ಬೆಂಗಳೂರು| ಶಿಶು ಮರಣದರದಲ್ಲಿ ಸಣ್ಣ ಏರಿಕೆ; ರಾಜ್ಯ ಇನ್ನೂ ರಾಷ್ಟ್ರೀಯ ಸರಾಸರಿಗಿಂತ ಉತ್ತಮ

ಬೆಂಗಳೂರು: ಕಳೆದ ಒಂದು ದಶಕದಿಂದ ನಿರಂತರವಾಗಿ ಕುಸಿಯುತ್ತಿದ್ದ ಶಿಶು ಮರಣದರ (IMR) 2024ರಲ್ಲಿ ಕರ್ನಾಟಕದಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಭಾರತ ರಿಜಿಸ್ಟ್ರಾರ್ ಜನರಲ್ ಬಿಡುಗಡೆ ಮಾಡಿದ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ (SRS) ವರದಿ ತಿಳಿಸಿದೆ. ಬೆಂಗಳೂರು

ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರತಿ 1,000 ಜೀವಜನನಗಳಿಗೆ ಎಷ್ಟು ಮರಣಗಳು ಸಂಭವಿಸುತ್ತವೆ ಎಂಬುದೇ ಶಿಶು ಮರಣದರ. 2013ರಿಂದ 2023ರವರೆಗೆ ಕರ್ನಾಟಕದಲ್ಲಿ ಈ ಪ್ರಮಾಣವು 55% ಕುಸಿದು 14ಕ್ಕೆ ತಲುಪಿತ್ತು. ಆದರೆ 2024ರಲ್ಲಿ ಇದು ಸ್ವಲ್ಪ ಏರಿಕೆಯಾಗಿದ್ದು 15ಕ್ಕೆ ತಲುಪಿದೆ. ಆದಾಗ್ಯೂ, ದೇಶದ ಸರಾಸರಿ 24ಕ್ಕಿಂತ ರಾಜ್ಯದ ಪ್ರಮಾಣ ಕಡಿಮೆ ಇದ್ದು, ಉತ್ತಮ ಸಾಧನೆ ಮಾಡುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮುಂದುವರಿದಿದೆ.

ಈ ಏರಿಕೆಯನ್ನು ದೊಡ್ಡ ಹಿನ್ನಡೆಯಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. “ಆರೋಗ್ಯ ಸೇವೆಗಳ ಗುಣಮಟ್ಟ ಉತ್ತಮಗೊಂಡು ಮರಣದರ ಒಂದಂಕಿಯ ಮಟ್ಟದತ್ತ ಸಾಗುವಾಗ ಇಂತಹ ಸಣ್ಣ ಏರಿಳಿತಗಳು ಸಹಜ. ಇದನ್ನು ಒಟ್ಟು ಪ್ರವೃತ್ತಿಯ ಬದಲಾವಣೆ ಎಂದು ಕಾಣಬಾರದು,” ಎಂದು ಶಿಶು ಆರೋಗ್ಯ ಉಪನಿರ್ದೇಶಕ ಡಾ. ಬಸವರಾಜ್ ಬಿ. ಧಬಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ನೂತನ ಸಿಎಂ ಡಿಕೆ ಶಿವಕುಮಾರ್‌ಗೆ ಕಾನೂನು ಪ್ರಕರಣಗಳು ರಾಜಕೀಯವಾಗಿ ಸವಾಲಾಗಲಿವೆಯೇ?

ಗ್ರಾಮೀಣ – ನಗರ ಪ್ರದೇಶಗಳ ನಡುವೆ ವ್ಯತ್ಯಾಸ ಮುಂದುವರಿದಿದೆ. 2024ರಲ್ಲಿ ನಗರ ಪ್ರದೇಶಗಳಲ್ಲಿ ಶಿಶು ಮರಣದರ 11 ಆಗಿದ್ದರೆ, ಗ್ರಾಮೀಣ ಭಾಗಗಳಲ್ಲಿ ಇದು 17 ಆಗಿದೆ.

ಇದೇ ವೇಳೆ, ರಾಜ್ಯದ ಜನನದರವು ಮೂರನೇ ವರ್ಷವೂ ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ. 2024ರಲ್ಲಿ ಭಾರತದ ಜನನದರ 18.3 ಆಗಿದ್ದರೆ, ಕರ್ನಾಟಕದಲ್ಲಿ ಇದಕ್ಕಿಂತ ಕಡಿಮೆ ದಾಖಲಾಗಿದೆ. ಈ ಪ್ರವೃತ್ತಿ ರಾಜ್ಯವನ್ನು ಕೇರಳ ಮತ್ತು ತಮಿಳುನಾಡುಗಳಂತಹ ಕಡಿಮೆ ಜನನದರ ಹೊಂದಿರುವ ದಕ್ಷಿಣ ರಾಜ್ಯಗಳತ್ತ ಕರೆದೊಯ್ಯುತ್ತಿದೆ.

ನಗರ ಪ್ರದೇಶಗಳಲ್ಲಿ ಈ ಕುಸಿತ ಹೆಚ್ಚು ಸ್ಪಷ್ಟವಾಗಿದೆ. ನಗರ ಜನನದರ 2022ರ 14.5ರಿಂದ 2024ರಲ್ಲಿ 13.7ಕ್ಕೆ ಇಳಿದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ 16.8ರಿಂದ 15.9ಕ್ಕೆ ಇಳಿಕೆಯಾಗಿದೆ. ಬದಲಾಗುತ್ತಿರುವ ಜೀವನಶೈಲಿ, ತಡ ಮದುವೆಗಳು ಮತ್ತು ಸಣ್ಣ ಕುಟುಂಬಗಳತ್ತ ಒಲವು ಈ ಬದಲಾವಣೆಗೆ ಕಾರಣವೆಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನೊಂದೆಡೆ, ರಾಜ್ಯದ ಮರಣದರ 2024ರಲ್ಲಿ 7 ಆಗಿದ್ದು, ದೇಶದ ಸರಾಸರಿ 6.4ಕ್ಕಿಂತ ಹೆಚ್ಚು ಇದೆ. ಜನನ ಮತ್ತು ಮರಣದರಗಳ ಅಂತರದಿಂದ ಲೆಕ್ಕ ಹಾಕುವ ನೈಸರ್ಗಿಕ ಬೆಳವಣಿಗೆ ದರವೂ 2022ರ 8.4ರಿಂದ 2024ರಲ್ಲಿ 7.9ಕ್ಕೆ ಕುಸಿದಿದೆ.

“ಕೋವಿಡ್ ಅವಧಿಯಲ್ಲಿ ಮರಣಗಳು ಹೆಚ್ಚಾಗಿದ್ದು, ಜನನದರ ಕಡಿಮೆಯಾಗಿತ್ತು. ನಂತರದ ಅವಧಿಯಲ್ಲಿ ಕೆಲವು ಮರಣಗಳು ತಡವಾಗಿ ನೋಂದಾಯಿತವಾಗಿರುವ ಸಾಧ್ಯತೆ ಇದೆ. ಇದರಿಂದ 2024ರ ಮರಣದರದಲ್ಲಿ ಸ್ವಲ್ಪ ಏರಿಕೆ ಕಾಣಬಹುದು,” ಎಂದು ಮಾತೃ ಆರೋಗ್ಯ ಉಪನಿರ್ದೇಶಕ ಡಾ. ಎನ್. ರಾಜಕುಮಾರ್ ತಿಳಿಸಿದ್ದಾರೆ.

ಇದನ್ನೂ ನೋಡಿ: IPL 2026 | ಪ್ಲೇಆಫ್‌ ಪೈಪೋಟಿ: ನಾಲ್ಕು ತಂಡಗಳ ಪ್ಲಸ್‌, ಮೈನಸ್‌ ಮತ್ತು ಕಪ್‌ ಲೆಕ್ಕಾಚಾರ Janashakthi Media

Donate Janashakthi Media

Leave a Reply

Your email address will not be published. Required fields are marked *