ಧಾರವಾಡದಲ್ಲಿ ‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿ: ಸಂಘ ಪರಿವಾರದ ವಿರುದ್ಧ ಸಮುದಾಯ ಕರ್ನಾಟಕ ಆಕ್ರೋಶ

ಬೆಂಗಳೂರು: ಧಾರವಾಡದ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಆಗಸ್ಟ್‌ 30ರಂದು ನಡೆದ ‘ಸಮುದಾಯ–50 – ಮನುಷ್ಯತ್ವದೆಡೆಗೆ ಸಮುದಾಯ ಜಾಥಾ’ ಸಮಾರೋಪ ಸಮಾರಂಭಕ್ಕೆ ಸಂಘ ಪರಿವಾರದವರು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿರುವ ‘ಸಮುದಾಯ ಕರ್ನಾಟಕ’, ಘಟನೆಯನ್ನು ಖಂಡಿಸಿ ತಪ್ಪಿತಸ್ಥರು ಹಾಗೂ ದಾಳಿಗೆ ಪ್ರೇರಣೆ ನೀಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಆಗಸ್ಟ್‌ 28ರಿಂದ 30ರವರೆಗೆ ಧಾರವಾಡದಲ್ಲಿ ‘ಸಮುದಾಯ–50’ರ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಚಿತ್ರಕಲಾ ಶಿಬಿರ, ಶರಣರ ವಚನಗಳ ಕುರಿತ ಕಾರ್ಯಕ್ರಮ, ಯುವಜನರ ಮುಂದಿರುವ ಸವಾಲುಗಳ ಕುರಿತು ವಿಚಾರ ಸಂಕಿರಣ, ರಂಗಭೂಮಿ ಹಾಗೂ ಬೀದಿ ನಾಟಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಎಂದು ಸಂಘಟನೆ ತಿಳಿಸಿದೆ.

ಐದು ದಶಕಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ‘ಸಮುದಾಯ’ ಸಂಘಟನೆ, ತನ್ನ 50ನೇ ವರ್ಷದ ಕಾರ್ಯಕ್ರಮಗಳ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಎನ್. ನಾಗಮೋಹನ ದಾಸ್ ಹಾಗೂ ನಟ, ಸಮಾಜಮುಖಿ ಚಿಂತಕ ಪ್ರಕಾಶ್‌ ರಾಜ್‌ ಭಾಗವಹಿಸಿದ್ದರು.

ಪ್ರಕಾಶ್‌ ರಾಜ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ಅಭಿವ್ಯಕ್ತಿ ಸ್ವಾತಂತ್ರ್ಯ ವಿರೋಧಿ ಗುಂಪೊಂದು ಸಭಾಂಗಣದ ಎದುರು ಪ್ರತಿಭಟನೆ ನಡೆಸಿತು ಎಂದು ‘ಸಮುದಾಯ ಕರ್ನಾಟಕ’ ಆರೋಪಿಸಿದೆ. ‘ಪ್ರಕಾಶ್‌ ರಾಜ್‌ ಗೋ ಬ್ಯಾಕ್‌’ ಸೇರಿದಂತೆ ಘೋಷಣೆಗಳನ್ನು ಕೂಗಲಾಯಿತು. ಈ ಹಿನ್ನೆಲೆಯಲ್ಲಿ ಸಂಘಟಕರು ಪೊಲೀಸರೊಂದಿಗೆ ಮಾತನಾಡಿ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಧಾರವಾಡ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ; ಮುತ್ತಿಗೆಗೆ ಯತ್ನಿಸಿದ ಯುವಕರು ಪೊಲೀಸ್ ವಶಕ್ಕೆ

ಕಾರ್ಯಕ್ರಮ ಆರಂಭವಾದ ಬಳಿಕ ದಾಂಧಲೆ ಸೃಷ್ಟಿಸುವ ಉದ್ದೇಶದಿಂದ ಕೆಲವರು ಸಭಾಂಗಣದೊಳಗೆ ನುಗ್ಗಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಕಾರ್ಯಕ್ರಮ ಮುಕ್ತಾಯಗೊಂಡ ನಂತರವೂ ಸಭಾಂಗಣದ ಹೊರಭಾಗದಲ್ಲಿದ್ದ ಬ್ಯಾನರ್‌ಗಳನ್ನು ಹರಿದುಹಾಕಲಾಗಿದ್ದು, ಪ್ರಕಾಶ್‌ ರಾಜ್‌ ಅವರ ಭಾವಚಿತ್ರಕ್ಕೆ ಮಸಿ ಬಳಿಯಲು ಪ್ರಯತ್ನಿಸಲಾಗಿದೆ ಎಂದು ಹೇಳಿದೆ.

ಈ ಘಟನೆಯನ್ನು ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಬಣ್ಣಿಸಿರುವ ‘ಸಮುದಾಯ ಕರ್ನಾಟಕ’, ಪೊಲೀಸ್‌ ವ್ಯವಸ್ಥೆಯೂ ಘಟನೆ ನಿಯಂತ್ರಿಸುವಲ್ಲಿ ಅಸಮರ್ಥವಾಗಿ ವರ್ತಿಸಿದೆ ಎಂದು ಟೀಕಿಸಿದೆ.

ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರು ಪೊಲೀಸ್‌ ಠಾಣೆಗೆ ತೆರಳಿ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರ ಪರವಾಗಿ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಅಲ್ಲದೆ, ‘ಇಂಕ್ವಿಲಾಬ್‌ ಜಿಂದಾಬಾದ್‌’ ಘೋಷಣೆಯನ್ನು ರಾಷ್ಟ್ರವಿರೋಧಿ ಘೋಷಣೆ ಎಂದು ಶಾಸಕರು ಹೇಳಿರುವುದು ಖಂಡನೀಯ ಎಂದು ಹೇಳಿದೆ.

ಕಳೆದ ಐದು ದಶಕಗಳಲ್ಲಿ ಕನ್ನಡ ರಂಗಭೂಮಿಯ ಬೆಳವಣಿಗೆಗೆ ‘ಸಮುದಾಯ’ ಮಹತ್ವದ ಕೊಡುಗೆ ನೀಡಿದೆ ಎಂದು ಸಂಘಟನೆ ಹೇಳಿಕೊಂಡಿದೆ. ಅಸ್ಪೃಶ್ಯತೆ, ನಿರುದ್ಯೋಗ, ಕೋಮುವಾದ, ಬರಗಾಲ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳ ವಿರುದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಥಾಗಳು ಹಾಗೂ ರಂಗ ಚಟುವಟಿಕೆಗಳ ಮೂಲಕ ಜನಜಾಗೃತಿ ಮೂಡಿಸಲಾಗಿದೆ ಎಂದು ತಿಳಿಸಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ಧಾರವಾಡದಲ್ಲಿ ನಡೆದ ಘಟನೆಯ ಹಿಂದೆ ಇರುವವರನ್ನು ಹಾಗೂ ದಾಳಿಗೆ ಪ್ರೇರಣೆ ನೀಡಿದವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ‘ಸಮುದಾಯ ಕರ್ನಾಟಕ’ ಆಗ್ರಹಿಸಿದೆ.

ಈ ಕುರಿತು ಪ್ರಧಾನ ಕಾರ್ಯದರ್ಶಿ ಮನೋಜ್‌ ವಾಮಂಜೂರು, ಗೌರವ ಅಧ್ಯಕ್ಷ ಡಾ. ಎಚ್. ಜನಾರ್ಧನ್‌, ನಾಟಕಕಾರ ಡಾ. ಕೆ. ಮರುಳ ಸಿದ್ದಪ್ಪ, ಸಾಹಿತಿ ಹಾಗೂ ನಿವೃತ್ತ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ, ಸಾಹಿತಿ ಎಸ್‌.ಜಿ. ಸಿದ್ದರಾಮಯ್ಯ, ಡಾ. ವಸುಂಧರಾ ಭೂಪತಿ, ಡಾ. ಎನ್‌. ಗಾಯತ್ರಿ, ಕೆ. ನೀಲಾ, ಮಾವಳ್ಳಿ ಶಂಕರ್‌, ಡಾ. ಬಂಜಗೆರೆ ಜಯಪ್ರಕಾಶ್‌, ಡಾ. ಕೆ.ವಿ. ನಾಗರಾಜ ಮೂರ್ತಿ, ಡಾ. ಎಲ್‌.ಎನ್‌. ಮುಕುಂದರಾಜ್‌, ಸಿ. ಬಸವಲಿಂಗಯ್ಯ ಸೇರಿದಂತೆ ಸಮುದಾಯ ಕರ್ನಾಟಕದ ಪದಾಧಿಕಾರಿಗಳು ಹಾಗೂ ಹಲವು ಸಾಹಿತಿ, ಕಲಾವಿದರು ಸಹಿ ಹಾಕಿದ್ದಾರೆ.

ಇದನ್ನೂ ನೋಡಿ : ಪ್ರಕಾಶ್ ರಾಜ್ ಕಾರ್ಯಕ್ರಮಕ್ಕೆ ಅಡ್ಡಿ: ‘ಗೋ ಬ್ಯಾಕ್’ ಘೋಷಣೆ, ಮತೀಯವಾದಿಗಳ ಕೆಟ್ಟ ನಡೆ Janashakthi Media

Donate Janashakthi Media

Leave a Reply

Your email address will not be published. Required fields are marked *