ಸಮಾನ ಹಕ್ಕಿಗಾಗಿ ‘ಕರ್ನಾಟಕ ರೋಹಿತ್ ವೇಮುಲ’ ಮಸೂದೆಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಏಪ್ರಿಲ್‌ 16ರಂದು ನಡೆದ ಸಚಿವ ಸಂಪುಟ ಸಭೆಯು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಮತ್ತು ಶಿಕ್ಷಣದ ಹಕ್ಕು ಕಲ್ಪಿಸುವ ಉದ್ದೇಶದಿಂದ ರೂಪಿಸಿರುವ ‘ಕರ್ನಾಟಕ ರೋಹಿತ್‌ ವೇಮುಲ’ ಮಸೂದೆಗೆ ಒಪ್ಪಿಗೆ ನೀಡಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ‘ಕರ್ನಾಟಕ ರೋಹಿತ್‌ ವೇಮುಲ’ (ಬಹಿಷ್ಕಾರ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆಯನ್ನು ಸರ್ಕಾರ ರೂಪಿಸಿದೆ.

‘ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು. ಇದನ್ನು ಖಾತ್ರಿಪಡಿಸಲು ‘ರೋಹಿತ್‌ ವೇಮುಲ ಕಾಯ್ದೆ’ ಹೆಸರಿನ ಕಾನೂನು ಕರ್ನಾಟಕ ದಲ್ಲೂ ರೂಪಿಸಿ, ಜಾರಿಗೊಳಿಸಬೇಕು’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಪತ್ರ ಬರೆದು ಆಗ್ರಹಿಸಿದ್ದರು.

ಇದನ್ನೂ ಓದಿ: ಚುನಾವಣೆ ಅಧಿಕಾರಿಗಳ ವರ್ಗಾವಣೆ ಪ್ರಶ್ನೆ: ಸುಪ್ರೀಂ ಕೋರ್ಟ್ ಅರ್ಜಿ ವಜಾ

ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವರ್ಗಗಳು, ಜಾತಿಗಳು, ಮತಗಳು, ಲಿಂಗ, ದೇಶ ಎಂಬ ತಾರತಮ್ಯ ಇಲ್ಲದೆ ಮುಕ್ತ ವಾತಾವರಣ ಇರಲಿದೆ. ಈ ಸಂಸ್ಥೆಗಳಲ್ಲಿನ ಪ್ರವೇಶವು ಜಾತಿ, ವರ್ಗ, ಮತ, ಲಿಂಗ ಅಥವಾ ದೇಶ ಎಂಬ ಭೇದ ಇಲ್ಲದೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಅರ್ಹತಾ ಪರೀಕ್ಷೆಗಳಲ್ಲಿನ ಅಂಕಗಳ ಆಧಾರದಲ್ಲಿ ಪ್ರವೇಶಾತಿ ಸಿಗಲಿದೆ. ನಿಯಮವನ್ನು ಉಲ್ಲಂಘಿಸಿದ ವ್ಯಕ್ತಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ, ₹10 ಸಾವಿರ ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಂತ್ರಸ್ತನಿಗೆ ಆರೋಪಿಯು ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯ ಅನುಮತಿಸಲು ಕೂಡ ಅವಕಾಶ ಸಿಗಲಿದೆ. ಆ ಮೊತ್ತವು ಗರಿಷ್ಠ ₹1 ಲಕ್ಷದವರೆಗೆ ಮತ್ತು ಅದಕ್ಕೆ ಹೆಚ್ಚುವರಿಯಾಗಿ ಬಡ್ಡಿಯೂ ಇರಲಿದೆ. ಈ ಹಿಂದೆ ಅಪರಾಧ ಎಸಗಿದ ಕಾರಣಕ್ಕೆ ಶಿಕ್ಷೆಗೊಳಗಾದವರು ಮತ್ತೆ ಈ ಕಾಯ್ದೆಯಡಿ ಶಿಕ್ಷೆಗೆ ಒಳಗಾದರೆ, ಅಂಥವರಿಗೆ ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಮತ್ತು ₹ 1 ಲಕ್ಷ ದಂಡ ವಿಧಿಸಬೇಕೆಂಬ ಪ್ರಸ್ತಾವವೂ ಈ ಮಸೂದೆಯಲ್ಲಿದೆ.

ಈ ಕಾಯ್ದೆಯಡಿ ಎಸಗುವ ಪ್ರತಿಯೊಂದು ಅಪರಾಧವು ಸಂಜ್ಞೇಯ ಮತ್ತು ಜಾಮೀನು ರಹಿತ ಎಂದು ಪರಿಗಣಿಸಲಾಗುವುದು. ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವ ಸಂಸ್ಥೆಗೆ ರಾಜ್ಯ ಸರ್ಕಾರವು ಯಾವುದೇ ಆರ್ಥಿಕ ನೆರವು ಅಥವಾ ಅನುದಾನ ನೀಡಬಾರದು. ಅಪರಾಧ ಎಸಗುವ ಪ್ರತಿಯೊಬ್ಬ ವ್ಯಕ್ತಿ ಮತ್ತು ಕೃತ್ಯ ಎಸಗಲು ಇನ್ನೊಬ್ಬರಿಗೆ ಸಹಾಯ ಮಾಡುವ ಅಥವಾ ಪ್ರಚೋದಿಸುವ ವ್ಯಕ್ತಿ ಕೂಡ ಅಪರಾಧದಲ್ಲಿ ಭಾಗವಹಿಸಿದ್ದಾರೆಂದು ಪರಿಗಣಿಸಲಾಗುತ್ತದೆ ಎಂದು ಮಸೂದೆ ‍ಪ್ರಸ್ತಾಪಿಸಿದೆ.

ಇದನ್ನೂ ನೋಡಿ: SC ಒಳಮೀಸಲಾತಿ| ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಸಿಪಿಐ(ಎಂ) ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *