ಆಗಸ್ಟ್ 12 ರಂದು ಸಂಸತ್ತು ಅಂಗೀಕರಿಸಿದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ) ಕಾಯ್ದೆ, 2026 ರಾಜ್ಯಗಳ ಒಕ್ಕೂಟ ಹಕ್ಕುಗಳ ಮೇಲಿನ ನೇರ ದಾಳಿ ಮತ್ತು ಸಹಕಾರಿ ಕ್ಷೇತ್ರದ ಮೇಲಿನ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಮಾಡಿರುವ ಇನ್ನೊಂದು ಪ್ರಯತ್ನ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಿರಸ್ಕರಿಸಿದೆ. ಎಲ್ಲ ರಾಜ್ಯ ಶಾಸನ ಸಭೆಗಳು ಈ ಕಾಯ್ದೆಯನ್ನು ತಿರಸ್ಕರಿಸುವ ಮತ್ತು ರದ್ದು ಪಡಿಸಬೇಕು ಎಂದು ಆಗ್ರಹಿಸುವ ನಿರ್ಣಯಗಳನ್ನು ಅಂಗೀಕರಿಸಬೇಕು ಎಂದೂ ರಾಜ್ಯ ಸರಕಾರಗಳಿಗೆ ಎಸ್‌ಕೆಎಂ ಮನವಿ ಮಾಡಿದೆ. ಎನ್‌ಸಿಡಿಸಿ
ಈ ಕಾಯ್ದೆಯು ಕೃಷಿ ಮತ್ತು ಕೃಷಿ ಸಂಬಂಧಿತ ಗ್ರಾಮೀಣ ಕೈಗಾರಿಕೆಗಳು ಮತ್ತು ಮೂಲಸೌಕರ್ಯದಿಂದ ಸಂಪನ್ಮೂಲಗಳನ್ನು ಬೇರೆಡೆಗೆ ತಿರುಗಿಸುತ್ತದೆ ಮತ್ತು ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಅನುಕೂಲವಾದ ನಗರ-ಕೇಂದ್ರಿತ ಅಭಿವೃದ್ಧಿ ಮಾದರಿಯನ್ನು ಉತ್ತೇಜಿಸುತ್ತದೆ ಎಂದು ಎಸ್‌ಕೆಎಂ ಹೇಳಿದೆ.
ಸಹಕಾರ ಸಂವಿಧಾನದ ಏಳನೇ ಶೆಡ್ಯೂಲಿನ ಅಡಿಯಲ್ಲಿರುವ ರಾಜ್ಯ ಪಟ್ಟಿಯಲ್ಲಿ ಒಂದು ವಿಷಯವಾಗಿದೆ. ಹೊಸ ಶಾಸನವು ರಾಜ್ಯ ಸರ್ಕಾರಗಳ ಅಧಿಕಾರಗಳ ಮೇಲೆ ಕೇಂದ್ರ ಸರ್ಕಾರದಿಂದ ನೇರ ಅತಿಕ್ರಮಣವಾಗುತ್ತದೆ. ಅಂತರರಾಷ್ಟ್ರೀಯ ಸಹಕಾರಿ ಮೈತ್ರಿಯ ತತ್ವಗಳ ಪ್ರಕಾರ ಕೂಡ ಸ್ವಾಯತ್ತತೆ, ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ನಿಯಂತ್ರಣ ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಮೂಲಭೂತ ಅಂಶಗಳು.
ಎನ್‌ಸಿಡಿಸಿ ಸಹಕಾರಿ ಸಂಘಗಳಲ್ಲಿ ನೇರವಾಗಿ ಮಧ್ಯಪ್ರವೇಶಿಸಲು ಮತ್ತು ಷೇರುಗಳನ್ನು ಪಡೆಯಲು ಅನುವು ಮಾಡಿಕೊಡುವ ನಿಬಂಧನೆಗಳು ಈ ತತ್ವಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ಸಹಕಾರಿ ಸಂಸ್ಥೆಗಳ ಕೇಂದ್ರೀಕರಣವನ್ನು ಸುಗಮಗೊಳಿಸುತ್ತವೆ ಎಂಬ ಸಂಗತಿಯತ್ತ ಎಸ್‌ಕೆಎಂ ಗಮನ ಸೆಳೆದಿದೆ. ಎನ್‌ಸಿಡಿಸಿ ಯಿಂದ ಸಹಕಾರಿ ಸಂಘಗಳಿಗೆ ನೇರ ಹಣಕಾಸಿನ ನೆರವು, ರಾಜ್ಯ ಸರ್ಕಾರಗಳು ಅವುಗಳ ಸಹಕಾರಿ ಸಂಸ್ಥೆಗಳ ಮೇಲಿನ ಅಧಿಕಾರವನ್ನು ಮತ್ತಷ್ಟು ದುರ್ಬಲಗೊಳಿಸಬಹುದು ಎಂದು ಅದು ಶಂಕೆ ವ್ಯಕ್ತಪಡಿಸಿದೆ. ಎನ್‌ಸಿಡಿಸಿ
ಇದನ್ನೂ ಓದಿ : ₹84,084 ಕೋಟಿ ‘ಸಮುದ್ರ ಮಂಥನ’ ಯೋಜನೆ: ಅದಾನಿಗೆ ಲಾಭ ಮಾಡಿಕೊಡುವ ಹುನ್ನಾರವೇ? ಕಾಂಗ್ರೆಸ್ ಆರೋಪ
ಎಸ್‌ಕೆಎಂ, ಯೂನಿಯನ್ ಆಫ್ ಇಂಡಿಯಾ vs ರಾಜೇಂದ್ರ ಎನ್. ಷಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ 2021 ರ ತೀರ್ಪನ್ನು ಸಹ ಉಲ್ಲೇಖಿಸುತ್ತ, ಇದು ರಾಜ್ಯ ಸರ್ಕಾರಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಹಕಾರಿ ಸಂಘಗಳಲ್ಲಿ ಮಧ್ಯಪ್ರವೇಶಿಸಲು ಒಕ್ಕೂಟದ ಅಧಿಕಾರಗಳು ಸೀಮಿತವಾಗಿವೆ ಎಂದು ಹೇಳಿರುವುದರತ್ತವೂ ಗಮನ ಸೆಳೆದಿದೆ. ಹೊಸ ಶಾಸನವು ತೀರ್ಪಿನ ಪರಿಣಾಮಗಳನ್ನು ನಿವಾರಿಸಲು ಪ್ರಯತ್ನಿಸುತ್ತದೆ ಮತ್ತು ಸಹಕಾರಿ ಸ್ವಾಯತ್ತತೆ ಮತ್ತು ಭಾರತದ ಒಕ್ಕೂಟ ರಚನೆ ಎರಡಕ್ಕೂ ಸವಾಲಾಗುತ್ತದೆ ಎಂದು ಎಸ್‌ಕೆಎಂ ಆರೋಪಿಸಿದೆ.
ಗ್ರಾಮೀಣ ಭಾರತಕ್ಕೆ ಸಹಕಾರ ಸಂಘಗಳ ಮಹತ್ವವನ್ನು ಒತ್ತಿ ಹೇಳುತ್ತಾ, ಎಸ್‌ಕೆಎಂ, ಅವು ಹಳ್ಳಿಗಳಲ್ಲಿ ವಿಶಾಲ ನೆಲೆಯ ಅಭಿವೃದ್ಧಿಯನ್ನು ಸಾಧಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದೆ. ಈಗ ಎನ್‌ಸಿಡಿಸಿ ಕಾಯ್ದೆಯನ್ನು ಕೃಷಿಯೇತರ ವಲಯಗಳಿಗೆ ವಿಸ್ತರಿಸುವುದರ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ಮೇಲಿನ ಹಿಂದಿನ ಒತ್ತನ್ನು ತೆಗೆದುಹಾಕುವುದರಿಂದ ಕೃಷಿ, ಗ್ರಾಮೀಣ ಕೈಗಾರಿಕೆಗಳು ಮತ್ತು ಮೂಲಸೌಕರ್ಯಗಳಿಗೆ ಉದ್ದೇಶಿಸಲಾದ ಸಂಪನ್ಮೂಲಗಳು ನಗರ ಕೇಂದ್ರಿತ ಅಭಿವೃದ್ಧಿಯತ್ತ ತಿರುಗಬಹುದು ಎಂದು ಎಸ್‌ಕೆಎಂ ಆರೋಪಿಸಿದೆ.
ಎಸ್‌ಕೆಎಂ ಹೇಳಿಕೆ “ಡಬಲ್-ಎಂಜಿನ್ ಸರ್ಕಾರಗಳ” ನೀತಿಯನ್ನು ಮತ್ತಷ್ಟು ಟೀಕಿಸಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ರಾಜ್ಯಗಳ ಹಿತಾಸಕ್ತಿಗಳು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವಲ್ಲಿ ವಿಫಲವಾಗಿವೆ.ಅಂತಹ ಸರ್ಕಾರಗಳು, ಕೇಂದ್ರ ಸರ್ಕಾರದ ಆದೇಶಗಳಿಗೆ ಶರಣಾಗಿವೆ ಮತ್ತು ಒಕ್ಕೂಟ ಸ್ವಾಯತ್ತತೆ ಮತ್ತು ರಾಜ್ಯಗಳ ಆರ್ಥಿಕ ಸ್ಥಿರತೆಯಲ್ಲಿ ನಿರಂತರ ಸವೆತವಾಗುತ್ತಿರುವುದನ್ನು ವಿರೋಧಿಸಲು ಇಚ್ಛಿಸುವುದಿಲ್ಲ ಎಂದು ಎಸ್‌ಕೆಎಂ ಹೇಳಿದೆ.
ಎಲ್ಲಾ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜ್ಯ ಶಾಸನ ಸಭೆಗಳನ್ನು ಕರೆದು ಎನ್‌ಸಿಡಿಸಿ ಕಾಯ್ದೆ, 2026 ಅನ್ನು ತಿರಸ್ಕರಿಸಲು ಮತ್ತು ರದ್ದುಗೊಳಿಸಲು ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿದೆ.
ಈಗ ನಡೆಯುತ್ತಿರುವ ರೈತರ ಹೋರಾಟಗಳ ಭಾಗವಾಗಿ ಈ ಶಾಸನವನ್ನು ವಿರೋಧಿಸಲು ಸಂಯುಕ್ತ ಕಿಸಾನ್ ಮೋರ್ಚ ದೇಶಾದ್ಯಂತ ರೈತರಿಗೆ ಕರೆ ನೀಡಿದೆ. ನವೆಂಬರ್ 26, 2026 ರಿಂದ ಕಾಯ್ದೆಯನ್ನು ರದ್ದುಗೊಳಿಸುವ ವರೆಗೆ ಈ ಹೋರಾಟಗಳನ್ನು ತೀವ್ರಗೊಳಿಸಲಾಗುವುದು ಎಂದು ಅದು ತಿಳಿಸಿದೆ. ಎನ್‌ಸಿಡಿಸಿ
ಇದನ್ನೂ ನೋಡಿ : ಸಾಮೂಹಿಕ ಮತ ಕಗ್ಗೊಲೆ ನಡೆಸುತ್ತಿರುವ SIR ವಿರುದ್ಧ ಚುನಾವಣಾ ಆಯೋಗ ಚಲೋ ನೇರಪ್ರಸಾರ
