ಪ್ರಥಮ ಘಟಿಕೋತ್ಸವವನ್ನು ವಿ.ವಿ ಕ್ಯಾಂಪಸ್ ನಲ್ಲಿ ನಡೆಸಲು ಒತ್ತಾಯಿಸಿ ಹೋರಾಟ ಸಮಿತಿಯಿಂದ ಮನವಿ

ಹಾವೇರಿ: ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ಆಯೋಜಿಸುವಂತೆ ಒತ್ತಾಯಿಸಿ, ವಿ.ವಿ ಉಪಕುಲಪತಿಗಳಾದ ಪ್ರೊ. ಸುರೇಶ ಎಚ್. ಜಂಗಮಶೆಟ್ಟಿ ಅವರಿಗೆ ವಿ.ವಿ ಉಳಿಸಿ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯ್ತು.

ಮಾರ್ಚ್‌ 31ರಂದು ನಗರದ ಹೊರವಲಯ ಕೇರಿಮತ್ತಿಹಳ್ಳಿಯಲ್ಲಿರುವ ಹಾವೇರಿ ವಿಶ್ವವಿದ್ಯಾಲಯದಲ್ಲಿ ಉಪಕುಲಪತಿಗಳನ್ನು ಭೇಟಿ ಮಾಡಿದ ವಿ.ವಿ ಉಳಿಸಿ ಹೋರಾಟ ಸಮಿತಿ ನಿಯೋಗವು ಸಲ್ಲಿಸಿದ ಮನವಿಯಲ್ಲಿ, ನಮ್ಮ ಜಿಲ್ಲೆಯ ಹೆಮ್ಮೆಯಾಗಿರುವ  ಹಾವೇರಿ ವಿಶ್ವವಿದ್ಯಾಲಯದ ಪ್ರಪ್ರಥಮ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯ ಸಂಗತಿ.

ಹಲವು ಸೌಕರ್ಯಗಳ ಕೊರತೆ ಹಾಗೂ ಸಮಸ್ಯೆಗಳ ಮಧ್ಯೆಯೂ ಹಲವು ಸಂಸ್ಥೆಗಳೊಂದಿಗೆ ಒಪ್ಪಂದ ಹಾಗೂ ಸಹಕಾರಗಳೊಂದಿಗೆ ವಿಶ್ವ ವಿದ್ಯಾಲಯವು ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಕೂಡ ಆಶಾದಾಯಕ ಬೆಳವಣಿಗೆಯಾಗಿದ್ದು, ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿಯು ಅಭಿನಂದಿಸುತ್ತದೆ.

ಇದನ್ನೂ ಓದಿ: ಪ್ರಚಾರದ ವೇಳೆ ಮಾದರಿ ನೀತಿಸಂಹಿತೆ ಉಲ್ಲಂಘನೆ; ನಟ ವಿಜಯ್ ವಿರುದ್ಧ ಪ್ರಕರಣ ದಾಖಲು

ನಮ್ಮ ಹಾವೇರಿ ವಿಶ್ವವಿದ್ಯಾಲಯ ಪ್ರಥಮ ವರ್ಷದ ಘಟಿಕೋತ್ಸವ ಕಾರ್ಯಕ್ರಮವನ್ನು ಸಭಾಂಗಣ ಹಾಗೂ ಭದ್ರತೆಯ ಕಾರಣದಿಂದ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಡುವುದರ ಬದಲಾಗಿ ಬೇರೆ ಕಡೆ ಮಾಡುತ್ತಿರುವುದು ಬೇಸರದ ಸಂಗತಿ.

ನಮ್ಮ ಹಾವೇರಿ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ, ಖಾಯಂ ಸಿಬ್ಬಂದಿ ನೇಮಕ, ಅಧ್ಯಯನ ಪೀಠಗಳು, ಸಭಾಂಗಣ, ಕಟ್ಟಡಗಳು, ಹಾಸ್ಟೇಲ್ ಗಳು, ಕ್ಯಾಂಟೀನ್, ಸಮರ್ಪಕ ರಸ್ತೆ ಸೇರಿದಂತೆ ಇನ್ನೂ ಹಲವು ಮೂಲಭೂತ ಸೌಲಭ್ಯಗಳ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಘಟಿಕೋತ್ಸವ ಕಾರ್ಯಕ್ರಮವು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ನಡೆದರೆ ಕಾರ್ಯಕ್ರಮಕ್ಕೆ ಆಗಮಿಸುವ ಸಚಿವರಿಗೆ, ಗಣ್ಯರಿಗೆ ವಸ್ತುಸ್ಥಿತಿಯು ಗಮನಕ್ಕೆ ಬರುತ್ತದೆ ಅಲ್ಲದೇ ಅನುದಾನ ಒದಗಿಸುವಂತೆ  ಮನವೊಲಿಸಲು ಸಾಧ್ಯವಿದೆ.

ಈಗಾಗಲೇ ಕಳೆದ ಬಜೆಟ್ ಪೂರ್ವದಲ್ಲಿ ನಮ್ಮ ಹೋರಾಟ ಸಮಿತಿಯಿಂದ ನಮ್ಮ ವಿ.ವಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವಂತೆ ಧ್ವನಿ ಎತ್ತಲಾಗಿದೆ; ಇನ್ನು ಮುಂದೆಯೂ ಕೂಡ ಅನುದಾನ ಒದಗಿಸಲು ಹಾಗೂ ವಿಶ್ವ ವಿದ್ಯಾಲಯದ ಅಭಿವೃದ್ಧಿಗಾಗಿ ಹಾವೇರಿ ವಿ.ವಿ ಉಳಿಸಿ ಹೋರಾಟ ಸಮಿತಿಯು ಕೆಲಸ ಮಾಡುತ್ತದೆ.

ಇನ್ನು ಸರಕಾರದ ಗೃಹ ಇಲಾಖೆಯು ಭದ್ರತೆಯನ್ನು ಒದಗಿಸಲು ಸಮರ್ಥವಾಗಿದೆ. ಮಳೆ, ಗಾಳಿಗಳಿಂದ ರಕ್ಷಿಸುವಂತಹ ಅತ್ಯಾಧುನಿಕ‌ ಜರ್ಮನ್ ಟೆಂಟ್ ಸೌಲಭ್ಯಗಳಿವೆ. ಆದ್ದರಿಂದ ಈಗಲೂ ಸಹ ಕಾಲ ಮಿಂಚಿರುವುದಿಲ್ಲ. ಇಂತಹ ಸೌಕರ್ಯಗಳನ್ನು ಬಳಸಿಕೊಂಡು ನಮ್ಮ ಹಾವೇರಿ ವಿ.ವಿಯ ಪ್ರಥಮ ಘಟಿಕೋತ್ಸವ ಕಾರ್ಯಕ್ರಮವನ್ನು ಸೂಕ್ತ ತಯಾರಿಯೊಂದಿಗೆ ವಿಶ್ವ ವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ನಡೆಸಬೇಕು ಎಂದು ವಿ.ವಿ ಉಳಿಸಿ ಹೋರಾಟ ಸಮಿತಿ ಒತ್ತಾಯಿಸಿತು.

ಮನವಿ ಸ್ವೀಕರಿಸಿದ ಉಪಕುಲಪತಿಗಳು, ಹೋರಾಟ ಸಮಿತಿಯ ಸದಾಶಯವೇ ನಮ್ಮದು ಆಗಿದೆ. ನಾವು ಕೂಡ ಕ್ಯಾಂಪಸ್ ನಲ್ಲಿಯೇ ಘಟಿಕೋತ್ಸವ ಮಾಡಬೇಕೆಂದುಕೊಂಡಿದ್ದೇವು, ಆದರೆ ವಿಶ್ವವಿದ್ಯಾಲಯದ ಆವರಣದಲ್ಲಿ ಘಟಿಕೋತ್ಸವ ನಡೆಸಲು ಅಗತ್ಯವಿರುವ ಬಿಲ್ಡಿಂಗ್ ಹಾಗೂ ಸಭಾಂಗಣವಿಲ್ಲ; ಜರ್ಮನ್ ಟೆಂಟ್ ಹಾಕಿ ಕಾರ್ಯಕ್ರಮ ನಡೆಸಲು ಲಕ್ಷಾಂತರ ರೂಪಾಯಿ ಹಣಕಾಸು ಬೇಕಾಗುತ್ತದೆ.

ಅಷ್ಟು ಹಣ ವಿ.ವಿ ಯಲ್ಲಿ ಇಲ್ಲ. ಅಷ್ಟೆಯಲ್ಲದೇ ಆವರಣದಲ್ಲಿ ವಿದ್ಯುತ್ ತಂತಿಗಳು ಬಹಳಷ್ಟು ಇದ್ದಿರುವ ಕಾರಣ ಹೊರಾಂಗಣದಲ್ಲಿ ಜರ್ಮನ್ ಪೆಂಡಾಲ್ ಹಾಕಿ ಕಾರ್ಯಕ್ರಮ ನಡೆಸುವುದು ಅಸಾಧ್ಯವಾದ ಕಾರಣ ನಮ್ಮ ವಿಶ್ವ ವಿದ್ಯಾಲಯದ ಸಂಯೋಜಿತವಾಗಿರುವ ಜಿ.ಎಚ್ ಕಾಲೇಜ್ ಆವರಣದಲ್ಲಿ  ಘಟಿಕೋತ್ಸವ ಮಾಡಲಾಗುತ್ತಿದೆ. ಆದರೂ ಮಾನ್ಯ ರಾಜ್ಯಪಾಲರು ವಿಶ್ವ ವಿದ್ಯಾಲಯಕ್ಕೆ ಬಂದು ಭೇಟಿ ಮಾಡುವಂತೆ ವಿನಂತಿಸಿದ್ದೇವೆ. ರಾಜ್ಯಪಾಲರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ: ಹಾವೇರಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿಯೇ ನಡೆಸುವಂತೆ ಕ್ರಮ ಕೈಗೊಂಡು, ಉಪಕುಲಪತಿಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಮಾನ್ಯ ಕರ್ನಾಟಕ ರಾಜ್ಯಪಾಲರಾದ ಶ್ರೀಯುತ ಥಾವರಚಂದ ಗೆಹ್ಲೊಥ್ ಹಾಗೂ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸಚಿವರಾದ ಡಾ. ಎಂ.ಸಿ ಸುಧಾಕರ್ ಅವರಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯ್ತು.

ಈ ಸಂದರ್ಭದಲ್ಲಿ ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸಂಚಾಲಕರಾದ ಬಸವರಾಜ ಪೂಜಾರ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಎಂ. ಆಂಜನೇಯ, ಎಸ್ಎಫ್ಐ ಜಿಲ್ಲಾಧ್ಯಕ್ಷರಾದ ಬಸವರಾಜ ಎಸ್, ಕರ್ನಾಟಕ ರಾಜ್ಯ ರೈತ ಸಂಘದ ಶಹರ ಘಟಕದ ಅಧ್ಯಕ್ಷರಾದ ಸುರೇಶ ಛಲವಾದಿ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಂಜುಳಾ ಎಸ್. ಅಕ್ಕಿ, ಬಿಎಸ್ಪಿ ಜಿಲ್ಲಾಧ್ಯಕ್ಷರಾದ ಮಕಬುಲ್ ಎಂ.ಕೆ, ಸಹಮತ ಸಂಸ್ಥೆಯ ಸಹಕಾರ್ಯದರ್ಶಿಗಳಾದ ಲಕ್ಷ್ಮೀಪ್ರಭ ಎಸ್. ಹುಲ್ಲೂರು, ಡಿವೈಎಫ್ಐ ಜಿಲ್ಲಾ ಮುಖಂಡರಾದ ಖಲಂದರ್ ಅಲ್ಲಿಗೌಡ್ರ,ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷರಾದ ಅರುಣ ನಾಗಾವತ್, ಚೈತ್ರಾ ಕೊರವರ, ಬಾಲ ಸಂಘಂ ಮುಖಂಡರಾದ ಧನುಷ್ ದೊಡ್ಮನಿ ಉಪಸ್ಥಿತರಿದ್ದರು.

ಇದನ್ನೂ ನೋಡಿ: “ವೇದಿಕೆಯ ಬೆಳಕಿನಲ್ಲಿ ಬದುಕಿನ ಕಥೆಗಳು | ವಿಶ್ವ ರಂಗಭೂಮಿ ದಿನ ವಿಶೇಷ” Janashakthi Media

Donate Janashakthi Media

Leave a Reply

Your email address will not be published. Required fields are marked *