ಅಟ್ಟಪ್ಪಾಡಿ ಗುಂಪು ಹತ್ಯೆ ಪ್ರಕರಣ: 12 ಮಂದಿಗೆ ಜೀವಾವಧಿ ಶಿಕ್ಷೆ ಹೆಚ್ಚಿಸಿದ ಹೈಕೋರ್ಟ್‌

ಮುಖ್ಯ ಆರೋಪಿಗೆ ಬಿಡುಗಡೆ, ಕುಟುಂಬದ ಅಸಮಾಧಾನ
ಪಾಲಕ್ಕಾಡ್: ಕೇರಳ ಹಾಗೂ ದೇಶವನ್ನೇ ಬೆಚ್ಚಿಬೀಳಿಸಿದ ಅಟ್ಟಪ್ಪಾಡಿ ಪ್ರದೇಶದ ಆದಿವಾಸಿ ಯುವಕ ಮಧು ಹತ್ಯೆ ಪ್ರಕರಣದಲ್ಲಿ, 12 ಆರೋಪಿಗಳ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಹೆಚ್ಚಿಸಿದ ಕೇರಳ ಹೈಕೋರ್ಟ್ ತೀರ್ಪಿನ ನಂತರ, ಮಧು ಕುಟುಂಬವು ಮಿಶ್ರ ಭಾವನೆಗಳೊಂದಿಗೆ ಕಣ್ಣೀರಿಟ್ಟಿದೆ. ಅಟ್ಟಪ್ಪಾಡಿ

ಕಠಿಣ ಶಿಕ್ಷೆ ವಿಧಿಸಿರುವುದಕ್ಕೆ ಸಂತೋಷ ಹಾಗೂ ನಿರಾಳತೆಯನ್ನು ವ್ಯಕ್ತಪಡಿಸಿದ ಮಧುವಿನ ತಾಯಿ ಮಲ್ಲಿ ಮತ್ತು ಅಕ್ಕ ಸರಸು, ಪ್ರಮುಖ ಆರೋಪಿ ಹುಸೇನ್ ಬಿಡುಗಡೆಗೊಂಡಿರುವುದಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.

“ನ್ಯಾಯಾಲಯದ ತೀರ್ಪಿನಿಂದ ನಮಗೆ ಸಂತೋಷವಾಗಿದೆ. ಈ ಹೋರಾಟದಲ್ಲಿ ಅನೇಕರು ನಮ್ಮೊಂದಿಗೆ ನಿಂತಿದ್ದರು. ನಾನು ಒಬ್ಬಳೇ ಇದನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ,” ಎಂದು ಮಲ್ಲಿ ಭಾವುಕರಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ವೇಳಾಪಟ್ಟಿ ಪ್ರಕಟ: ಜೂನ್ 18ರಂದು ಮತದಾನ

ಹೋರಾಟದ ಅವಧಿಯಲ್ಲಿ ತಮ್ಮ ಜೊತೆ ನಿಂತ ಸರ್ಕಾರ ಸೇರಿದಂತೆ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು. “ಆದರೆ ಪ್ರಮುಖ ಆರೋಪಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ನಾವು ನಿರೀಕ್ಷಿಸಲಿಲ್ಲ. ಯಾಕೆ ಅವನನ್ನು ಬಿಡಲಾಯಿತೋ ತಿಳಿಯುತ್ತಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದರು. ಸರಸು ಕೂಡ ಪ್ರಮುಖ ಆರೋಪಿಯ ಬಿಡುಗಡೆಗೆ ವಿರುದ್ಧವಾಗಿ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

ಮನಾರ್ಕಾಡ್ ನ್ಯಾಯಾಲಯವು ವಿಧಿಸಿದ್ದ ಏಳು ವರ್ಷಗಳ ಶಿಕ್ಷೆಯನ್ನು ಹೈಕೋರ್ಟ್ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿ ಹೆಚ್ಚಿಸಿದೆ. ಆರೋಪಿಗಳ ಬಿಡುಗಡೆ ಕೋರಿ ಹಾಗೂ ಸರ್ಕಾರವು ಕಠಿಣ ಶಿಕ್ಷೆ ಕೋರಿ ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತ್ತು.

ಮಧು ಕುಟುಂಬದ ನಿರಂತರ ಮನವಿಗಳ ಹಿನ್ನೆಲೆ, ಪ್ರಕರಣದ ಗಂಭೀರತೆಗೆ ತಕ್ಕ ಶಿಕ್ಷೆ ನೀಡಲಾಗಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು.

2018ರ ಫೆಬ್ರವರಿಯಲ್ಲಿ, ಅಟ್ಟಪ್ಪಾಡಿಯ ಆದಿವಾಸಿ ಯುವಕನಾದ ಮಧುವನ್ನು ಆಹಾರ ವಸ್ತು ಕಳ್ಳತನದ ಆರೋಪದ ಮೇಲೆ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿ ಅವಮಾನಿಸಿತ್ತು. ಕಟ್ಟಿ ಹಾಕಿ ಹಲ್ಲೆಗೊಳಪಡಿಸಿದ ಅವರ ಚಿತ್ರಗಳು ದೇಶದಾದ್ಯಂತ ಆಕ್ರೋಶ ಹುಟ್ಟಿಸಿದ್ದವು. ಈ ಘಟನೆ ಗುಂಪು ಹಿಂಸಾಚಾರ ಮತ್ತು ಆದಿವಾಸಿ ಸಮುದಾಯ ಎದುರಿಸುವ ಸಾಮಾಜಿಕ ಅನ್ಯಾಯದ ಸಂಕೇತವಾಗಿ ಪರಿಣಮಿಸಿತ್ತು.

ಹೈಕೋರ್ಟ್ ಅಭಿಪ್ರಾಯಗಳು:

ಮಧುವಿನ ಸಾವು, ಸಂವಿಧಾನದ ಆದರ್ಶಗಳು ಮತ್ತು ಸಮಾಜದ ವಾಸ್ತವಿಕತೆಯ ನಡುವಿನ ಅಂತರವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಾಕ್ಷಿಗಳ ಹೇಳಿಕೆಗಳ ಸಂಪೂರ್ಣ ಕುಸಿತವು ಸಣ್ಣ ವಿಷಯವಲ್ಲ ಎಂದು ನ್ಯಾಯಾಲಯ ಗಮನಿಸಿದೆ.

ಈ ಘಟನೆ ಒಂದು ಏಕಾಂಗಿಯ ಘಟನೆ ಅಲ್ಲ. ಆಹಾರ ಕಳ್ಳತನದ ಆರೋಪದ ಮೇರೆಗೆ ಒಬ್ಬ ಆದಿವಾಸಿ ವ್ಯಕ್ತಿಯನ್ನು ಹಿಡಿದು, ಶಿಕ್ಷಿಸಿ, ಸಾರ್ವಜನಿಕವಾಗಿ ಅವಮಾನಿಸಲು ತಮ್ಮಲ್ಲಿ ಅಧಿಕಾರವಿದೆ ಎಂಬ ಭಾವನೆ ಹೊಂದಿದ್ದ ಸಾಮಾಜಿಕ ವಾತಾವರಣದ ಫಲ ಇದಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಟ್ಟಪ್ಪಾಡಿಯ ಆದಿವಾಸಿಗಳು ನಿಯಂತ್ರಿಸಬೇಕಾದ ಅಥವಾ ಶಿಕ್ಷಿಸಬೇಕಾದ ಸಮಸ್ಯೆಯಲ್ಲ. ಅವರು ಈ ದೇಶದ ನಾಗರಿಕರು; ಸಂವಿಧಾನದ ರಕ್ಷಣೆಯಡಿ ಸಮಾನ ಗೌರವಕ್ಕೆ ಅರ್ಹರು. ಪ್ರತಿಯೊಬ್ಬರಿಗೂ ದೊರೆಯಬೇಕಾದ ಮಾನವೀಯತೆ ಮತ್ತು ಸಹಾನುಭೂತಿ ಅವರಿಗೆ ಸಹ ಸಲ್ಲಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮಧುವಿನ ಸಾವು, ಆ ಭರವಸೆಯನ್ನು ಸಾಕಾರಗೊಳಿಸಲು ಸಮಾಜ ಇನ್ನೂ ಎಷ್ಟು ದೂರವಿದೆ ಎಂಬುದನ್ನು ತೋರಿಸುವ ಕಠಿಣ ಸತ್ಯವಾಗಿದೆ ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ನೋಡಿ: ದಲಿತ ಕುಟುಂಬಗಳ ಜಮೀನಿಗೆ ಅರಣ್ಯ ಇಲಾಖೆ ಕಣ್ಣು? ಕಾಂಪೌಂಡ್ ವಾಲ್‌ ನಿರ್ಮಾಣ ತಡೆದ ರೈತ ಸಂಘ Janashakthi Media

Donate Janashakthi Media

Leave a Reply

Your email address will not be published. Required fields are marked *