ಧಾರವಾಡ: ನಟ ಪ್ರಕಾಶ್ ರಾಜ್ ಅವರು ಸಮುದಾಯ ಸಂಘಟನೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲು ಧಾರವಾಡಕ್ಕೆ ಆಗಮಿಸಿದ್ದ ವೇಳೆ ಅವರ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದ್ದು, ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕೆಲ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ಸಮಾರೋಪ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಪ್ರಕಾಶ್ ರಾಜ್ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನವೇ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದ ಕೆಲ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಸ್ಥಳದ ಬಳಿ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಬ್ಯಾನರ್ನಲ್ಲಿದ್ದ ಪ್ರಕಾಶ್ ರಾಜ್ ಅವರ ಭಾವಚಿತ್ರಕ್ಕೆ ಮಸಿ ಬಳಿಯಲು ಕೆಲವರು ಯತ್ನಿಸಿದ್ದಾರೆ ಎನ್ನಲಾಗಿದ್ದು, ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಸಭಾಂಗಣದೊಳಗೆ ಪ್ರವೇಶಿಸಿ ಪ್ರಕಾಶ್ ರಾಜ್ ಅವರಿಗೆ ಮುತ್ತಿಗೆ ಹಾಕಲು ಕೆಲವರು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದರು.
ಪೊಲೀಸರು ಪ್ರತಿಭಟನಾಕಾರರನ್ನು ವಾಹನದಲ್ಲಿ ಕರೆದೊಯ್ಯಲು ಮುಂದಾದಾಗ ಕೆಲವರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕ್ರಮದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಪ್ರಕಾಶ್ ರಾಜ್ ಅವರಿಗೆ ಅಡ್ಡಿಪಡಿಸಿದ ಕ್ರಮ ವಿರೋಧಿಸಿ ಸಮುದಾಯ ಸಂಘಟನೆ, SFI, DYFI, CITU ಕಾರ್ಯಕರ್ತರು ಹಿಂದುತ್ವ ಸಂಘಟನೆಯ ಕಾರ್ಯಕರ್ತರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಯುವಕರ ಮೇಲೆ ಕ್ರಮ ಜರುಗಿಸಲು ಆಗ್ರಹಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಎಸ್ಐಆರ್ ಪ್ರಕ್ರಿಯೆ ಅವೈಜ್ಞಾನಿಕ ಹಾಗೂ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ನಡೆದಿದೆ ಎಂದು ಅವರು ಆರೋಪಿಸಿದರು. ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಆತಂಕವಿದೆ ಎಂದು ಹೇಳಿದ ಅವರು, ಈ ಕುರಿತು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸದೇ ಪ್ರಕ್ರಿಯೆ ನಡೆಸಿರುವುದನ್ನು ಪ್ರಶ್ನಿಸಿದರು.
ಎಸ್ಐಆರ್ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿರುವ ಪ್ರಕಾಶ್ ರಾಜ್, ಸೆಪ್ಟೆಂಬರ್ 1ರಂದು ‘ಚುನಾವಣಾ ಆಯೋಗ ಚಲೋ’ ನಡೆಸುವುದಾಗಿ ಈಗಾಗಲೇ ಘೋಷಿಸಿದ್ದಾರೆ.
