ವಿದ್ಯಾರ್ಥಿಗಳ ಕನಸ್ಸನ್ನು ವ್ಯಾಪಾರವಾಗಿಸಿರುವ “ಎಗ್ಜಾಮ್ ಮಾಫಿಯಾ”

ಒಂದು ದೇಶದ ಭವಿಷ್ಯ ಅದರ ವಿದ್ಯಾರ್ಥಿಗಳ ತರಗತಿ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎನ್ನಲಾಗುತ್ತದೆ. ಆದರೆ ಇಂದು ಭಾರತದ ಶಿಕ್ಷಣ ವ್ಯವಸ್ಥೆಯೊಳಗೆ ಮತ್ತೊಂದು ಭಯಾನಕ ವಾಸ್ತವ ಬೆಳೆಯುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಕೋಚಿಂಗ್ ಮಾಫಿಯಾ ಮತ್ತು ಕೋಟ್ಯಾಂತರ ರೂಪಾಯಿ ವ್ಯವಹಾರಗಳ ಕತ್ತಲೆ ಜಾಲ. ವೈದ್ಯರಾಗಬೇಕೆಂಬ ಕನಸು ಹೊತ್ತ ವಿದ್ಯಾರ್ಥಿ ರಾತ್ರಿಯಿಡೀ ಓದುತ್ತಿದ್ದರೆ, ಇನ್ನೊಂದು ಕಡೆ ಹಣದ ಬಲದಿಂದ ಪ್ರಶ್ನೆಪತ್ರಿಕೆ ಖರೀದಿಸುವ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಕೇವಲ ಒಂದು ಪರೀಕ್ಷೆಯ ಹಗರಣವಲ್ಲ; ಅದು ದೇಶದ ಶಿಕ್ಷಣ ವ್ಯವಸ್ಥೆಯ ನೈತಿಕ ಕುಸಿತ, ಆಡಳಿತ ವೈಫಲ್ಯ ಮತ್ತು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ನಡೆಯುತ್ತಿರುವ ಸಂಘಟಿತ ದಾಳಿಯ ಸಂಕೇತವಾಗಿದೆ.

– ಗುರುರಾಜ ದೇಸಾಯಿ

ಮೇ 3ರಂದು ನಡೆದಿದ್ದ NEET UG 2026 ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಪಡಿಸಿರುವುದು ದೇಶದ ಶಿಕ್ಷಣ ವ್ಯವಸ್ಥೆಗೆ ದೊಡ್ಡ ಕಳಂಕವಾಗಿದೆ. ಪರೀಕ್ಷೆಗಳ ನಿರ್ವಹಣೆಯಲ್ಲಿ ಆರಂಭದಿಂದಲೇ ವಿಫಲತೆಯ ಹೆಸರಾಗಿರುವ NTA ಮತ್ತೊಮ್ಮೆ ತನ್ನ ಅಸಮರ್ಥತೆಯನ್ನು ಸಾಬೀತುಪಡಿಸಿದೆ.

ವರದಿಗಳ ಪ್ರಕಾರ, ಒಟ್ಟು 720 ಅಂಕಗಳಲ್ಲಿ ಸುಮಾರು 600 ಅಂಕಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಸೋರಿಕೆಯಾಗಿರುವ ಅನುಮಾನ ವ್ಯಕ್ತವಾಗಿದೆ. 180 ಪ್ರಶ್ನೆಗಳ ಪೈಕಿ ಸುಮಾರು 15 ಪ್ರಶ್ನೆಗಳು ಮುಂಚಿತವಾಗಿಯೇ ಹರಿದಾಡಿದ್ದವು ಎನ್ನಲಾಗಿದ್ದು, ರಸಾಯನಶಾಸ್ತ್ರ ವಿಭಾಗದ 120ಕ್ಕೂ ಹೆಚ್ಚು ಪ್ರಶ್ನೆಗಳು ಪದಶಃ ಸೋರಿಕೆಯಾಗಿದ್ದವೆಂಬ ಆರೋಪಗಳು ಕೇಳಿಬಂದಿವೆ. ಇದು ಪರೀಕ್ಷೆಯ ವಿಶ್ವಾಸಾರ್ಹತೆಯನ್ನೇ ಧ್ವಂಸಗೊಳಿಸಿದೆ.

ಇದನ್ನೂ ಓದಿ: ನೀಟ್ ಪರೀಕ್ಷೆ ನಡೆಸುವಲ್ಲಿ ಪರೀಕ್ಷಾ ಸಂಸ್ಥೆ ವಿಫಲ; ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಕಳೆದ ಒಂದು ದಶಕದ ಪ್ರಶ್ನೆಪತ್ರಿಕೆ ಸೋರಿಕೆಗಳ ಕಪ್ಪು ಇತಿಹಾಸ

ಕಳೆದ 12 ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಸಂಖ್ಯೆ ಆತಂಕಕಾರಿ ಮಟ್ಟಕ್ಕೇರಿದೆ. ರೈಲ್ವೆ ನೇಮಕಾತಿ ಪರೀಕ್ಷೆಗಳು, ಪೊಲೀಸ್ ನೇಮಕಾತಿ ಪರೀಕ್ಷೆಗಳು, ಶಿಕ್ಷಕರ ಅರ್ಹತಾ ಪರೀಕ್ಷೆಗಳು, ಬ್ಯಾಂಕಿಂಗ್ ಪರೀಕ್ಷೆಗಳು, ಸೈನಿಕ ನೇಮಕಾತಿ ಪರೀಕ್ಷೆಗಳು, ರಾಜ್ಯ ಪಿಎಸ್‌ಸಿ ಪರೀಕ್ಷೆಗಳು, NEET, JEE ಸೇರಿದಂತೆ ನೂರಾರು ಸ್ಪರ್ಧಾತ್ಮಕ ಪರೀಕ್ಷೆಗಳು ಸೋರಿಕೆ ಆರೋಪಗಳಿಂದ ಕಲುಷಿತವಾಗಿವೆ.

ಹಿಂದೆ ಒಂದು ರಾಜ್ಯ ಅಥವಾ ಒಂದು ಪರೀಕ್ಷೆಗೆ ಸೀಮಿತವಾಗಿದ್ದ ಈ ಸಮಸ್ಯೆ, ಇಂದು ರಾಷ್ಟ್ರೀಯ ಮಟ್ಟದ ಸಂಘಟಿತ ಅಪರಾಧವಾಗಿ ರೂಪುಗೊಂಡಿದೆ. ಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಅಪರೂಪದ ಘಟನೆ ಅಲ್ಲ; ಪರೀಕ್ಷಾ ವ್ಯವಸ್ಥೆಯೊಳಗೆ ಗೂಡಿಕೊಂಡಿರುವ ಭ್ರಷ್ಟ ಜಾಲದ ಭಾಗವಾಗಿ ಮಾರ್ಪಟ್ಟಿದೆ.

ಕೆಲವು ವರದಿಗಳ ಪ್ರಕಾರ, ಕಳೆದ ಒಂದು ದಶಕದಲ್ಲಿ ದೇಶದಲ್ಲಿ 80ಕ್ಕೂ ಹೆಚ್ಚು ಪ್ರಮುಖ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸರ್ಕಾರಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳು ವಿವಾದಕ್ಕೆ ಸಿಲುಕಿವೆ.

ಕೆಲವೆಡೆ ಪರೀಕ್ಷೆಗಳು ರದ್ದುಪಡಿಸಲ್ಪಟ್ಟಿವೆ; ಇನ್ನೂ ಕೆಲವೆಡೆ ವರ್ಷಗಳ ನಂತರ ಪ್ರಕರಣಗಳು ಬಯಲಿಗೆ ಬಂದಿವೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣದಿಂದ ಪರೀಕ್ಷೆಗಳು ಮುಂದೂಡಲ್ಪಟ್ಟಾಗ ಅದರ ನೇರ ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳ ಜೀವನದ ಮೇಲೆ ಬೀಳುತ್ತದೆ. ತಿಂಗಳುಗಳ ಕಾಲ, ಕೆಲವೊಮ್ಮೆ ವರ್ಷಗಳ ಕಾಲ ಓದಿದ ವಿದ್ಯಾರ್ಥಿಗಳು ಮತ್ತೆ ಶೂನ್ಯದಿಂದ ಆರಂಭಿಸಬೇಕಾಗುತ್ತದೆ.

ಈ ಹಗರಣಗಳ ಪರಿಣಾಮ ಕೇವಲ ಪರೀಕ್ಷಾ ವ್ಯವಸ್ಥೆಗೆ ಮಾತ್ರ ಸೀಮಿತವಾಗಿಲ್ಲ; ಅದು ಸಮಾಜದ ವಿಶ್ವಾಸವನ್ನೇ ಕುಸಿಯುವಂತೆ ಮಾಡುತ್ತಿದೆ. ಪ್ರಾಮಾಣಿಕವಾಗಿ ಓದುವ ವಿದ್ಯಾರ್ಥಿಗಳಲ್ಲಿ “ಶ್ರಮಕ್ಕಿಂತ ಹಣ ಮತ್ತು ಸಂಪರ್ಕಗಳೇ ಮುಖ್ಯವೇ?” ಎಂಬ ನಿರಾಶೆ ಮೂಡುತ್ತಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿ, ಉಳಿತಾಯ ಖರ್ಚು ಮಾಡಿ, ಕೋಚಿಂಗ್ ಕೇಂದ್ರಗಳಿಗೆ ಲಕ್ಷಾಂತರ ರೂಪಾಯಿ ನೀಡುತ್ತಿರುವಾಗ, ಇನ್ನೊಂದು ಕಡೆ ಅಕ್ರಮ ಜಾಲಗಳು ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಿ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿವೆ. ಶಿಕ್ಷಣವು ಸಮಾನ ಅವಕಾಶದ ಹಕ್ಕಾಗಿರಬೇಕಾದ ದೇಶದಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆಗಳು ಅದನ್ನು ಹಣದ ಆಟವನ್ನಾಗಿ ಪರಿವರ್ತಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.

“ಎಗ್ಜಾಮ್ ಮಾಫಿಯಾ” ಹೇಗೆ ಕೆಲಸ ಮಾಡುತ್ತದೆ?

ಪ್ರಶ್ನೆಪತ್ರಿಕೆ ಸೋರಿಕೆಯ ಜಾಲ ಸಾಮಾನ್ಯ ಅಪರಾಧವಲ್ಲ; ಇದು ಅತ್ಯಂತ ಸಂಘಟಿತ, ಬಹುಪದರಗಳ ಭ್ರಷ್ಟ ಜಾಲ. ಮುದ್ರಣ ಕೇಂದ್ರಗಳು, ಪರೀಕ್ಷಾ ಸಂಯೋಜಕರು, ತಾಂತ್ರಿಕ ಸಿಬ್ಬಂದಿ, ಕೋಚಿಂಗ್ ಸೆಂಟರ್ ಮಾಲೀಕರು, ಮಧ್ಯವರ್ತಿಗಳು, ಸೈಬರ್ ತಜ್ಞರು ಮತ್ತು ರಾಜಕೀಯ ಸಂಪರ್ಕ ಹೊಂದಿದ ಗುಂಪುಗಳು ಸೇರಿ ಕಾರ್ಯನಿರ್ವಹಿಸುವ “ಎಗ್ಜಾಮ್ ಮಾಫಿಯಾ” ಇಂದು ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಆಕ್ರಮಿಸಿದೆ.

ಈ ಜಾಲವು ಕೇವಲ ಪ್ರಶ್ನೆಪತ್ರಿಕೆ ಸೋರಿಕೆಗೆ ಮಾತ್ರ ಸೀಮಿತವಿಲ್ಲ; ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಸಹಾಯ, ಡಮ್ಮಿ ಅಭ್ಯರ್ಥಿಗಳು, ಉತ್ತರ ಕೀ ಮಾರಾಟ, ಫಲಿತಾಂಶ ಮ್ಯಾನಿಪ್ಯುಲೇಷನ್ ಸೇರಿದಂತೆ ಹಲವು ಹಂತಗಳಲ್ಲಿ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ ಪ್ರಶ್ನೆಪತ್ರಿಕೆ ಸೋರಿಕೆ ಪರೀಕ್ಷೆಗೆ ಕೆಲ ದಿನಗಳ ಮುಂಚೆಯೇ ಆರಂಭವಾಗುತ್ತದೆ. ಪ್ರಶ್ನೆಪತ್ರಿಕೆ ತಯಾರಿ, ಮುದ್ರಣ, ಪ್ಯಾಕಿಂಗ್ ಮತ್ತು ಸಾಗಣೆ ಪ್ರಕ್ರಿಯೆಯಲ್ಲಿನ ಭದ್ರತಾ ಲೋಪಗಳನ್ನು ಬಳಸಿಕೊಂಡು ಪ್ರತಿಗಳನ್ನು ಹೊರತೆಗೆದುಕೊಳ್ಳಲಾಗುತ್ತದೆ. ನಂತರ ಮಧ್ಯವರ್ತಿಗಳ ಮೂಲಕ ಆಯ್ದ ಕೋಚಿಂಗ್ ಸೆಂಟರ್‌ಗಳು ಮತ್ತು “ವಿಐಪಿ ಅಭ್ಯರ್ಥಿಗಳು”ವರೆಗೆ ತಲುಪಿಸಲಾಗುತ್ತದೆ.

ಪರೀಕ್ಷೆಗೆ ಕೆಲ ಗಂಟೆಗಳ ಮೊದಲು ಟೆಲಿಗ್ರಾಂ, ವಾಟ್ಸಪ್ ಮತ್ತು ಡಾರ್ಕ್ ವೆಬ್ ಜಾಲತಾಣಗಳ ಮೂಲಕ ಪ್ರಶ್ನೆಪತ್ರಿಕೆ ಹರಡಲಾಗುತ್ತದೆ. ಕೆಲವೆಡೆ “ಗ್ಯಾರಂಟಿ ಪ್ಯಾಕೇಜ್” ಎಂಬ ಹೆಸರಿನಲ್ಲಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀಗಳನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಆತಂಕ ಮತ್ತು ಪೋಷಕರ ನಿರಾಶೆಯನ್ನು ದುರುಪಯೋಗಪಡಿಸಿಕೊಂಡು ಈ ಜಾಲ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದೆ.

ಈ ಬಾರಿ NEET ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೆಲವು ಮಾಧ್ಯಮ ವರದಿಗಳು ಮತ್ತು ತನಿಖಾ ಮಾಹಿತಿಗಳ ಪ್ರಕಾರ, ಪ್ರಶ್ನೆಪತ್ರಿಕೆಯ ಅನಧಿಕೃತ ಪ್ರವೇಶಕ್ಕಾಗಿ ಅಭ್ಯರ್ಥಿಗಳಿಂದ ₹40 ಲಕ್ಷದಿಂದ ₹90 ಲಕ್ಷದವರೆಗೆ ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ವೈದ್ಯಕೀಯ ಸೀಟು ಪಡೆಯಬೇಕೆಂಬ ಕನಸಿನ ಹೆಸರಿನಲ್ಲಿ ಕೆಲವು ಕುಟುಂಬಗಳು ಜೀವನಪೂರ್ತಿ ಉಳಿತಾಯವನ್ನೇ ಖರ್ಚು ಮಾಡುತ್ತಿವೆ.

ಮಧ್ಯಮ ವರ್ಗದ ಕುಟುಂಬಗಳು ಮಕ್ಕಳ ಭವಿಷ್ಯಕ್ಕಾಗಿ ಸಾಲ ಮಾಡಿ ಕೋಚಿಂಗ್ ಕೇಂದ್ರಗಳಿಗೆ ಹಣ ಸುರಿಸುತ್ತಿರುವಾಗ, ಇನ್ನೊಂದು ಕಡೆ ಪ್ರಶ್ನೆಪತ್ರಿಕೆ ಖರೀದಿಸುವ ಕಪ್ಪು ಮಾರುಕಟ್ಟೆ ಬೆಳೆಯುತ್ತಿರುವುದು ಅತ್ಯಂತ ಭಯಾನಕ ಬೆಳವಣಿಗೆ. ಶಿಕ್ಷಣ ವ್ಯವಸ್ಥೆಯೊಳಗೆ ಹಣ, ಸಂಪರ್ಕ ಮತ್ತು ಅಕ್ರಮದ ಜಾಲ ಬಲವಾಗುತ್ತಾ ಹೋದರೆ, ಪ್ರಾಮಾಣಿಕವಾಗಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ನ್ಯಾಯಯುತ ಸ್ಪರ್ಧೆಯ ಮೇಲಿನ ನಂಬಿಕೆ ಸಂಪೂರ್ಣ ಕುಸಿಯುವ ಅಪಾಯ ಎದುರಾಗಿದೆ.

ಸೋರಿಕೆಯಾಗಿದ್ದು ಹೇಗೆ?

NEET UG 2026 ಪ್ರಶ್ನೆಪತ್ರಿಕೆ ಸೋರಿಕೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿರುವ ಭದ್ರತಾ ದೌರ್ಬಲ್ಯವನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ. ಪ್ರಾಥಮಿಕ ತನಿಖೆಗಳ ಪ್ರಕಾರ, ನಾಸಿಕ್‌ನ ಸರಕಾರಿ ಮುದ್ರಣಾಲಯದಿಂದಲೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನೇ ಪ್ರಶ್ನೆಪತ್ರಿಕೆಯನ್ನು ಅಕ್ರಮ ಜಾಲಕ್ಕೆ ರವಾನಿಸಿದ್ದಾನೆ ಎನ್ನಲಾಗುತ್ತಿದೆ.

ಪರೀಕ್ಷಾ ಅಕ್ರಮ ಜಾಲದ ಮೂಲಕ ಪ್ರಶ್ನೆಪತ್ರಿಕೆ ಮೊದಲಿಗೆ ಗುರುಗ್ರಾಮದಲ್ಲಿದ್ದ ವೈದ್ಯನೊಬ್ಬನ ಕೈ ಸೇರಿದೆ. ಅಲ್ಲಿಂದ ರಾಜಸ್ಥಾನದ ಜೈಪುರ ಮೂಲದ ಖಾತಿಕ್ ಎಂಬಾತ ಅದನ್ನು ಖರೀದಿಸಿದ್ದಾನೆ. ನಂತರ ನೀಟ್ ಕೋಚಿಂಗ್ ಸೆಂಟರ್‌ಗಳೊಂದಿಗೆ ಸಂಪರ್ಕ ಹೊಂದಿದ್ದ ಸಿಕರ್‌ನ ರಾಕೇಶ್ ಕುಮಾರ್‌ಗೆ ಪ್ರಶ್ನೆಪತ್ರಿಕೆ ಮಾರಾಟವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಅಲ್ಲಿಂದ ದೇಶದ ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ನೆಟ್ವರ್ಕ್ ಮೂಲಕ ಪ್ರಶ್ನೆಪತ್ರಿಕೆ ಹರಡಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.

ಕೋಚಿಂಗ್ ಸೆಂಟರ್ ಸಲಹೆಗಾರನಾಗಿದ್ದ ರಾಕೇಶ್ ಕುಮಾರ್ ಮೊದಲಿಗೆ ಕೇರಳದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜಸ್ಥಾನ ಮೂಲದ ಎಂಬಿಬಿಎಸ್ ವಿದ್ಯಾರ್ಥಿಗೆ ₹30 ಸಾವಿರಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಆ ವಿದ್ಯಾರ್ಥಿ ಪ್ರಶ್ನೆಪತ್ರಿಕೆಯನ್ನು ಸಿಕರ್‌ನಲ್ಲಿದ್ದ ತನ್ನ ತಂದೆಗೆ ಕಳುಹಿಸಿ, ಪಿಜಿ ವಸತಿಗೃಹಗಳಲ್ಲಿ ತಂಗಿದ್ದ ನೀಟ್ ಅಭ್ಯರ್ಥಿಗಳಿಗೆ ಹಂಚುವಂತೆ ಸೂಚಿಸಿದ್ದಾನೆ.

ತನಿಖೆಯ ವೇಳೆ ಸೋರಿಕೆಯಾದ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು 281 ಪ್ರಶ್ನೆಗಳಿದ್ದು, ಅವುಗಳಲ್ಲಿ ಜೀವಶಾಸ್ತ್ರ ವಿಭಾಗದ 90 ಪ್ರಶ್ನೆಗಳು ಹಾಗೂ ರಸಾಯನಶಾಸ್ತ್ರ ವಿಭಾಗದ 45 ಪ್ರಶ್ನೆಗಳು ನಿಜವಾದ NEET ಪ್ರಶ್ನೆಪತ್ರಿಕೆಗೆ ಹೊಂದಿಕೆಯಾಗಿರುವುದು ಪತ್ತೆಯಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಯಾಕಾಗುತ್ತದೆ?

ಸ್ಪರ್ಧಾತ್ಮಕ ಪರೀಕ್ಷೆಗಳ ಸುತ್ತ ನಿರ್ಮಾಣವಾಗಿರುವ ಅಪಾರ ಹಣದ ಮಾರುಕಟ್ಟೆಯೇ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಕಾರಣವಾಗಿದೆ. ವೈದ್ಯಕೀಯ, ಇಂಜಿನಿಯರಿಂಗ್, ಸರ್ಕಾರಿ ಉದ್ಯೋಗಗಳಂತಹ ಕ್ಷೇತ್ರಗಳಲ್ಲಿ ಸೀಟುಗಳು ಕಡಿಮೆ ಇದ್ದು, ಸ್ಪರ್ಧಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರ ಮೇಲೆ ಭಾರೀ ಒತ್ತಡ ನಿರ್ಮಾಣವಾಗುತ್ತದೆ.

ಈ ಆತಂಕ ಮತ್ತು ಅನಿಶ್ಚಿತತೆಯನ್ನು ಕೆಲ ಕೋಚಿಂಗ್ ಸೆಂಟರ್‌ಗಳು, ಮಧ್ಯವರ್ತಿಗಳು ಹಾಗೂ ಭ್ರಷ್ಟ ಜಾಲಗಳು ದುರುಪಯೋಗಪಡಿಸಿಕೊಳ್ಳುತ್ತವೆ. “ಹಣ ಕೊಟ್ಟರೆ ರ್ಯಾಂಕ್ ಖಚಿತ” ಎಂಬ ಮನೋಭಾವ ಕ್ರಮೇಣ ಪ್ರಶ್ನೆಪತ್ರಿಕೆ ದಂಧೆಗೆ ಬಲ ನೀಡುತ್ತದೆ.

ಇದರ ಜೊತೆಗೆ, ಪರೀಕ್ಷಾ ವ್ಯವಸ್ಥೆಯ ಅತಿಯಾದ ಕೇಂದ್ರೀಕರಣವೂ ಮತ್ತೊಂದು ಪ್ರಮುಖ ಕಾರಣವಾಗಿದೆ. ದೇಶದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಒಂದೇ ಸಂಸ್ಥೆ ಪರೀಕ್ಷೆ ನಡೆಸುವಾಗ, ವ್ಯವಸ್ಥೆಯಲ್ಲಿನ ಒಂದು ಸಣ್ಣ ಲೋಪವೂ ದೊಡ್ಡ ಹಗರಣಕ್ಕೆ ದಾರಿ ಮಾಡಿಕೊಡುತ್ತದೆ. ಪ್ರಶ್ನೆಪತ್ರಿಕೆ ಮುದ್ರಣ, ಡಿಜಿಟಲ್ ನಿರ್ವಹಣೆ, ಸಾರಿಗೆ ಮತ್ತು ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆ ಸೇರಿದಂತೆ ಹಲವು ಹಂತಗಳನ್ನು ಖಾಸಗಿ ಏಜೆನ್ಸಿಗಳಿಗೆ ಒಪ್ಪಿಸುವುದು ಭದ್ರತಾ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ನಿರುದ್ಯೋಗ ಮತ್ತು ತೀವ್ರ ಸ್ಪರ್ಧೆಯೂ ಪ್ರಶ್ನೆಪತ್ರಿಕೆ ಸೋರಿಕೆಗೆ ಪೂರಕ ವಾತಾವರಣ ಸೃಷ್ಟಿಸುತ್ತವೆ. ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ “ಯಾವುದೇ ರೀತಿಯಿಂದ ಪಾಸ್ ಆಗಬೇಕು” ಎಂಬ ಮನೋಭಾವ ಕೆಲವು ವಿದ್ಯಾರ್ಥಿಗಳು ಮತ್ತು ಕುಟುಂಬಗಳನ್ನು ತಪ್ಪು ಮಾರ್ಗದತ್ತ ತಳ್ಳುತ್ತದೆ. ಇದೇ ಪರಿಸ್ಥಿತಿಯನ್ನು “ಎಗ್ಜಾಮ್ ಮಾಫಿಯಾ”ಗಳು ಹಣ ಸಂಪಾದನೆಗೆ ಬಳಸಿಕೊಳ್ಳುತ್ತವೆ.

ಪ್ರಶ್ನೆಪತ್ರಿಕೆ ಸೋರಿಕೆ ಹೇಗೆ ನಡೆಯುತ್ತದೆ?

ಪ್ರಶ್ನೆಪತ್ರಿಕೆ ಸೋರಿಕೆ ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಕೃತ್ಯವಾಗಿರುವುದಿಲ್ಲ; ಅದು ಸಂಘಟಿತ ಜಾಲದ ಮೂಲಕ ನಡೆಯುವ ಅಕ್ರಮ ವ್ಯವಸ್ಥೆಯಾಗಿರುತ್ತದೆ. ಕೆಲವೊಮ್ಮೆ ಪ್ರಶ್ನೆಪತ್ರಿಕೆ ತಯಾರಿಕಾ ಹಂತದಲ್ಲೇ ಡೇಟಾ ಕಳವು ಮಾಡಲಾಗುತ್ತದೆ. ಮತ್ತೊಮ್ಮೆ ಮುದ್ರಣ ಕೇಂದ್ರಗಳಲ್ಲಿ ಮೊಬೈಲ್ ಫೋನ್‌, ಪೆನ್‌ಡ್ರೈವ್ ಅಥವಾ ಗುಪ್ತ ಕ್ಯಾಮೆರಾಗಳ ಮೂಲಕ ಪ್ರಶ್ನೆಪತ್ರಿಕೆ ಪ್ರತಿಗಳನ್ನು ಹೊರತೆಗೆದು ಹರಡಲಾಗುತ್ತದೆ.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ಸಾಗಿಸುವ ಸಂದರ್ಭದಲ್ಲಿ ಭದ್ರತಾ ಲೋಪ ಉಂಟಾದರೂ ಸೋರಿಕೆಗೆ ಅವಕಾಶ ಸಿಗುತ್ತದೆ. ಡಿಜಿಟಲ್ ವ್ಯವಸ್ಥೆಗಳ ಬಳಕೆ ಹೆಚ್ಚಾದಂತೆ ಸರ್ವರ್ ಹ್ಯಾಕಿಂಗ್ ಮತ್ತು ಆನ್‌ಲೈನ್ ಡೇಟಾ ಸೋರಿಕೆಗಳ ಅಪಾಯವೂ ಹೆಚ್ಚಾಗಿದೆ.

ಕೆಲವು ಪ್ರಕರಣಗಳಲ್ಲಿ ಕೋಚಿಂಗ್ ಸೆಂಟರ್‌ಗಳು ಮತ್ತು ಮಧ್ಯವರ್ತಿಗಳ ಜಾಲವೇ ಪ್ರಶ್ನೆಪತ್ರಿಕೆ ದಂಧೆಯ ಪ್ರಮುಖ ಕೊಂಡಿಯಾಗಿರುತ್ತದೆ. ಪರೀಕ್ಷೆಗೆ ಕೆಲ ಗಂಟೆಗಳ ಮೊದಲು ಟೆಲಿಗ್ರಾಂ, ವಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮೂಲಕ “ಪೇಪರ್ ಪ್ಯಾಕೇಜ್” ಹೆಸರಿನಲ್ಲಿ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀಗಳನ್ನು ಮಾರಾಟ ಮಾಡುವ ಘಟನೆಗಳು ಹೆಚ್ಚಾಗಿವೆ.

ಕೆಲ ಪ್ರಕರಣಗಳಲ್ಲಿ ಪರೀಕ್ಷಾ ಕೇಂದ್ರದ ಸಿಬ್ಬಂದಿ, ಐಟಿ ತಂತ್ರಜ್ಞರು, ಪೊಲೀಸ್ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳೇ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗಿರುವ ಆರೋಪಗಳೂ ಕೇಳಿಬಂದಿವೆ. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆ ಕೇವಲ ತಾಂತ್ರಿಕ ದೋಷವಲ್ಲ; ಅದು ಆಡಳಿತ ವೈಫಲ್ಯ ಮತ್ತು ಸಂಘಟಿತ ಭ್ರಷ್ಟಾಚಾರದ ಭಾಗವಾಗಿರುವುದು ಸ್ಪಷ್ಟವಾಗುತ್ತದೆ.

(ಪ್ರಶ್ನೆ ಪತ್ರಿಕೆ ವಿರೋಧಿಸಿ ನವದೆಹಲಿಯಲ್ಲಿ ಎಸ್‌ಎಫ್‌ಐ ಕಾರ್ಯಕರ್ತರಿಂದ ಪ್ರತಿಭಟನೆ)

ಇದರ ನಿರ್ಲಕ್ಷ್ಯಕ್ಕೆ ಹೊಣೆ ಯಾರು?

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಮೊದಲನೆಯ ಹೊಣೆ ಸರ್ಕಾರ ಮತ್ತು ಪರೀಕ್ಷಾ ಸಂಸ್ಥೆಗಳ ಮೇಲಿದೆ. ಪರೀಕ್ಷೆಯ ಗೌಪ್ಯತೆ ಕಾಪಾಡುವುದು, ಭದ್ರತಾ ವ್ಯವಸ್ಥೆ ಬಲಪಡಿಸುವುದು ಮತ್ತು ಭ್ರಷ್ಟ ಜಾಲಗಳನ್ನು ಮುಂಚಿತವಾಗಿ ಪತ್ತೆಹಚ್ಚುವುದು ಅವರ ಮೂಲ ಕರ್ತವ್ಯವಾಗಿದೆ.

ಆದರೆ ಪ್ರಶ್ನೆಪತ್ರಿಕೆ ಸೋರಿಕೆ ಮರುಮರು ನಡೆಯುತ್ತಿದ್ದರೂ ಅದೇ ರೀತಿಯ ವೈಫಲ್ಯಗಳು ಪುನರಾವರ್ತನೆಯಾಗುತ್ತಿರುವುದು ಕೇವಲ “ತಪ್ಪು” ಅಲ್ಲ; ಅದು ಆಡಳಿತ ವೈಫಲ್ಯದ ಸ್ಪಷ್ಟ ಸೂಚನೆ. ಪರೀಕ್ಷಾ ವ್ಯವಸ್ಥೆಯ ಮೇಲೆ ವಿದ್ಯಾರ್ಥಿಗಳು ಮತ್ತು ಪೋಷಕರು ಇಡುವ ವಿಶ್ವಾಸವನ್ನು ಕಾಪಾಡಲು ವಿಫಲವಾದಾಗ, ಅದರ ಹೊಣೆಗಾರಿಕೆಯನ್ನು ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

NTA ಸೇರಿದಂತೆ ಪರೀಕ್ಷಾ ಸಂಸ್ಥೆಗಳ ಕಾರ್ಯವೈಖರಿಯಲ್ಲಿರುವ ಅನೇಕ ದೌರ್ಬಲ್ಯಗಳು ಈ ಹಗರಣಗಳಿಗೆ ಅವಕಾಶ ಮಾಡಿಕೊಟ್ಟಿವೆ. ಸುರಕ್ಷಿತ ಡಿಜಿಟಲ್ ವ್ಯವಸ್ಥೆ ನಿರ್ಮಿಸಲು ವಿಫಲವಾಗಿರುವುದು, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಯಲ್ಲಿ ಲೋಪ ಉಂಟಾಗಿರುವುದು, ಖಾಸಗಿ ಏಜೆನ್ಸಿಗಳ ಮೇಲೆ ಅತಿಯಾದ ಅವಲಂಬನೆ ಇಟ್ಟುಕೊಳ್ಳುವುದು ಮತ್ತು ವಿದ್ಯಾರ್ಥಿಗಳು ಅಥವಾ ಶಿಕ್ಷಕರು ನೀಡುವ ದೂರುಗಳನ್ನು ಗಂಭೀರವಾಗಿ ಪರಿಗಣಿಸದಿರುವುದು ಪ್ರಮುಖ ವೈಫಲ್ಯಗಳಾಗಿವೆ.

ಇದರ ಜೊತೆಗೆ, ರಾಜಕೀಯ ರಕ್ಷಣೆ ಮತ್ತು ಭ್ರಷ್ಟಾಚಾರವೂ ಪ್ರಶ್ನೆಪತ್ರಿಕೆ ಸೋರಿಕೆ ಜಾಲಗಳನ್ನು ಬಲಪಡಿಸುತ್ತಿವೆ. ಅನೇಕ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ದಂಧೆಗಳಿಗೆ ಸ್ಥಳೀಯ ರಾಜಕೀಯ ಬೆಂಬಲ ಇರುವ ಆರೋಪಗಳು ಕೇಳಿಬಂದಿವೆ. ದೊಡ್ಡ ಮಟ್ಟದ ಅಕ್ರಮ ಜಾಲಗಳು ಅಧಿಕಾರಿಗಳ ಸಹಕಾರವಿಲ್ಲದೆ ಅಥವಾ ರಾಜಕೀಯ ಪ್ರಭಾವವಿಲ್ಲದೆ ದೀರ್ಘಕಾಲ ಕಾರ್ಯನಿರ್ವಹಿಸುವುದು ಕಷ್ಟ.

ತನಿಖೆಗಳು ವಿಳಂಬವಾಗುವುದು, ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳುವುದು ಮತ್ತು ಪ್ರಕರಣಗಳು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ಬಾಕಿ ಉಳಿಯುವುದು ಈ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ.

ಕೋಚಿಂಗ್ ಇಂಡಸ್ಟ್ರಿಯ ಅತಿಯಾದ ವ್ಯಾಪಾರೀಕರಣವೂ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಶಿಕ್ಷಣವನ್ನು “ಸ್ಪರ್ಧಾತ್ಮಕ ಉತ್ಪನ್ನ”ವನ್ನಾಗಿ ಮಾಡಿರುವ ಪರಿಣಾಮ, ರ್ಯಾಂಕ್ ಮತ್ತು ಸೀಟುಗಳ ಸುತ್ತ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುತ್ತಿದೆ. “ಯಾವುದೇ ರೀತಿಯಲ್ಲಿ ಗೆಲ್ಲಬೇಕು” ಎಂಬ ಮನೋಭಾವವನ್ನು ಉತ್ತೇಜಿಸುವ ಈ ವ್ಯವಸ್ಥೆಯಲ್ಲಿ ಅಕ್ರಮ ಮಾರ್ಗಗಳ ಬೇಡಿಕೆಯೂ ಹೆಚ್ಚುತ್ತದೆ.

ಕೆಲ ಕೋಚಿಂಗ್ ಸಂಸ್ಥೆಗಳು ವಿದ್ಯಾರ್ಥಿಗಳ ಆತಂಕವನ್ನು ದುರುಪಯೋಗಪಡಿಸಿಕೊಂಡು “ರ್ಯಾಂಕ್ ಗ್ಯಾರಂಟಿ” ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಶಿಕ್ಷಣದ ಮೂಲ ಮೌಲ್ಯಗಳನ್ನೇ ದುರ್ಬಲಗೊಳಿಸಿದೆ.

“ಚೀನಾ ಮಾದರಿ” ಗೆ ತಜ್ಞರ ಸೂಚನೆ

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಕೋಚಿಂಗ್ ಮಾಫಿಯಾ ನಿಯಂತ್ರಣಕ್ಕೆ “ಚೀನಾ ಮಾದರಿ” ಅನುಸರಿಸಬೇಕು ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಇದರ ಅರ್ಥ ಕೇವಲ ಕಠಿಣ ಶಿಕ್ಷೆ ವಿಧಿಸುವುದಲ್ಲ; ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣ ನಿಯಂತ್ರಿತ, ತಂತ್ರಜ್ಞಾನ ಆಧಾರಿತ ಮತ್ತು ಕಡಿಮೆ ವ್ಯಾಪಾರೀಕರಣದ ಮಾದರಿಯಲ್ಲಿ ರೂಪಿಸುವುದು.

ಚೀನಾದಲ್ಲಿ ರಾಷ್ಟ್ರೀಯ ಮಟ್ಟದ “Gaokao” ಪ್ರವೇಶ ಪರೀಕ್ಷೆಯನ್ನು ಅತ್ಯಂತ ಕಟ್ಟುನಿಟ್ಟಿನ ಭದ್ರತೆಯಲ್ಲಿ ನಡೆಸಲಾಗುತ್ತದೆ. 2021ರಿಂದ ಚೀನಾ ಸರ್ಕಾರ ಖಾಸಗಿ ಟ್ಯೂಷನ್ ಮತ್ತು ಕೋಚಿಂಗ್ ಉದ್ಯಮದ ಮೇಲೆ ದೊಡ್ಡ ಮಟ್ಟದ ನಿಯಂತ್ರಣ ಹೇರಿದ್ದು, ಲಾಭೋದ್ದೇಶದ ಅನೇಕ ಕೋಚಿಂಗ್ ಸಂಸ್ಥೆಗಳ ಕಾರ್ಯವೈಖರಿಯನ್ನು ಕಟ್ಟಿಹಾಕಿದೆ.

ಚೀನಾದಲ್ಲಿ ಪ್ರಶ್ನೆಪತ್ರಿಕೆ ಮುದ್ರಣ ಮತ್ತು ಸಾಗಣೆಗೆ ಸೈನಿಕ ಮಟ್ಟದ ಭದ್ರತೆ ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ AI ಆಧಾರಿತ ಮೇಲ್ವಿಚಾರಣೆ, ಮುಖ ಗುರುತು (Face Recognition) ತಂತ್ರಜ್ಞಾನ, ಮೊಬೈಲ್ ಸಿಗ್ನಲ್ ಜಾಮರ್‌ಗಳು, ಡ್ರೋನ್ ಸರ್ವೆಲ್ಯಾನ್ಸ್ ಮತ್ತು ಕಠಿಣ ಭದ್ರತಾ ಪರಿಶೀಲನೆಗಳನ್ನು ಬಳಸಲಾಗುತ್ತದೆ.

ಪ್ರಶ್ನೆಪತ್ರಿಕೆ ಸೋರಿಕೆಗೆ ಕಠಿಣ ಜೈಲು ಶಿಕ್ಷೆ ವಿಧಿಸುವ ಜೊತೆಗೆ ಕೋಚಿಂಗ್ ವ್ಯಾಪಾರದ ಮೇಲೂ ಕಠಿಣ ನಿಯಂತ್ರಣ ಹೇರಲಾಗಿದೆ. ಇದರ ಉದ್ದೇಶ ಪರೀಕ್ಷಾ ವ್ಯವಸ್ಥೆಯ ಮೇಲೆ ಸಾರ್ವಜನಿಕ ವಿಶ್ವಾಸವನ್ನು ಕಾಪಾಡುವುದು.

ಭಾರತದಲ್ಲಿ “ಚೀನಾ ಮಾದರಿ” ಅಳವಡಿಸುವುದು ಹೇಗೆ?

ಭಾರತದ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಪರಿಸ್ಥಿತಿ ಚೀನಾದಂತಿಲ್ಲ. ಆದ್ದರಿಂದ “ಚೀನಾ ಮಾದರಿ”ಯನ್ನು ಸಂಪೂರ್ಣವಾಗಿ ಯಥಾತಥವಾಗಿ ಅಳವಡಿಸಲು ಸಾಧ್ಯವಿಲ್ಲ. ಆದರೆ ಅದರಲ್ಲಿರುವ ಕೆಲವು ಪರಿಣಾಮಕಾರಿ ಕ್ರಮಗಳನ್ನು ಭಾರತೀಯ ಪರಿಸ್ಥಿತಿಗೆ ಅನುಗುಣವಾಗಿ ಜಾರಿಗೆ ತರಬಹುದು.

ಮೊದಲನೆಯದಾಗಿ, ಪ್ರಶ್ನೆಪತ್ರಿಕೆ ಭದ್ರತೆಯನ್ನು ಅತ್ಯಂತ ಬಲಪಡಿಸುವ ಅಗತ್ಯವಿದೆ. ಮುದ್ರಣಾಲಯಗಳಲ್ಲಿ ಬಯೋಮೆಟ್ರಿಕ್ ಪ್ರವೇಶ ವ್ಯವಸ್ಥೆ ಜಾರಿಗೊಳಿಸುವುದು, ಪ್ರಶ್ನೆಪತ್ರಿಕೆ ಸಾಗಣೆಗೆ GPS ಟ್ರ್ಯಾಕಿಂಗ್ ಬಳಸುವುದು, ಕೊನೆಯ ಕ್ಷಣದಲ್ಲಿ ಡಿಜಿಟಲ್ ಎನ್‌ಕ್ರಿಪ್ಟೆಡ್ ಡೌನ್‌ಲೋಡ್ ವ್ಯವಸ್ಥೆ ರೂಪಿಸುವುದು ಮತ್ತು ಸಿಬ್ಬಂದಿಗೆ ವಿಶೇಷ ಭದ್ರತಾ ಪರಿಶೀಲನೆ ನಡೆಸುವುದು ಅವಶ್ಯಕ.

ಪ್ರಶ್ನೆಪತ್ರಿಕೆ ತಯಾರಿಕೆಯಿಂದ ಪರೀಕ್ಷಾ ಕೇಂದ್ರದವರೆಗೆ ಪ್ರತಿಯೊಂದು ಹಂತವೂ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿರಬೇಕು.

ಎರಡನೆಯದಾಗಿ, ಕೋಚಿಂಗ್ ಮಾಫಿಯಾದ ನಿಯಂತ್ರಣಕ್ಕೆ ಕಠಿಣ ನಿಯಮಗಳು ಅಗತ್ಯ. ಕೋಚಿಂಗ್ ಸೆಂಟರ್‌ಗಳಿಗೆ ಕಡ್ಡಾಯ ನೋಂದಣಿ, ಅತಿಯಾದ ಶುಲ್ಕಕ್ಕೆ ಮಿತಿ, ಪ್ರಶ್ನೆಪತ್ರಿಕೆ ದಂಧೆಯ ಸಂಪರ್ಕ ಸಾಬೀತಾದರೆ ಪರವಾನಗಿ ರದ್ದು ಮತ್ತು “ರ್ಯಾಂಕ್ ಗ್ಯಾರಂಟಿ” ಜಾಹೀರಾತುಗಳಿಗೆ ನಿಷೇಧ ಹೇರಬೇಕು.

ಶಿಕ್ಷಣವನ್ನು ಸಂಪೂರ್ಣ ವ್ಯಾಪಾರವಾಗಿ ಪರಿವರ್ತಿಸುವ ಪ್ರವೃತ್ತಿಯನ್ನು ನಿಯಂತ್ರಿಸದೇ ಇದ್ದರೆ ಅಕ್ರಮ ಮಾರುಕಟ್ಟೆ ಮುಂದುವರಿಯುತ್ತದೆ.

ತಂತ್ರಜ್ಞಾನ ಬಳಕೆಯನ್ನೂ ಹೆಚ್ಚಿಸುವ ಅಗತ್ಯವಿದೆ. ಪರೀಕ್ಷಾ ಕೇಂದ್ರಗಳಲ್ಲಿ AI ಆಧಾರಿತ ಮಾನಿಟರಿಂಗ್, ಮೊಬೈಲ್ ಸಿಗ್ನಲ್ ಬ್ಲಾಕರ್‌ಗಳು, ಲೈವ್ CCTV ಮೇಲ್ವಿಚಾರಣೆ ಮತ್ತು ಸೈಬರ್ ಕ್ರೈಂ ಸೆಲ್ ಮೂಲಕ ಸಾಮಾಜಿಕ ಜಾಲತಾಣಗಳ ನಿಗಾ ವ್ಯವಸ್ಥೆ ಜಾರಿಗೊಳಿಸಬಹುದು. ಇದರಿಂದ ಡಿಜಿಟಲ್ ಸೋರಿಕೆ ಮತ್ತು ಆನ್‌ಲೈನ್ ದಂಧೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.

ಇದರ ಜೊತೆಗೆ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡುವುದು ಕೂಡ ಮುಖ್ಯ. ಒಂದೇ ಪರೀಕ್ಷೆ ಜೀವನ ನಿರ್ಧರಿಸುವ ಪರಿಸ್ಥಿತಿ ಕಡಿಮೆಯಾಗಬೇಕು. ಬಹುಪ್ರವೇಶ ವ್ಯವಸ್ಥೆ, ಶಾಲಾ ಅಂಕಗಳಿಗೆ ಹೆಚ್ಚಿನ ಪ್ರಾಮುಖ್ಯತೆ, ರಾಜ್ಯ ಮಟ್ಟದ ಪ್ರವೇಶ ವ್ಯವಸ್ಥೆ ಮತ್ತು ನಿರಂತರ ಮೌಲ್ಯಮಾಪನ ಕ್ರಮಗಳನ್ನು ಬಲಪಡಿಸುವುದರಿಂದ ವಿದ್ಯಾರ್ಥಿಗಳ ಮೇಲೆ ಇರುವ ಅತಿಯಾದ ಮಾನಸಿಕ ಒತ್ತಡ ಕಡಿಮೆಯಾಗಬಹುದು.

ಸರ್ಕಾರ ಮಾಡಬೇಕಿರುವುದು ಏನು?

ಇಂತಹ ಹಗರಣಗಳ ನಂತರ ಸರ್ಕಾರದ ಜವಾಬ್ದಾರಿ ಕೇವಲ ಪರೀಕ್ಷೆ ರದ್ದುಪಡಿಸುವುದಲ್ಲ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಮೇಲೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ಸ್ವತಂತ್ರ ತನಿಖೆ ನಡೆಸಬೇಕು.

NTA ಕಾರ್ಯವೈಖರಿಯ ಪ್ರತಿ ಬಾರಿಯೂ ನಂಬಿಕೆ ಕಳೆದುಕೊಳ್ಳುತ್ತಿರುವುದರಿಂದ ಎನ್‌ಟಿಎಯನ್ನು ತಕ್ಷಣವೇ ವಿಸರ್ಜಿಸಬೇಕು ಮತ್ತು ಪರೀಕ್ಷೆಗಳನ್ನು ವಿಕೇಂದ್ರೀಕರಿಸಬೇಕು. ಕೋಚಿಂಗ್ ಮಾಫಿಯಾ ಮತ್ತು ಪ್ರಶ್ನೆಪತ್ರಿಕೆ ದಂಧೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ. ರಾಜ್ಯಗಳಿಗೆ ಶಿಕ್ಷಣ ಹಾಗೂ ಪ್ರವೇಶ ವ್ಯವಸ್ಥೆಯಲ್ಲಿ ಹೆಚ್ಚಿನ ಸ್ವಾಯತ್ತತೆ ನೀಡುವ ಕುರಿತು ಚರ್ಚೆ ಆರಂಭವಾಗಬೇಕು.

ಜೊತೆಗೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕಾಗಿ ವಿಶೇಷ ಸಹಾಯವಾಣಿ, ಸಮಾಲೋಚನಾ ಕೇಂದ್ರಗಳು ಮತ್ತು ಬೆಂಬಲ ವ್ಯವಸ್ಥೆಗಳನ್ನು ರೂಪಿಸುವ ಅಗತ್ಯವೂ ಇದೆ. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸ ಪುನಃಸ್ಥಾಪನೆ ಆಗಬೇಕಾದರೆ ಸರ್ಕಾರವು ಕೇವಲ ಭರವಸೆ ನೀಡುವುದರಿಂದ ಸಾಲದು; ಸ್ಪಷ್ಟ ಮತ್ತು ಕಠಿಣ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ.

ಶಿಕ್ಷಣ ವ್ಯವಸ್ಥೆಯನ್ನು ಮಾರುಕಟ್ಟೆ ಮತ್ತು ಮಾಫಿಯಾಗಳಿಂದ ರಕ್ಷಿಸುವುದು ಸರ್ಕಾರದ ಕರ್ತವ್ಯ. ವಿದ್ಯಾರ್ಥಿಗಳ ಭವಿಷ್ಯವನ್ನು “ರ್ಯಾಂಕ್ ವ್ಯಾಪಾರ”ವಾಗಲು ಬಿಡದೆ, ಸಮಾನ ಅವಕಾಶ ಮತ್ತು ಪಾರದರ್ಶಕತೆಯ ಆಧಾರದ ಮೇಲೆ ಶಿಕ್ಷಣ ವ್ಯವಸ್ಥೆಯನ್ನು ಮರುನಿರ್ಮಿಸುವ ಅಗತ್ಯ ಇಂದು ಹಿಂದೆಂದಿಗಿಂತ ಹೆಚ್ಚಾಗಿದೆ.

ಇದನ್ನೂ ನೋಡಿ: ಆರೋಗ್ಯ ಸೇವೆ ಕಾರ್ಪೊರೇಟ್ ಕೈಗೆ? : ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ Janashakthi Media

Donate Janashakthi Media

Leave a Reply

Your email address will not be published. Required fields are marked *