ಜೈಪುರದ ಎಐಐಎಂಎಸ್ ನೇಮಕಾತಿ ಮರುಪರೀಕ್ಷೆ ರದ್ದು: ಸರ್ವರ್‌ ವೈಫಲ್ಯದಿಂದ ಅಭ್ಯರ್ಥಿಗಳ ಪ್ರತಿಭಟನೆ

ಜೈಪುರ: ಜೈಪುರದ ಐಒಎನ್‌ ಡಿಜಿಟಲ್‌ ಜೋನ್‌ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಐಐಎಂಎಸ್‌ ಸಾಮಾನ್ಯ ನೇಮಕಾತಿ ಪರೀಕ್ಷೆ–5ರ ಮರುಪರೀಕ್ಷೆಯನ್ನು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ. ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಮತ್ತೆ ಸರ್ವರ್‌ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಜೈಪುರದ

ಆಗಸ್ಟ್‌ 31ರಂದು ನಡೆಯಬೇಕಿದ್ದ ಮರುಪರೀಕ್ಷೆ ಸುಮಾರು 30 ನಿಮಿಷ ತಡವಾಗಿ ಆರಂಭವಾಗಿತ್ತು. ಆದರೆ ಪರೀಕ್ಷೆ ಆರಂಭಗೊಂಡ 20 ನಿಮಿಷಗಳಲ್ಲೇ ಸರ್ವರ್‌ ಸಮಸ್ಯೆ ಮರುಕಳಿಸಿದ್ದು, ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗದೆ ಗೊಂದಲ ಉಂಟಾಯಿತು. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಹಾಗೂ ಅವರ ಪೋಷಕರು ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ ನಡೆಸಿ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸ್ಥಳಕ್ಕೆ ಪೊಲೀಸರು ತೆರಳಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ ಲಲಿತ್‌ ಶರ್ಮಾ ಅವರ ಪ್ರಕಾರ, ಈ ಕೇಂದ್ರದಲ್ಲಿ ಎಐಐಎಂಎಸ್‌ ಪರೀಕ್ಷೆಯನ್ನು ಸದ್ಯಕ್ಕೆ ರದ್ದುಗೊಳಿಸಲಾಗಿದೆ. ತಾಂತ್ರಿಕ ವೈಫಲ್ಯದಿಂದ ಸಮಾನ ಹಾಗೂ ನ್ಯಾಯಯುತ ಅವಕಾಶ ಕಳೆದುಕೊಂಡಿರುವುದರಿಂದ ಮರುಪರೀಕ್ಷೆ ನಡೆಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಜೈಪುರದ

ಇದನ್ನೂ ಓದಿ : ಧಾರವಾಡದಲ್ಲಿ ‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿ: ಬಲಪಂಥೀಯರ ವಿರುದ್ಧ ಕ್ರಮಕ್ಕೆ ಆಗ್ರಹ

ಇದೇ ಪರೀಕ್ಷಾ ಕೇಂದ್ರದಲ್ಲಿ ಇದಕ್ಕೂ ಒಂದು ದಿನ ಮೊದಲು ನಡೆದ ನೀಟ್‌–ಪಿಜಿ ಪರೀಕ್ಷೆಯಲ್ಲೂ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಪದೇಪದೇ ವಿದ್ಯುತ್‌ ವ್ಯತ್ಯಯ ಹಾಗೂ ಕಂಪ್ಯೂಟರ್‌ ದೋಷದಿಂದಾಗಿ ಪರೀಕ್ಷೆ ಪೂರ್ಣಗೊಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 2,445 ಅಭ್ಯರ್ಥಿಗಳಿಗೆ ಸೆಪ್ಟೆಂಬರ್‌ 5ರಂದು ಮರುಪರೀಕ್ಷೆ ನಡೆಸಲು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಪರೀಕ್ಷಾ ಮಂಡಳಿ ನಿರ್ಧರಿಸಿದೆ.

ಎಐಐಎಂಎಸ್‌ ಸಿಆರ್‌ಇ–5 ಪರೀಕ್ಷೆಯನ್ನು ಮೂಲತಃ ಜುಲೈ 25ರಂದು ನಡೆಸಲಾಗಿತ್ತು. ಪ್ರಶ್ನೆಗಳು ನಿಗದಿತ ಪಠ್ಯಕ್ರಮದ ಹೊರಗಿವೆ ಎಂದು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಆಗಸ್ಟ್‌ 31ರಂದು ಮರುಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ ಮರುಪರೀಕ್ಷೆಯಲ್ಲಿಯೂ ತಾಂತ್ರಿಕ ಸಮಸ್ಯೆ ಎದುರಾಗಿರುವುದು ಅಭ್ಯರ್ಥಿಗಳಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಎರಡು ದಿನಗಳಲ್ಲಿ ಎರಡು ಪ್ರಮುಖ ಪರೀಕ್ಷೆಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವುದನ್ನು ಕಾಂಗ್ರೆಸ್‌ ನಾಯಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೈಲಟ್‌ ಟೀಕಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಿ, ತೊಂದರೆಗೊಳಗಾದ ಅಭ್ಯರ್ಥಿಗಳ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಎಐಐಎಂಎಸ್‌ ಹಾಗೂ ಪರೀಕ್ಷೆ ನಡೆಸುವ ಸಂಸ್ಥೆ, ಜೈಪುರ ಕೇಂದ್ರದಲ್ಲಿ ಮರುಪರೀಕ್ಷೆ ರದ್ದಾಗಲು ಕಾರಣವಾದ ತಾಂತ್ರಿಕ ದೋಷದ ಕುರಿತು ವಿವರವಾದ ಸ್ಪಷ್ಟನೆ ನೀಡಿಲ್ಲ. ಹೊಸ ಪರೀಕ್ಷೆಯ ದಿನಾಂಕವನ್ನೂ ಇನ್ನೂ ಪ್ರಕಟಿಸಲಾಗಿಲ್ಲ.

ಇದನ್ನೂ ನೋಡಿ : ರಾತ್ರಿ ವೇಳೆ ಬೀದಿಬದಿ ವ್ಯಾಪಾರಿಗಳ ಗಾಡಿ ವಶ: ‘ಬಡವರ ಮೇಲೇಕೆ ಈ ದರ್ಪ?’ Janashakthi Media

Donate Janashakthi Media

Leave a Reply

Your email address will not be published. Required fields are marked *