ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಕಾರ್ಯಕ್ಕೆ ಸುಮಾರು 30% ಶಿಕ್ಷಕರನ್ನು ನಿಯೋಜಿಸಿರುವ ಹಿನ್ನೆಲೆ, ಕರ್ನಾಟಕದ ಸಾವಿರಾರು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪಾಠಪ್ರಕ್ರಿಯೆ ಬಹುತೇಕ ಸ್ಥಗಿತಗೊಂಡಿದೆ. ಮತದಾರ
ಜೂನ್ 30ರಿಂದ ಆಗಸ್ಟ್ 8ರವರೆಗೆ ಬೂತ್ ಮಟ್ಟದ ಅಧಿಕಾರಿಗಳಾಗಿ (BLOs) ಮನೆಮನೆಗೆ ತೆರಳಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರು, ಅದಕ್ಕೂ ಮುನ್ನ ಜೂನ್ 20ರಿಂದ ತರಬೇತಿಗೂ ಹಾಜರಾಗಬೇಕಾಯಿತು. ಇದರ ಪರಿಣಾಮವಾಗಿ ಹೊಸ ಶೈಕ್ಷಣಿಕ ವರ್ಷದ ಮೂರನೇ ವಾರದಿಂದಲೇ ಪಾಠ ಚಟುವಟಿಕೆಗಳು ಹಿನ್ನಡೆಯಾಗಿವೆ. ಮತದಾರ
ಶಿಕ್ಷಣ ತಜ್ಞರು ಇದರಿಂದ ಗಂಭೀರವಾದ ಕಲಿಕೆ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಲವು ಶಾಲೆಗಳಲ್ಲಿ ವಿಭಿನ್ನ ತರಗತಿಯ ವಿದ್ಯಾರ್ಥಿಗಳನ್ನು ಒಂದೇ ಕೊಠಡಿಯಲ್ಲಿ ಸೇರಿಸಿ, ಕೇವಲ ಒಬ್ಬ ಅಥವಾ ಇಬ್ಬರು ಶಿಕ್ಷಕರು ನೋಡಿಕೊಳ್ಳುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಮತದಾರ
ಇದನ್ನೂ ಓದಿ: ಸೋನಂ ವಾಂಗ್‌ಚುಕ್‌ರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದನ್ನು ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ
ಕೆಲವು ಶಾಲೆಗಳಲ್ಲಿ “ವಿದ್ಯಾಭ್ಯಾಸವೇ ಇಲ್ಲ; ಮಕ್ಕಳು ಬಂದು ಊಟ ಮಾಡಿ ಮನೆಗೆ ಹಿಂತಿರುಗುತ್ತಿದ್ದಾರೆ” ಎಂಬ ಪರಿಸ್ಥಿತಿ ಇದೆ ಎಂದು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ಶಿಕ್ಷಣ ಜಿಲ್ಲೆಯಲ್ಲಿ 3,735 ಶಿಕ್ಷಕರಲ್ಲಿ 1,304 ಮಂದಿ SIR ಕರ್ತವ್ಯಕ್ಕೆ ನಿಯೋಜಿತರಾಗಿದ್ದು, ದಕ್ಷಿಣ ವಲಯದಲ್ಲಿ ಈ ಸಂಖ್ಯೆ 2,344ಕ್ಕೆ ಏರಿಕೆಯಾಗಿದೆ. ಅನೇಕ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬ ಅಥವಾ ಇಬ್ಬರನ್ನು ಹೊರತುಪಡಿಸಿ ಉಳಿದ ಶಿಕ್ಷಕರು ಎಲ್ಲರೂ SIR ಕಾರ್ಯದಲ್ಲಿ ತೊಡಗಿದ್ದಾರೆ.
“ತರಗತಿಯಲ್ಲಿ ಇರುವುದಕ್ಕಿಂತ ಹೊರಗಡೆ ಕೆಲಸ ಮಾಡುವ ಸಮಯವೇ ಹೆಚ್ಚು ಆಗುತ್ತಿದೆ,” ಎಂದು ಒಬ್ಬ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಅಧ್ಯಾಯಾವಾರಿ ಮೌಲ್ಯಮಾಪನ ನಡೆಸಬೇಕಿದ್ದರೂ, ಪಾಠಗಳೇ ನಡೆಯದ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
“ನಮ್ಮ ಶಾಲೆಯಲ್ಲಿ 12 ಶಿಕ್ಷಕರಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. ಅವರು ಗಣಿತ ಮತ್ತು ಇಂಗ್ಲಿಷ್ ಮಾತ್ರ ಬೋಧಿಸುತ್ತಿದ್ದಾರೆ. ಇತರ ವಿಷಯಗಳಿಗೆ ಸಂಪೂರ್ಣ ವಿರಾಮ,” ಎಂದು ಮತ್ತೊಬ್ಬ ಶಿಕ್ಷಕಿ ತಿಳಿಸಿದ್ದಾರೆ.
ಶೈಕ್ಷಣಿಕ ತಜ್ಞ ನಿರಂಜನಾರಾಧ್ಯ ಅವರು, “ಕೋವಿಡ್ ಸಂದರ್ಭದಲ್ಲಿ ಈ ಸ್ಥಿತಿ ಅನಿವಾರ್ಯವಾಗಿತ್ತು. ಆದರೆ ಈಗ ಸರ್ಕಾರವೇ ಈ ಪರಿಸ್ಥಿತಿಯನ್ನು ನಿರ್ಮಿಸಿದೆ. ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಮರುನಿಯೋಜನೆ ಮಾಡಬೇಕು,” ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮೇಲ್ವಿಚಾರಣಾ ಸಮಿತಿ ಸಂಯೋಜನಾ ವೇದಿಕೆಯ ಅಧ್ಯಕ್ಷ ಮೊಯ್ದೀನ್ ಕುಟ್ಟಿ, “15 ದಿನಗಳ ಕಾಲ ಎಲ್ಲಾ ಶಾಲೆಗಳನ್ನು ಮುಚ್ಚಿ SIR ಕೆಲಸ ಮುಗಿಸಿ, ನಂತರ ಎಲ್ಲ ಶಾಲೆಗಳನ್ನು ಒಟ್ಟಿಗೆ ತೆರೆಯುವುದು ಉತ್ತಮ. ಶಿಕ್ಷಕರಿಲ್ಲದೆ ಶಾಲೆ ನಡೆಸುವುದರಲ್ಲಿ ಅರ್ಥವೇನು?” ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕಾರ್ಯದರ್ಶಿ ಡಿ. ಶಶಿಕುಮಾರ್, “ಮಕ್ಕಳ ಶೈಕ್ಷಣಿಕ ಹಿತಾಸಕ್ತಿ ರಕ್ಷಿಸುವುದು ಮುಖ್ಯ. ಚುನಾವಣಾ ಕಾರ್ಯವು ಶಿಕ್ಷಣಕ್ಕೆ ಹಾನಿಯಾಗಬಾರದು,” ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಶಿಕ್ಷಕರ ಸಂಘದ ಮುಖಂಡ ಮಂಜುನಾಥ್ ಎಂ ಅವರು, “ಸುಮಾರು 80% ಶಿಕ್ಷಕರು SIR ಕರ್ತವ್ಯದಲ್ಲಿದ್ದಾರೆ. ಇದರಿಂದ ಕಲಿಕೆ ನಷ್ಟ ಖಚಿತ, ಇದು ಚಿಂತಾಜನಕ ಬೆಳವಣಿಗೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಪಂಚಮ’ ಪತ್ರಿಕೆ ಆರ್ಥಿಕ ಸಂಕಷ್ಟದಿಂದಲ್ಲ, ಚಳವಳಿಯೊಳಗಿನ ವಿಶ್ವಾಸದ ಕೊರತೆಯಿಂದ ಸ್ಥಗಿತ: ಎಚ್. ಗೋವಿಂದಯ್ಯ
