟ್ರೋಲ್‌ ಬಂಕುಗಳಲ್ಲಿ 90 ರೂಗಳಿಗೆ ಏರಿಕೆಯಾಗಿದೆ. ಇನ್ನು ಖಾಸಗಿ ಗ್ಯಾಸ್‌ ಬಂಕುಗಳಲ್ಲಿ 105 ರೂ. (ಗೋ ಗ್ಯಾಸ್‌ ಬಂಕ್‌ ಒಂದರಲ್ಲಿ 120 ರೂ) ದರಕ್ಕೆ ಮಾರಾಟ ಮಾಡುಲಾಗುತ್ತಿದೆ. ಸಂಕಷ್ಟ

ಚಾಲಕರು ಖಾಸಗಿ ಬಂಕ್‌ ನವರ ವಿರುದ್ಧ ಇದರಿಂದ ರೊಚ್ಚಿಗೆದ್ದಿದ್ದಾರೆ, ಆದರೂ ಅನಿವಾರ್ಯವಾಗಿ ಅವರು ಹೇಳಿದ ದರ ಕೊಟ್ಟು ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದಾರೆ. ಆಟೋ ಗ್ಯಾಸ್ ಬಂಕುಗಳಿಗೆ ಬರುವ ಎಲ್‌ಪಿಜಿ ಟ್ಯಾಂಕುಗಳು ಕಳ್ಳಮಾರ್ಗದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳಿಗೆ ತುಂಬುವ ಕಡೆ ಹೋಗುತ್ತಿವೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಸಂಕಷ್ಟ

ಮುಚ್ಚಿದ ಖಾಸಗಿ ಗ್ಯಾಸ್ ಬಂಕ್‌ಗಳು

ಬೆಂಗಳೂರು ಮತ್ತು ರಾಜ್ಯದ ಬಹುತೇಕ ಖಾಸಗಿ ಆಟೋ ಗ್ಯಾಸ್ ಬಂಕುಗಳು ಮುಚ್ಚಿವೆ. ತೆರೆದಿರುವ ಬಂಕುಗಳೂ ಹೆಚ್ಚಿನ ದರದಲ್ಲಿ ಗ್ಯಾಸ್ ಮಾರಾಟ ಮಾಡುತ್ತಿವೆ. ಪ್ರಸ್ತುತ ಮಾರುಕಟ್ಟೆ ದರಲೀಟರ್‌ಗೆ 130 ರೂ.ಗಳಿಗೂ ಹೆಚ್ಚು. ಹೀಗಾಗಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ನಮಗೆ ಅನಿವಾರ್ಯವಾಗಿದೆ ಎಂದು ಖಾಸಗಿ ಗ್ಯಾಸ್ ಬಂಕ್‌ನವರು ಹೇಳುತ್ತಾರೆ. ಬೆಲೆಗಳನ್ನು ಹೆಚ್ಚಿಸಲು ಅನಿಲ ಏಜೆನ್ಸಿಗಳು ಕೃತಕ ಕೊರತೆಯನ್ನು ಸೃಷ್ಟಿಸಿವೆ ಎಂಬ ಆರೋಪಗಳೂ ಕೇಳಿಬಂದಿವೆ.

ನೆರವಿಗೆ ಬಾರದ ಸರ್ಕಾರಗಳು

ಇವೆಲ್ಲವೂ ಆಟೋಚಾಲಕರ ದೈನಂದಿನ ಗಳಿಕೆ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ಆಟೋಗಳನ್ನು ಬಾಡಿಗೆಗೆ ಪಡೆದು ದುಡಿಯುತ್ತಿರುವ ಚಾಲಕರು ಆಟೋ ಮಾಲೀಕರಿಗೆ ದಿನವೊಂದಕ್ಕೆ 300 ರೂ.ಗಳನ್ನು ಕೊಡಬೇಕು. ಗ್ಯಾಸ್ ಸಿಗದ ಕಾರಣ ಅಥವಾ ಗ್ಯಾಸ್‌ಗಾಗಿ ಬಂಕುಗಳ ಮುಂದೆ ಸಮಯ ಕಳೆದ ಕಾರಣ ಬಾಡಿಗೆ ಕೊಡಲಾಗುತ್ತಿಲ್ಲ ಎಂದು ಅವರು ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಸಂಕಷ್ಟ

ಸ್ವಂತ ಆಟೋ ಹೊಂದಿರುವವರೂ ಕೂಡ ಸಾಲದ ಕಂತು, ಬಡ್ಡಿ ಕಟ್ಟಲು ಆಗುತ್ತಿಲ್ಲ, ಮನೆಗೆ ದಿನನಿತ್ಯದ ಅಗತ್ಯ ಪದಾರ್ಥಗಳನ್ನು ಕೊಂಡೊಯ್ಯಲು ಆಗುತ್ತಿಲ್ಲ, ಮಕ್ಕಳಿಗೆ ಶಾಲಾ ಶುಲ್ಕ ಕಟ್ಟಲಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದ ಹಲವೆಡೆಗಳಲ್ಲಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ ವರದಿಗಳು ಬಂದಿವೆ.ಇದು ನಮಗೆ ಸಂಬಂಧಿಸಿದ್ದಲ್ಲ,, ಕೇದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ರಾಜ್ಯ ಸರ್ಕಾರದ ಸಚಿವರು ಹೇಳುವ ಮೂಲಕ ತಮ್ಮ ಜವಾಬ್ಧಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಂಕಷ್ಟ

ಬಿಕ್ಕಟ್ಟನ್ನು ಎದುರಿಸಲು ಒಗ್ಗಟ್ಟಿನಿಂದ ನಿಲ್ಲಿರಿಎಂದ ಪ್ರಧಾನಿ

ಅಡುಗೆ ಅನಿಲದ ಸಿಲಿಂಡರ್‌ಗಾಗಿ ಗ್ಯಾಸ್ ಏಜೆನ್ಸಿ ಅಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ದೇಶದೆಲ್ಲೆಡೆ ಕಾಣುತ್ತಿವೆ.ಬುಕಿಂಗ್ ಮಾಡಿ ಒಂದು ತಿಂಗಳಾದರೂ, ಸಿಲಿಂಡರ್‌ಗಳು ಮನೆ ಬಾಗಿಲಿಗೆ ತಲುಪುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಲಿಂಡರ್ ಗಳಿಗಾಗಿ ಸಾಲುಗಟ್ಟಿ ನಿಂತಿರುವ ದೃಶ್ಯಗಳು ನೋಟು ರದ್ಧತಿ ಸಮಯದಲ್ಲಿ ಬ್ಯಾಂಕುಗಳ ಮುಂದೆ ನಿಂತ ಜನರ ಸಾಲುಗಳನ್ನು ನೆನಪಿಸುತ್ತವೆ.ಇದಕ್ಕೆ ಕಾರಣ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳಿ ಕೈ ಚೆಲ್ಲಿ ಕುಳಿತಿವೆ. ಸಂಕಷ್ಟ

ಮತ್ತೊಂದಡೆ, ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಇಂಧನ ಬಿಕ್ಕಟ್ಟು ಮತ್ತು ಇತರ ಸವಾಲುಗಳಿಗೆ ಕಾರಣವಾಗಬಹುದು, ಕೊರೊನಾ ಅವಧಿಯಲ್ಲಿ ಜನರು ಎದುರಿಸುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಮುಂಚಿತವಾಗಿ ಸಿದ್ಧರಾಗುವಂತೆ ಜನರಿಗೆ ಸಲಹೆ ನೀಡಿದರು. ಮತ್ತೊಂದೆಡೆ, ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ‘ಯಾವುದೇ ಬಿಕ್ಕಟ್ಟು ಇಲ್ಲ, ಮೀಸಲು ಸಮತೋಲಿತವಾಗಿದೆ’ ಎಂದು ಹೇಳುತ್ತಾರೆ. ಈ ಹೇಳಿಕೆಗಳು ಸ್ವಾಭಾವಿಕವಾಗಿಯೇ ಜನರಲ್ಲಿ ಆತಂಕ ಸೃಷ್ಟಿಸಿವೆ.

ವಾಣಿಜ್ಯ ಬಳಕೆಯ ಸಿಲಿಂಡರ್ ದರ ಮತ್ತಷ್ಟು ಹೆಚ್ಚಳ

ಇವೆಲ್ಲದರ ನಡುವೆ, ಅನಿಲ ಸಂಸ್ಥೆಗಳು ಏಪ್ರಿಲ್ ಒಂದರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 195.50 ರೂ. ಹೆಚ್ಚಿಸುವ ಮೂಲಕ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿವೆ. ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಬೆಲೆ ಈಗ 2,161 ರೂ. ಆಗಿದೆ. ಮಾರ್ಚ್ 1 ರಂದು 114.5 ರೂ. ಹೆಚ್ಚಿಸಲಾಗಿತ್ತು.

ಈ ಹೆಚ್ಚಳದೊಂದಿಗೆ ಒಂದು ತಿಂಗಳ ಅವಧಿಯಲ್ಲಿ 310 ರೂ ಹೆಚ್ಚಳವಾದಂತಾಗಿದೆ. ಈ ಬಾರಿ 14.2 ಕೆಜಿ ಗೃಹಬಳಕೆ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿಲ್ಲ. ಅದರ ಬೆಲೆ ರೂ. 915.50. ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೆ ಇದನ್ನು ಸರ್ಕಾರ ತಡೆಯಿಡಿದಿದೆ, ನಂತರ ದೊಡ್ಡ ಪ್ರಮಾಣದಲ್ಲಿ ಬೆಲೆ ಹೆಚ್ಚಲಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಬೆಲೆ ನಿಗದಿ: ಕೇಂದ್ರ ಸರ್ಕಾರದ ನಿಯಂತ್ರಣವಿಲ್ಲ, ಆದರೆ…

ಇವೆಲ್ಲದರ ನಡುವೆ ನಾವು ಒಂದು ಅಂಶವನ್ನು ಗಮನಿಸಬೇಕಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಗದಿಯ ಮೇಲಿದ್ದ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಿ, ಬೆಲೆ ನಿಗದಿಯನ್ನು ತೈಲ ಕಂಪನಿಗಳ ಇಚ್ಚೆಗೆ ಬಿಟ್ಟುಕೊಟ್ಟಿದೆ. ಈ ರೀತಿ ನಿಯಂತ್ರಣ ಮುಕ್ತ ಮಾಡಿದಾಗ, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಾರುಕಟ್ಟೆಯಿಂದ ನಿರ್ಧರಿಸಲ್ಪಡುತ್ತವೆ ಮತ್ತು ಅಂತರರಾಷ್ಟ್ರೀಯ ಬೆಲೆಗಳಿಗೆ ಸಂಬಂಧಿಸಿವೆ” ಎಂದು ಸರ್ಕಾರ ಹೇಳಿತ್ತು.

ಪೆಟ್ರೋಲ್ ಬೆಲೆ ಹೆಚ್ಚಳವಾದಾಗಲೂ “ಈ ಹೆಚ್ಚಳಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಇದನ್ನು ತೈಲ ಕಂಪನಿಗಳೇ ನಿರ್ಧರಿಸುತ್ತವೆ” ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ಆದರೂ, ಸಾಮಾನ್ಯ ದಿನಗಳಲ್ಲಿ ಆಗಾಗ್ಗೆ ಪೆಟ್ರೋಲ್ ದರ ಪರಿಸ್ಕರಣೆ ಮಾಡುವ ತೈಲ ಕಂಪನಿಗಳು, ದೇಶದಲ್ಲಿ ಯಾವುದಾದರು ಚುನಾವಣೆಗಳು ನಡೆದಾಗ ತಿಂಗಳು ಕಾಲ ಬೆಲೆ ಹೆಚ್ಚಳವನ್ನು ತಡೆ ಹಿಡಿಯುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಮೊದಲೇ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದರೆ…

ಯುದ್ಧದ ಕಾರಣದಿಂದಾಗಿ ಇರಾನ್ ಹಾರ್ಮೂಜ್ ಜಲಸಂಧಿಯನ್ನು ಮುಚ್ಚಿದೆ. ಈ ಜಲಸಂಧಿಯ ಮೂಲಕ ಯಾವುದೇ ಹಡಗುಗಳು ಸಂಚರಿಸದಂತೆ ತಡೆಯೊಡ್ಡಿದೆ. ತೈಲ ಹೊತ್ತ ನೂರಾರು ಹಡಗುಗಳು ಹಾರ್ಮೂಜ್ ಜಲಸಂಧಿಯ ಆಚೆ ನಿಂತಿವೆ. ಭಾರತ, ಚೀನಾ ದೇಶಗಳ ತೈಲ ಹೊತ್ತ ಕೆಲವು ಹಡಗುಗಳಿಗೆ ಈ ಮಾರ್ಗದಲ್ಲಿ ಸಂಚರಿಲು ಅವಕಾಶ ಕೊಟ್ಟಿದ್ದರೂ ಅದರಿಂದ ಅನಿಲದ ತೀರ್ವತರವಾದ ಕೊರತೆಯ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.

ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದಾಗಿ ಸಾಗಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಸರ್ಕಾರ ಊಹಿಸಿ, ಮೊದಲೇ ಸೂಕ್ತ ವ್ಯವಸ್ಥೆಗಳನ್ನು ಮಾಡಿದ್ದರೆ, ಇಂತಹ ಅಭಾವದ ಪರಿಸ್ಥಿತಿ ಇರುತ್ತಿರಲಿಲ್ಲ.ಅಮೆರಿಕ- ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ 36 ದಿನಗಳ (ಏಪ್ರಿಲ್ 6ರ) ನಂತರವೂ ಮುಂದುವರಿದೆ. ಇರಾನ್‌ ವಿರುದ್ಧ ಟ್ರಂಪ್‌ ನೀಡುವ ಹೇಳಿಕೆಗಳು ಜಗತ್ತನ್ನು ಆತಂಕದಲ್ಲಿ ದೂಡಿವೆ. ಯುದ್ಧ ಮತ್ತಷ್ಟು ಭೀಕರವಾಗುವ ಸೂಚನೆಗಳು ಕಾಣುತ್ತಿವೆ.

ದರಗಳು ಇಳಿಯುವ ಸಾಧ್ಯತೆ ಕಡಿಮೆ

ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಐತಿಹಾಸಿಕ ಕುಸಿತ ಕಂಡಿದೆ. ಏಪ್ರಿಲ್‌ 6ರಂದು ರೂಪಾಯಿ ಮೌಲ್ಯ 93.70 ಇತ್ತು. ಇದು ಮಾರ್ಚ್ ಅಂತ್ಯದಲ್ಲಿ 95 ರ ವರೆಗೂ ಕುಸಿದಿತ್ತು. ಇದರಿಂದಾಗಿ ಭಾರತದಲ್ಲಿ ಆಮದು ಸರಕುಗಳ ಬೆಲೆ ಗಗನಕ್ಕೆ ಏರುತ್ತಿದೆ. ಆಮದು ಮಾಡಿಕೊಳ್ಳುವ ಸರಕುಗಳಿಗೆ ಪಾವತಿಸಬೇಕಾದ ರೂಪಾಯಿ ಮೊತ್ತ ಹೆಚ್ಚಾದಾಗಲೆಲ್ಲಾ, ಹೆಚ್ಚಿದ ವೆಚ್ಚಕ್ಕೆ ಅನುಗುಣವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲಾಗುತ್ತದೆ ಮತ್ತು ಅದರ ಹೊರೆಯನ್ನು ಜನರ ಮೇಲೆ ವರ್ಗಾಯಿಸಲಾಗುತ್ತದೆ. ಈ ಕಾರಣದಿಂದ ಇವುಗಳ ಬೆಲೆ ಯುದ್ಧದ ಮೊದಲಿನ ದಿನಗಳ ದರಗಳಿಗೆ ಇಳಿಯುವ ಸಾಧ್ಯತೆ ಕಡಿಮೆ.

ಯುದ್ದ ಮುಗಿದರೂ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಮಸ್ಯೆ ಹಲವು ಸಮಯದವರೆಗೆ ಮುಂದುವರಿಯುತ್ತದೆ. ಯುದ್ದದಲ್ಲಿ ಇಸ್ರೇಲ್, ಅಮೆರಿಕ, ಇರಾನ್ ದೇಶಗಳು ಹಲವು ತೈಲ ಸಂಸ್ಕರಣ ಘಟಕಗಳ ಮೇಲೆ ದಾಳಿ ಮಾಡಿ ಸುಟ್ಟುಹಾಕಿವೆ, ಸುಟ್ಟುಹಾಕುತ್ತಿವೆ. ದಾಳಿಗಳಿಂದ ಹಾನಿಗೊಳಗಾಗಿರುವ ತೈಲ ಸಂಸ್ಕರಣ ಘಟಕಗಳನ್ನು ಮತ್ತೆ ಸುವ್ಯವಸ್ಥೆಗೆ ತರಬೇಕಾದರೆ ಹಲವು ಸಮಯ ಬೇಕಾಗುತ್ತದೆ.

ಕಚ್ಚಾ ತೈಲ ಬೆಲೆ 110 ಡಾಲರ್‌ಗೆ ಏರಿಕೆ

ಜಾಗತಿಕ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ಮಾರ್ಚ್ ಅಂತ್ಯದಲ್ಲಿ 110 ಡಾಲರ್ ಗೆ ಏರಿಕೆ ಕಂಡಿದೆ. ಇದು ಫೆಬ್ರವರಿ 26ರಂದು 70 ಡಾಲರ್ ನಷ್ಟಿತ್ತು. ಯುದ್ಧ ಇನ್ನಷ್ಟು ಕಾಲ ಮುಂದುವರಿದರೆ ಇದು 200 ಡಾಲರ್ ಮುಟ್ಟಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಸರ್ಕಾರದ ನಿಯಂತ್ರಣ ತೆಗೆದುಹಾಕಿದ್ದು ಮತ್ತು ಖಾಸಗೀಕರಣ

ವಿಶ್ವ ವ್ಯಾಪಾರ ಸಂಘಟನೆ (WTO)ಯ ಜೊತೆ 1991 ರಲ್ಲಿ ಭಾರತ ಸರ್ಕಾರ ಮಾಡಿಕೊಂಡ ಒಪ್ಪಂದದ ಒಂದು ಅಂಶವೂ, ಅಡುಗೆ ಅನಿಲದ ಮೇಲಿನ ಈ ಸಬ್ಸಿಡಿ ಕಡಿತ ಮತ್ತು ಬೆಲೆ ಏರಿಕೆಗೆ ಪ್ರಮುಖ ಕಾರಣವಾಯಿತು. ಜನಸಾಮಾನ್ಯರಿಗೆ ನೀಡುತ್ತಿರುವ ಆಹಾರದ ಮೇಲಿನ ಸಬ್ಸಿಡಿ, ರಸಗೊಬ್ಬರ, ವಿದ್ಯುತ್, ಸೀಮೆಎಣ್ಣೆ, ಡೀಸಲ್, ಪೆಟ್ರೋಲ್, ಅಡುಗೆ ಅನಿಲ ಇವುಗಳಿಗೆ ಸರ್ಕಾರ ನೀಡುತ್ತಿರುವ ರಿಯಾಯಿತಿಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು.

ಮತ್ತು ಈ ಎಲ್ಲವುಗಳ ಬೆಲೆ ನಿಗದಿ ಮೇಲಿನ ಸರ್ಕಾರದ ನಿಯಂತ್ರಣವನ್ನು ತೆಗೆದುಹಾಕಿ, ಇವುಗಳನ್ನು ಮುಕ್ತ ಮಾರುಕಟ್ಟೆ ವ್ಯವಸ್ಥೆಗೆ ತೆರೆದಿಡಬೇಕು. ಇವುಗಳ ಉತ್ಪನ್ನ, ಸರಭರಾಜು, ವಿತರಣೆಯನ್ನು ಖಾಸಗಿಯವರಿಗೆ ಬಿಟ್ಟುಕೊಡಬೇಕು ಎಂಬುದು ಡಬ್ಯ್ಲೂಟಿಒ ವಿಧಿಸಿದ ಷರತ್ತುಗಳಲ್ಲಿ ಕೆಲವು ಅಂಶಗಳಾಗಿವೆ. ಮುಕ್ತ ಆರ್ಥಿಕ ನೀತಿಗಳನ್ನು ಒಪ್ಪಿಕೊಂಡ ನಂತರ ಕೇಂದ್ರದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಡಬ್ಲ್ಯೂಟಿಒ ಒಪ್ಪಂದ ಜಾರಿಮಾಡಲು ಮುಂದಾಗುತ್ತವೆ.

ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು

ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಹಿಂದಿನ ಕಣ್ಣೋಟವನ್ನು ಕೈಬಿಟ್ಟಿದ್ದು, ದೇಶೀ ತೈಲ ಉತ್ಪಾದನೆಯಲ್ಲಿ ಆಗಿರುವ ತೀವ್ರ ಇಳಿಕೆಯೂ ಇಂದಿನ ಸ್ಥಿತಿಗೆ ಕಾರಣ. 1990ರ ದಶಕದಲ್ಲಿ ತೈಲವನ್ನು ಆಮದು ಮಾಡಿಕೊಳ್ಳಬೇಕೆಂದು ಪ್ರತಿಪಾದಿಸುವ ಒಂದು ಬಲವಾದ ಲಾಬಿ ಮೂಡಿಬಂತು. ವಿಶ್ವಬ್ಯಾಂಕ್, ಎನ್ರೋನ್ ನಂತಹ ಬಹುರಾಷ್ಟ್ರೀಯ ತೈಲ ಕಂಪನಿಗಳು, ಪೆಟ್ರೋಲಿಯಂ ಮಂತ್ರಾಲಯ ಹಾಗೂ ಹಣಕಾಸು ಮಂತ್ರಾಲಯ ಇವರೆಲ್ಲಾ ಸೇರಿ ಭಾರತ ತನ್ನ ತೈಲ ಅವಶ್ಯಕತೆಯ 50-60 ಶೇಕಡಾವನ್ನು ಆಮದುಗಳಿಂದಲೇ ಪೂರೈಸಿಕೊಳ್ಳಬೇಕು ಎಂಬ ಒಂದು ಏಕಾಭಿಪ್ರಾಯ ವಿಕಾಸಗೊಳಿಸಿದರು.

1984-85ರಲ್ಲಿ ದೇಶ ತನ್ನ ಅಗತ್ಯದ ಶೇ. 70ರಷ್ಟನ್ನು ದೇಶೀ ಉತ್ಪಾದನೆಯಿಂದಲೇ ಪೂರೈಸಿಕೊಳ್ಳುತ್ತಿತ್ತು. ಆದರೆ, ಇಂದು ಶೇ. 85 ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಭಾರತದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಉತ್ಪಾದನೆಯು 2011-12 ರಿಂದ ನಿರಂತರವಾಗಿ ಕುಸಿಯುತ್ತಿದೆ. ಹೀಗಾಗಲು ತೈಲ ಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಣ ತೊಡಗಿಸದೇ ಇರುವುದು ಒಂದು ಮುಖ್ಯ ಕಾರಣ. ಇದನ್ನು ಸರಿಪಡಿಸದಿದ್ದರೆ ಈ ಸಮಸ್ಯೆ ದೇಶವನ್ನು ಬಾಧಿಸುತ್ತಲೇ ಇರುತ್ತದೆ.

ಸಾಕಷ್ಟು ದಾಸ್ತಾನು ಇಡದೇ ಇರುವುದು

ಭಾರತದಲ್ಲಿ 25 ದಿನಗಳಿಗೆ ಬೇಕಾಗುವಷ್ಟು ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ದಾಸ್ತಾನು ಇದೆ ಎಂದು ಕೆಲವು ಮೂಲಗಳು ತಿಳಿಸಿವೆ. ಕಾಳಸಂತೆ ಮಾರಾಟಕ್ಕೆ ಅವಕಾಶ ಇಲ್ಲದಂತೆ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದ್ದರೆ, ಅನಿಲದ ಕೊರತೆಯ ತೀವ್ರತೆಯನ್ನು ಕಡಿಮೆ ಮಾಡಬಹುದಿತ್ತು. ನಂತರವೂ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಜನರಿಗೆ ಭರವಸೆ ಕೊಟ್ಟು, ಅದಕ್ಕೆ ಪೂರಕವಾಗಿ ಆಮದಿಗೆ ಕ್ರಮ ತೆಗೆದುಕೊಂಡಿದ್ದರೆ, ಅನಿಲದ ಕೊರತೆ ಉಂಟಾಗುತ್ತಿರಲಿಲ್ಲ.

ಈಗಿನ ಈ ದಾಸ್ತಾನು ಏನೇನೂ ಸಾಲದು. ಯುದ್ದ, ಬರಗಾಲ, ಪ್ರಕೃತಿ ವಿಕೋಪದ ಸಂದರ್ಭಗಳಿಗೆಂದೇ ಇಂತಹ ಅಗತ್ಯ ವಸ್ತುಗಳನ್ನು ಕನಿಷ್ಟ ಪಕ್ಷ ಆರು ತಿಂಗಳಿಗೆ ಬೇಕಾಗುವಷ್ಟು ದಾಸ್ತಾನು ಇಡಬೇಕು. ಲಾಭವೇ ಮುಖ್ಯ ಎಂಬ ಮನಸ್ಥಿತಿ ಇರುವ ಆಳುವವರಿಂದ ಇದೆಲ್ಲವನ್ನೂ ನಿರೀಕ್ಷಿಸುವುದು ಕಷ್ಟ.

ರಾಜ್ಯ ಸರ್ಕಾರಕ್ಕೆ ಆಟೋ ಚಾಲಕರ ಸಂಘದ ಒತ್ತಾಯ

ಆಟೋರಿಕ್ಷಾಗಳಿಗೆ ಎಲ್‌ಪಿಜಿ ಇಂಧನ ಸರಾಗವಾಗಿ ಲಭ್ಯವಿರುವ ಹಾಗೆ ಮತ್ತು ಲೀಟರ್ ದರವು 60 ರೂ.ಗಳಿಗಿಂತ ಹೆಚ್ಚಾಗದಂತೆ ಹಾಗೂ ಕೃತಕ ಅಭಾವ ಸೃಷ್ಟಿಯಾಗದಂತೆ ಚಾಲಕರಿಗೆ ಅನುಕೂಲ ಮಾಡಿಕೊಡಬೇಕು. ಎಲ್ಲಾ ಗ್ಯಾಸ್ ಬಂಕ್‌ಗಳಲ್ಲೂ ಆಟೋರಿಕ್ಷಾ ಚಾಲಕರಿಗೆ ಎಲ್‌ಪಿಜಿ ಲಭ್ಯತೆ ಇರಬೇಕು. ಎಲ್‌ಪಿಜಿ ಗ್ಯಾಸ್ ಬಂಕ್‌ಗಳು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.

ಸರ್ಕಾರಿ ಒಡೆತನದ ಐಒಸಿ, ಬಿಪಿಸಿಎಲ್, ಎಚ್‌ಪಿಸಿಎಲ್ ಕಂಪನಿಗಳಲ್ಲಿ ಕಡಿಮೆ ದರದಲ್ಲಿ ಎಲ್‌ಪಿಜಿ ಸಿಗುವಂತೆ ಆದೇಶ ಹೊರಡಿಸಿ ಜಾರಿಗೆ ತರಬೇಕು. ಆಟೋ ಚಾಲಕರ ಇಂದಿನ ಸಂಕಷ್ಟಗಳಿಗೆ ಪರಿಹಾರವಾಗಿ ತಿಂಗಳಿಗೆ 15 ಸಾವಿರ ರೂ ಆರ್ಥಿಕ ನೆರವು ನೀಡಬೇಕು. ಆಟೋ ಇಂಧನಗಳನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು ಎಂಬ ಬೇಡಿಕೆಗಳುಳ್ಳ ಮನವಿ ಪತ್ರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಕೆ.ಎಚ್. ಮುನಿಯಪ್ಪ, ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಇವರಿಗೆ ಬೆಂಗಳೂರಿನ ಆಟೋರಿಕ್ಷಾ ಚಾಲಕರ ಸಂಘ (ಸಿಐಟಿಯು) ಸಲ್ಲಿಸಿದೆ.

ಇದನ್ನೂ ನೋಡಿ: 1 ಲಕ್ಷ ಶಿಕ್ಷಕರು ಜನಗಣತಿಗೆ: ಶಿಕ್ಷಣ ವ್ಯವಸ್ಥೆಗೆ ದೊಡ್ಡ ಹೊಡೆತ? Janashakthi Media

Donate Janashakthi Media

Leave a Reply

Your email address will not be published. Required fields are marked *