ಸಂವಿಧಾನದ ರಕ್ಷಣೆ ಎಂದರೆ ದೇಶದ ರಕ್ಷಣೆ: ಆದಿತ್ಯ ಚಟರ್ಜಿ

ಬೆಂಗಳೂರು : ವಿಶ್ವದಲ್ಲೇ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರುವ ಭಾರತದ ಸಂವಿಧಾನದ ಪೀಠಿಕೆ ದೇಶದ ಆತ್ಮವಿದ್ದಂತೆ ಎಂದು ಸುಪ್ರೀಂ ಕೋರ್ಟ್ ವಕೀಲ ಆದಿತ್ಯ ಚಟರ್ಜಿ ಅಭಿಪ್ರಾಯಪಟ್ಟರು.

ಸಂವಿಧಾನ ಓದು ಅಭಿಯಾನ ಕರ್ನಾಟಕ ವತಿಯಿಂದ ಕ್ರೈಸ್ಟ್ ಅಕಾಡಮಿ ಆಫ್ ಲಾ ಕಾಲೇಜಿನಲ್ಲಿ ಕಾನೂನು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

“ಸಂವಿಧಾನ ದೇಶದ ಸಮಸ್ತ ಪ್ರಜೆಗಳನ್ನು ಒಂದೇ ತೆಕ್ಕೆಗೆ ತಂದಿದೆ. ದೇಶದ ಎಲ್ಲ ಪ್ರಜೆಗಳೂ ಸಮಾನರು ಎಂಬ ಮೌಲ್ಯವನ್ನು ಪ್ರತಿಪಾದಿಸಿದೆ. ನಮ್ಮ ಹಕ್ಕುಗಳು ಮತ್ತು ನ್ಯಾಯವನ್ನು ಅರಿಯಲು ಹಾಗೂ ಪಡೆಯಲು ಸಂವಿಧಾನ ಓದುವುದು ಅಗತ್ಯ” ಎಂದು ಅವರು ಹೇಳಿದರು.

ನಂಬೂದಿರಿಪಾಡ್ ಪ್ರಕರಣವನ್ನು ಉಲ್ಲೇಖಿಸಿದ ಅವರು, ನ್ಯಾಯಾಂಗದಲ್ಲಿ ಸಂವಿಧಾನದ ಕುರಿತು ವ್ಯಾಪಕ ಚರ್ಚೆಗಳು ನಡೆದಿರುವುದನ್ನು ವಿವರಿಸಿದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಜನರು ರಾಷ್ಟ್ರಧ್ವಜ ಹಿಡಿದು ಸಂವಿಧಾನ ಉಳಿಸುವ ಹೋರಾಟ ನಡೆಸಿದ್ದನ್ನು ಸ್ಮರಿಸಿದರು.

“ದೇಶದ ಸಂವಿಧಾನದ ಮೇಲೆ ಹಲವು ಬಾರಿ ದಾಳಿಗಳು ನಡೆದಿವೆ. ಸಂವಿಧಾನದ ರಕ್ಷಣೆ ಎಂದರೆ ದೇಶದ ರಕ್ಷಣೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರೂ ಸಂವಿಧಾನವನ್ನು ಓದಿ ಅದರ ಆಶಯಗಳನ್ನು ಅರಿಯಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಲಾ ಕಾಲೇಜಿನ ಪ್ರಾಂಶುಪಾಲ ಫಾದರ್ ಪಿ.ವಿ. ಡೇವಿಸ್ ಮಾತನಾಡಿ, “ಸಂವಿಧಾನ ದೇಶದ ಹೃದಯವಿದ್ದಂತೆ. ಹೃದಯದಿಂದ ರಕ್ತ ಸಂಚಾರವಾಗುವಂತೆ ಸಂವಿಧಾನ ದೇಶದ ಆಡಳಿತ ಮತ್ತು ನ್ಯಾಯ ವ್ಯವಸ್ಥೆಗೆ ಜೀವ ತುಂಬುತ್ತದೆ” ಎಂದು ಹೇಳಿದರು.

ಸಂವಿಧಾನ ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಶಕ್ತಿಯನ್ನು ಹೊಂದಿದೆ. ಈ ಉದ್ದೇಶದಿಂದಲೇ ಕ್ರೈಸ್ಟ್ ಕಾಲೇಜು ‘ನ್ಯಾಯ ಶ್ರದ್ಧಾ’ ಕಾರ್ಯಕ್ರಮದ ಮೂಲಕ ಜನರಿಗೆ ಸಂವಿಧಾನ ಮತ್ತು ನ್ಯಾಯದ ಅರಿವು ಮೂಡಿಸುವ ಕಾರ್ಯ ಕೈಗೊಂಡಿದ್ದು, ಅದರ ಭಾಗವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಸಿನಿ ಜಾನ್, ಸಂವಿಧಾನ ಓದು ಅಭಿಯಾನ ಕರ್ನಾಟಕದ ಸಂಚಾಲಕ ಬಿ. ರಾಜಶೇಖರಮೂರ್ತಿ, ಹೈಕೋರ್ಟ್ ವಕೀಲ ಶ್ರೀಹರಿ, ಕನ್ನಡ ಪ್ರಾಧ್ಯಾಪಕ ಡಾ. ಮಹೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಕಾನೂನು ಕಾಲೇಜುಗಳ ಸುಮಾರು 250 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಈ ತಿಂಗಳ ಕೊನೆಯ ವಾರದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *