ಪ್ರವಾಹ, ಭೂಕುಸಿತ, ಭಾರೀ ಮಳೆಯಿಂದ ಉತ್ತರ ಭಾರತ ತತ್ತರ; ‘ಡಬಲ್ ಎಂಜಿನ್ ಸರ್ಕಾರ’ದ ಮೇಲೆ ಹೆಚ್ಚಿದ ಟೀಕೆ

ನವದೆಹಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ, ಭೂಕುಸಿತ ಮತ್ತು ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಪ್ರವಾಹ

ಉತ್ತರಾಖಂಡದಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ರುದ್ರಪ್ರಯಾಗ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, 75ಕ್ಕೂ ಹೆಚ್ಚು ರಸ್ತೆಗಳು ಸಂಚಾರಕ್ಕೆ ಬಂದ್ ಆಗಿದ್ದು, 29 ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಗಾಗಿವೆ. ಉತ್ತರಕಾಶಿ ಜಿಲ್ಲೆಯಲ್ಲಿ ಭೂಕುಸಿತದಿಂದ ಗಂಗೋತ್ರಿ ಹೆದ್ದಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಚಾರ್‌ಧಾಮ್ ಯಾತ್ರೆಯ ಸಂಚಾರಕ್ಕೂ ಅಡ್ಡಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಭಾಗಗಳಲ್ಲಿ 160 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದು, ರಸ್ತೆಗಳು ಜಲಾವೃತಗೊಂಡಿವೆ. ಗುಜರಾತ್‌ನ ಸೂರತ್ ಸೇರಿದಂತೆ ಹಲವು ನಗರಗಳಲ್ಲೂ ರಸ್ತೆಗಳು ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಪ್ರವಾಹ

ಇದನ್ನೂ ಓದಿ : ಎಸ್‌ಐಆರ್‌ಗೆ ಬೂತ್ ಮಟ್ಟದಲ್ಲಿ ತ್ವರಿತ ಹೆಲ್ಪ್‌ಡೆಸ್ಕ್ ಆರಂಭಿಸಿ: ನಾಗರಿಕ ಮತಕಾವಲು ಸಮಿತಿ ಆಗ್ರಹ

ಉತ್ತರ ಪ್ರದೇಶದ ಗಾಜಿಯಾಬಾದ್, ಮೀರತ್, ಹಾಪುರ್, ಬುಲಂದ್‌ಶಹರ್, ಬಾಗ್‌ಪತ್, ಮುಜಫರ್‌ನಗರ ಹಾಗೂ ಮೊರಾದಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತಷ್ಟು ಭಾರೀ ಮಳೆಯ ಮುನ್ಸೂಚನೆ ನೀಡಿರುವ ಐಎಂಡಿ, ರೆಡ್ ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಜಿಲ್ಲೆಗಳ ಶಾಲೆಗಳಿಗೆ ರಜೆ ನೀಡಲಾಗಿದೆ.

‘ಡಬಲ್ ಎಂಜಿನ್ ಸರ್ಕಾರ’ದ ವಿರುದ್ಧ ಹೆಚ್ಚಿದ ಟೀಕೆ

ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ ಸೇರಿದಂತೆ ಬಿಜೆಪಿ ಆಡಳಿತ ಅಥವಾ ಬಿಜೆಪಿ ಮೈತ್ರಿ ಆಡಳಿತವಿರುವ ಹಲವು ರಾಜ್ಯಗಳಲ್ಲಿ ಪ್ರವಾಹ, ಭೂಕುಸಿತ ಮತ್ತು ಮೂಲಸೌಕರ್ಯ ಕುಸಿತದಿಂದ ಜನರು ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ‘ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿ ಮತ್ತು ಪರಿಣಾಮಕಾರಿ ಆಡಳಿತದ ಭರವಸೆ ನೀಡಿತ್ತು. ಆದರೆ ವಿಪತ್ತು ನಿರ್ವಹಣೆ ಹಾಗೂ ಸಾರ್ವಜನಿಕರ ಸುರಕ್ಷತೆಯಲ್ಲಿ ಆ ಭರವಸೆ ಕಾಣುತ್ತಿಲ್ಲ’ ಎಂಬ ಟೀಕೆಗಳು ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.

ಪ್ರತಿ ಮಳೆಗಾಲದಲ್ಲೂ ರಸ್ತೆಗಳು ಕೊಚ್ಚಿ ಹೋಗುವುದು, ಭೂಕುಸಿತದಿಂದ ಹೆದ್ದಾರಿಗಳು ಬಂದ್ ಆಗುವುದು, ವಿದ್ಯುತ್ ಮತ್ತು ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದು ಮರುಕಳಿಸುತ್ತಲೇ ಇದೆ. ವಿಪತ್ತು ನಿರ್ವಹಣೆಗೆ ದೀರ್ಘಕಾಲೀನ ಯೋಜನೆಗಳನ್ನು ಜಾರಿಗೆ ತರುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂಬ ಆರೋಪಗಳೂ ವ್ಯಕ್ತವಾಗುತ್ತಿವೆ.

ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನರು ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರವಾಹ

ಇದನ್ನೂ ನೋಡಿ : ಚೇಳುಗಳ ವಿಸ್ಮಯ ಜಗತ್ತು: ಗೊತ್ತಿಲ್ಲದ ಅಚ್ಚರಿಯ ಸತ್ಯಗಳು | ಡಾ: ಎನ್.ಬಿ.ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *