- ವಸಂತರಾಜ ಎನ್.ಕೆ
ಯು.ಎಸ್ ಮತ್ತು ಇರಾನ್ ನಡುವೆ ಇಸ್ಲಾಮಾಬಾದಿನಲ್ಲಿ ಮೊದಲ ಸುತ್ತಿನ ಮಾತುಕತೆಗಳು ಮುರಿದು ಬಿದ್ದ ನಂತರ ಹೊರ್ಮುಝ್ ಜಲಸಂಧಿಯ ಮೇಲೆ ನಿಯಂತ್ರಣದ ವಿಷಯ ಮುನ್ನೆಲೆಗೆ ಬಂದಿದೆ. ಟ್ರಂಪ್ ಹೋರ್ಮುಝ್ ಜಲಸಂಧಿಗೆ ನೌಕಾ ದಿಗ್ಬಂಧನವನ್ನು ಘೋಷಿಸಿದ್ದಾರೆ. ಇದು ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಹೊರ್ಮುಝ್ ಜಲಸಂಧಿಯ ನಿರ್ವಹಣೆಯಲ್ಲಿ ಇರಾನ್ ಪಾತ್ರದ ಬಗ್ಗೆ ಚರ್ಚೆ ಎಬ್ಬಿಸಿದೆ. ಸಾಗರದ ಕಾನೂನುಗಳ ಕುರಿತ ವಿಶ್ವಸಂಸ್ಥೆ ಒಪ್ಪಂದ (UNCLOS) ದ ವ್ಯಾಖ್ಯಾನದ ಕುರಿತು ವಿವಾದವೆದ್ದಿದೆ. ಇರಾನ್ UNCLOS ಪ್ರಕಾರವೇ ತನಗೆ ಅಧಿಕಾರವಿದೆ ಎಂದರೆ, ಯು.ಎಸ್ ಮತ್ತು ಅದರ ಬೆಂಬಲಿಗರು ಇರಾನ್ ಗೆ ಅಧಿಕಾರವಿಲ್ಲ ಎನ್ನುತ್ತಿದ್ದಾರೆ. ಈ ಕುರಿತು ಒಂದು ವಿಶ್ಲೇಷಣೆ.
ಏಪ್ರಿಲ್ 16 ಸಂಜೆ 6 ಗಂಟೆ ಭಾರತೀಯ ಸಮಯ : ಯು.ಎಸ್ ಮತ್ತು ಇರಾನ್ ನಡುವೆ ಆದ ಎರಡು ವಾರಗಳ ಕದನವಿರಾಮ ಮುಂದುವರೆಯುತ್ತಿದ್ದರೂ, ಇಸ್ಲಾಮಾಬಾದಿನಲ್ಲಿ ನಡೆದ ಶಾಂತಿ ಮಾತುಕತೆಗಳು ಕೇವಲ 21 ಗಂಟೆಗಳಲ್ಲಿ ಮುರಿದು ಬಿದ್ದಿವೆ. ಯುರೇನಿಯಂ ಸಂಸ್ಕರಣೆ ನಿಲ್ಲಿಸುವ ಮತ್ತು ಹೋರ್ಮುಝ್ ಮುಕ್ತವಾಗಿ ತೆರೆಯುವ ಭರವಸೆ ಕೊಡದೆ ಇತರ ಅಂಶಗಳ ಬಗ್ಗೆ ಮಾತುಕತೆ ಸಾಧ್ಯವಿಲ್ಲವೆಂದು ಯು.ಎಸ್ ಪಟ್ಟು ಹಿಡಿಯಿತು. ಮಾತುಕತೆಗಳಿಗೆ ಆಧಾರವೆಂದು ಒಪ್ಪಿಕೊಳ್ಳಲಾದ 10 ಅಂಶಗಳ ಬಗ್ಗೆ ಒಂದೇ ದಿನದಲ್ಲಿ ಒಪ್ಪಂದ ಸಾಧ್ಯವಿಲ್ಲ, ತಾಳ್ಮೆಯ ದೀರ್ಘ ಮಾತುಕತೆಗಳು ಅಗತ್ಯವೆಂದು ಇರಾನ್ ದೃಢವಾಗಿ ಹೇಳಿತು. ಎರಡೂ ಪಕ್ಷಗಳೂ ತಮ್ಮ ಅಂಶಗಳನ್ನು ಕೊಟ್ಟಿದ್ದೇವೆ. ಅದನ್ನು ಒಪ್ಪುವುದು, ಬಿಡುವುದು ಎದುರಾಳಿ ಪಕ್ಷಕ್ಕೆ ಬಿಟ್ಟದ್ದು ಎಂಬ ನಿಲುವು ತೆಗೆದುಕೊಂಡವು. ಎರಡೂ ಪಕ್ಷಗಳ ನಡುವೆ ವಿಶ್ವಾಸದ ತೀವ್ರ ಅಭಾವ ಕಂಡು ಬಂತು.
ಕದನ ವಿರಾಮ ಲೆಬನಾನ್ ಗೂ ಅನ್ವಯವಾಗುತ್ತದೆ ಮತ್ತು ವಿದೇಶಿ ಬ್ಯಾಂಕುಗಳಲ್ಲಿ ಸ್ಥಗಿತ ಇರಾನಿನ ನಿಧಿಯನ್ನು ಮುಕ್ತಗೊಳಿಸಲಾಗುವುದು ಎಂಬ ಭರವಸೆಯ ಮೇಲೆ ಮಾತುಕತೆಗಳನ್ನು ಇರಾನ್ ಆರಂಭಿಸಿತ್ತು. ಆದರೆ ಇವೆರಡೂ ಜಾರಿಯಾಗಲಿಲ್ಲ. ಅಲ್ಲದೆ ಮಾತುಕತೆಗಳಲ್ಲಿ ಯು.ಎಸ್ ತಂಡದ ನಾಯಕತ್ವ ವಹಿಸಿದ್ದ ಉಪಾಧ್ಯಕ್ಷ ಜೆ ಡಿ ವಾನ್ಸ್ ಪದೇ ಪದೇ ಟ್ರಂಪ್ ಗೆ ಕರೆ ಮಾಡುತ್ತಿದ್ದರು. ಇಸ್ರೇಲಿ ಪ್ರಧಾನಿ ನೇತನ್ಯಾಹು ಕರೆ ಸ್ವೀಕರಿಸಿದರು. ಮಾತುಕತೆಗಳಲ್ಲಿ ನಿರ್ಣಯ ತೆಗೆದುಕೊಳ್ಳಲು ಅವರಿಗೆ ಸೂಕ್ತ ಅಧಿಕಾರ ಕೊಟ್ಟಿರಲಿಲ್ಲವೆಂಬ ಭಾವನೆ ಇರಾನಿ ತಂಡದಲ್ಲಿ ಬಂತು ಎಂದು ಹೇಳಲಾಗಿದೆ.
ಸಾಲದ್ದಕ್ಕೆ ಮಾತುಕತೆಗಳು ನಡೆಯುತ್ತಿರುವಾಗಲೇ, ಎರಡು ಯು.ಎಸ್ ಯುದ್ಧ ಹಡಗುಗಳು ಹೋರ್ಮುಝ್ ಜಲಸಂಧಿ ಪ್ರವೇಶಿಸಿ, ಮೈನ್ ಗಳನ್ನು ನಾಶ ಮಾಡಿ ಅದನ್ನು ಸಾಗಾಣಿಕೆಗೆ ಮುಕ್ತವಾಗಿಸಿವೆ ಎಂದು ಟ್ರಂಪ್ ತಮ್ಮ ‘ಟ್ರುಥ್ ಸೋಶಿಯಲ್” ಖಾತೆಯಲ್ಲಿ ಬರೆದರು. ಇದನ್ನು ಇರಾನ್ ನಿರಾಕರಿಸಿತು. ಯು.ಎಸ್ ನ ಎರಡು ಜಲಸಂಧಿಯನ್ನು ಸಮೀಪಿಸಿದ್ದು ನಿಜ – ಅದೂ ಹುಸಿ ಇಲೆಕ್ಟ್ರಾನಿಕ್ ಸಹಿ ಬಳಸಿ. ಆದರೆ ಅದನ್ನು ಗುರುತಿಸಿ ಮುಂದುವರೆದರೆ ದಾಳಿ ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ಕೊಟ್ಟ ಮೇಲೆ ಹಿಂದೆ ಸರಿದವು ಎಂದು ಇರಾನಿನ ಐ.ಆರ್.ಜಿ.ಸಿ ನೌಕಾಪಡೆ ಹೇಳಿದೆ. ಈ ಘಟನೆ ಈ ಶಾಂತಿ ಮಾತುಕತೆ ಮತ್ತೆ ಹೋರ್ಮುಝ್ ಜಲಸಂಧಿಯೊಳಗೆ ನುಗ್ಗಲು ಒಂದು ಹುಸಿ ಮುಖವಾಡವಾಗಿತ್ತು, ಹಾಗಾಗಿ ಈ ಮಾತುಕತೆಗಳಿಗೆ ಅರ್ಥವಿಲ್ಲ ಎಂಬ ಸಂಶಯವನ್ನು ಇರಾನಿನಲ್ಲಿ ಹುಟ್ಟಿಸಿದ್ದರೆ ಆಶ್ಚರ್ಯವಿಲ್ಲ.
ಹೊರ್ಮುಝ್ ಜಲಸಂಧಿಯ ಮೇಲೆ ನಿಯಂತ್ರಣ ಮುನ್ನೆಲೆಗೆ
ಮೊದಲ ಸುತ್ತಿನ ಮಾತುಕತೆಗಳು ಮುಗಿದ ನಂತರ ಟ್ರಂಪ್ ಹೋರ್ಮುಝ್ ಜಲಸಂಧಿಗೆ ನೌಕಾ ದಿಗ್ಬಂಧನವನ್ನು ಘೋಷಿಸಿದ್ದಾರೆ. ಎಲ್ಲರಿಗೂ ಮುಕ್ತವಾಗಿದ್ದ ಹೋರ್ಮುಝ್ ಜಲಸಂಧಿಯಲ್ಲಿ, ಇರಾನ್ ಸುಂಕ ವಿಧಿಸಿ ಆಯ್ದ ಸಾಗಾಣಿಕೆ ಹಡಗುಗಳನ್ನು ಮಾತ್ರ ಹಾದು ಹೋಗಲು ಬಿಡುತ್ತಿರುವುದು ‘ಕಡಲುದರೋಡೆ’ ಯ ಕ್ರಮ ಮತ್ತು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ. ಇಂತಹ ಹಡಗುಗಳನ್ನು ಅಂತರರಾಷ್ಟ್ರೀಯ ಸಾಗರದಲ್ಲಿ ತಡೆದು ನಿಲ್ಲಿಸಿ ವಾಪಸು ಕಳಿಸಲಾಗುವುದು, ಎಚ್ಚರಿಕೆಗೆ ಕಿವಿಗೊಡದೆ ಇದ್ದರೆ ದಾಳಿ ಮಾಡಿ ನಾಶ ಮಾಡಲಾಗುವುದು ಎಂದು ಟ್ರಂಪ್ ಘೋಷಿಸಿದ್ದಾರೆ.

ಪರ್ಶಿಯನ್ ಕೊಲ್ಲಿ, ಹೊರ್ಮುಝ್ ಜಲಸಂಧಿ ಮತ್ತು ಒಮನ್ ಕೊಲ್ಲಿಯ ಸುತ್ತದ ವಿವರವಾದ ಮ್ಯಾಪ್
ಅಂತರರಾಷ್ಟ್ರೀಯ ಕಾನೂನು ಪ್ರಕಾರ ಯಾವುದೇ ದೇಶದ ಕರಾವಳಿಯಿಂದ 12 ನಾಟಿಕಲ್ ಮೈಲ್ ಅದರ ಸಾರ್ವಭೌಮ ಪ್ರದೇಶ. ಕರಾವಳಿಯಿಂದ 200 ನಾಟಿಕಲ್ ಮೈಲುಗಳು ಅದರ ಪ್ರತ್ಯೇಕ ಆರ್ಥಿಕ ವಲಯ (Exclusive Economic Zone – EEZ). ಈ ವಲಯದಲ್ಲಿ ಸಾಗರದ ಸಂಪನ್ಮೂಲಗಳ ಆರ್ಥಿಕ ಬಳಕೆಯ ಹಕ್ಕುಗಳನ್ನು ಹೊಂದಿರುತ್ತದೆ. ಹೊರ್ಮುಝ್ ಜಲಸಂಧಿ ಅತ್ಯಂತ ಕಿರಿದಾದ ಸ್ಥಳದಲ್ಲಿ ಕೇವಲ 21 ಮೈಲುಗಳು ಇದ್ದು, ಇದು ಒಮನ್ ಮತ್ತು ಇರಾನಿನ ಸಾರ್ವಭೌಮ ಪ್ರದೇಶವಾಗಿದೆ. ಮಾತ್ರವಲ್ಲ ಪರ್ಶಿಯನ್ ಕೊಲ್ಲಿಯ ಬಹುಭಾಗ ಇರಾನಿನ ಆರ್ಥಿಕ ವಲಯಕ್ಕೂ ಬರುತ್ತದೆ. ಹಾಗಾಗಿ ಅದು ಅಂತರರಾಷ್ಟ್ರೀಯ ಜಲಸಂಧಿ ಅಲ್ಲ. ಹಾಗಾಗಿ ಈ ಜಲಸಂಧಿಯ ನಿರ್ವಹಣೆ ಮಾಡುವ (ಆ ಮೂಲಕ ಅದಕ್ಕೆ ಸುಂಕ ವಿಧಿಸುವ) ಹಕ್ಕು ಇರಾನ್ ಮತ್ತು ಒಮನ್ ಗಿದೆ. ಅಂತರರಾಷ್ಟ್ರೀಯ ಸಾಗರದಲ್ಲಿ ಯು.ಎಸ್ ಮಾಡುತ್ತಿರುವ ನೌಕಾ ದಿಗ್ಬಂಧನ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮಾತ್ರವಲ್ಲ, ಕದನವಿರಾಮವನ್ನು ಉಲ್ಲಂಘಿಸಿ ಇರಾನ್ ಮೇಲೆ ಮಾಡುತ್ತಿರುವ ಯುದ್ಧ ಘೊಷಣೆಗೆ ಸಮ. ಈಗಾಗಲೇ ಹೊರ್ಮುಝ್ ಜಲಸಂಧಿಯ ಮೂಲಕ ಸಾಗಾಣಿಕೆ ಸುಗಮವಾಗಿ ಸಾಗಲು ಬೇಕಾದ ಭದ್ರತೆ, ಸಂಪರ್ಕ/ಸಂವಹನ, ಟ್ರಾಫಿಕ್ ನಿರ್ವಹಣೆಯನ್ನು ಇರಾನ್ ಮತ್ತು ಒಮನ್ ಈಗಾಗಲೇ ಮಾಡುತ್ತಿವೆ ಎಂಬುದು ಇರಾನಿನ ನಿಲುವು. ಇದು ಇರಾನ್ ಈಗ ತಳೆಯುತ್ತಿರುವ ನಿಲುವಲ್ಲ. ಇಸ್ಲಾಮಿಕ್ ಕ್ರಾಂತಿಗೂ ಮೊದಲು 1975ರಷ್ಟು ಹಿಂದೆಯೇ, ಅಂದರೆ ಷಾ ಅವರ ಆಳ್ವಿಕೆಯ ಕಾಲದಲ್ಲಿಯೇ, ಇರಾನ್ ಮತ್ತು ಒಮನ್ ಒಂದು ಕರಡು ಒಪ್ಪಂದವನ್ನು ತಯಾರಿಸಿತ್ತು. ಆದರೇ ಆ ಮೇಲೆ ಇಸ್ಲಾಮಿಕ್ ಕ್ರಾಂತಿ ಮತ್ತು ಯು.ಎಸ್ ಧೋರಣೆಯಿಂದಾಗಿ ಅದಕ್ಕೆ ಸಹಿ ಹಾಕಲಾಗಿಲ್ಲ. ಅದರ ವಿವರಗಳನ್ನು ಈ ಕೆಳಗಿನ ವೆಬ್ ಕೊಂಡಿಯಲ್ಲಿ ನೋಡಬಹುದು:
https://ciaotest.cc.columbia.edu/journals/irfa/v2i4/f_0025010_20426.pdf
ಸಾಗರದ ಕಾನೂನುಗಳ ಕುರಿತ ವಿಶ್ವಸಂಸ್ಥೆ ಒಪ್ಪಂದ (UNCLOS) ದ ವ್ಯಾಖ್ಯಾನದ ವಿವಾಧ
ಇಲ್ಲಿ ಅಂತರರಾಷ್ಟ್ರೀಯ ಕಾನೂನು ಎಂದು ಎರಡೂ ಪಕ್ಷಗಳು ಸಾಗರದ ಕಾನೂನುಗಳ ಕುರಿತ ವಿಶ್ವಸಂಸ್ಥೆ ಒಪ್ಪಂದ (United Nations Convention on the Law of the Sea – UNCLOS) ವನ್ನು ಉಲ್ಲೇಖಿಸುತ್ತಿವೆ. ಅದು ಈ ಕೆಳಗಿನ ವೆಬ್ ಕೊಂಡಿಯಲ್ಲಿ ಲಭ್ಯವಿದೆ.

https://www.un.org/depts/los/convention_agreements/texts/unclos/unclos_e.pdf
ಇದರಲ್ಲೇ ಮೇಲೆ ಹೇಳಿದ ಸಾಗರದಲ್ಲಿ ಒಂದು ದೇಶದ ‘ಸಾರ್ವಭೌಮ ಪ್ರದೇಶ’, ‘ಪ್ರತ್ಯೇಕ ಆರ್ಥಿಕ ವಲಯ’ (EEZ), ಹಾಗೂ ‘ಅಂತರರಾಷ್ಟ್ರೀಯ ಜಲಸಂಧಿ” ಗಳ ಮತ್ತು ಅವುಗಳಿಗೆ ಸಂಭಂಧಿಸಿದಂತೆ ವಿವಿಧ ದೇಶಗಳ ಹಕ್ಕು, ಬಾಧ್ಯತೆಗಳ ನಿರೂಪಣೆ ಬರುತ್ತದೆ, ಮುಖ್ಯ ವಿವಾದವಿರುವುದು ಹೊರ್ಮಝ್ ಜಲಸಂಧಿ ಒಪ್ಪಂದದಲ್ಲಿ ಕಲಮು 19ರಲ್ಲಿ ನಿರೂಪಿಸಿರುವ ‘ಇನ್ನೊಸೆಂಟ್ ‘ ರವಾನೆ” (INNOCENT PASSAGE IN THE TERRITORIAL SEA) ರೀತಿಯ ಅಥವಾ ಕಲಮು 36ರಲ್ಲಿ ನಿರೂಪಿಸಿರುವ “ಅಂತರರಾಷ್ಟ್ರೀಯ ರವಾನೆ (INTERNATIONAL TRANSIT PASSAGE)” ರೀತಿಯ ಜಲಸಂಧಿಯೇ ಎಂಬುದರ ಬಗ್ಗೆ. ಇರಾನ್ ಹೊರ್ಮುಝ್ ತನ್ನ ಸಾರ್ವಭೌಮ ಪ್ರದೇಶದಲ್ಲಿರುವ INNOCENT PASSAGE ರೀತಿಯ ಜಲಸಂಧಿ ಎನ್ನುತ್ತದೆ. ಯು.ಎಸ್ ಮತ್ತು ಅದರ ಬೆಂಬಲಿಗರು ಅದನ್ನು ‘ಟ್ರಾನ್ಸಿಟ್” (INTERNATIONAL TRANSIT PASSAGE) ರೀತಿಯ ಜಲಸಂಧಿ ಎನ್ನುತ್ತಾರೆ. ಈ ಬಗ್ಗೆ ಸ್ವತಂತ್ರ ಕಾನೂನು ತಜ್ಞರಲ್ಲಿ ಒಮ್ಮತವಿಲ್ಲ. ಇದಕ್ಕೆ ಒಪ್ಪಂದದಲ್ಲಿ ಕೊಟ್ಟಿರುವ INTERNATIONAL TRANSIT PASSAGE ಯ ನಿರ್ವಚನೆ ಕಾರಣ. ಎರಡು ಅಂತರರಾಷ್ಟ್ರೀಯ ಸಾಗರ ಪ್ರದೇಶಗಳನ್ನು ಜೋಡಿಸುವ ಅಥವಾ ಒಂದು ‘ಪ್ರತ್ಯೇಕ ಆರ್ಥಿಕ ವಲಯ’ (EEZ) ಮತ್ತು ಅಂತರರಾಷ್ಟ್ರೀಯ ಸಾಗರ ಪ್ರದೇಶವನ್ನು ಜೋಡಿಸುವ ಕಿರಿದಾದ ಜಲಸಂಧಿಯನ್ನು INTERNATIONAL TRANSIT PASSAGE ಎಂದು ಕರೆಯಲಾಗಿದೆ. ಹೊರ್ಮುಝ್ ಜಲಸಂಧಿ ಪರ್ಶಿಯನ್ ಕೊಲ್ಲಿಯ ದೇಶಗಳಿಗೆ ಅಂತರರಾಷ್ಟ್ರೀಯ ಸಾಗಾಣಿಕೆಯ ಏಕಮಾತ್ರ ದಾರಿಯಾಗಿರುವುದರಿಂದ ಮತ್ತು ಈಗಾಗಲೇ ಮುಕ್ತ ಸಾಗಾಣಿಕೆಗೆ ತೆರೆದುಕೊಂಡಿರುವುದರಿಂದ ಅದು INTERNATIONAL TRANSIT PASSAGE ಎಂಬುದು ಯು.ಎಸ್ ಮತ್ತು ಅದರ ಬೆಂಬಲಿಗರ ವಾದ. INTERNATIONAL TRANSIT PASSAGE ಆದರೂ ಸಹ ಯುದ್ಧ ಸಮಯದಲ್ಲಿ ಮತ್ತು ಭದ್ರತೆಗೆ ಅಪಾಯವಿದ್ದಾಗ ಜಲಸಂಧಿಯ ಪಕ್ಕದಲ್ಲಿರುವ ದೇಶಗಳಿಗೆ ನಿರ್ಬಂಧಗಳನ್ನು ಹೇರುವ ಅಧಿಕಾರವಿದೆ.
ಚೋದ್ಯದ ವಿಷಯವೆಂದರೆ ಇರಾನ್ ಆಗಲಿ, ಯು.ಎಸ್ ಆಗಲಿ ಸಹಿ ಹಾಕಿ UNCLOS ಒಪ್ಪಂದವನ್ನು ದೃಢೀಕರಿಸಿಲ್ಲ! ಹಾಗಾಗಿ ಇರಾನ್ ತಾನು ಒಪ್ಪಂದದ ವ್ಯಾಖ್ಯಾನ ಏನೇ ಇರಲಿ, ತಾನು ಅದಕ್ಕೆ ಬದ್ಧನಾಗಿರಬೇಕಿಲ್ಲ. ದೃಢೀಖರಿಸದ ಯು.ಎಸ್ ಗೆ ಸಹ ಇರಾನ್ ಒಪ್ಪಂದಕ್ಕೆ ಬದ್ಧನಾಗಿರಬೇಕು ಎಂದು ಒತ್ತಾಯಿಸಲು ಯಾವುದೇ ಹಕ್ಕಿಲ್ಲವೆಂದೂ ವಾದಿಸಿದೆ.
ಹೊರ್ಮುಝ್ ಜಲಸಂಧಿ ಜಗತ್ತಿನಲ್ಲೇ ವಿಶಿಷ್ಟವಾದ್ದು. ಜಗತ್ತಿನ ಹೆಚ್ಚಿನ ಜಲಸಂಧಿ ಅಥವಾ ಕಾಲುವೆಗಳು ಎರಡು ಸಾಗರಗಳ ನಡುವೆ ಇವೆ. ಉದಾಹರಣೆಗೆ ರಶ್ಯಾ ಮತ್ತು ಅಲಾಸ್ಕಾ (ಯು.ಎಸ್) ನಡುವಿನ ಬೇರಿಂಗ್, ಸ್ಪೈನ್, ಮೊರೊಕ್ಕೊ ನಡುವಿನ ಜಿಬ್ರಾಲ್ಟರ್, ಇಂಡೋನೇಶ್ಯಾ, ಮಲೇಶ್ಯಾಗಳ ನಡುವಿನ ಮಲಾಕ್ಕಾ, ಟರ್ಕಿಯ ಮೂಲಕ ಹಾದು ಹೋಗುವ ಬೊಸ್ಪರಸ್ ಜಲಸಂಧಿಗಳು ಮತ್ತು ಸುಯೇಜ್, ಪನಾಮಾ ಕಾಲುವೆಗಳು ಎಲ್ಲವೂ ಎರಡು ಸಾಗರಗಳ ನಡುವೆ ಇವೆ. ಅವೆಲ್ಲವುಗಳ ನಿರ್ವಹಣೆಯನ್ನು ಅದರ ತಟದಲ್ಲಿರುವ ದೇಶಗಳೇ ಮಾಡುತ್ತವೆ. ಹಾಗೂ ಅವುಗಳಿಗೆ ಒಪ್ಪಿತ ವ್ಯವಸ್ಥೆಯೊಂದಿದೆ. ಹೋರ್ಮುಝ್ ಮತ್ತು ಬಾಬ್-ಎಲ್-ಮಂಡಬ್ (ಪೂರ್ವ ಆಫ್ರಿಕಾದ ಇಥಿಯೋಪಿಯ, ಸೊಮಾಲಿಯ ಮತ್ತು ಯೆಮೆನ್ ನಡುವಿನ) ಜಲಸಂಧಿಗಳು ಮಾತ್ರ ಇವಕ್ಕೆ ಅಪವಾದಗಳು. ಇದರ ತೀರದ ದೇಶಗಳು ಚರ್ಚಿಸಿ ಈ ಎರಡು ಜಲಸಂಧಿಗಳಿಗೂ ಒಂದು ಒಪ್ಪಿತ ವ್ಯವಸ್ಥೆ ಆಗಬೇಕು.
ಹೊರ್ಮುಝ್ ಜಲಸಂಧಿಯ ನಿರ್ವಹಣೆ ಬಗ್ಗೆ ಅದರ ಮತ್ತು ಪರ್ಶಿಯನ್ ಕೊಲ್ಲಿಯ ಪ್ರದೇಶದ ದೇಶಗಳು ಚರ್ಚಿಸಿ ಒಂದು ಒಪ್ಪಂದಕ್ಕೆ ಬರಬೇಕು ಎಂದಷ್ಟೇ ತನ್ನ ಇರಾನಿನ 10 ಅಂಶಗಳ ಪ್ರಸ್ತಾವದಲ್ಲಿ ಹೇಳುತ್ತಿರುವುದು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ
ಅಧ್ಯಕ್ಷ ಟ್ರಂಪ್ ಅಬ್ಬರದ ಹೊರತಾಗಿಯೂ ಪಶ್ಚಿಮ ಏಷ್ಯಾದಲ್ಲಿ ಎರಡು ವಾರಗಳ ಕದನ ವಿರಾಮ
ಅದು ಏನೇ ಇರಲಿ, ಯಾವುದೇ ಅಂತರರಾಷ್ಟ್ರೀಯ ಒಪ್ಪಂದ ಸಂಬಂಧಿಸಿದ ದೇಶಗಳ ಬಲಾಬಲದ ಮೇಲೆ ಅವಲಂಬಿಸಿದೆ ಎನ್ನುವುದು ಯಾವಾಗಲೂ, ವಿಶೇಷವಾಗಿ ಇತ್ತೀಚಿನ ದಶಕಗಳಲ್ಲಿ ಸರ್ವವಿದಿತ. ಇಡೀ ಜಗತ್ತನ್ನು ಬಾಧಿಸುವ ಹೊರ್ಮುಝ್ ಜಲಸಂಧಿಯ ನಿರ್ವಹಣೆಯ ಪ್ರಶ್ನೆ ಎತ್ತುವ ಮೂಲಕ ಇರಾನ್ ಮಾತುಕತೆಗಳ ಚೌಕಾಶಿಯಲ್ಲಿ ತನ್ನ ಕೈ ಬಲಪಡಿಸಿಕೊಂಡಿದೆ. ಯು.ಎಸ್ ನೌಕಾ ದಿಗ್ಬಂಧನದ ಘೋಷಣೆ ಮೂಲಕ ಜಾಗತಿಕ ಬೆಂಬಲ ಇನ್ನಷ್ಟು ಕಳೆದುಕೊಂಡಿದೆ. ಹೊರ್ಮುಝ್ ಜಲಸಂಧಿ ಯು.ಎಸ್ ಹೂಡಿದ ಯುದ್ಧದ ಮೊದಲು ಸಾಗಾಣಿಕೆಗೆ ಮುಕ್ತವಾಗಿತ್ತು. ಈ ಸಮಸ್ಯೆ ಬಂದಿದ್ದು ಯು.ಎಸ್ ನ ಯುದ್ಧದಿಂದ ತಾನೇ ಮತ್ತು ನೌಕಾ ದಿಗ್ಬಂಧನ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುವುದಿಲ್ಲವೇ ಎಂಬ ಪ್ರಶ್ನೆಗಳು ಎದ್ದು, ಚೌಕಾಶಿಯಲ್ಲಿ ಯು.ಎಸ್ ನಿಲುವು ದುರ್ಬಲವಾಗಿದೆ.
ಎರಡನೇ ಸುತ್ತಿನ ಮಾತುಕೆಗಳು ಆರಂಭದ ಸೂಚನೆಗಳು ಕಂಡುಬರುತ್ತಿರುವುದು ಹೊರ್ಮುಝ್ ಜಲಸಂಧಿಯ ನಿರ್ವಹಣೆಯನ್ನು ಮುನ್ನೆಲೆಗೆ ತರುವ ಇರಾನ್ ತಂತ್ರದ ಎದುರು ಯು.ಎಸ್ ಸೋತಿದೆ ಎಂಬುದರ ಸೂಚನೆಯಿದ್ದಂತಿದೆ.
************
