ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕುವ ಪಕ್ಷ: ವಿಜಯ್ – ಕೈ ದೋಸ್ತಿಗೆ ಡಿಎಂಕೆ ಗರಂ

ಚೆನ್ನೈ: ರಾಜಕೀಯ ಬೆಳವಣಿಗೆಗಳು ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿದ್ದು, ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ದಶಕಗಳ ಕಾಲದ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗೆ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಗಿರುವುದನ್ನು ಡಿಎಂಕೆ ತೀವ್ರವಾಗಿ ಖಂಡಿಸಿದೆ. ಚೂರಿ

ಡಿಎಂಕೆ ವಕ್ತಾರ ಸರವಣನ್ ಅಣ್ಣಾದೊರೈ ಮಾತನಾಡಿ, ಕಾಂಗ್ರೆಸ್ ಅನ್ನು ಬೆನ್ನಿಗೆ ಚೂರಿ ಹಾಕುವ ಪಕ್ಷ ಎಂದು ಕಟುವಾಗಿ ಟೀಕಿಸಿದ್ದು, ಈ ಚುನಾವಣೆಯಲ್ಲಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೇ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಯಿತು, ಇಲ್ಲದಿದ್ದರೆ ಅವರಿಗೆ ಒಂದು ಸ್ಥಾನವೂ ಸಿಗುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಈ ವಿಚಾರವಾಗಿ ಪಕ್ಷದ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅಭಿಪ್ರಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ನೇರ ಉತ್ತರ ನೀಡದಿದ್ದರೂ, ಮೈತ್ರಿ ಧರ್ಮವನ್ನು ಗಾಳಿಗೆ ತೂರಿದ ಕಾಂಗ್ರೆಸ್ ನಿಲುವಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚೂರಿ

ಟಿವಿಕೆ ಪಕ್ಷವು 108 ಸ್ಥಾನಗಳನ್ನು ಗೆದ್ದು ಬಹುಮತಕ್ಕೆ ಕೇವಲ ಹತ್ತು ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಆದರೆ ಸೈದ್ಧಾಂತಿಕವಾಗಿ ಬಿಜೆಪಿ ಬೆಂಬಲವನ್ನು ನಿರಾಕರಿಸಿರುವ ವಿಜಯ್, ಡಿಎಂಕೆಯನ್ನು ಪ್ರಮುಖ ವಿರೋಧ ಪಕ್ಷವಾಗಿ ನೋಡುತ್ತಿದ್ದಾರೆ. ಇತ್ತ ಕಾಂಗ್ರೆಸ್ ತನ್ನ ಹಳೆಯ ಮಿತ್ರಪಕ್ಷವನ್ನು ಬಿಟ್ಟು ಹೊಸ ಪಕ್ಷವಾದ ಟಿವಿಕೆಗೆ ಬೆಂಬಲ ನೀಡಲು ಮುಂದಾಗಿರುವುದು ಮತ್ತು ಹೊಸ ಸಂಪುಟದಲ್ಲಿ ಎರಡು ಸಚಿವ ಸ್ಥಾನಗಳನ್ನು ನಿರೀಕ್ಷಿಸುತ್ತಿರುವುದು ಡಿಎಂಕೆ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಚೂರಿ

ಇದನ್ನೂ ಓದಿ: ತಮಿಳುನಾಡು: ವಿಜಯ್ ಗೆಲುವು — ಹೊಸ ರಾಜಕೀಯ ಸಮೀಕರಣವೇ?

ಟಿವಿಕೆ ಪಕ್ಷವು ಬಿಜೆಪಿಗೆ ಹತ್ತಿರವಾಗಿದೆ ಎಂದು ಆರೋಪಿಸಿದ ಸರವಣನ್, ಅಂತಹ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್‌ನ ಅನಿವಾರ್ಯತೆಯನ್ನು ಪ್ರಶ್ನಿಸಿದ್ದಾರೆ. ವಿಜಯ್ ತಮ್ಮ ಗೆಲುವಿನ ಬಳಿಕ ಮೊದಲು ಮತದಾರರಿಗೆ ಧನ್ಯವಾದ ಅರ್ಪಿಸುವ ಬದಲು ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿರುವುದನ್ನು ಬೆಟ್ಟು ಮಾಡಿದ ಅವರು, ಇಂತಹ ನಾಯಕತ್ವವನ್ನು ಕಾಂಗ್ರೆಸ್ ಬೆಂಬಲಿಸಲು ಬಯಸುತ್ತದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಮುಂಚಿತವಾಗಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಡಿಎಂಕೆ ಕಾಂಗ್ರೆಸ್ ಅನ್ನು ನಿರ್ಲಕ್ಷಿಸಿರುವುದು ಮೈತ್ರಿಕೂಟದಲ್ಲಿ ಮೊದಲೇ ಒತ್ತಡವನ್ನು ಸೃಷ್ಟಿಸಿತ್ತು. ಈಗ ವಿಧಾನಸಭಾ ಫಲಿತಾಂಶವು ಅಸ್ಪಷ್ಟವಾಗಿ ಬಂದಿರುವುದರಿಂದ, ಕಾಂಗ್ರೆಸ್ ಅಧಿಕಾರಕ್ಕಾಗಿ ವಿಜಯ್ ಕೈಹಿಡಿಯಲು ನಿರ್ಧರಿಸಿದೆ. ವಿಜಯ್ ತಮ್ಮ ಎಕ್ಸ್ ಖಾತೆಯಲ್ಲಿ ಮೋದಿ ಮತ್ತು ರಾಹುಲ್ ಗಾಂಧಿಗೆ ಶುಭಾಶಯಗಳಿಗೆ ಧನ್ಯವಾದ ತಿಳಿಸಿರುವುದು ಡಿಎಂಕೆ ಪಾಳಯದಲ್ಲಿ ಅನುಮಾನಗಳನ್ನು ಮೂಡಿಸಿದ್ದು, ಒಟ್ಟಾರೆಯಾಗಿ, ಕಾಂಗ್ರೆಸ್‌ನ ಈ ಹೊಸ ರಾಜಕೀಯ ಲೆಕ್ಕಾಚಾರವು ತಮಿಳುನಾಡಿನ ಹಳೆಯ ಮೈತ್ರಿಕೂಟವನ್ನು ಅಂತ್ಯಗೊಳಿಸುವ ಹಂತಕ್ಕೆ ತಂದಿದೆ, ರಾಜ್ಯದ ರಾಜಕೀಯ ಭೂಪಟದಲ್ಲಿ ಸದ್ಯದಲ್ಲೇ ಹೊಸ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಚೂರಿ

ಬೆಂಬಲ ನೀಡಲು ಕಾಂಗ್ರೆಸ್​ ಸಿದ್ಧ.. 

ತಮಿಳುನಾಡಿನಲ್ಲಿ ಜಾತ್ಯತೀತ ಸರ್ಕಾರವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿಜೆಪಿಯ ಪ್ರಭಾವವನ್ನು ತಡೆಯಲು ಮತ್ತು ರಾಜ್ಯದ ಸಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಈ ಕ್ರಮಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ. ಈ ರಾಜಕೀಯ ಸನ್ನಿವೇಶದ ಬಗ್ಗೆ ಚರ್ಚಿಸಲು ದೆಹಲಿಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಉನ್ನತ ಮಟ್ಟದ ಸಭೆ ನಡೆದಿದ್ದು, ಇದರಲ್ಲಿ ರಾಹುಲ್ ಗಾಂಧಿ ಮತ್ತು ತಮಿಳುನಾಡು ಉಸ್ತುವಾರಿ ಗಿರೀಶ್ ಚೋಡಂಕರ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.

ಈ ಸಭೆಯ ಬಳಿಕ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ತಮಿಳುನಾಡಿನಲ್ಲಿ ಜಾತ್ಯತೀತ ಮತ್ತು ಸಂವಿಧಾನ ರಕ್ಷಕ ಸರ್ಕಾರ ಅಸ್ತಿತ್ವಕ್ಕೆ ಬರಬೇಕು ಎಂಬುದು ಪಕ್ಷದ ಆಶಯವಾಗಿದೆ ಎಂದು ತಿಳಿಸಿದ್ದಾರೆ. ವಿಜಯ್ ಈಗಾಗಲೇ ಕಾಂಗ್ರೆಸ್ ಬೆಂಬಲ ಕೋರಿ ಸಂಪರ್ಕಿಸಿದ್ದು, ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವನ್ನು ಪಕ್ಷದ ರಾಜ್ಯ ಘಟಕಕ್ಕೆ (ಟಿಎನ್‌ಸಿಸಿ) ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿ ಅಥವಾ ಅದರ ಮಿತ್ರಶಕ್ತಿಗಳು ಆಡಳಿತಕ್ಕೆ ಬರುವುದನ್ನು ತಡೆಯುವುದು ಕಾಂಗ್ರೆಸ್‌ನ ಮುಖ್ಯ ಗುರಿಯಾಗಿದ್ದು, ಜನರ ತೀರ್ಪನ್ನು ಗೌರವಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕೆಸಿವಿ ತಿಳಿಸಿದ್ದಾರೆ.

ಚೊಚ್ಚಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದ ಟಿವಿಕೆ ಅತಿದೊಡ್ಡ ಪಕ್ಷವಾದರೆ, ದಶಕಗಳ ಕಾಲ ರಾಜ್ಯವಾಳಿದ ಡಿಎಂಕೆ ಕೇವಲ 59 ಸ್ಥಾನಗಳಿಗೆ ಕುಸಿದು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿದರೆ, ಪಿಎಂಕೆ 4 ಸ್ಥಾನಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಿಂಗ್ ಮೇಕರ್ ಪಾತ್ರಕ್ಕೆ ಸಜ್ಜಾಗಿದೆ. ಈ ಎಲ್ಲಾ ಬೆಳವಣಿಗೆಗಳು ತಮಿಳುನಾಡಿನಲ್ಲಿ ಹೊಸ ಯುಗದ ಆರಂಭಕ್ಕೆ ನಾಂದಿ ಹಾಡಿದ್ದು, ವಿಜಯ್ ರಾಜಕೀಯ ಹಾದಿಗೆ ಕಾಂಗ್ರೆಸ್‌ನ ಬೆಂಬಲವು ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 171 | ಫಾಲ್ಸ್‌ ಮೆಮರಿ ಮತ್ತು ವಾಸ್ತವದ ಗಡಿ -“ಫಾದರ್‌” ಸಿನಿಮಾ ವಿಮರ್ಶೆ | ಮ ಶ್ರಿ ಮುರಳಿ ಕೃಷ್ಣ

Donate Janashakthi Media

Leave a Reply

Your email address will not be published. Required fields are marked *