ನೇಪಾಳದ ಭೂಸುನಾಮಿ: ಬಗೆದಷ್ಟೂ ಕೆಸರು! | ನಾಗೇಶ ಹೆಗಡೆ

ಭೂಕಂಪನವಾಗಲಿಲ್ಲ; ಮೇಘಸ್ಫೋಟವೂ ಆಗಲಿಲ್ಲ. ಹಿಮಕುಸಿತವಾಯಿತು. ಆದರೆ ಅದರಿಂದಾಗಿ ಬಿಳಿಪುಡಿಯ ಬದಲು ಕೆಸರಿನ ಸುನಾಮಿ ಬಂದಿದ್ದು ಏಕೆ? ಹೇಗೆ? ವಿಜ್ಞಾನಿಗಳನ್ನೂ ತಬ್ಬಿಬ್ಬುಗೊಳಿಸಿದ ಈ ವಿದ್ಯಮಾನದ ಬಗ್ಗೆ ತಜ್ಞರ ವಲಯದಲ್ಲಿ ಭಾರೀ ಸಂಕೀರ್ಣ ವಿಶ್ಲೇಷಣೆ ನಡೆಯುತ್ತಿವೆ. ಇದರ ಬಗ್ಗೆ ಬರೆಯಿರೆಂದು ಅನೇಕ ಗೆಳೆಯರು ಕೋರಿದ್ದಾರೆ. ಇಲ್ಲಿದೆ ಸರಳ ವಿವರಣೆ: ನೇಪಾಳದ 
ನಾಗೇಶ ಹೆಗಡೆ

’ಹಿಮಕುಸಿತ‘ ಏನೆಂದು ನಮಗೆ ಗೊತ್ತಿದೆ. ಪರ್ವತದ ನೆತ್ತಿ, ಹೆಗಲು ಮತ್ತು ಜಘನಗಳ ಮೇಲೆ ಮಲ್ಲಿಗೆಯ ಮಳೆಯಂತೆ ಹಿಮ ಸುರಿಯುತ್ತದೆ. ಬಹುಮಟ್ಟಿಗೆ ಮೆಲ್ಲಗೆ ಅದು ನೀರಾಗಿ ಕಣಿವೆಗೆ ಇಳಿದು ಕಣಿವೆಯ ಹಿಮನದಿಯನ್ನು ಸೇರಿ ಮತ್ತೆ ಹೆಪ್ಪುಗಟ್ಟುತ್ತದೆ.

’ಹಿಮನದಿ‘ ಅಂದರೆ ಗೊತ್ತಲ್ಲ? ಮೊಸರಿನ ಧಾರೆಯಂತೆ ಕಣಿವೆಯಲ್ಲಿ ಅದು ಮೆಲ್ಲಗೆ, ಅತಿಮೆಲ್ಲಗೆ ನದಿಯಂತೆ ಸರಿಯುತ್ತಿರುತ್ತದೆ. ಅದರ ವೇಗ ವರ್ಷಕ್ಕೆ ಆರೆಂಟು ಮೀಟರ್‌ ಅಷ್ಟೆ!

ಅದು ಬೆಳ್ಳಗೆ ಇರಬೇಕಿತ್ತು. ಆದರೆ ಈಚಿನ ದಶಕಗಳಲ್ಲಿ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ ಮತ್ತು ಕರೀ ಮಸಿಯಿಂದಾಗಿ ಅವು ಕಂದುಕಪ್ಪು ಬಣ್ಣಕ್ಕೆ ತಿರುಗಿವೆ. ಭಾರತ ಮತ್ತು ಚೀನಾ (ಜಗತ್ತಿನ ಅತಿ ಸಾಂದ್ರ ಜನದಟ್ಟಣೆಯ, ಅತಿ ಕೊಳಕು ಕಾರ್ಖಾನೆಗಳ ಮಾಲಿನ್ಯದ ಫಲ ಅದು). ಅವು ಕಪ್ಪು ಬಣ್ಣದ್ದಾಗಿದ್ದರಿಂದ ಬಿಸಿಲನ್ನು ಇನ್ನಷ್ಟು ಜಾಸ್ತಿ ಹೀರಿಕೊಂಡು ದ್ರವಿಸುವ ಹಂತಕ್ಕೆ ಬಂದು ಕೂತಿವೆ.

ಈ ಹಿಮನದಿ ಮತ್ತು ಅದರ ಎರಡೂ ಮಗ್ಗಲುಗಳ ಏರುಜಾರು (ಇಳಿಜಾರಲ್ಲ) ಏನಿದೆ, ಅಲ್ಲಿನ ಮಣ್ಣು-ಮರಳು, ಜಲ್ಲಿಗೊಚ್ಚು ಎಲ್ಲವಕ್ಕೂ permafrost ಎನ್ನುತ್ತಾರೆ. ಅಂದರೆ ಬರ್ಫದ ಹರಳುಗಳು ಅಂಟಿಕೊಂಡು ಕಲ್ಲುಮಣ್ಣೆಲ್ಲ ಶಾಶ್ವತ ಘನಸ್ಥಿತಿಯಲ್ಲಿ ಇರುತ್ತವೆ. ಗುಡ್ಡಗಳ ಇಳಿಜಾರಿನ ಓರೆಭೂಮಿಯಲ್ಲಿ ಇದ್ದರೂ ಅವು ಜಾರಿ ಕೆಳಕ್ಕೆ ಬರುವುದಿಲ್ಲ.

ಆದರೆ ತಾಪಮಾನ ಏರಿಕೆಯಿಂದಾಗಿ (1 ಡಿಗ್ರಿ ಸೆಂ ಏರಿದ್ದರೂ) ಅವು ಅಲ್ಲಲ್ಲೇ ಅರೆಬರೆ ಕರಗಿ ಸಡಿಲ ಸ್ಥಿತಿಯಲ್ಲಿವೆ. ಕಪ್ಪು ಬಣ್ಣದ್ದಾಗಿರುವುದರಿಂದ ಅವೂ ಶಾಖವನ್ನು ಹೀರಿಕೊಂಡು ಕರಗಿ ಕುಸಿದು ಕೆಳಗಿಳಿಯುವ ತವಕದಲ್ಲಿವೆ. ಮೇಲಿಂದ ತುಸು ಭಾರ ಬಿದ್ದರೂ ಸಡನ್ನಾಗಿ ಜಾರಿ ಕೆಳಕ್ಕೆ ಕುಸಿಯುತ್ತವೆ. ಹತ್ತಿಪ್ಪತ್ತು ಮೀಟರ್‌ ದಪ್ಪದ ಅದು ಭಾರೀ ಕೆಸರಿನ ಕುಸಿತ.

ಈಗ ಹಿಮಕುಸಿತದ ಕತೆಗೆ ಬರೋಣ. ಪರ್ವತದ ಶಿರ, ಭುಜಗಳ ಮೇಲೆ ಬಿದ್ದ ಮಲ್ಲಿಗೆ ಮಳೆಯೆಲ್ಲ ಹಿಮದ ರಾಶಿಯ ರೂಪದಲ್ಲಿ ನಿಂತಿರುತ್ತವೆ. ಅದು ಶಿಖರ ಮತ್ತು ಭುಜದ ದೊಡ್ಡ ಬಂಡೆಗಳ ಮೇಲೆ ತೀರಾ ಅಸಮತೋಲ ಸ್ಥಿತಿಯಲ್ಲಿ, ಯಾವ ಕ್ಷಣದಲ್ಲಾದರೂ ಕುಸಿಯುವ ಡೋಲಾಯಮಾನ ಸ್ಥಿತಿಯಲ್ಲಿರುತ್ತೆ. ಒಂದು ಸಣ್ಣ ಬಂಡೆ ತನ್ನ ತಲೆಯ ಮೇಲಿನ ಭಾರ ತಾಳಲಾರದೆ ಕುಸಿಯಿತೆಂದರೆ, ಒಮ್ಮೊಮ್ಮೆ ಐದಾರು ಕಿಲೊಮೀಟರ್‌ ಅಗಲದ, ಸಾವಿರಾರು ಮೀಟರ್‌ ಎತ್ತರದ ದಪ್ಪ ಹಲಗೆಯಂಥ ಹಂದರವೇ ಕುಸಿಯುತ್ತದೆ.

ಅಂಥ ಅಸಮತೋಲ ನೆತ್ತಿಯ ಕೆಳಗಿನ ಕಣಿವೆ ಸದಾಕಾಲ ತುಂಬ ಅಪಾಯ. ಅಲ್ಲಿ ಚಲಿಸಬೇಕಾದ ಮಿಲಿಟರಿ ತುಕಡಿಗೂ ವಿಶೇಷ ತರಬೇತಿ ನೀಡಲಾಗುತ್ತದೆ. ಒಂದು ಗನ್‌ ಸದ್ದು, ಅಥವಾ ಅಲ್ಲೇ ಮೇಲಕ್ಕೆ ಹಾರುವ ಹೆಲಿಕಾಪ್ಟರ್‌ ಸದ್ದು, ಅಷ್ಟೇಕೆ -ಜೋರಾಗಿ ಕೂಗಿದರೂ ಅದರ ಪ್ರತಿಧ್ವನಿಯಿಂದಲೂ ಹಿಮಕುಸಿತದ ಸರಮಾಲೆಗೇ ಜಿಲೆಟಿನ್‌ ಕಡ್ಡಿ ಇಟ್ಟಂತಾಗುತ್ತದೆ.

ಇದನ್ನೂ ಓದಿ : ನೇಪಾಳ ಗಡಿಯಲ್ಲಿ ಮತ್ತೊಂದು ಪ್ರವಾಹದ ಆತಂಕ: 3 ದಿನಗಳಲ್ಲಿ ನೈಸರ್ಗಿಕ ತಡೆಗೋಡೆ ಒಡೆಯುವ ಸಾಧ್ಯತೆ

ಹಿಮಕುಸಿತ ಸಂಭವಿಸಿದರೆ ಕಣಿವೆಯ ಐದಾರೆಂಟು ಕಿಲೊಮೀಟರ್‌ವರೆಗಿನ ವರೆಗೂ ಪ್ರಳಯ. ಅಡ್ಡ ಏನೇ ಬಂದರೂ -ಡ್ಯಾಮ್‌, ಸೇತುವೆ, ಹೆದ್ದಾರಿ, ಮಿಲಿಟರಿ ಸರಂಜಾಮು, ಕಟ್ಟಡ ಎಲ್ಲವೂ ಸಮಾಧಿ ಆಗುತ್ತವೆ. ಮಕ್ಕಳ ಆಟಿಗೆಗಳ ಮೇಲೆ ಸಕ್ಕರೆ ಮೂಟೆ ಬಿದ್ದ ಹಾಗೆ.

ಹಿಮನದಿ ಎಂಬ ಮೊಸರು ಪ್ರವಾಹದ ತುದಿಯಲ್ಲಿ (ಅಂದರೆ ಅದರ ನಾಲಗೆಯ ತುದಿಯಲ್ಲಿ) ಅಲ್ಲಲ್ಲಿ ಸರೋವರಗಳು ಸೃಷ್ಟಿಯಾಗಿರುತ್ತವೆ. ಈಗೀಗ ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ಬಹಳಷ್ಟು ಇಂಥ ನೈಸರ್ಗಿಕ ಜಲಾಶಯ ಸೃಷ್ಟಿಯಾಗಿವೆ. ಮೊಸರಿನ ಪ್ರವಾಹ ತನ್ನ ನಾಲಿಗೆಯ ತುದಿಯಲ್ಲಿ ಮೆಲ್ಲಗೆ ಒತ್ತಿ ಒತ್ತಿ ತಂದಿಟ್ಟ ಹೆಬ್ಬಂಡೆಗಳೇ ಅಲ್ಲಿ ಡ್ಯಾಮ್‌ ರೂಪದಲ್ಲಿ ನಿಂತಿರುತ್ತವೆ. ಹಾಗಾಗಿ ಅಲ್ಲಿನ ನೀರು ಮಡುಗಟ್ಟಿ ಕೂತಿದೆ. ನದಿಯಾಗಿ ಹರಿದಿರುವುದಿಲ್ಲ.

ಅಲ್ಲಿಗೆ ಮೂರು ‘ಅತಿನಾಜೂಕು’ ಪರಿಸ್ಥಿತಿ ಅಲ್ಲಿ ಏರ್ಪಟ್ಟಿರುತ್ತವೆ: (1) ಪರ್ವತದ ನೆತ್ತಿಯ ಮೇಲೆ ಡೋಲಾಯ ಸ್ಥಿತಿಯಲ್ಲಿ ನಿಂತ ಹಿಮಕಿರೀಟ. (2) ಅದರ ಕೆಳಗಿನ ಇಳಿಜಾರಿನಲ್ಲಿ ಯಾವ ಕ್ಷಣಕ್ಕೂ ಕುಸಿಯಬಹುದಾದ ಕಂದು ಹಿಮಗಲ್ಲುಗಳ permafrost ದಪ್ಪ ಪದರ. (3) ಯಾವ ಕ್ಷಣದಲ್ಲಾದರೂ ಢಮಾರೆನ್ನಲು ಸಿದ್ಧವಾದ ನೈಸರ್ಗಿಕ ಅಣೆಕಟ್ಟು.

ಮೊನ್ನೆ ಆಗಸ್ಟ್‌ 25ರಂದು ನೇಪಾಳ- ಟಿಬೆಟ್‌ ಗಡಿಯ ಲಾಂಗ್‌ಟಾಂಗ್‌- ಲೈರುಂಗ್‌ ಎಂಬಲ್ಲಿ ಹಿಮಕುಸಿತ ಸಂಭವಿಸಿತು, ಅದು ಲ್ಹೇಂಡೇ ಕಣಿವೆಯ ಇನ್ನೆರಡು (ಮೂರು-ನಾಲ್ಕು?) ಕುಸಿತಗಳಿಗೆ ಕಾರಣವಾಯಿತು. ಆ ಕುಸಿತ ಅದೆಷ್ಟು ಶಕ್ತಿಶಾಲಿ ಇತ್ತೆಂದರೆ ಅದರಿಂದಲೇ ಭೂಕಂಪನವೂ ಸಂಭವಿಸಿತು. ಕುಸಿತದ ಘರ್ಷಣೆಯಿಂದ ಹೊಮ್ಮಿದ ಶಾಖವೇ ಹಿಮಗಲ್ಲು, ಮಣ್ಣಿನ ಪದರವನ್ನೂ ಕರಗಿಸಿ ಕೆಳಕ್ಕೆಳೆಯಿತು. ನೈಸರ್ಗಿಕ ತಡೆಗಟ್ಟೆಯನ್ನು ಒಡೆದು, ದಟ್ಟ ಕಪ್ಪು ಮೋಡವೇ ಮಹಾಧಾರೆಯಾಗಿ ಧಾವಿಸಿದಂತೆ ಕರೀಮಣ್ಣಿನ ಕೆಸರು ಧಾರೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ನದಿಗುಂಟ ಸಾಗಿ ಬಂತು. ಮರುದಿನದ ಸಮೀಕ್ಷೆಯಲ್ಲಿ ಭೂಸುನಾಮಿಯಲ್ಲಿ 240 ಕಟ್ಟಡಗಳು ಧ್ವಂಸವಾದವು 32 ಕಟ್ಟಡಗಳು ಡೋಲಾಯಮಾನ ಸ್ಥಿತಿಗೆ ಬಂದವು.

ಇಂಥವು ಸಂಭವಿಸದಂತೆ ನಿಗಾ ವಹಿಸಲು ಸಾಧ್ಯವೆ? ಹಿಮಾಲಯವನ್ನು ನೀವು ಗೂಗಲ್‌ ಅರ್ಥ್‌ ನಕಾಶೆಯಲ್ಲಿ ನೋಡಿದರೆ ಅದೆಷ್ಟು ಕಷ್ಟ ಎಂಬುದು ಗೊತ್ತಾಗುತ್ತದೆ. ಪ್ರತಿ ಹತ್ತು ಚ.ಕಿ.ಮೀ ಕ್ಷೇತ್ರದಲ್ಲೂ ಹತ್ತಿಪ್ಪತ್ತು ಶಿಖರಗಳು, ಕಣಿವೆಗಳಿವೆ. ನೇಪಾಳದ 77 ಜಿಲ್ಲೆಗಳ ಪೈಕಿ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇಂಥದೇ ಏರಿಳಿತ ಕಾಣುತ್ತವೆ. ನಮ್ಮ ಲಡಾಖ್‌, ಉತ್ತರಾಖಂಡ, ನೇಪಾಳ, ಟಿಬೆಟ್‌/ ಚೀನಾ, ಸಿಕ್ಕಿಂ, ಭೂತಾನ್‌ ಆಚಿನ ಬ್ರಹ್ಮಪುತ್ರವರೆಗೂ ಹಿಮಕುಸಿತದ ಸಮೀಕ್ಷೆ ಮಾಡಬೇಕೆ? ನಾಲ್ಕು ರಾಷ್ಟ್ರಗಳ ಅಕ್ಷೋಹಿಣಿ ಡ್ರೋನ್‌ ಸೈನ್ಯವೇ ಅಹೋರಾತ್ರಿ ಆ ಕೆಲಸ ಮಾಡಬೇಕಾದೀತು.

ಡ್ರೋನ್‌ ಸಮೀಕ್ಷೆ ಸಾಕಾಗುವುದಿಲ್ಲ. ಹಿಮಾಲಯ ಸದಾ ಬೆಳೆಯುತ್ತಿರುವ ಬೇಬಿ ಆಗಿರುವುದರಿಂದ ಭೂಕಂಪನ, ಭೂಕುಸಿತವೂ ಇಂಥ ಪ್ರಳಯಕ್ಕೆ ಕಾರಣ ಆದೀತು. ಮುನ್ಸೂಚನೆ ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು. ಜನವಸತಿ ಜಾಸ್ತಿ ಇರುವ ಕಣಿವೆಗಳಲ್ಲಿ ಕಾಂಟ್ರಾಕ್ಟರ್‌, ಭೂವಿಜ್ಞಾನಿ, ಎಂಜಿನಿಯರ್‌, ವಿಮಾ ಸಂಸ್ಥೆ ಹಾಗೂ ಆಡಳಿತ ಸಿಬ್ಬಂದಿಗೆ ವಿಶೇಷ ತರಬೇತಿ ಕೊಡಬಹುದೇನೊ. ಅಪಾಯ ತೀರಾ ಹೆಚ್ಚಾಗಿರುವ ಈ ದಿನಗಳಲ್ಲೇ ತೀರ್ಥಾಟನೆಗೆ ಭಕ್ತರ ತಂಡವನ್ನು ಕಳಿಸುವ ಸಂಸ್ಥೆಗಳಿಗೂ ಇದು ಎಚ್ಚರಿಕೆ ಗಂಟೆ.

(ಖ್ಯಾತ ನರ್ತಕಿ ಮತ್ತು ಬೆಂಗಳೂರಿನ ’ನೃತ್ಯಗ್ರಾಮ‘ದ ಸಂಸ್ಥಾಪಕಿ ಪ್ರೊತಿಮಾ ಬೇಡಿ ಮತ್ತಿತರ 220 ಜನರು ಭೂಕುಸಿತದಿಂದಾಗಿ ಹೀಗೇ 1998ರ ಆಗಸ್ಟ್‌ 18ರಂದು ಕಣ್ಮರೆ ಆಗಿದ್ದನ್ನು -ಬೇರೊಂದು ಕಾರಣಕ್ಕೂ- ಇಂದು ನೆನಪಿಸಿಕೊಳ್ಳಬಹುದು.)

ಆದರೂ ದಿಲ್ಲಿಯ ರಾಜಕಾರಣಿಗಳು ಪ್ರವಾಸಿಗಳನ್ನು ಅತ್ತ ಸೆಳೆಯಲೆಂದು ‘ಚಾರ್‌ಧಾಮ್‌’ ನಂಥ ಮಹಾ ಜಾಲಗಳನ್ನು ಹೆಣೆಯಲು ನಿರ್ಧರಿಸಿದಾಗ ಮತ್ತು, ಅಭಿವೃದ್ಧಿಯ ಇತರ ಮಹಾರಥಗಳನ್ನು ಅತ್ತ ಓಡಿಸಿ ಇನ್ನಷ್ಟು ಮತ್ತಷ್ಟು ಡ್ಯಾಮ್‌, ಸೇತುವೆ, ಸುರಂಗ ಹೆಚ್ಚಾದಾಗ ಅಪಾಯ ದಿನೇ ದಿನೇ ಹೆಚ್ಚೀತು.

ತಾಪಮಾನ ಏರಿಕೆ ತಡೆಗಟ್ಟಲು ಕಲ್ಲಿದ್ದಲನ್ನು ಕೈಬಿಡಲು ಚೀನಾ 2050ರ ಗಡುವನ್ನೂ ಭಾರತ 2070ರ ಗಡುವನ್ನೂ ಹಾಕಿಕೊಂಡಿವೆ. ಅದುವರೆಗಿನ ನಾಳೆಗಳು ಈಗಿಗಿಂತ ಸುರಕ್ಷಿತ ಹೇಗಾದೀತು? ಹಿಮಾಲಯದ ಬೇಬಿಗೆ ಇಂಥ ಚಿಕ್ಕಪುಟ್ಟ ಕಿರಿಕಿರಿ ಜಾಸ್ತಿ ಆದಾಗ ಅದು ತುಸು ಜೋರಾಗಿ ಕೈಕಾಲು ಝಾಡಿಸಬಹುದು.

45 ವರ್ಷಗಳ ಹಿಂದೆ ನೈನಿತಾಲ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಿಮಾಲಯನ್‌ ಜಿಯಾಲಜಿ ಮತ್ತು ಪರಿಸರ ತುಮುಲ ಕುರಿತು ಬೋಧನೆ ಮತ್ತು ಚಾರಣ ವೀಕ್ಷಣೆಯ ನನ್ನ ಅನುಭವಕ್ಕೆ ಸಾಣೆ ಹಿಡಿಯಲೆಂದು ಈ ಘಟನೆಯ ನಂತರ ಜಾಗತಿಕ ಮಟ್ಟದ ಅನೇಕ ತಜ್ಞರ ಅನಿಸಿಕೆಗಳನ್ನು ಜಾಲಾಡಿದೆ. ಅವುಗಳಲ್ಲಿ ತಕ್ಷಶಿಲಾ ವಿ.ವಿ. ತಜ್ಞ ಡಾ. ನಿತ್ಯಾನಂದಮ್‌ ನೀಡಿದ ವಿವರಗಳು ಇಲ್ಲಿವೆ.

https://www.youtube.com/watch?v=4kw_DZsomdo

ಇಡೀ ಘಟನಾವಳಿಯ ಇತರ ಆಯಾಮಗಳನ್ನು ನೋಡಲು ಈ ಲಿಂಕ್‌ ಒತ್ತಬಹುದು:

https://www.youtube.com/watch?v=FXMZv1sOBUo

 

ಇದನ್ನೂ ನೋಡಿ : ನೇಪಾಳ ಪ್ರವಾಹ | ಕಣ್ಣೆದುರೇ ಕೊಚ್ಚಿಹೋದ ಮನೆಗಳು! Janashakthi Media

Donate Janashakthi Media

Leave a Reply

Your email address will not be published. Required fields are marked *