ಬೆಂಗಳೂರು: ಧಾರವಾಡದಲ್ಲಿ ಆಗಸ್ಟ್ 30ರಂದು ನಡೆದ ‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಗದ್ದಲ ಸೃಷ್ಟಿಸಿದ ಬಲಪಂಥೀಯ ಸಂಘಟನೆಗಳ ವಿರುದ್ಧ ರಾಜ್ಯ ಸರ್ಕಾರ ಹಾಗೂ ಗೃಹ ಇಲಾಖೆ ತಕ್ಷಣ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಒತ್ತಾಯಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ಮುಖಂಡರು, ಧಾರವಾಡದಲ್ಲಿ ನಡೆದ ಘಟನೆ ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಖಂಡಿಸಿದ್ದಾರೆ. ಈ ಸಂಬಂಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕಳೆದ ಐದು ದಶಕಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿರುವ ‘ಸಮುದಾಯ’ ಸಂಘಟನೆ, ತನ್ನ 50ನೇ ವರ್ಷದ ಕಾರ್ಯಕ್ರಮಗಳ ಸಮಾರೋಪವನ್ನು ಸಾಹಿತ್ಯ, ಸಂಸ್ಕೃತಿ ಹಾಗೂ ವೈಚಾರಿಕ ಚಟುವಟಿಕೆಗಳಿಗೆ ಹೆಸರಾಗಿರುವ ಧಾರವಾಡದಲ್ಲಿ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ನಟ ಪ್ರಕಾಶ್ ರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಕಾಶ್ ರಾಜ್ ಅವರ ವಿರುದ್ಧ ಘೋಷಣೆಗಳನ್ನು ಕೂಗಲಾಗಿದ್ದು, ಸಭಾಂಗಣದತ್ತ ಕಲ್ಲು ತೂರಾಟ ನಡೆಸಲಾಗಿದೆ. ಕಾರ್ಯಕ್ರಮದ ಬ್ಯಾನರ್ಗಳನ್ನು ಹರಿದು ಹಾಕಿ ಅಡ್ಡಿಪಡಿಸುವ ಪ್ರಯತ್ನವೂ ನಡೆದಿದೆ ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಆರೋಪಿಸಿದೆ.
ಇದನ್ನೂ ಓದಿ :ಧಾರವಾಡ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ; ಮುತ್ತಿಗೆಗೆ ಯತ್ನಿಸಿದ ಯುವಕರು ಪೊಲೀಸ್ ವಶಕ್ಕೆ
ಸಂಘಟಕರ ಸಮಯಪ್ರಜ್ಞೆಯಿಂದ ಪ್ರಕಾಶ್ ರಾಜ್ ಅವರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಒದಗಿಸಲು ಸಾಧ್ಯವಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮ ನಡೆಯುವ ವೇಳೆ ಕೆಲವರನ್ನು ಸಭಾಂಗಣದೊಳಗೆ ಕಳುಹಿಸಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಲಾಗಿದೆ. ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕವೂ ಗದ್ದಲ ಮುಂದುವರಿದಿತ್ತು ಎಂದು ಸಂಘಟನೆ ಆರೋಪಿಸಿದೆ.
ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಅವರು ಘಟನೆ ನಡೆದ ಸಂಜೆ ಪೊಲೀಸ್ ಠಾಣೆಗೆ ತೆರಳಿದ್ದ ವಿಚಾರವನ್ನೂ ಸಂಘಟನೆ ಪ್ರಸ್ತಾಪಿಸಿದೆ. ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿರುವ ‘ಜಾಗೃತ ನಾಗರಿಕರು ಕರ್ನಾಟಕ’, ಈ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಹೇಳಿದೆ.
ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಹೆಗ್ಗಳಿಕೆಯಿಂದ ದ್ವೇಷ ರಾಜಕಾರಣದ ನೆಲವನ್ನಾಗಿ ಪರಿವರ್ತಿಸುವ ಯಾವುದೇ ಪ್ರಯತ್ನವನ್ನು ಸಹಿಸಬಾರದು ಎಂದು ಸಂಘಟನೆ ಆಗ್ರಹಿಸಿದೆ. ಧಾರವಾಡದಂತಹ ಸಾಂಸ್ಕೃತಿಕ ನಗರಿಯನ್ನು ಕೋಮುವಾದಿ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದೆ.
ಕರಾವಳಿ, ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕೋಮು ಧ್ರುವೀಕರಣದ ವಾತಾವರಣ ಸೃಷ್ಟಿಸುವ ಪ್ರಯತ್ನಗಳ ಬಗ್ಗೆ ಸರ್ಕಾರ ಗಂಭೀರವಾಗಿ ಗಮನಹರಿಸಬೇಕು. ಇಂತಹ ಬೆಳವಣಿಗೆಗಳನ್ನು ಆರಂಭದಲ್ಲೇ ತಡೆಯದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಸಂಘಟನೆ ಎಚ್ಚರಿಸಿದೆ.
‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಒತ್ತಾಯಿಸಿದೆ.
ಹೇಳಿಕೆಗೆ ಕೆ. ಮರುಳಸಿದ್ದಪ್ಪ, ಜಿ. ರಾಮಕೃಷ್ಣ, ವಿಜಯಾ, ಎಸ್.ಜಿ. ಸಿದ್ದರಾಮಯ್ಯ, ವಿಮಲಾ ಕೆ.ಎಸ್., ಟಿ. ಸುರೇಂದ್ರ ರಾವ್, ಬಿ. ಶ್ರೀಪಾದ ಭಟ್, ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಶಂಕರ್ ಹಾಗೂ ರುದ್ರಪ್ಪ ಹನಗವಾಡಿ ಸೇರಿದಂತೆ ಹಲವರು ಸಹಿ ಹಾಕಿದ್ದಾರೆ.
ಇದನ್ನೂ ನೋಡಿ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ: ‘ಗೋ ಬ್ಯಾಕ್’ ಘೋಷಣೆ, ಮತೀಯವಾದಿಗಳ ಕೆಟ್ಟ ನಡೆ Janashakthi Media
