ಹಾಸನ : ಹಾಸನ ನಗರದ ಕಾಲೇಜೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಡಪಂಥೀಯರು ‘ಮೋಸ್ಟ್ ಡೇಂಜರಸ್’ ಎಂದು ಹೇಳಿರುವ ನಿಶ್ಚಲಾನಂದ ಸ್ವಾಮೀಜಿ ಅವರ ಹೇಳಿಕೆಗೆ ಸಿಪಿಐಎಂ ಹಾಸನ ಜಿಲ್ಲಾ ಸಂಘಟನಾ ಸಮಿತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ಪ್ರಕಟಣೆ ನೀಡಿದ್ದು, ಯಾವುದೇ ಆಧಾರವಿಲ್ಲದೆ ಎಡಪಂಥೀಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಎಡಪಂಥೀಯರು ಎಂದರೆ ಪ್ರಗತಿಪರರು, ಜಾತ್ಯತೀತವಾದಿಗಳು, ಪ್ರಜಾಪ್ರಭುತ್ವವಾದಿಗಳು, ಸಂವಿಧಾನದ ಪರವಾಗಿರುವವರು, ದಲಿತರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ಜನಪರ ಹೋರಾಟಗಾರರು, ಮಾನವ ಹಕ್ಕುಗಳ ಪರವಾಗಿ ಕೆಲಸ ಮಾಡುವವರು, ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಸೇರಿದಂತೆ ವಿಶಾಲ ಸಮುದಾಯವನ್ನು ಒಳಗೊಂಡಿದೆ. ಆಡಳಿತ ವ್ಯವಸ್ಥೆಯ ಜನವಿರೋಧಿ ನೀತಿಗಳನ್ನು ವಿರೋಧಿಸುವುದು ಎಡಪಂಥೀಯರ ಪ್ರಮುಖ ಆಶಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಡವರು, ರೈತರು, ಕಾರ್ಮಿಕರು, ದಲಿತರು ಹಾಗೂ ಮಹಿಳೆಯರ ಜೀವನಮಟ್ಟ ಸುಧಾರಣೆಗೆ ಎಡಪಂಥೀಯರು ನಿರಂತರವಾಗಿ ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅಸ್ಪೃಶ್ಯತೆ, ಜಾತಿವಾದ, ಕೋಮುವಾದ, ಭ್ರಷ್ಟಾಚಾರ, ಮಹಿಳಾ ಶೋಷಣೆ ಹಾಗೂ ಪರಿಸರ ನಾಶದ ವಿರುದ್ಧ ಮತ್ತು ಸಂವಿಧಾನದ ಆಶಯಗಳಿಗಾಗಿ ಹೋರಾಟ ನಡೆಸಿದ್ದಾರೆ ಎಂದು ನವೀನ್ ಕುಮಾರ್ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಮಾತನಾಡುತ್ತಾರೆ, ಸಮಾಜದಲ್ಲಿ ಬೆಂಕಿ ಹಚ್ಚುತ್ತಾರೆ ಎಂಬ ಸ್ವಾಮೀಜಿ ಅವರ ಆರೋಪಕ್ಕೂ ಅವರು ತಿರುಗೇಟು ನೀಡಿದ್ದು, ಯಾವುದೇ ಸರ್ಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸುವುದು ಹಾಗೂ ಅದರ ವಿರುದ್ಧ ಪ್ರತಿಭಟಿಸುವುದು ಪ್ರಜಾಪ್ರಭುತ್ವದ ಹಕ್ಕು ಎಂದಿದ್ದಾರೆ. ಜನರ ಬದುಕಿನ ಸಮಸ್ಯೆಗಳ ಕುರಿತು ಹೋರಾಟ ಮಾಡುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆಯೇ ಅಥವಾ ಧರ್ಮಾಂಧತೆಯನ್ನು ಬೋಧಿಸುವುದರಿಂದ ಹಾಳಾಗುತ್ತದೆಯೇ ಎಂಬುದನ್ನು ಸ್ವಾಮೀಜಿ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಜಾತಿಗ್ರಸ್ಥ ಸಮಾಜದಲ್ಲಿ ಶೂದ್ರ ಸಮುದಾಯಕ್ಕೆ ಸೇರಿದ ಮಠದ ಸ್ವಾಮಿಯಾಗಿ ಬಡವರು, ರೈತರು ಮತ್ತು ಕಾರ್ಮಿಕರ ಸಂಕಷ್ಟಗಳ ಕುರಿತು ಸ್ವಾಮೀಜಿ ಎಂದಾದರೂ ಧ್ವನಿ ಎತ್ತಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು, ದುಡಿಯುವ ವರ್ಗದ ವಿರುದ್ಧದ ನೀತಿಗಳ ವಿರುದ್ಧ ಧ್ವನಿ ಎತ್ತದೆ ಎಡಪಂಥೀಯರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಆಶಯ ಹಾಗೂ ತಮ್ಮ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡದೆ ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕ ಸ್ವಾಮೀಜಿ ತಮ್ಮ ‘ಬೌದ್ಧಿಕ ದಾರಿದ್ರ್ಯ’ವನ್ನು ಪ್ರದರ್ಶಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ನಿಶ್ಚಲಾನಂದ ಸ್ವಾಮೀಜಿ ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಕಾರ್ಯಕ್ರಮದ ಆಯೋಜಕರು ಕೂಡ ಸ್ವಾಮೀಜಿ ಅವರ ವೈಯಕ್ತಿಕ ಹೇಳಿಕೆಯಿಂದ ಅಂತರ ಕಾಯ್ದುಕೊಂಡು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಎಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಆಗ್ರಹಿಸಿದೆ.
