೨೦೨೫ರಲ್ಲಿ ೧೫೦ ವರ್ಷಗಳನ್ನು ಪೂರೈಸಿದ ʼವಂದೇ ಮಾತರಂʼ ಗೀತೆ ೧೮೭೫ರಲ್ಲಿ ಬರೆದ ಎರಡು ಚರಣಗಳ ಗೀತೆಯೇ ಹೊರತು, ೧೮೮೨ರಲ್ಲಿ ʼಆನಂದಮಠʼ ಕಾದಂಬರಿಯಲ್ಲಿ ಸೇರಿಸಿದ ಇನ್ನೂ ನಾಲ್ಕು ಚರಣಗಳನ್ನು ಒಳಗೊಂಡ ಗೀತೆಯಲ್ಲ ಎಂಬುದು ಸ್ಪಷ್ಟ. ಆದರೂ, ಕೊನೆಗೂ ಬಿಜೆಪಿ ಸರ್ಕಾರ ́ಈ ಕುರಿತ ಮಸೂದೆಯನ್ನು ಪಾಸು ಮಾಡಿಸಿಕೊಂಡ ನಂತರವೂ ತೃಪ್ತವಾಗದೆ, “ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆʼಗೆ ಇನ್ನೂ ಒಂದು ತಿದ್ದುಪಡಿಯನ್ನು, ಅದೂ ದೇಶದಲ್ಲೆಲ್ಲ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ತೀವ್ರ ದಮನದ ವಿರುದ್ಧ ಆಕ್ರೋಶದ ನಡುವೆಯೇ ಪಾಸು ಮಾಡಿಸಿಕೊಂಡಿತು. ತದನಂತರ ಅದರ ದುರುಪಯೋಗದ ಸುದ್ದಿಗಳು ಅಲ್ಲಲ್ಲಿ ಕೇಳಬರಲಾರಂಭಿಸಿವೆ.
(ಸಂಗ್ರಹ-ಅನುವಾದ: ಸಿಚಿ)
‘ವಂದೇ ಮಾತರಂ’ ಎಂಬ ನಮ್ಮ ರಾಷ್ಟ್ರಗಾನವನ್ನು ಬಂಕಿಂಚಂದ್ರ ಚಟರ್ಜಿ ಅವರು ಬರೆದು 150 ವರ್ಷ ತುಂಬಿದ ಸಂದರ್ಭದಲ್ಲಿ ಡಿಸೆಂಬರ್ 8, 2025 ರಂದು ಲೋಕಸಭೆಯಲ್ಲಿ , ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತ “ವಂದೇ ಮಾತರಂ ಗೀತೆಯನ್ನು ನೆಹರೂ ಛಿದ್ರಮಾಡಿದರು. ಅದರ ಪರಿಣಾಮವಾಗಿ, ಈ ದೇಶ ಛಿದ್ರವಾಯಿತು” ಎಂದರು. ಎಂದಿನಂತೆ ಇದು ಗೂಬೆ ಕೂರಿಸುವ ತಂತ್ರದ ಭಾಗವಾಗಿತ್ತು ವಾಸ್ತವವಾಗಿ ಈ ಮೂಲಕ ಅವರು ನೆಹರೂ ಜತೆ ಮಹಾತ್ಮ ಗಾಂಧೀ, ಆಗಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಮೌಲಾನಾ ಆಜಾದ್ , ಸುಭಾಷ್ ಚಂದ್ರ ಬೋಸ್ , ಆಚಾರ್ಯ ದೇವ್ ರನ್ನು ಮತ್ತು ಎಲ್ಲಕ್ಕೂ ಮಿಗಿಲಾಗಿ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್‌ರನ್ನು ಕೂಡ ಅವಮಾನಿಸಿದರು. ಏಕೆಂದರೆ ಇವರೆಲ್ಲರೂ ನಮ್ಮ ರಾಷ್ಟ್ರಗೀತೆ ‘ಜನ ಗಣ ಮನ’ ಜೊತೆಗೆ ಎರಡು ಚರಣಗಳ ‘ವಂದೇ ಮಾತರಂ’ ಅನ್ನು ರಾಷ್ಟ್ರೀಯ ಹಾಡು(national song) ಎಂದು ಮಾನ್ಯ ಮಾಡಿದ ಪ್ರಮುಖರು.
ಇವರುಗಳು ʼವಂದೇ ಮಾತರಂ; ಅನ್ನು ಆರಿಸಿದಾಗ, ಅದು ಸುಜಲಾಂ ಸುಫಲಾಂ ಮಲಯಜ ಶೀತಲಾಂ … ಎಂದು ದೇಶದ ಶ್ರೇಷ್ಠತೆಯನ್ನು ವ್ಯಕ್ತಪಡಿಸುವ ಎರಡು ಚರಣಗಳನ್ನು ಮಾತ್ರ ಒಳಗೊಂಡಿತ್ತು. ಬಂಕಿಂಚಂದ್ರ ಚಟರ್ಜಿ ಅವರು ಆ ಎರಡು ಚರಣಗಳ ಹಾಡನ್ನು 1875 ರಲ್ಲಿ ಬರೆದರು, 1876 ರಲ್ಲಿ ಪ್ರಕಟಗೊಂಡಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಕಾರ್ಯಕರ್ತರು ಹಾಡುತ್ತಿದ್ದುದು ಆ ಎರಡೇ ಚರಣಗಳನ್ನು.
ಆ ನಂತರ, ಕೆಲವು ಬೆಳವಣಿಗೆಗಳು ನಡೆದವು. ಬಂಕಿಂಚಂದ್ರ, ಆ ಎರಡು ಚರಣಗಳ ಜೊತೆಗೆ ಇನ್ನೂ ನಾಲ್ಕು ಚರಣಗಳನ್ನು ಬರೆದು, 1882 ರಲ್ಲಿ ತಮ್ಮ ‘ಆನಂದ ಮಠ’ ಕಾದಂಬರಿಯಲ್ಲಿ ಸೇರಿಸಿಕೊಂಡರು. ಆದರೆ, ನಂತರ, ಕಾದಂಬರಿಗಾಗಿ ಬರೆದುಕೊಂಡ ಚರಣಗಳು ದೇಶದ ಬಗ್ಗೆಯಾಗಿರಲಿಲ್ಲ, ದೇವಿ/ದುರ್ಗಾ/ಕಾಳಿ ಮಾತಾ/ಲಕ್ಷ್ಮಿ/ಸರಸ್ವತಿಯಂತಹ ಹಿಂದೂ ದೇವತೆಗಳನ್ನು ಸ್ತುತಿಸುವಂತಿದ್ದವು. ಆದ್ದರಿಂದಲೇ ೧೮೯೬ರ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಅಧಿವೇಶನ ಕಲ್ಕತ್ತಾದಲ್ಲಿ ನಡೆದಾಗ, ಅಲಿ ಇದನ್ನು ಮೊದಲ ಬಾರಿಗೆ ಹಾಡಿದ ಕವಿ ರವೀಂದ್ರರು ೧೮೭೫ರಲ್ಲಿ ಬರೆದ ಎರಡು ಚರಣಗಳನ್ನು ಮಾತ್ರ ಆರಿಸಿಕೊಂಡಿದ್ದರು. ಮುಂದೆ ೧೯೩೭ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಈ ಎರಡು ಚರಣಗಳ ಗೀತೆಯನ್ನು ಅಧಿಕೃತವಾಗಿ ಅಂಗೀಕರಿಸಿತು. ಸ್ವತಂತ್ರ ಭಾರತ ಕೂಡ ರಾಷ್ಟ್ರೀಯ ಹಾಡು ಎಂದು ೧೮೭೫ರ ಮೂಲ ಆವೃತ್ತಿಯನ್ನೇ ೧೯೫೦ರಲ್ಲಿ ಅಂಗೀಕರಿಸಿತು. ಅದಕ್ಕಾಗಿ ನೆಹರೂರನ್ನು ದೂಷಿಸುವುದರಲ್ಲಿ, ಅದರಿಂದಾಗಿಯೇ ದೇಶ ವಿಭಜನೆಯಾಯಿತು ಎಂದು ಹೇಳುವುದರಲ್ಲಿ ಯಾವ ಔಚಿತ್ಯವೂ ಇಲ್ಲ.
೨೦೨೫ರಲ್ಲಿ ೧೫೦ ವರ್ಷಗಳನ್ನು ಪೂರೈಸಿದ ಗೀತೆ ೧೮೭೫ರಲ್ಲಿ ಬರೆದ ಎರಡು ಚರಣಗಳ ಗೀತೆಯೇ ಹೊರತು, ೧೮೮೨ರಲ್ಲಿ ʼಆನಂದಮಠʼ ಕಾದಂಬರಿಯಲ್ಲಿ ಸೇರಿಸಿದ ಇನ್ನೂ ನಾಲ್ಕು ಚರಣಗಳನ್ನು ಒಳಗೊಂಡ ಗೀತೆಯಲ್ಲ ಎಂಬುದು ಸ್ಪಷ್ಟ. ಏಕೆಂದರೆ ಅದಕ್ಕೆ ನಾವು 2032 ರವರೆಗೆ ಕಾಯಬೇಕಲ್ಲವೇ? ಆದರೆ ಈ “ಅಮೃತ ಕಾಲ”ದಲ್ಲಿ ಸುಳ್ಳುಗಳನ್ನೇ ಸತ್ಯ ಎಂದು ಸಾರುವುದು ಮುಖ್ಯ ಕಾಯಕವಾಗಿಬಿಟ್ಟಿರುವಾಗ ಬಹುಶಃ ಇಂತಹ ಪ್ರಶ್ನೆಗಳೂ ಅರ್ಥಹೀನವಾಗುತ್ತವೆ. ಕೊನೆಗೂ ಬಿಜೆಪಿ ಸರ್ಕಾರ ́ಈ ಕುರಿತ ಮಸೂದೆಯನ್ನು ಪಾಸು ಮಾಡಿಸಿಕೊಂಡಿತು.
ಐತಿಹಾಸಿಕ ಸತ್ಯಗಳು
‘ವಂದೇ ಮಾತರಂ’ ಕುರಿತು ಚರ್ಚೆ ಬಂದಾಗ – ಅದು ಸಾಹಿತ್ಯಿಕ ವಿಷಯವಾಗಿರುವುದರಿಂದ, ಅಂದಿನ ಪ್ರಧಾನ ಮಂತ್ರಿ ನೆಹರು, ವಿಶ್ವಕವಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಅಭಿಪ್ರಾಯವನ್ನು ಕೇಳಿದರು. ಅವರು ಆ ಎರಡು ಮೊದಲ ಚರಣಗಳನ್ನೇ ಅನುಮೋದಿಸಿದರು. ಅಕ್ಟೋಬರ್ 1937 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎರಡು ಚರಣಗಳ ಆವೃತ್ತಿಯನ್ನು ಅಧಿಕೃತವಾಗಿ ಅಂಗೀಕರಿಸಿತು. ಮೊದಲು ಬರೆದ ಆ ಎರಡು ಚರಣಗಳನ್ನು ಮಾತ್ರ ಅನುಮೋದಿಸಿದ್ದಲ್ಲದೆ ರವೀಂದ್ರನಾಥ ಟ್ಯಾಗೋರ್ ಅವುಗಳಿಗೆ ಸಂಗೀತವನ್ನೂ ಸಂಯೋಜಿಸಿದರು.
ಇದನ್ನೂ ಓದಿ :ಎಸ್‌ಐಆರ್: 43.81 ಲಕ್ಷ ಮತದಾರರಿಗೆ ನೋಟಿಸ್, ಅ.27ರಂದು ಅಂತಿಮ ಪಟ್ಟಿ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ –ವಂದೇ ಮಾತರಂ
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಂ -ವಂದೇ ಮಾತರಂ (1975)
ನಂತರ ಬರೆದು ಕಾದಂಬರಿಯಲ್ಲಿ ಸೇರಿಸಲಾದ ಚರಣಗಳ ಕೆಲವು ಸಾಲುಗಳು ಈ ಕೆಳಗಿನಂತಿವೆ.
ಕೋಟಿಕೋಟಿ ಕಂಠ ಕಲಕಲ ನಿನಾದ-ಕರಾಲೇ – ಎಂಬುದು ಆಗಿನ ಅವಿಭಜಿತ ಬಂಗಾಳದ ಏಳು ಕೋಟಿ ಜನಸಂಖ್ಯೆಯ ಕುರಿತಾಗಿತ್ತು.
ತ್ವಂ ಹಿ ದುರ್ಗಾ ದಶ ಪ್ರಹರಣ ಧಾರಿಣೀ
ಕಮಲಾ ಕಮಲದಳ-ವಿಹಾರಿಣೀ
ವಾಣೀ ವಿದ್ಯಾದಾಯಿನೀ ನಮಾಮಿ ತ್ವಾಂ
ನಮಾಮಿ ಕಮಲಾಂ ಅಮಲಾಂ ಅತುಲಾಂ (1882)
ಆ ದಿನಗಳಲ್ಲೇ ಈ ಬಗ್ಗೆ ಸಾಕಷ್ಟು ವಿವಾದಗಳು ಎದ್ದಿದ್ದವು. ಜುಲೈ 1, 1939 ರಂದು, ಗಾಂಧೀಜಿ ತಮ್ಮ ‘ಹರಿಜನ್’ ಪತ್ರಿಕೆಯಲ್ಲಿ: “ಬಂಗಾಳದಲ್ಲಿ ಹಿಂದೂ ಮುಸ್ಲಿಮರ ನಡುವೆ ಈ ಗೀತೆ ದ್ವೇಷವನ್ನು ಹುಟ್ಟುಹಾಕುತ್ತಿದ್ದರೆ – ಎಲ್ಲರೂ ಸೇರಿರುವ ಗುಂಪುಗಳಲ್ಲಿ ಇದು ಕೆಲವರಿಗೆ ಆಕ್ಷೇಪಾರ್ಹವಾಗಿದ್ದರೆ – ತಕ್ಷಣವೇ ಈ ಗೀತೆ ಹಾಡುವುದನ್ನು ನಿಲ್ಲಿಸಬೇಕು!” ಎಂದು ಬರೆದಿದ್ದರು. ಮತ್ತೊಂದೆಡೆ, ಅಕ್ಟೋಬರ್ 1938 ರಲ್ಲಿ, ಕರಾಚಿಯಲ್ಲಿ ನಡೆದ ಮುಸ್ಲಿಂ ಲೀಗ್ ಸಮ್ಮೇಳನದಲ್ಲಿ, ಮುಹಮ್ಮದ್ ಅಲಿ ಜಿನ್ನಾ ವಂದೇ ಮಾತರಂಗೆ ತಮ್ಮ ಬಲವಾದ ಆಕ್ಷೇಪಣೆಯನ್ನು ವ್ಯಕ್ತಪಡಿಸಿದರು. ಹಿಂದೂ ದೇವತೆಗಳಿಗೆ ಪ್ರಾರ್ಥನೆಯಾಗಿರುವ ಈ ಗೀತೆ ಮುಸ್ಲಿಮರ ಬಗ್ಗೆ ದ್ವೇಷವನ್ನು ಹೆಚ್ಚಿಸುತ್ತಿದೆ. ಮುಸ್ಲಿಮರು ವಿಗ್ರಹಾರಾಧನೆಯನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಈ ಪ್ರಾರ್ಥನಾ ಗೀತೆಯನ್ನು ಹೇಗೆ ಒಪ್ಪಿಕೊಳ್ಳುತ್ತಾರೆ? -ಎಂದಿದ್ದರು. ಆದಾಗ್ಯೂ, ಸ್ವಾತಂತ್ರ್ಯ ದೊರಕಿದ ನಂತರ ರಚನೆಯಾದ ಮೊದಲ ಭಾರತ ಸರ್ಕಾರ, ಜನವರಿ 24, 1950 ರಂದು, ರಾಷ್ಟ್ರದ ಔನ್ನತ್ಯವನ್ನು ವ್ಯಕ್ತಪಡಿಸುವ ಮೊದಲ ಎರಡು ಚರಣಗಳನ್ನು ಅಧಿಕೃತವಾಗಿ ರಾಷ್ಟ್ರಗಾನ ಎಂದು ಗುರುತಿಸಿತು. ರಾಷ್ಟ್ರ ಗೀತೆಯಾದ ʼಜನಗಣ ಮನ ಅಧಿನಾಯಕ ಜಯಹೇ…’ ಜೊತೆಗೆ, ವಂದೇ ಮಾತರಂ ಗೀತೆಗೂ ಕೂಡಾ ಆ ಸ್ಥಾನ, ಗೌರವವನ್ನು ನೀಡಲಾಯಿತು. ಆಗ ಡಾ. ರಾಜೇಂದ್ರ ಪ್ರಸಾದ್ ಭಾರತದ ರಾಷ್ಟ್ರಪತಿಗಳಾಗಿದ್ದರು.
ದೇಶ ವಿಭಜನೆಗೆ ಯಾರು ಕಾರಣ
ದೇಶ ವಿಭಜನೆಗೆ ಮುಹಮ್ಮದ್ ಅಲಿ ಜಿನ್ನಾ ಎಷ್ಟು ಕಾರಣವೋ, ಹಿಂದೂ ಮಹಾಸಭಾ/ ಆರೆಸ್ಸೆಸ್ ಕೂಡಾ ಅಷ್ಠೇ ಕಾರಣ ಎಂಬುದು ಈಗಾಗಲೇ ಸಾಕಷ್ಟು ಚರ್ಚಿತವಾಗಿರುವ ವಿಷಯ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದವರ ಸಂತತಿಯವರು ಈಗ ದೇಶಕ್ಕಾಗಿ ತ್ಯಾಗ-ಬಲಿದಾನಗಳನ್ನು ಮಾಡಿದ ಜನರ ಸಂತತಿಯವರಿಗೆ ದೇಶಭಕ್ತಿಯ ಬಗ್ಗೆ ಉಪನ್ಯಾಸ ನೀಡುತ್ತಿದ್ದಾರೆ, ತ್ರಿವರ್ಣ ಬಾವುಟವನ್ನು ಆರಂಭದಿಂದಲೇ ವಿರೋಧಿಸುತ್ತಿದ್ದವರು ಈಗ ʼಹರ್ ಘರ್ ತಿರಂಗಾʼದ ಘೋಷಣೆ ಕೊಡುತ್ತಿದ್ದಾರೆ ಎಂಬುದೂ ಈ ಹನ್ನೆರಡು ವರ್ಷಗಳಲ್ಲಿ ಎಲ್ಲರ ಅರಿವಿಗೆ ಬಂದಿದೆ.
ಈ ನಡುವೆ ರಾಷ್ಟ್ರಗೀತೆಯಾಗಿರುವ ‘ಜನ ಗಣ ಮನ’ ವನ್ನು ತೆಗೆದುಹಾಕಿ, ಅದರ ಸ್ಥಾನದಲ್ಲಿ ʼವಂದೇ ಮಾತರಂʼ ಇರಬೇಕೆಂದು ಕೆಲವರು ದೆಹಲಿ ನ್ಯಾಯಾಲಯದಲ್ಲಿ ‘ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ’ ಸಲ್ಲಿಸಿದ್ದಾರೆ. ಈ ಜಾತ್ಯತೀತ ದೇಶಕ್ಕೆ ದುರ್ಗಾ ಮಾತಾ ಸ್ತ್ರೋತ್ರ ಅಗತ್ಯವಿಲ್ಲ ಎಂದು ನ್ಯಾಯಾಲಯ ಅವೆಲ್ಲವನ್ನೂ ತಿರಸ್ಕರಿಸಿದೆ.
ಈ ದೇಶದಲ್ಲಿ, ಹಿಂದೂಗಳು-ಮುಸ್ಲಿಮರು-ಕ್ರಿಶ್ಚಿಯನ್ನರು-ಬುಡಕಟ್ಟು ಜನರು ಎಂದಿಗೂ ಒಟ್ಟಿಗೆ ಇದ್ದಾರೆ. ಇವರೆಲ್ಲರೂ ಒಟ್ಟಾಗಿ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಇದನ್ನು ಪ್ರಸ್ತುತ ಅಧಿಕಾರದಲ್ಲಿರುವ ನಾಯಕರು ಹುಸಿಗೊಳಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಇದ್ದಾರೆ. ಇವರನ್ನು ಬೇರ್ಪಡಿಸಲು ಒಂದು ಕಾಲದಲ್ಲಿ ಬ್ರಿಟಿಷರು ಪ್ರಯತ್ನಿಸಿದರು. ಇಂದು, ಅಧಿಕಾರದಲ್ಲಿರುವ ಆರ್‌ಎಸ್‌ಎಸ್-ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಈ ಮೂಲಕ ತಮ್ಮ ಅಧಿಕಾರವನ್ನು ಶಾಶ್ವತಗೊಳಿಸಿಕೊಳ್ಳಬಹುದು ಎಂದು ನಂಬಿದ್ದಾರೆ.
(ಆಧಾರ: ʼ ಪ್ರಜಾಶಕ್ತಿʼ ಯಲ್ಲಿ ಪ್ರಕಟವಾದ ಜೀವಶಾಸ್ತ್ರಜ್ಞ ಪ್ರೊ. ದೇವರಾಜು ರವರ ಲೇಖನ)
ಒಂದು ಪ್ರಶ್ನೆ,ನಮಗೆ ಉತ್ತಮಶಾಲೆಗಳು ಯಾವಾಗ ಸಿಗುತ್ತವೆ?
ಒಂದು ಪ್ರಶ್ನೆ! ನಿನಗೆ ವಂದೇ ಮಾತರಂನ ಆರು ಚರಣಗಳು ಗೊತ್ತೇ?
ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ
ಇದನ್ನೂ ನೋಡಿ :‘ಮನೆ ಮುಂದೆ ವಾಹನ ನಿಲ್ಲಿಸೋಕೆ ದುಡ್ಡಾ?’ | ಪಾರ್ಕಿಂಗ್ ಶುಲ್ಕದ ವಿರುದ್ಧ ಜನಾಕ್ರೋಶ Janashakthi Media
