ಹಾಸನ: ರೈತ ವಿರೋಧಿ ಎಂದು ಆರೋಪಿಸಲ್ಪಡುವ ‘ಜಾನುವಾರು ವಧೆ ಹಾಗೂ ಮಾರಾಟ ನಿಷೇಧ ಕಾಯ್ದೆ–2020’ನ್ನು ವಾಪಸ್ ಪಡೆಯಬೇಕು ಹಾಗೂ ರೈತರು ತಮ್ಮ ಜಾನುವಾರುಗಳನ್ನು ಮುಕ್ತವಾಗಿ ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿವಿಧ ರೈತ, ದಲಿತ ಹಾಗೂ ಜನಪರ ಸಂಘಟನೆಗಳು ಮೇ 26ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್ಆರ್ಎಸ್), ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಹಾಗೂ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಕೃಷಿ ಕ್ಷೇತ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ರೈತರು ಹೈನುಗಾರಿಕೆಯನ್ನು ಅವಲಂಬಿಸಿ ಬದುಕು ಸಾಗಿಸುತ್ತಿದ್ದಾರೆ.
ಹಾಲು ಉತ್ಪಾದನೆಗಾಗಿ ಸಾಕುವ ಜರ್ಸಿ ಹಸುಗಳು ವಯಸ್ಸಾದ ಬಳಿಕ ಹಾಗೂ ಗಂಡು ಕರುಗಳಿಗೆ ಜನ್ಮ ನೀಡಿದ ಸಂದರ್ಭಗಳಲ್ಲಿ ಅವುಗಳನ್ನು ಸಾಕುವುದು ರೈತರಿಗೆ ಆರ್ಥಿಕ ಭಾರವಾಗುತ್ತದೆ. ಇಂತಹ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡುವ ಮೂಲಕ ರೈತರು ಸ್ವಲ್ಪ ಆದಾಯ ಗಳಿಸುತ್ತಿದ್ದರು. ಆದರೆ, ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಯಿಂದ ರೈತರು ತಮ್ಮ ಜಾನುವಾರುಗಳನ್ನು ಮುಕ್ತವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಇದನ್ನೂ ಓದಿ: ಬಕ್ರೀದ್ಗೂ ಮುನ್ನ ಗೋಹತ್ಯೆ ನಿಷೇಧ ಜಾರಿಗೆ PIL: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಕಾಯ್ದೆಯನ್ನು ಕೆಲವು ಸಂಘಟನೆಗಳು ದುರುಪಯೋಗಪಡಿಸಿಕೊಂಡು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವುದು ಹಾಗೂ ನೈತಿಕ ಪೊಲೀಸ್ಗಿರಿ ನಡೆಸುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು. ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತಾನು ಬಯಸಿದ ಧರ್ಮವನ್ನು ಅನುಸರಿಸುವ ಹಾಗೂ ಆಹಾರವನ್ನು ಆಯ್ಕೆಮಾಡುವ ಹಕ್ಕನ್ನು ನೀಡಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬಕ್ರೀದ್ ಹಬ್ಬದ ಹಿನ್ನೆಲೆ ಕುರ್ಬಾನಿಗೆ ಗೋವುಗಳನ್ನು ಬಳಸಬಾರದೆಂಬ ಜಿಲ್ಲಾಡಳಿತದ ಸೂಚನೆ ಅಲ್ಪಸಂಖ್ಯಾತ ಸಮುದಾಯದ ಆಹಾರ ಹಕ್ಕಿನ ಮೇಲಿನ ದಾಳಿ ಮಾತ್ರವಲ್ಲದೆ, ರೈತರ ಜೀವನೋಪಾಯಕ್ಕೂ ಹೊಡೆತ ನೀಡುತ್ತದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತವು ತನ್ನ ನಿಲುವುಗಳನ್ನು ಸಡಿಲಗೊಳಿಸಿ ರೈತರಿಗೆ ಜಾನುವಾರು ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಜೊತೆಗೆ ಧರ್ಮದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಶಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಕೆಆರ್ಆರ್ಎಸ್ ಜಿಲ್ಲಾ ಅಧ್ಯಕ್ಷ ಬಾಬು, ರಾಜ್ಯ ಉಪಾಧ್ಯಕ್ಷ ರವಿ ಆನೇಕೆರೆ, ಜಿಲ್ಲಾ ಕಾರ್ಯದರ್ಶಿ ಪವಿತ್ರ, ಕೆಪಿಆರ್ಎಸ್ ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ನವೀನ್ಕುಮಾರ್, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಟಿ.ಆರ್. ವಿಜಯ್ ಕುಮಾರ್, ಮಾದಿಗ ದಂಡೋರ ಹೋರಾಟ ಸಮಿತಿ ಮುಖಂಡ ರಾಜಶೇಖರ್ ಹುಲಿಕಲ್ ಸೇರಿದಂತೆ ಮುಬಷಿರ್ ಅಹಮದ್, ಅನ್ಸರ್, ಅರವಿಂದ್, ರಮೇಶ್ ಮತ್ತಿತರರು ಭಾಗವಹಿಸಿದ್ದರು.
ಇದನ್ನೂ ನೋಡಿ: ಭಾರತದ ಪ್ರಜಾಪ್ರಭುತ್ವ ಮತ್ತು ನಾರ್ವೆ ಪತ್ರಕರ್ತರು:ಅಂಗೈ ಹುಣ್ಣಿಗೆ ನಿಲುಗನ್ನಡಿ ಬೇಕೆ? Janashakthi Media
