ಒಳ ಮೀಸಲಾತಿ | 9ನೇ ಶೆಡ್ಯೂಲ್‌ಗೆ ಸೇರಿಸಲು ಆಗ್ರಹ: ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು: ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣ ಏರಿಕೆ ಮಾಡಿರುವುದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಬೆಂಗಳೂರು ದಕ್ಷಿಣ ಮತ್ತು ಉತ್ತರ ಜಿಲ್ಲಾ ಸಮಿತಿಗಳು ಪ್ರತಿಭಟನೆ ನಡೆಸಿದವು. ಒಳ ಮೀಸಲಾತಿ

ರಾಜ್ಯವ್ಯಾಪಿ ನಡೆಯುತ್ತಿರುವ ಹೋರಾಟದ ಭಾಗವಾಗಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಾಮಾಜಿಕ ನ್ಯಾಯವನ್ನು ಕಾಪಾಡುವುದು ಮತ್ತು ಸಂವಿಧಾನ ನೀಡಿರುವ ಹಕ್ಕುಗಳನ್ನು ಉಳಿಸುವುದೇ ಈ ಪ್ರತಿಭಟನೆಯ ಮುಖ್ಯ ಉದ್ದೇಶವಾಗಿದೆ ಎಂದು ಪ್ರತಿಭಟನೆಕಾರರು ತಿಳಿಸಿದರು.

ಮೀಸಲಾತಿ ವ್ಯವಸ್ಥೆ ದುರ್ಬಲ ವರ್ಗಗಳ ಹಕ್ಕುಗಳನ್ನು ರಕ್ಷಿಸುವ ಪ್ರಮುಖ ಸಾಧನವಾಗಿದ್ದು, ಅದರ ವಿಸ್ತರಣೆ ಹಾಗೂ ಕಾನೂನುಬದ್ಧ ಭದ್ರತೆಗಾಗಿ 9ನೇ ಶೆಡ್ಯೂಲ್‌ಗೆ ಸೇರಿಸುವುದು ಅಗತ್ಯವೆಂದು ಪ್ರತಿಭಟನೆಯಲ್ಲಿ ಒತ್ತಿ ಹೇಳಲಾಯಿತು. ಈ ವರದಿಯನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಸವರಾಜ ಬೊಮ್ಮಾಯಿಯವರ ಸರ್ಕಾರ ಅಂಗೀಕರಿಸಿ ಅದರ ಜಾರಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿತು. ಈ ಅಂಶದ ಬಗ್ಗೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದವು. ಹೀಗಾಗಿ ಅದು ಭಾರತ ಸರ್ಕಾರದ ಮುಂದಿನ ಕ್ರಮಕ್ಕೆ ಕಳಿಸಲ್ಪಟ್ಟಿರುವುದು ತಮಗೆ ತಿಳಿದ ವಿಷಯವೇ ಆಗಿದೆ. ಕರ್ನಾಟಕ ವಿಧಾನಸಭೆಯ ಈ ತೀರ್ಮಾನಕ್ಕೆ ಒಕ್ಕೂಟ ಸರ್ಕಾರ ಒಪ್ಪಿಗೆಯನ್ನು ನೀಡಿ ಸಂವಿಧಾನದ 9 ಷೆಡ್ಯೂಲಿಗೆ ಸೇರ್ಪಡೆ ಮಾಡಬೇಕಾಗಿದೆ. ಆದ್ದರಿಂದ ತಾವು ಒಕ್ಕೂಟ ಸರ್ಕಾರದ ಮೇಲೆ ಒತ್ತಡವನ್ನು ತಂದು ಇದರ ಜಾರಿಗೆ ಮುತುವರ್ಜಿ ಮಾಡಬೇಕಾಗಿ ಸಿಪಿಐ(ಎಂ) ಪಕ್ಷ ಪ್ರತಿಭಟನೆ ಮೂಲಕ ಆಗ್ರಹಿಸಿದೆ.

ಇದೇ ಸಂದರ್ಭದಲ್ಲಿ ಭಾರತೀಯ ಸಮಾಜದ ವಾಸ್ತವಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯೊಳಗೆ ಒಳ ಮೀಸಲಾತಿಯನ್ನು ಕಲ್ಪಿಸಬೇಕೆಂಬ ಬೇಡಿಕೆಗೆ ಪೂರಕವಾಗಿ ದೇವಿಂದರ್ ಸಿಂಗ್ ವರ್ಸಸ್ ಪಂಜಾಬ್ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದತೀರ್ಪು ಮಹತ್ವದ್ದಾಗಿದೆ. ಇದನ್ನು ಅನುಸರಿಸಿ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ನ್ಯಾ.ಹೆಚ್.ಎನ್.ನಾಗಮೋಹನದಾಸ್‌ ಅವರ ಆಯೋಗವನ್ನು ರಚಿಸಿತು ಮತ್ತುಆಯೋಗ ನೀಡಿದ ವರದಿಯನ್ನು ಅಂಗೀಕರಿಸಿತು.

ಇದನ್ನೂ ಓದಿ: ಕೇರಳದಲ್ಲಿ ಪಿಣರಾಯಿ ವಿಜಯನ್ ಹ್ಯಾಟ್ರಿಕ್? ಈ ಸಲ ಬಿಜೆಪಿಗೆ ಕೇರಳದ ಅಧಿಕಾರವೆಂದ ಮೋದಿ ಮಾತು ಎಷ್ಟು ನಿಜ?

ಇದರಲ್ಲಿನ ಗುಂಪುಗಳ ವರ್ಗೀಕರಣ, ಶೇಕಡವಾರು ಹಂಚಿಕೆಯ ಕುರಿತ ಕರ್ನಾಟಕ ಸರ್ಕಾರದ ನಿರ್ಧಾರದ ವಿಷಯದಲ್ಲಿ ಕೆಲವು ಸಣ್ಣ ಭಿನ್ನಾಭಿಪ್ರಾಯಗಳು ವ್ಯಕ್ತಗೊಂಡಿವೆ. ಇದೇ ಹೊತ್ತಿನಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಜನತೆಯನ್ನು ಪರಸ್ಪರ ಎತ್ತಿ ಕಟ್ಟುವ ವಿಭಜಕ ಪಾತ್ರ ವಹಿಸುತ್ತಿರುವುದು ಅತ್ಯಂತ ನೋವಿನ ಮತ್ತು ವಿಷಾದಕರ ಸಂಗತಿಯಾಗಿದೆ. ಸಾಮಾಜಿಕ ನ್ಯಾಯ ನಿಜಕ್ಕೂ ದಕ್ಕುವಂತೆ ಮಾಡಲು, ಜನತೆಯ ಐಕ್ಯತೆಯನ್ನು ಕಾಪಾಡಬೇಕಿದೆ. ಒಳ ಮೀಸಲಾತಿಯ ವಿಷಯದಲ್ಲಿ ಉಂಟಾಗಿರುವ ಕೆಲವು ನ್ಯೂನತೆಗಳನ್ಮು ಸರಿಪಡಿಸಿಕೊಂಡು ಹೋಗಲು ರಾಜ್ಯ ಸರ್ಕಾರ ವಿಳಂಬಿಸದೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಒಳ ಮೀಸಲಾತಿ ಜಾರಿ ವಿಷಯವು, ಮೀಸಲಾತಿ ಪ್ರಮಾಣ ಹೆಚ್ಚಳ ವಿಷಯದ ಜೊತೆಯೂ ತಳಕು ಹಾಕಿಕೊಂಡಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಳದ ರಾಜ್ಯ ಸರ್ಕಾರದ ಕಾಯ್ದೆಯನ್ನು ಒಕ್ಕೂಟ ಸರ್ಕಾರ ಅನುಮೋದಿಸಿ ಸಂವಿಧಾನದ ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡುವುದು ಅತ್ಯಂತ ಜರೂರಾಗಿ ಆಗಬೇಕಿದೆ. ಆದ್ದರಿಂದ ಸಂಸತ್ ಸದಸ್ಯರಾಗಿರುವ ತಾವು ಕರ್ನಾಟಕ ರಾಜ್ಯದ ಜನತೆಯ ಹಿತವನ್ನುಕಾಯಲು ಪಕ್ಷಭೇದ ಮರೆತು ಭಾರತ ಸರ್ಕಾರ ಅನುಮೋದನೆ ನೀಡುವಂತೆ ಮತ್ತು ಸಂವಿಧಾನದಷೆಡ್ಯೂಲ್ 9 ಕ್ಕೆ ಸೇರಿಸುವಂತೆ ಒತ್ತಡವನ್ನು ಹಾಕಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ತಮ್ಮಲ್ಲಿ ವಿನಂತಿಸುತ್ತದೆ.

ಪ.ಜಾ. ಮತ್ತು ಪ.ಪಂ. ಮೀಸಲಾತಿ ಪ್ರಮಾಣ ಹೆಚ್ಚಳ ಮತ್ತು ಒಳ ಮೀಸಲಾತಿ ವರ್ಗೀಕರಣದ ಒಟ್ಟಾರೆ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸನ್ನಿವೇಶದ ತುರ್ತನ್ನು ಗಮನದಲ್ಲಿರಿಸಿ, 13-4-2026 ರಂದು ರಾಜ್ಯದಾದ್ಯಂತ ಸಂಸದರ ಕಛೇರಿ ಮುಂದೆ ಪ್ರತಿಭಟನೆ ಮೂಲಕ ಈ ಕೆಳಗಿನ ಬೇಡಿಕೆಗಳನ್ನು ತಮ್ಮ ಮುಂದೆ ಮಂಡಿಸುತ್ತಿದ್ದೇವೆ.

ಈ ಹಿನ್ನೆಲೆಯಲ್ಲಿ ಭಾರತಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕರಾಜ್ಯ ಸಮಿತಿಯು ಕೆಳಕಂಡ ಅಭಿಪ್ರಾಯಗಳನ್ನು ಮುಂದಿಡುತ್ತಿದೆ.

1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕರ್ನಾಟಕದ ತೀರ್ಮಾನಕ್ಕೆ ಕೇಂದ್ರದ ಬಿಜೆಪಿ – ಎನ್.ಡಿ.ಎ ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು. ಇದನ್ನು ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರಿಸಿ ಕೇಂದ್ರದಲ್ಲಿ ಇರುವಂತೆ ಶೇ. 17 ಮತ್ತು ಶೇ 7ರ ಜಾರಿಗೆ ಅನುವು ಮಾಡಿಕೊಡಬೇಕು. ಇದಕ್ಕಾಗಿ ರಾಜ್ಯದ ಸಂಸದರು ವಿಶೇಷ ಒತ್ತಡದ ಪ್ರಯತ್ನಗಳನ್ನು ನಡೆಸಬೇಕು. ಷೆಡ್ಯೂಲ್ 9ಕ್ಕೆ ಸೇರ್ಪಡೆ ಮಾಡದಿರುವುದು ಇಂದಿನ ಒಟ್ಟು ಸಮಸ್ಯೆಯ ಒಂದು ಪ್ರಧಾನ ಅಂಶವಾಗಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು.

2. ಇಂದಿನ ನಿರುದ್ಯೋಗ ಸಮಸ್ಯೆಯ ಗಂಭೀರತೆಯನ್ನ ಅರ್ಥ ಮಾಡಿಕೊಂಡು ಭಾರತದ ಒಕ್ಕೂಟದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ಯಾವುದೇ ಸಂದರ್ಭದಲ್ಲಿ ಸಾಮಾನ್ಯ ಗುಂಪಿಗೆ ವರ್ಗಾಯಿಸಬಾರದು. ಹಾಗೆಯೇ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸುಮಾರು 3 ಲಕ್ಷ ಉದ್ಯೋಗಗಳನ್ನು ಭರ್ತಿ ಮಾಡಬೇಕು.

3. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು ಮತ್ತು ಸಂಸ್ಥೆಗಳಲ್ಲಿ ಖಾಯಂ ನೇಮಕಾತಿಯೇ ಸ್ಥಗಿತಗೊಂಡಂತಾಗಿದೆ ಅಥವಾ ಇಲ್ಲದಂತಾಗಿದೆ. ಇದರಿಂದ ವಾಸ್ತವವಾಗಿ ಮೀಸಲಾತಿಯೇ ಇಲ್ಲದಂತಾಗಿದೆ. ಆದ್ದರಿಂದ ಎಲ್ಲಾ ಸಾರ್ವಜನಿಕ ರಂಗಗಳಲ್ಲೂ ಖಾಯಂ ಉದ್ಯೋಗಗಳನ್ನು ತುಂಬಬೇಕು ಮತ್ತು ಮೀಸಲಾತಿಯನ್ನು ರಕ್ಷಿಸಬೇಕು.

4. ಉದಾರೀಕರಣ ಮತ್ತು ಖಾಸಗೀಕರಣದಿಂದ ಪ್ರಧಾನವಾಗಿ ಉದ್ಯೋಗಗಳ ಸೃಷ್ಟಿಯು ಖಾಸಗಿ ರಂಗದಲ್ಲೇ ಹೆಚ್ಚಾಗಿ ಇರುವುದು. ಆದರೆ ಇಲ್ಲಿ ಮೀಸಲಾತಿ ನೀತಿಯೇ ಇಲ್ಲವಾಗಿದೆ. ಆದ್ದರಿಂದ ಖಾಸಗೀ ರಂಗದಲ್ಲಿಯೂ ಮೀಸಲಾತಿ ನೀತಿಯನ್ನು ಜಾರಿಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಮೀಸಲಾತಿ ನೀತಿಯು ಅತ್ಯಂತ ಸೀಮಿತಗೊಂಡ ಅವಕಾಶವಾಗಿ ಬಿಡುತ್ತದೆ. ಭವಿಷ್ಯದಲ್ಲಿ ಶಿಕ್ಷಣ ಮತ್ತುಉದ್ಯೋಗದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಬದಲಾಗುತ್ತಿರುವ ಸನ್ನಿವೇಶದಲ್ಲಿ ಖಾಸಗಿ ರಂಗದಲ್ಲಿ ನಮ್ಮ ಭಾರತದ ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯದ ಸಾಧನೆಯಲ್ಲಿ ಖಾಸಗೀ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಜಾರಿಗೊಳಿಸಲು ಎಲ್ಲಾಒತ್ತಡ ಹಾಕಬೇಕಾಗಿ ಆಗ್ರಹಿಸುತ್ತೇವೆ.

5. ಒಟ್ಟಾರೆ ಮೀಸಲಾತಿ ಪ್ರಮಾಣ ಶೇ.50 ದಾಟಬಾರದು ಎನ್ನುವುದಕ್ಕೆ ಇಂದ್ರಾ ಸಹಾನಿ ಕೇಸನ್ನು ಉದಾಹರಿಸಿ ಮಾತನಾಡಲಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ನೀಡಬೇಕು ಎನ್ನುವ ನೀತಿಗೆ ಅಡ್ಡಿಯಾಗುತ್ತಿದೆ. ಇದೇ ಇಂದ್ರಾ ಸಹಾನಿ ಕೇಸಿನ ತೀರ್ಪಿನಲ್ಲಿಯೇ ವಿಶೇಷ ಸಂದರ್ಭಗಳಲ್ಲಿ ಈ ಮಿತಿಯನ್ನು ದಾಟಲು ಅವಕಾಶ ಇರುವುದನ್ನು ಗಮನಿಸಬೇಕು.

6. ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಗಳಿಗೆ EWS ಕೋಟಾದಲ್ಲಿ ಶೇ. 10 ಮೀಸಲಾತಿಯನ್ನು ಒದಗಿಸಿ ಕೇಂದ್ರ ಸರ್ಕಾರವೇ ಒದಗಿಸಿರುವ ಉದಾಹರಣೆ ಇದೆ. ಅದೂ ಕೇವಲ 48 ಗಂಟೆಗಳಲ್ಲಿಯೇ ಜಾರಿಗೆ ಬರುವಂತೆ ನೋಡಿಕೊಳ್ಳಲಾಗಿದೆ. ಶೇ.50 ರ ಮಿತಿಯನ್ನುದಾಟಿದ ಹಲವು ರಾಜ್ಯಗಳೂ ಇಂತಹ ಅವಕಾಶ ಪಡೆದುಕೊಂಡಿವೆ. ಕರ್ನಾಟಕ ರಾಜ್ಯ ಸರ್ಕಾರವು ತನ್ನ ಕೋರಿಕೆಯನ್ನು 2022 ರಲ್ಲಿಯೇ ಮಂಡಿಸಿದೆ. ಆದ್ದರಿಂದ ರಾಜ್ಯದ ಕೋರಿಕೆಗೆ ಭಾರತ ಸರ್ಕಾರ ಕೂಡಲೇ ಅಂಗೀಕಾರ ನೀಡಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳುವಂತೆ, ಅದು ಜಾರಿಯಾಗುವಂತೆ ಸಹ ತಾವೂಕ್ರಮ ವಹಿಸಬೇಕು.

7. ಈ ಸಮುದಾಯಗಳ ಪ್ರಗತಿಗೆಕೇಂದ್ರದ ಒಟ್ಟು ಬಜೆಟ್ ನಲ್ಲಿ ಹಾಗೂ ಅಭಿವೃದ್ದಿಗೆ ಸಹಾಯಕವಾಗಿರುವ ಉಪ ಯೋಜನೆಗಳಿಗೆ ಬಜೆಟ್ ನಲ್ಲಿ ಭಾರತ ಸರ್ಕಾರ ನೀಡುತ್ತಿರುವ ಮೊತ್ತ ಕಡಿಮೆಯಾಗುತ್ತಿದೆ. ಮಾತ್ರವಲ್ಲ, ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಹಣ ಮೀಸಲಿಡಬೇಕು ಎನ್ನುವ ಹಿಂದಿನ ಯೋಜನಾ ಆಯೋಗದ ನಿರ್ದೇಶನ ಇಲ್ಲವಾಗಿದೆ. ಜನಸಂಖ್ಯೆಯ ಪ್ರಮಾಣಕ್ಕೆಅನುಗುಣವಾಗಿ ಹಣ ಮೀಸಲಿಡುವುದು ಈ ಸಮುದಾಯಗಳ ಪ್ರಗತಿಗೆ ಅತ್ಯಂತ ಅಗತ್ಯವಾದುದು. ಈ ಮೊತ್ತವನ್ನು ಬೇರೆ ಕಾರ್ಯಕ್ರಮಗಳಿಗೆ ವರ್ಗಾಯಿಸಕೂಡದು. ಈ ದಿಸೆಯಲ್ಲಿ ಜನಸಂಖ್ಯೆ ಅನುಗಣವಾಗಿ ಉಪ ಯೋಜನೆಗಳಿಗೆ ಹಣ ಹಂಚಿಕೆ ಮಾಡುವಂತೆ ಕ್ರಮ ವಹಿಸಬೇಕು. ಎಸ್.ಸಿ.ಎಸ್.ಪಿ. ಮತ್ತು ಟಿ.ಎಸ್.ಪಿ. ಉಪ ಯೋಜನೆಗಳಿಗಾಗಿ ಭಾರತ ಸರ್ಕಾರ ಕಾಯ್ದೆಯೊಂದನ್ನು ರೂಪಿಸಬೇಕು.

8. ನೇಮಕಾತಿ ಪ್ರಕ್ರಿಯೆಯ ರೋಸ್ಟರ್ ನಿಯಮದಲ್ಲಿ ಎಡ, ಬಲ, ಸ್ಪೃಶ್ಯ, ಅಲೆಮಾರಿ ಸಮುದಾಯಗಳಿಗೆ ಅನ್ಯಾಯವಾಗದ ರೀತಿಯಲ್ಲಿ ರಾಜ್ಯ ಸರ್ಕಾರ ಖಾತ್ರಿಗೊಳಿಸುವಂತೆ ತಾವು ಕ್ರಿಯಾಶೀಲ ಪಾತ್ರವಹಿಸಬೇಕು.

9. ಕರ್ನಾಟಕ ಸರ್ಕಾರವು ಅಲೆಮಾರಿ, ಆದಿವಾಸಿ ಮತ್ತು ಅಂಚಿನ ಜಾತಿಗಳಿಗೆ ಒಳ – ಮೀಸಲಾತಿ ಪ್ರವರ್ಗವನ್ನು ರೂಪಿಸಲು ರಾಜ್ಯ ಸರ್ಕಾರದೊಂದಿಗೆ ತಾವು ಮುತುವರ್ಜಿ ವಹಿಸಬೇಕು.

10. ಸಂವಿಧಾನದ ಶೆಡ್ಯೂಲ್ 9 ಕ್ಕೆ ಸೇರ್ಪಡೆ ಮಾಡುವಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸುತ್ತಲೇ, ಕರ್ನಾಟಕ ಸರ್ಕಾರವು ಪ. ಜಾತಿ, ಪಂಗಡಗಳಿಗೆ ಇರುವ ಹಿಂದಿನ ಶೇ. 15 ಮೀಸಲಾತಿ ಪ್ರಮಾಣದೊಳಗೆ ಒಳ-ಮೀಸಲಾತಿಯನ್ನು ಜಾರಿಗೊಳಿಸಿ, 56,432 ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆ ನಿಲ್ಲಬಾರದು, ವಿಳಂಬ ಆಗಬಾರದು. ಒಳ ಮೀಸಲಾತಿ ನೀತಿ ಅಳವಡಿಸಬೇಕು ಎಂಬುದನ್ನು ತಾವು ಒತ್ತಾಯಿಸಬೇಕು.

11. ಉದ್ಯೋಗ ನೇಮಕಾತಿ ಮಾಡುವಾಗ ಒಳ ಮೀಸಲಾತಿಯ ಎಲ್ಲಾ ಪ್ರವರ್ಗಗಳಿಗೂ ನ್ಯಾಯ ಸಮ್ಮತವಾದ ರೀತಿಯಲ್ಲಿ ರೋಸ್ಟರ್ ಬಿಂದು ಅಳವಡಿಸಬೇಕು.ಇದಕ್ಕಾಗಿ ಕಾನೂನು ತಜ್ಞರು, ಚಳುವಳಿ ಸಂಘಟನೆಗಳ ಪ್ರತಿನಿಧಿಗಳು, ಅಧಿಕಾರಿಗಳನ್ನೊಳಗೊಂಡು ಸಮಾಲೋಚನಾ ಸಭೆಗಳನ್ನು ನಡೆಸಿ ತೀರ್ಮಾನ ಮಾಡಬೇಕು.

ತಾವು ಪರಿಸ್ಥಿತಿಯ ಗಂಭೀರತೆ ಹಾಗೂ ಸೂಕ್ಷ್ಮತೆ ಗಳನ್ನು ಗಮನದಲ್ಲಿರಿಸಿ ಭಾರತದಒಕ್ಕೂಟ ಸರ್ಕಾರ ತುರ್ತು ಕ್ರಮ ವಹಿಸುವಂತೆ ಸೂಕ್ತ ಮುತುವರ್ಜಿ ವಹಿಸಬೇಕು ಎಂದು ಪ್ರತಿಭಟನೆಕಾರರು ಅಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಕೆ.ಪ್ರಕಾಶ್‌,  ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಹರಳಹಳ್ಳಿ, ಬೆಂಗಳೂರು ಉತ್ತರಜಿಲ್ಲಾ ಕಾರ್ಯದರ್ಶಿ ಪ್ರತಾಪ್‌ಸಿಂಹ ಹಾಗೂ ದಕ್ಷಿಣಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ ಮುಖಂಡರಾದ ಗೌರಮ್ಮ, ರಾಜಣ್ಣ ಸೇರಿದಂಎ ನೂರಾರು ಜನರಿದ್ದರು.

ಇದನ್ನೂ ನೋಡಿ: ಟಿಪ್ಪುವನ್ನು ವಿರೋಧಿಸುತ್ತಿರುವರು ಬ್ರಿಟಿಷರ ಸ್ನೇಹಿತರು: ಡಾ.ಬಂಜಗೆರೆ ಜಯಪ್ರಕಾಶ್ Janashakthi Media

Donate Janashakthi Media

Leave a Reply

Your email address will not be published. Required fields are marked *