ನವದೆಹಲಿ: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG 2026) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (CBI) ಇದೀಗ ವಿದ್ಯಾರ್ಥಿಯೊಬ್ಬರ ಪೋಷಕರನ್ನೇ ಬಂಧಿಸಿದ್ದು, ಸೋರಿಕೆ ಜಾಲದಲ್ಲಿ ವೈದ್ಯರು, ಕೋಚಿಂಗ್ ಸಂಪರ್ಕಗಳು, ಮಧ್ಯವರ್ತಿಗಳು ಹಾಗೂ ಶಿಕ್ಷಣ ವಲಯದ ಕೆಲವರ ಪಾತ್ರವೂ ಇರಬಹುದೆಂಬ ಅನುಮಾನ ಹೆಚ್ಚಾಗಿದೆ. NEET
ಮಹಾರಾಷ್ಟ್ರದ ಲಾತೂರ್ ಮೂಲದ ಮಕ್ಕಳ ವೈದ್ಯ ಡಾ. ಮನೋಜ್ ಶಿರೂರೆ ಅವರನ್ನು ಸಿಬಿಐ ಬಂಧಿಸಿದೆ. ತಮ್ಮ ಮಗನಿಗೆ ವೈದ್ಯಕೀಯ ಕಾಲೇಜು ಪ್ರವೇಶ ಕಲ್ಪಿಸುವ ಉದ್ದೇಶದಿಂದ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಹಣ ನೀಡಿ ಪಡೆದುಕೊಂಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮೊದಲ ಪೋಷಕರಾದ ಕಾರಣ ತನಿಖೆಗೆ ಇದು ಮಹತ್ವದ ತಿರುವು ನೀಡಿದೆ.
ಈ ಪ್ರಕರಣದ ತನಿಖೆ ವೇಳೆ ಸಿಬಿಐಗೆ ಹಲವು ಆಘಾತಕಾರಿ ಮಾಹಿತಿಗಳು ಲಭ್ಯವಾಗಿವೆ. ಮಹಾರಾಷ್ಟ್ರ, ರಾಜಸ್ಥಾನ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಜಾಲ ಸಕ್ರಿಯವಾಗಿತ್ತು ಎನ್ನಲಾಗಿದೆ. ಕೆಲ ಮಧ್ಯವರ್ತಿಗಳು ವಿದ್ಯಾರ್ಥಿಗಳ ಕುಟುಂಬಗಳೊಂದಿಗೆ ಸಂಪರ್ಕ ಸಾಧಿಸಿ “ಖಚಿತ ಯಶಸ್ಸು” ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ ಶಂಕೆಯಿದೆ. ಈಗಾಗಲೇ ನಾಶಿಕ್, ಪುಣೆ, ಜೈಪುರ ಮತ್ತು ಗುರುಗ್ರಾಮ್ ಭಾಗಗಳಲ್ಲಿ ದಾಳಿಗಳು ನಡೆದಿವೆ.
ಇದನ್ನೂ ಓದಿ : ವಿದ್ಯಾರ್ಥಿಗಳ ಕನಸ್ಸನ್ನು ವ್ಯಾಪಾರವಾಗಿಸಿರುವ “ಎಗ್ಜಾಮ್ ಮಾಫಿಯಾ”
ಪುಣೆಯ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಈ ಹಗರಣದಲ್ಲಿ ಪ್ರಮುಖ ಕೊಂಡಿಯಾಗಿದ್ದಾರೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಪರೀಕ್ಷಾ ಪ್ರಕ್ರಿಯೆಗೆ ಸಂಬಂಧಿಸಿದ್ದ ಅವರ ಮೂಲಕ ಪ್ರಶ್ನೆಪತ್ರಿಕೆಯ ಭಾಗಗಳು ಹೊರಬಂದಿರಬಹುದು ಎಂದು ಹೇಳಲಾಗುತ್ತಿದೆ. ಕೆಲ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ವಿಶೇಷ ತರಗತಿಗಳಲ್ಲಿ ಪ್ರಶ್ನೆಗಳು ಮತ್ತು ಉತ್ತರಗಳ ಮಾದರಿಯನ್ನು ನೀಡಲಾಗಿದ್ದು, ನಂತರ ಅವು ನಿಜವಾದ ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗಿದ್ದವು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಹಗರಣದ ಹಿನ್ನೆಲೆದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 3ರಂದು ನಡೆದಿದ್ದ NEET-UG 2026 ಪರೀಕ್ಷೆಯನ್ನು ರದ್ದುಗೊಳಿಸಿತ್ತು. ದೇಶದಾದ್ಯಂತ ಸುಮಾರು 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆ ರದ್ದಾದ ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮರುಪರೀಕ್ಷೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್ಟಿಎ ತಿಳಿಸಿದೆ.
ಇದೀಗ ಸಿಬಿಐ ತನಿಖೆ ಹಣದ ವ್ಯವಹಾರಗಳು, ಮೊಬೈಲ್ ಚಾಟ್ಗಳು, ಡಿಜಿಟಲ್ ದಾಖಲೆಗಳು ಮತ್ತು ಕೋಚಿಂಗ್ ಜಾಲಗಳತ್ತ ವಿಸ್ತರಿಸಿದೆ. ಕೆಲವು ಎನ್ಟಿಎ ಸಂಪರ್ಕಗಳ ಮೇಲೂ ಅನುಮಾನ ವ್ಯಕ್ತವಾಗಿದ್ದು, ಪ್ರಶ್ನೆಪತ್ರಿಕೆ ಮುದ್ರಣ ಮತ್ತು ಸಾಗಣೆ ಪ್ರಕ್ರಿಯೆಯಲ್ಲಿಯೂ ಲೋಪಗಳಿದ್ದವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ನೋಡಿ : ನೀಟ್ ಹಗರಣ | JPC ಶಿಫಾರಸ್ಸು ಒಪ್ಪಲು ನಿರಾಕರಿಸಿದ ಧರ್ಮೇಂದ್ರ ಪ್ರಧಾನ
