ಬಾಗಲಕೋಟೆ: ಎಪ್ರಿಲ್ 9ರಂದು ವಿಧಾನಸಭಾ ಉಪ ಚುನಾವಣೆಗೆ ಮತದಾನ ನಡೆಯಲಿದ್ದು, ಮತದಾನಕ್ಕೆ ಬೇಕಾಗುವ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಏಪ್ರಿಲ್ 6ರಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ತಿಳಿಸಿದ್ದಾರೆ.
ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ 1,26,999 ಪುರುಷ ಮತ್ತು 1,32,775 ಮಹಿಳಾ ಮತದಾರರು ಹಾಗೂ 23 ಇತರೆ ಸೇರಿ ಒಟ್ಟು 2,59,797 ಮತದಾರರಿದ್ದು, ಎ. 9ರಂದು ಮತ ಚಲಾಯಿಸಲಿದ್ದಾರೆ. 385 ಸೇವಾ ಮತದಾರರು, 170 ಅಂಚೆ ಮತಪತ್ರಗಳು 90 ಪಿಡಬ್ಲೂಡಿ ಮತದಾರರಿದ್ದಾರೆ. ಒಟ್ಟು 322 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನವನಗರದ ಸೆಕ್ಟರ್ ನಂ.43ರಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಪ್ರತಿ ಮತಗಟ್ಟೆಗೆ ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಹಾಗೂ 3 ಜನ ಪೋಲಿಂಗ್ ಅಧಿಕಾರಿಗಳನ್ನು ಗುರುತಿಸಲಾಗಿದ್ದು, ಹೆಚ್ಚುವರಿ ಸಿಬ್ಬಂದಿ ಸೇರಿ ಒಟ್ಟು 1564 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಇದನ್ನು ಹೊರತುಪಡಿಸಿ ಅಗತ್ಯತೆಗೆ ಅನುಗುಣವಾಗಿ ಮೈಕ್ರೋ ಆಬ್ಸರವರ್ ಹಾಗೂ ಪೊಲೀಸ್ ಇಲಾಖೆಯಿಂದ ಸಶಸ್ತ್ರ ಪಡೆಯನ್ನು ಸಹ ಮತಗಟ್ಟೆಗಳಿಗೆ ನೇಮಕ ಮಾಡಲಾಗಿದೆ. 322 ಮತಗಟ್ಟೆಗಳಲ್ಲಿಯೂ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮತದಾರರ ಮತ ಚಲಾವಣೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ಪಿಂಕ್, ತಲಾ ಒಂದು ಯುವ, ಪಿಡಬ್ಲೂಡಿ, ಥೀಮ್ ಆಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: ಬಾಲಕಿಯನ್ನು ಕಟ್ಟಿಹಾಕಿ ಹಿಂಸೆ; ನಿವೃತ್ತ ಸೇನಾ ಸಿಬ್ಬಂದಿ ಬಂಧನ
1.20 ಲಕ್ಷ ರೂ.ಗಳ ಮೌಲ್ಯದ ಸೀರೆಗಳ ಜಪ್ತಿ: ನೀತಿ ಸಂಹಿತೆ ಜಾರಿಯಾದಾಗಿನಿಂದ 94.03 ಲಕ್ಷ ರೂ.ಗಳ ನಗದು, 39.73 ಲಕ್ಷ ರೂ.ಗಳ ಮೌಲ್ಯದ ಅಬಕಾರಿ ಇಲಾಖೆಯಿಂದ 14,637.01 ಲೀಟರ್ ಸಾರಾಯಿ, ಪೊಲೀಸ್ ಇಲಾಖೆಯಿಂದ 194.36 ಲೀಟರ್ ಸಾರಾಯಿ, 9 ವಾಹನ ಜಪ್ತಿ ಮಾಡಿ 21 ಪ್ರಕರಣಗಳನ್ನು ದಾಖಲಿಸಲಾಗಿದೆ. 1.20 ಲಕ್ಷ ರೂ.ಗಳ ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.
ಅಂತಿಮ 72 ಗಂಟೆ ನಿಶ್ಯಬ್ಧ: ಮತದಾನದ ಪೂರ್ವ 72 ಗಂಟೆಗಳಲ್ಲಿ ಮತದಾರರನ್ನು ಪ್ರಭಾವಿಸುವಂತಹ ಉಡುಗೊರೆ ಹಾಗೂ ಕಲ್ಯಾಣ ಮಂಟಪ, ಸಮುದಾಯ ಭವನಗಳಲ್ಲಿ ಉಚಿತ ಆಹಾರ ವಿತರಿಸುವ ಬಗ್ಗೆ, ನಕಲಿ ಸಮಾರಂಭ ಆಯೋಜನೆ, ಮತದಾನ ದಿನದವರೆಗೆ ಕಾಯ್ದಿರಿಸಿದ ಕಲ್ಯಾಣ ಮಂಟಪ, ಸಮುದಾಯ ಭವನಗಳ ಪಟ್ಟಿ ಮೇಲೆ, ಸಮುದಾಯ ಅಡುಗೆಯನ್ನು ಏರ್ಪಡಿಸುವುದರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಡಿಸಿ ತಿಳಿಸಿದರು.
ವಿದ್ಯುನ್ಮಾನ, ಮುದ್ರಣ ಮಾಧ್ಯಮಗಳಿಗೆ ಮಾರ್ಗಸೂಚಿ: ಮತದಾನಕ್ಕೆ ನಿಗದಿಪಡಿಸಿರುವ ಅವಧಿ ಕೊನೆಗೊಳ್ಳುವ 48 ಗಂಟೆಗಳ ಮುಂಚೆ ಎಲೆಕ್ಟ್ರಾನಿಕ್ ಮಾಧ್ಯಗಳಲ್ಲಿ ಚುನಾವಣಾ ಸಂಬಂಧಿತ ವಿಷಯಗಳ ಪ್ರಸಾರವನ್ನು ಪ್ರಜಾಪ್ರತಿನಿಧಿ ಕಾಯ್ದೆ-1951ರ ಕಲಂ 126ರ ಪ್ರಕಾರ ನಿಷೇಧಿಸಲಾಗಿದೆ. ಎ.8 ಮತ್ತು 9ರಂದು ಅಭ್ಯರ್ಥಿಗಳು, ಸಂಸ್ಥೆಗಳು ಅಥವಾ ಯಾವುದೇ ವ್ಯಕ್ತಿಯು ದಿನಪತ್ರಿಕೆಗಳಲ್ಲಿ ಚುನಾವಣಾ ಜಾಹೀರಾತು ಪ್ರಕಟಿಸಬೇಕಾದರೆ ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಯ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಈ ಕಾಯ್ದೆಯನ್ನು ಉಲ್ಲಂಘಿಸಿದಲ್ಲಿ 2 ವರ್ಷಗಳಿಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆ ಅಥವಾ ದಂಡ ಮತ್ತು ಶಿಕ್ಷೆ ವಿಧಿಸಲಾಗುತ್ತದೆ. ಟಿವಿ, ರೇಡಿಯೋ, ಕೇಬಲ್ ನೆಟ್ವರ್ಕ್ ಮತ್ತು ಎಲ್ಲ ಡಿಜಿಟಲ್ ಮಾಧ್ಯಮಗಳು ಮತದಾನ ಪೂರ್ವ 48 ಗಂಟೆಗಳ ಅವಧಿಯಲ್ಲಿ ಓಪಿನಿಯನ್ ಪೋಲ್ ಫಲಿತಾಂಶ ಪ್ರಕಟಿಸುವುದು, ಚರ್ಚೆ ಅಥವಾ ವಿಶ್ಲೇಷಣೆ ಏರ್ಪಡಿಸುವದನ್ನು ಸಹ ನಿಷೇಧಿಸಿದೆ ಎಂದು ಹೇಳಿದರು.
ಮತದಾನ ದಿನದ ಮಾರ್ಗಸೂಚಿ: ಮತದಾನ ದಿನ ಎ. 9ರಂದು ಜಿಲ್ಲೆಯಾದ್ಯಂತ ಜರುಗುವ ಸಂತೆ, ಜಾತ್ರೆಗಳನ್ನು ನಿಷೇಧಿಸಿ ಆದೇಶಿಸಲಾಗಿದೆ. ಮತಗಟ್ಟೆ ಒಳಗೆ ಅಥವಾ ಮತಗಟ್ಟೆಯ 100 ಮೀಟರ್ ಅಂತರದೊಳಗಿರುವ ಯಾವುದೇ ಸಾರ್ವಜನಿಕ, ಖಾಸಗಿ ಸ್ಥಳದಲ್ಲಿ ಪ್ರಚಾರ ನಿಷೇಧಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಸೆಲ್ಯೂಲರ್ ಫೋನ್‍ಗಳು, ಕಾರ್ಡಲೆಸ್ ಫೋನ್ ಇತ್ಯಾದಿಗಳನ್ನು ಬಳಸುವಂತಿಲ್ಲ. ಪ್ರಚಾರ ಸಂಬಂಧಿ ಬಿತ್ತಿಪ್ರಗಳು, ಬ್ಯಾನರ್, ಧ್ವನಿವರ್ಧಕ, ಮೇಗಾ ಫೋನ್‍ಗಳು ಹಾಗೂ ಅಭ್ಯರ್ಥಿಗಳು ವಾಹನಗಳ ಬಳಕೆ ಹಾಗೂ ಬೂತ್ ನಿರ್ಮಿಸುವಂತಿಲ್ಲ ಎಂದು ವಿವರಿಸಿದರು.
ಮಾದರಿ ನೀತಿ ಸಂಹಿತೆ: ಮತದಾನ ಅಂತ್ಯಗೊಳ್ಳುವ ಸಮಯದ ಮೂರು ದಿನಗಳ ಮುಂಚಿತವಾಗಿನಿಂದ ಅಭ್ಯರ್ಥಿಗಳ ಪ್ರಚಾರವು ಮತದಾನ ಮುಗಿಯುವ 48 ಗಂಟೆಗಳವರೆಗೆ ಹೆಚ್ಚಾಗುವುದರಿಂದ ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವ ಅಥವಾ ಪರಸ್ಪರ ದ್ವೇಷವನ್ನು ಉಂಟುಮಾಡುವ, ವಿವಿಧ ಜಾತಿ, ಸಮುದಾಯಗಳ ನಡುವೆ ಧಾರ್ಮಿಕ, ಭಾಷಾವಾರು ಉದ್ವಿಗ್ನತೆಯನ್ನು ಉಂಟು ಮಾಡುವ ಯಾವುದೇ ಚಟುವಟಿಕೆಯನ್ನು ಒಳಗೊಂಡಿರಬಾರದು ಎಂದು ತಿಳಿಸಿದರು.
ಇದನ್ನೂ ನೋಡಿ: ಉರಿಗೌಡ–ನಂಜೇಗೌಡ ಸೃಷ್ಟಿಕರ್ತರಿಗೆ ‘ಹೈದರ್ ಅಲಿ–ಟಿಪ್ಪು ಸುಲ್ತಾನ್’ ಪುಸ್ತಕವೇ ಉತ್ತರ Janashakthi Media
