ಕೇರಳದಲ್ಲಿ ಮತದಾನ ಮುಗಿದಿದೆ. 78.13 ಶೇ. ಮಂದಿ ಮತ ಚಲಾಯಿಸಿದ್ದಾರೆ. 890 ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಅಡಗಿ ಕುಳಿತಿದೆ. ಫಲಿತಾಂಶದ ಬಗ್ಗೆ ಅಂದಾಜುಗಳು ಕೇಳಿಬರುತ್ತಿವೆ. ಯಾರಿಗೆ ಅಧಿಕಾರ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
– ಪಿಎಂ ಇಕ್ಬಾಲ್ ಕೈರಂಗಳ
ಕೇರಳದಲ್ಲಿ ಮತದಾನ ಮುಗಿದಿದೆ. 78.13 ಶೇ. ಮಂದಿ ಮತ ಚಲಾಯಿಸಿದ್ದಾರೆ. 890 ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಅಡಗಿ ಕುಳಿತಿದೆ. ಫಲಿತಾಂಶದ ಬಗ್ಗೆ ಅಂದಾಜುಗಳು ಕೇಳಿಬರುತ್ತಿವೆ. ಯಾರಿಗೆ ಅಧಿಕಾರ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಕೇರಳ ಎಲ್ಲ ರಾಜ್ಯಗಳಂತಲ್ಲ. ವಿದ್ಯಾವಂತರೇ ಅಧಿಕ. ಅಲ್ಲಿ ರಾಜಕೀಯವಾಗಿ ಎರಡೇ ಬಣ ಅಧಿಕಾರದಲ್ಲಿರೋದು. ಅದೇ ಸಂಪ್ರದಾಯ. ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನಡುವಿನ ಸ್ಪರ್ಧೆಯೇ ಕೇರಳ ರಾಜಕೀಯವನ್ನು ನಿರ್ಧರಿಸುತ್ತಾ ಬಂದಿದೆ. ಈ ಸಲವೂ ಅದೇ ಚಿತ್ರ, ಅದರಲ್ಲಿ ಬದಲಾವಣೆ ಇಲ್ಲ. ಆದರೆ ಭಾರತೀಯ ಜನತಾ ಪಾರ್ಟಿ ಕೂಡ ತನ್ನ ಸ್ಥಾನವನ್ನು ಬಲಪಡಿಸಲು ಪ್ರಯತ್ನಿಸುತ್ತಿದ್ದು, ಅದು ಎಷ್ಟು ಮತಗಳನ್ನು ಹೆಚ್ಚಿಸಿಕೊಂಡಿದೆ, ಎಂಬುದೂ ಕುತೂಹಲ ಮೂಡಿಸಿದೆ. ಎಲ್ಲದರ ಉತ್ತರಕ್ಕಾಗಿ 22 ದಿನ ಕಾಯಬೇಕಾಗಿದೆ. ಮೇ 4ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ವಿಧಾನಸಭಾ ಚುನಾವಣೆ| ಕೇರಳ: ಶೇ. 90 ರಷ್ಟು ಮತದಾನ ನಿರೀಕ್ಷೆ; ಅಸ್ಸಾಂ – ಶೇ. 75 ಕ್ಕೆ ಏರಿಕೆ
ಕೇರಳದಲ್ಲಿ ಸಾಮಾನ್ಯವಾಗಿ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಬದಲಾಗುತ್ತಿತ್ತು. 2021ರ ವಿಧಾನಸಭಾ ಚುನಾವಣೆಯಲ್ಲಿ ಆ ಸಂಪ್ರದಾಯಕ್ಕೆ ಬ್ರೇಕ್ ಬಿದ್ದಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ 140 ಸ್ಥಾನಗಳಲ್ಲಿ ಬರೋಬ್ಬರಿ 99 ಸ್ಥಾನಗಳನ್ನು ಗೆದ್ದು ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿತ್ತು. ಹಿಂದಿನದದಕ್ಕಿಂತ ಎಂಟು ಸೀಟು ಹೆಚ್ಚೇ ಪಡೆದಿತ್ತು. ಇದು ಕೇರಳದ ರಾಜಕೀಯ ಸಂಪ್ರದಾಯಕ್ಕೆ ಹೊಸತಾಗಿತ್ತು. ವಿರೋಧ ಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇವಲ 41 ಸ್ಥಾನಗಳಿಗೆ ಸೀಮಿತವಾಗಿತ್ತು.
ಈ ಬಾರಿ ಆಡಳಿತ ವಿರೋಧಿ ಅಲೆ ಖಂಡಿತಾ ಇದೆ. ಹತ್ತು ವರ್ಷದಿಂದ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಆ ಸ್ಥಾನದಲ್ಲಿ ಕುಳಿತು ಸಾಕಾಗಿದೆ. ಅಧಿಕಾರದಲ್ಲಿ ಕೂರಲು ಎಲ್ಲ ಯತ್ನ ಮಾಡಿದೆ. ಕಳೆದ ಸಲದ ವಿಧಾನ ಸಭಾ ಚುನಾವಣೆಯ ಬಳಿಕ ಅದು ಎಷ್ಟರ ಮಟ್ಟಿಗೆ ಎದ್ದು ಕಾರ್ಯಾಚರಿಸಿದೆ ಎಂದು ಆನಂತರ ನಡೆದ ಲೋಕಸಭೆ, ಸ್ಥಳೀಯಾಡಳಿತದ ಚುನಾವಣೆಗಳ ಫಲಿತಾಂಶವೇ, ಹೇಳುತ್ತದೆ.
2024ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕೇರಳದ 20 ಸ್ಥಾನಗಳಲ್ಲಿ ಆಡಳಿತಾರೂಢ ಎಲ್ಡಿಎಫ್ ಹೀನಾಯ ಸೋಲನ್ನು ಕಂಡಿದೆ. 20 ಕ್ಷೇತ್ರಗಳ ಪೈಕಿ 18ರಲ್ಲಿ ಯುಡಿಎಫ್ ಜಯಗಳಿಸಿದೆ. ಕಳೆದ ವರ್ಷ ಸ್ಥಳೀಯ ಚುನಾವಣೆ ನಡೆಯಿತಲ್ವಾ, ಅದರಲ್ಲಿಯೂ ಇದೇ ಯುಡಿಎಫ್ ಭರ್ಜರಿ ಜಯ ಸಾಧಿಸಿದೆ. ಹಾಗಿರುವಾಗ ಈ ವಿಧಾನ ಸಭಾ ಚುನಾವಣೆಯಲ್ಲಿ ಜಯ ಪಕ್ಕಾ ಎಂದೇ ಅದು ತಿಳಿದುಕೊಂಡಿದೆ. ಎಲ್ಲ ಪ್ರಯತ್ನವನ್ನೂ ಮಾಡಿದೆ. ಆದರೆ ಅದರ ಕೊನೆಯ ಭರವಸೆ ಇರೋದು ಆಡಳಿತ ವಿರೋಧಿ ಅಲೆಯ ಮೇಲೆ!
ಹಾಗಂತ ಎಲ್ಡಿಎಫ್ ಸಂಪ್ರದಾಯ ಬ್ರೇಕ್ ಮಾಡಿ ಸತತ ಎರಡು ಬಾರಿಗೆ ಅಧಿಕಾರ ಸಿಕ್ಕಿದ್ದೇ ಭಾಗ್ಯ. ಮೂರನೇ ಬಾರಿ ಸೋತರೆ ಹೋಗ್ಲಿ ಅಂತ ಕುತ್ಕೊಂಡಿಲ್ಲ. ರಾಜಕೀಯ ದಾಳ ಎಷ್ಟಿದೆಯೋ ಅಷ್ಟನ್ನೂ ಉರುಳಿಸಿದೆ. ಜೊತೆಗೆ ತನ್ನ ಸಾಧನೆ ಮೇಲೆ ನಂಬಿಕೆಯಿಟ್ಟಿದೆ. ನಿಜ, ಕೋವಿಡ್, ಪ್ರವಾಹ ಮುಂತಾದ್ದನ್ನು ಅದು ಯಶಸ್ವಿಯಾಗಿ ನಿಭಾಯಿಸಿದೆ. ಬಡವರ ಬಗ್ಗೆ ಒಂದು ಸರಕಾರವಾಗಿ ಎಷ್ಟು ಸಾಧ್ಯವೋ ಅಷ್ಟು ಮಾಡಿದೆ. ಆದ್ದರಿಂದಾನೇ ಅದರ ಕೊನೆಯ ವಿಶ್ವಾಸ ತನ್ನ ಹತ್ತು ವರ್ಷಗಳ ಆಡಳಿತ ಸಾಧನೆಗಳ ಮೇಲೆ ಇದೆ. ಹಾಗಂತ ಆಡಳಿತ ವಿರೊಧಿ ಅಲೆಗಳ ಬಗ್ಗೆ ಅದಕ್ಕೆ ಗೊತ್ತಿದೆ. ಅದನ್ನು ಮೀರಿ ಅಧಿಕಾರದಲ್ಲಿ ಉಳಿಯಬಲ್ಲೆ ಎಂಬ ವಿಶ್ವಾಸ ಅದಕ್ಕಿದೆ. ಇಡೀ ಭಾರತದಲ್ಲಿ ಇರುವ ಒಂದೇ ರಾಜ್ಯವನ್ನು ಉಳಿಸುವುದು ಸಿಪಿಎಂಗೆ ಅನಿವಾರ್ಯ ಕೂಡ.

ಆಡಳಿತ ವಿರೋಧಿ ಅಲೆ ಬಿರುಗಾಳಿಯಾಗಿ ಎಲ್ಡಿಎಫ್ನಿಂದ 25 ಸ್ಥಾನಗಳನ್ನು ಹಾರಿಸಿಕೊಂಡರೂ, ಎಲ್ಡಿಎಫ್ 70ಕ್ಕೂ ಹೆಚ್ಚು ಸ್ಥಾನಗಳನ್ನು ಅದು ಗಳಿಸುತ್ತದೆ. ಅಧಿಕಾರದಲ್ಲಿ ಮುಂದುವರಿಯಲು ಅದು ಸಾಕು. ಎಲ್ಡಿಎಫ್ ಮತ್ತೆ ಅಧಿಕಾರಕ್ಕೆ ಬಂದರೆ ಸಿಎಂ ಯಾರಾಗ್ತಾರೆ ಅನ್ನೋ ಚರ್ಚೇನೇ ಇಲ್ಲ, ಅದು ಇದೇ ಪಿಣರಾಯ್ ವಿಜಯನ್. ಅವರಿಗೆ ಪೈಪೋಟಿ ಕೊಡಬಲ್ಲ ಇನ್ನೊಬ್ಬ ನಾಯಕ ಸಿಪಿಎಂನಲ್ಲಿ ಇಲ್ಲ.
ಕೇರಳದಲ್ಲಿ ಬಿಜೆಪಿ ಈ ಸಲ ಅಧಿಕಾರಕ್ಕೆ ಏರುತ್ತದೆ ಎಂದಿದ್ದಾರೆ ಪ್ರಧಾನಿ ಮೋದಿ. ಅದು ಅಸಂಭವವಾದರೂ ಅವರಿಗೆ ಅಗತ್ಯ ಹೇಳಿಕೆ. ಲೀವ್ ಇಟ್!
ಹಾಗಂತ ಬಿಜೆಪಿಯ ಬಲ ಹೆಚ್ಚಾಗುತ್ತಿರುವುದನ್ನು ಒಪ್ಪುಕೊಳ್ಳದಿದ್ದರೆ ಅದು ರಾಜಕೀಯ ಅಜ್ಞಾನವಾಗುತ್ತದೆ. ಕೇರಳದಲ್ಲಿ ಬಿಜೆಪಿ ಪಕ್ಷದ ಮತ ಪ್ರಮಾಣ ಕ್ರಮೇಣ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಅಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆಯುವ ಮೂಲಕ ಹೊಸ ರಾಜಕೀಯ ಸಂದೇಶ ನೀಡಿತ್ತು. ಚಿತ್ರ ನಟ ಸುರೇಶ್ ಗೋಪಿ ಈಗ ತ್ರಿಶೂರ್ ಎಂಪಿ. ಹಾಗಾದರೆ ಈ ಸಲ ಬಿಜೆಪಿ ಒಂದೆರಡು ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಹಾಗೆ ಖಾತೆ ತೆರೆಯೋದಾದರೆ ಅದರಲ್ಲಿ ಮೊದಲು ರಾಜಧಾನಿ ತಿರುವನಂತಪುರಂ ಕ್ಷೇತ್ರ. ಇಲ್ಲಿನ ಮುನ್ಸಿಪಾಲಿಟಿ ಅಧಿಕಾರ ಈಗಾಗಲೇ ಬಿಜೆಪಿ ಹಿಡಿತದಲ್ಲಿದೆ. 40 ವರ್ಷಗಳ ಸಿಪಿಎಂ ಆಡಳಿತ ಕೊನೆಗೊಂಡು ಬಿಜೆಪಿಗೆ ತೆಕ್ಕೆಗೆ ಸೇರಿದೆ ಕೇರಳ ರಾಜಧಾನಿ!
ಅಷ್ಟೇ ಅಲ್ಲ, ಈ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಬಿಜೆಪಿ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎಂಬ ಚರ್ಚೆಗಳೂ ಇವೆ. ಎರಡನೇಯದ್ದು ಕರ್ನಾಟಕ ಗಡಿಯ ಕಾಸರಗೋಡು. ಕಳೆದ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಅತ್ಯಲ್ಪ ಅಂತರದಲ್ಲಿ ಸೋಲು ಕಂಡಿತ್ತು. ನೇಮಂ ಕೂಡ ಬಿಜೆಪಿಯ ಭರವಸೆಯ ಕ್ಷೇತ್ರ.
ಕೇರಳದ ಜನಸಂಖ್ಯೆ ಬಗ್ಗೆ ನೋಡೋದಾದರೆ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.54ರಷ್ಟು ಹಿಂದೂಗಳು, ಶೇ.27ರಷ್ಟು ಮುಸ್ಲಿಮರು ಹಾಗೂ ಶೇ.18ರಷ್ಟು ಕ್ರೈಸ್ತರು. ಹಿಂದೂಗಳಲ್ಲಿ ಈಳವರು ಅತೀ ದೊಡ್ಡ ಸಮುದಾಯವಾಗಿದ್ದು, ಅವರು ಈ ತನಕ ಎಲ್ಡಿಎಫ್ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದಾರೆ. ನಾಯರ್ ಸಮುದಾಯವು ಪ್ರಭಾವಿ ಮೇಲ್ವರ್ಗದ ಸಮುದಾಯವಾಗಿದ್ದು, ಇವರು ಯುಡಿಎಫ್ನಲ್ಲಿದ್ದರು. ಇತ್ತೀಚೆಗೆ ಬಿಜೆಪಿಯತ್ತ ವಾಲುತ್ತಿರುವುದು ಕಂಡುಬರುತ್ತಿದೆ. ಇನ್ನು ಎಸ್ಸಿ ಮತ್ತು ಎಸ್ಟಿ ಸಮುದಾಯಗಳು ಹೆಚ್ಚಾಗಿ ಎಡಪಕ್ಷಗಳ ಬೆಂಬಲಿಗರಾಗಿದ್ದಾರೆ. ಮುಸ್ಲಿಮ್ ಎರಡೂ ಕಡೆಗೆ ವಾಲುತ್ತಿದ್ದು, ಕ್ರೈಸ್ತರದ್ದೂ ಇದೇ ಕತೆ.
ಈ ರಾಜಕೀಯ ಹಾಗೂ ಸಾಮಾಜಿಕ ಸಮೀಕರಣಗಳ ನಡುವೆ ಕೇರಳದ ಮತದಾರರು ಯಾವ ತೀರ್ಪು ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ ಹ್ಯಾಟ್ರಿಕ್ ಸಾಧನೆ ಮಾಡುತ್ತದೆಯಾ ಅಥವಾ ಯುಡಿಎಫ್ ಮತ್ತೆ ಅಧಿಕಾರಕ್ಕೆ ಮರಳುತ್ತದಾ ಎಂಬ ಪ್ರಶ್ನೆಗೆ ಮೇ 4ರಂದು ಉತ್ತರ ಸಿಗಲಿದೆ.
ಇದನ್ನೂ ನೋಡಿ: ಎಕ್ಸಿಟ್ ಪೋಲ್ vs ಫಲಿತಾಂಶ: ಅಂದಾಜು ಮೀರಿದ ಎಲ್ಡಿಎಫ್ ಗೆಲುವು Janashakthi Media
