ಬೆಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಗೃಹ ಬಳಕೆಯ ಅಡುಗೆ ಅನಿಲ (ಎಲ್ಪಿಜಿ) ದರಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿರುವುದರಿಂದಾಗಿ ಜನಸಾಮಾನ್ಯರ ಜೀವನದ ಮೇಲೆ ಭಾರೀ ಹೊರೆ ಉಂಟುಮಾಡಿದೆ. ಕೇಂದ್ರ ಸರ್ಕಾರ ತಕ್ಷಣವೇ ತೈಲ ಮತ್ತು ಅನಿಲ ದರಗಳನ್ನು ಇಳಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ ಎಂದು ಅಧ್ಯಕ್ಷ ಲವಿತ್ರ ವಸ್ತ್ರದ ಹಾಗೂ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿಕೆ ನೀಡಿದ್ದಾರೆ.
ಮೇ 25ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ 2.61 ರೂ ಮತ್ತು 2.71 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಮೂಲಕ ಎರಡೇ ವಾರದಲ್ಲಿ ಇಂಧನ ಬೆಲೆಗಳು ಲೀಟರ್ಗೆ 7.5 ರೂಪಾಯಿಯಷ್ಟು ತುಟ್ಟಿಯಾಗಿ ಪೆಟ್ರೋಲ್ 110, ಡಿಸೇಲ್ 95 ರೂಪಾಯಿ ಏರಿಕೆಯಾಗಿದ್ದು, ಇನ್ನೂ ಬೆಲೆ ಹೆಚ್ಚಳವಾಗುವ ಆತಂಕವಿದೆ. ಇಂಧನ ದರ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಹೆಚ್ಚಾಗಿ, ಅದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.
ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಬಡ, ಮಧ್ಯಮ ವರ್ಗ ಹಾಗೂ ಕಾರ್ಮಿಕ ಜನತೆ ಮತ್ತಷ್ಟು ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಅಡುಗೆ ಅನಿಲದ ಬೆಲೆ ಏರಿಕೆಯಿಂದ ಬಡ ಹಾಗೂ ಮದ್ಯಮ ವರ್ಗದ ಜನತೆಯ ಬದುಕು ಸಂಕಷ್ಟಕರವಾಗಿದೆ.
ಇದನ್ನೂ ಓದಿ: ಕೃಷ್ಣಾ ನೀರಿನ ಉತ್ತಮ ಬಳಕೆಗಾಗಿ ಕರ್ನಾಟಕ – ತೆಲಂಗಾಣ ಸಂಯುಕ್ತ ಯೋಜನೆ
ಅಲ್ಲದೇ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಕೊರತೆಯಾಗುತ್ತಿರುವುದು ಕೂಡ ಜನರಿಗೆ ಸಂಕಷ್ಟ ತಂದೊಡ್ಡಿದ್ದು, ಅನಿಶ್ಚಿತೆಯಲ್ಲಿ ಬದುಕುವಂತಾಗಿದೆ. ಜಮಸಾಮಾನ್ಯರಿಗೆ ಸಮರ್ಪಕವಾಗಿ ಅಡುಗೆ ಅನಿಲ ಹಾಗೂ ತೈಲ ದೊರೆಯುವಂತೆ ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಿದೆ.
ಸರ್ಕಾರಿ ಸ್ವಾಮ್ಯದ ತೈಲ ಪೂರೈಕೆ ಕಂಪನಿಗಳು ತಮ್ಮ ನಷ್ಟ ಸರಿದೂಗಿಸಲು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಾದ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಸಂಕಷ್ಟ ತಂದೊಡ್ಡಲಾಗುತ್ತಿದ್ದರೂ, ಸಮಸ್ಯೆ ಪರಿಹರಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರಕಾರ ಅದರಲ್ಲೂ ಪ್ರಧಾನ ಮತ್ರಿಗಳು ಆರ್ಥಿಕ ಮಿತವ್ಯಯ ಕುರಿತು ಜನತೆಗೆ ಕರೆ ನೀಡುತ್ತಿರುವುದನ್ನು ಡಿವೈಎಫ್ಐ ತೀವ್ರವಾಗಿ ಖಂಡಿಸುತ್ತದೆ.
ತೈಲ ಬೆಲೆ ಹೆಚ್ಚಳದಿಂದಾಗಿ ಸಾಮಾನ್ಯ ಜನರಿಗೆ ಬದುಕು ನಡೆಸುವುದೇ ದುಸ್ತರವಾಗಿದ್ದು, ಜನರ ಮೇಲೆ ತೆರಿಗೆ ಭಾರ ಹಾಕಿರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಹಿಂಪಡೆಯಬೇಕು. ಆ ಮೂಲಕ ಜನಪರ ನೀತಿಯನ್ನು ಅನುಸರಿಸಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ದರಗಳನ್ನು ತಕ್ಷಣವೇ ಕಡಿಮೆ ಮಾಡಬೇಕು.
ಜನರ ಬದುಕಿಗೆ ಸಂಬಂಧಿಸಿದ ಈ ಪ್ರಮುಖ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪೆಟ್ರೋಲ್-ಡೀಸೆಲ್ ಮೇಲಿನ ಮಾರಾಟ ತೆರಿಗೆ ಏರಿಕೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಲು ಕ್ರಮ ಕೈಗೊಳ್ಳದಿದ್ದರೆ, ಜನತೆ ತೀವ್ರವಾದ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಡಿವೈಎಫ್ಐ ರಾಜ್ಯ ಸಮಿತಿಯು ಎಚ್ಚರಿಸುತ್ತದೆ.
ಇದನ್ನೂ ನೋಡಿ: FIR ಎಂದರೆ ಏನು? ಯಾವಾಗ, ಹೇಗೆ ದಾಖಲಿಸಬೇಕು? ವಿಶ್ಲೇಷಣೆ : ಶಶಿಧರ, ವಕೀಲರುJanashakthi Media
