ಕೊಲ್ಕತಾದಲ್ಲಿ ಮೇ 9ರಂದು ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರತಿಜ್ಞಾ ಸ್ವೀಕಾರ ಮಾಡುವುದರೊಂದಿಗೆ ಪಶ್ಚಿಮ ಬಂಗಾಳದಲ್ಲೂ ‘ಡಬಲ್ ಇಂಜಿನ್’ ಸರಕಾರವನ್ನು ಪ್ರತಿಷ್ಠಾಪಿಸುವ ಬಿಜೆಪಿ – ಆರ್ಎಸ್ಎಸ್ ಪ್ರಯತ್ನ ಕೊನೆಗೂ ಈಡೇರಿದೆ. ಐದು ವರ್ಷಗಳ ಹಿಂದಿನ ವರೆಗೂ ತೃಣಮೂಲ ಕಾಂಗ್ರೆಸ್ನ ಸ್ಥಾಪಕ ಮುಖಂಡರಾದ ಮಮತಾ ಬ್ಯಾನರ್ಜಿಯ ಬಲಗೈ ಬಂಟರಂತಿದ್ದ ಇವರು ಈಗ ಅವರನ್ನೂ, ಹಿಂದೆ ತಮ್ಮದಾಗಿದ್ದ ಪಕ್ಷವನ್ನೂ ಸೋಲಿಸಿ ಮುಖ್ಯಮಂತ್ರಿಯಾಗಿರುವುದು 2014ರ ನಂತರ ರೂಪುಗೊಂಡಿರುವ ಭಾರತದ “ವಾಶೀಂಗ್ ಮೆಷಿನ್ ರಾಜಕಾರಣ”ಕ್ಕೊಂದು ಉದಾಹರಣೆ ಎಂದು ಹೇಳಲಾಗಿದೆ. ಅದೇನೇ ಇರಲಿ, ಬಿಜೆಪಿ ಭಾರೀ ಬಹುಮತ ಗಳಿಸುವಲ್ಲಿ ಇವರ ಪಾತ್ರ ದೊಡ್ಡದು ಎಂಬುದರಲ್ಲಿ ಸಂದೇಹವಿಲ್ಲ. ಪಶ್ಚಿಮ
– ವೇದರಾಜ ಎನ್ ಕೆ
ಪಶ್ಚಿಮ ಬಂಗಾಳ ವಿಧಾನಸಭೆಯ ಒಟ್ಟು ಸ್ಥಾನಗಳ ಸಂಖ್ಯೆ 294. ಇವುಗಳಲ್ಲಿ ಒಂದರಲ್ಲಿ ಮರುಚುನಾವಣೆ ನಡೆಯಬೇಕಾಗಿದೆ. ಬಿಜೆಪಿ 2932 ರಲ್ಲಿ 207ರಲ್ಲಿ ಗೆದ್ದು ಮೂರನೇ ಎರಡು ಬಹುಮತ ಗಳಿಸಿದೆ. ಕಳೆದ ಬಾರಿ ಮೂರನೇ ಎರಡು ಬಹುಮತ ಗಳಿಸಿದ ತೃಣಮೂಲ ಕಾಂಗ್ರೆಸ್ (ಟಿಎಂಸಿ)ನ ಬಲ ಸುಮಾರು ಮೂರನೇ
ಎರಡರಷ್ಟು ಕುಗ್ಗಿದೆ. ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ಟಿಎಂಸಿ ವಿರುದ್ಧ ಅಸಂತೃಪ್ತಿಯ ಭಾವನೆ ವ್ಯಾಪಕವಾಗಿದ್ದರೂ, ಬಿಜೆಪಿಯ ಈ ಭಾರೀ ಗೆಲುವಿಗೆ ಎಸ್ಐಆರ್ ಮತ್ತು ಚುನಾವಣಾ ಆಯೋಗವೂ ಸೇರಿದಂತೆ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಭಯದ ವಾತಾವರಣವನ್ನು ಸೃಷ್ಟಿಸಿದ್ದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಪಶ್ಚಿಮ
ಇಲ್ಲಿ ಮತ್ತು ಅಸ್ಸಾಂನಲ್ಲಿ, ವಾಸ್ತವವಾಗಿ ಸ್ಪರ್ಧೆಯಿದ್ದದ್ದು ಕೇಂದ್ರದ ಆಳುವ ಪಕ್ಷ ಮತ್ತು ವಿಪಕ್ಷಗಳ ನಡುವೆಗಿಂತ ಹೆಚ್ಚಾಗಿ ಚುನಾವಣಾ ಆಯೋಗ ಮತ್ತು ವಿಪಕ್ಷಗಳ ನಡುವಿನ ಸ್ಪರ್ಧೆಯೇ ಆಗಿತ್ತು ಎಂದೂ ಹಲವರು ಟಿಪ್ಪಣಿ ಮಾಡಿದ್ದಾರೆ. ಫಲಿತಾಂಶಗಳ ಪ್ರಾಥಮಿಕ ವಿಶ್ಲೇಷಣೆಗಳು ಇದನ್ನು ಸಮರ್ಥಿಸುವಂತೆ
ಕಾಣುತ್ತಿದೆ. ಅಲ್ಲದೆ ಪಶ್ಚಿಮ ಬಂಗಾಲದ ಆಳುವ ಪಕ್ಷ ಮತ್ತು ಕೇಂದ್ರದ ಆಳುವ ಪಕ್ಷ ಕೋಮುವಾದೀ ಪ್ರಚಾರದ ಸ್ಪರ್ಧೆಗೆ ಇಳಿದಂತೆ ಕಾಣುತ್ತಿತ್ತು ಎಂದು ಇನ್ನು ಕೆಲವು ವೀಕ್ಷಕರು ಟಿಪ್ಪಣಿ ಮಾಡಿದ್ದಾರೆ. ಇದರಿಂದಾಗಿ ಎಡರಂಗದ ಪ್ರಚಾರಕ್ಕೆ ಈ ಬಾರಿ ಉತ್ತಮ ಸ್ಪಂದನೆ ದೊರಕಿದ್ದರೂ, ಗಮನಾರ್ಹ ಪ್ರಮಾಣದಲ್ಲಿ ತನ್ನ ನೆಲೆಯನ್ನು ಮತ್ತೆ ಪಡೆಯಬಹುದು ಎಂಬ ನಿರೀಕ್ಷೆ ಈಡೇರಲಿಲ್ಲ. ಪಕ್ಷವಾರು ಸ್ಥಾನಗಳು ಮತಗಳಿಕೆ ಮತ್ತು ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಏರಿಳಿತದ ಅಂಕಿ-ಅಂಶಗಳು ಹೀಗಿವೆ: ಪಶ್ಚಿಮ

ಚುನಾವಣಾ ಆಯೋಗದ ಪಾತ್ರ
ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ 83.86 ಲಕ್ಷ ಮತದಾರ ಹೆಸರುಗಳನ್ನು ಕೈಬಿಡಲಾಗಿದೆ, ಇದು ಒಟ್ಟು ಮತದಾರರ ಸಂಖ್ಯೆಯ 10.9% ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಪಶ್ಚಿಮ
ಈ ಸುಮಾರು 84 ಲಕ್ಷ ಮತದಾರರಲ್ಲಿ 27 ಲಕ್ಷ ಮತದಾರರ ಬಳಿ ಎಲ್ಲ ದಾಖಲೆಗಳಿದ್ದರೂ, ಅವರ ಹೆಸರುಗಳು ತಾಳೆಯಾಗುವುದಿಲ್ಲ ಎಂದು ಅವರನ್ನು “ತಾರ್ಕಿಕ ಅಸಾಮಂಜಸ್ಯ” ಎಂಬ ಹೊಸದೊಂದು ಶೀರ್ಷಿಕೆಯ ಅಡಿಯಲ್ಲಿ ಕೈಬಿಡಲಾಗಿದೆ ಎಂಬುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಇವರ ಅಪೀಲುಗಳು ಸುಪ್ರಿಂ ಕೋರ್ಟ್ ಆದೇಶಿತ ನ್ಯಾಯಮಂಡಳಿಗಳ ಮುಂದಿದ್ದು, ಮತದಾನದ ವೇಳೆಗೆ 99% ಹೆಸರುಗಳು ಇನ್ನೂ ಈ ನ್ಯಾಯಮಂಡಳಿಗಳ ಮುಂದೆ ಇತ್ಯರ್ಥವಾಗದೇ ಉಳಿದಿದ್ದವು. ಹೀಗೆ ಇತ್ಯರ್ಥವಾಗದೇ ಉಳಿದಿರುವವರ ಪ್ರಮಾಣ ಎಷ್ಟೆಂದರೆ, 49 ಕ್ಷೇತ್ರಗಳಲ್ಲಿ ಇವರ ಸಂಖ್ಯೆ ಆ ಕ್ಷೇತ್ರಗಳಲ್ಲಿನ ಗೆಲುವಿನ ಅಂತರಕ್ಕಿಂತ ಎಷ್ಟೋ ಹೆಚ್ಚಿದೆ ಎಂದು ಈಗ ತಿಳಿದು ಬಂದಿದೆ. ಪಶ್ಚಿಮ
ಇದನ್ನೂ ಓದಿ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಹೆಮ್ಮರವಾಗಿ ಬೆಳೆಸಿ – ರೆ. ಫಾ. ಜಾನ್ಸನ್ ಪಿಂಟೋ
ಉದಾ: ರಾಜರ್ಹಾಟ್ ನ್ಯೂಟೌನ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 316 ಮತಗಳಿಂದ ಗೆದ್ದಿದ್ದಾರೆ. ಇಲ್ಲಿ ನ್ಯಾಯಮಂಡಳಿಗಳ ಮುಂದಿರುವ ಮತದಾರರ ಸಂಖ್ಯೆ 24132. ಅದೇ ರೀತಿ ಶಂಷೇರ್ಗಂಜ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ 7587 ಮತಗಳಿಂದ ಗೆದ್ದಿದ್ದಾರೆ, ಇಲ್ಲಿ ನ್ಯಾಯಮಂಡಳಿಗಳ ಮುಂದಿರುವ ಮತದಾರರ ಸಂಖ್ಯೆ 74,775. ಈ 49ರಲ್ಲಿ ಒಂದರಲ್ಲಿ ಮಾತ್ರ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಉಳಿದ 48 ಟಿಎಂಸಿ ಗೆದ್ದಿತ್ತು. ಈ ಬಾರಿ 26 ಬಿಜೆಪಿ ಅಭ್ಯರ್ಥಿಗಳು ಮತ್ತು ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಟಿಎಂಸಿ ಪಾಲು 48 ರಿಂದ 21ಕ್ಕೆ ಇಳಿದಿದೆ.

ಎಸ್ಐಆರ್ ನಲ್ಲಿ ಕೈಬಿಟ್ಟ ಒಟ್ಟು ಸುಮಾರು ೮೪ಲಕ್ಷ ಮತದಾರರನ್ನು ಗಮನಕ್ಕೆ ತಗೊಂಡರೆ, 294 ರಲ್ಲಿ 150 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರಕ್ಕಿಂತ ಕೈಬಿಟ್ಟ ಮತದಾರರ ಸಂಖ್ಯೆಯೇ ಹೆಚ್ಚಿರುವುದು ಕಂಡು ಬಂದಿದೆ. ಇವುಗಳಲ್ಲಿ 99 ಕ್ಷೇತ್ರಗಳನ್ನು ಈ ಬಾರಿ ಬಿಜೆಪಿ ಪಡೆದಿದೆ. ಕಳೆದ ಬಾರಿ ಇವುಗಳಲ್ಲಿ ಅದು ಗೆದ್ದಿದ್ದುದು ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ.
ಆದ್ದರಿಂದ ಎಸ್ಐಆರ್ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಕಾರ ರಚಿಸುವ ಮೋದಿ-ಷಾ ಕನಸನ್ನು ಈಡೇರಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಹೇಳಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ವಾಸ್ತವವಾಗಿ ಎಸ್ಐಆರ್ನ ಉದ್ದೇಶವೇ ಅದು ಎನ್ನಲಾಗಿದೆ/ ಚುನಾವಣಾ ಆಯೋಗದ ಅಂಕಿ-ಅಂಶಗಳನ್ನು ಅಧ್ಯಯನ ಮಾಡಿದ ಇನ್ನೊಬ್ಬ ವಿಶ್ಲೇಷಕರು 105 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ಅಂತರ ಆಯಾ ಕ್ಷೇತ್ರದಲ್ಲಿ ಎಸ್ಐಆರ್ನಲ್ಲಿ ಕೈಬಿಟ್ಟ ಮತದಾರರ ಸಂಖ್ಯೆಗಿಂತ ಕಡಿಮೆಯಿದೆ, ಇವುಗಳಲ್ಲಿ ಬಹುಪಾಲು ಬಿಜೆಪಿ ಹಿಂದೆಂದೂ ಗೆದ್ದಿರದ ಕ್ಷೇತ್ರಗಳು ಎಂದು ಅವರು ಹೇಳುತ್ತಾರೆ.
ಎಸ್ಐಆರ್ನ ಪರಿಣಾಮಗಳನ್ನು ತೋರಿಸಬಹುದಾದ ಅಂಕಿ-ಅಂಶಗಳು ಹೀಗಿವೆ:
ಕೈಬಿಟ್ಟ ಮತದಾರರ ಪ್ರಮಾಣ ೫%ಕ್ಕಿಂತ ಕಡಿಮೆಇರುವ ಕ್ಷೇತ್ರಗಳ ಸಂಖ್ಯೆ 45
ಈ ಕ್ಷೇತ್ರಗಳಲ್ಲಿ ಕಳೆದ ಬಾರಿ 31ರಲ್ಲಿ ಟಿಎಂಸಿ ಗೆದ್ದಿತ್ತು, ಬಿಜೆಪಿ 14ರಲ್ಲಿ ಗೆದ್ದಿತ್ತು. ಈ ಬಾರಿ ಟಿಎಂಸಿ ೧ರಲ್ಲಿ ಮಾತ್ರ ಗೆದ್ದಿದೆ, ಅಂದರೆ ೩೦ಸೀಟುಗಳನ್ನು ಕಳೆದುಕೊಂಡಿದೆ. ಬಿಜೆಪಿ 42ರಲ್ಲಿ ಗೆದ್ದಿದೆ, ಅಂದರೆ 28 ಸೀಟುಗಳ ಹೆಚ್ಚಳ ಪಡೆದಿದೆ.
ಕೈಬಿಟ್ಟ ಮತದಾರರ ಪ್ರಮಾಣ5 – 10% ಇರುವ ಕ್ಷೇತ್ರಗಳ ಸಂಖ್ಯೆ 92
ಈ ಕ್ಷೇತ್ರಗಳಲ್ಲಿ ಕಳೆದ ಬಾರಿ 66ರಲ್ಲಿ ಟಿಎಂಸಿ ಗೆದ್ದಿತ್ತು, ಬಿಜೆಪಿ 24ರಲ್ಲಿ ಗೆದ್ದಿತ್ತು. ಈ ಬಾರಿ ಟಿಎಂಸಿ 25ರಲ್ಲಿ ಮಾತ್ರ ಗೆದ್ದಿದೆ, ಅಂದರೆ ೪೧ಸೀಟುಗಳನ್ನು ಕಳೆದುಕೊಂಡಿದೆ. ಬಿಜೆಪಿ 63ರಲ್ಲಿ ಗೆದ್ದಿದೆ, ಅಂದರೆ 39 ಸೀಟುಗಳ ಹೆಚ್ಚಳ ಪಡೆದಿದೆ.
ಕೈಬಿಟ್ಟ ಮತದಾರರ ಪ್ರಮಾಣ 15-20 % ಇರುವ ಕ್ಷೇತ್ರಗಳ ಸಂಖ್ಯೆ 86
ಈ ಕ್ಷೇತ್ರಗಳಲ್ಲಿ ಕಳೆದ ಬಾರಿ 59ರಲ್ಲಿ ಟಿಎಂಸಿ ಗೆದ್ದಿತ್ತು, ಬಿಜೆಪಿ 27ರಲ್ಲಿ ಗೆದ್ದಿತ್ತು. ಈ ಬಾರಿ ಟಿಎಂಸಿ 29ರಲ್ಲಿ ಮಾತ್ರ ಗೆದ್ದಿದೆ, ಅಂದರೆ 30 ಸೀಟುಗಳನ್ನು ಕಳೆದುಕೊಂಡಿದೆ. ಬಿಜೆಪಿ 57ರಲ್ಲಿ ಗೆದ್ದಿದೆ, ಅಂದರೆ 30 ಸೀಟುಗಳ ಹೆಚ್ಚಳ ಪಡೆದಿದೆ.
ಕೈಬಿಟ್ಟ ಮತದಾರರ ಪ್ರಮಾಣ 20% ಕ್ಕಿಂತ ಹೆಚ್ಚು ಇರುವ ಕ್ಷೇತ್ರಗಳ ಸಂಖ್ಯೆ 27
ಈ ಕ್ಷೇತ್ರಗಳಲ್ಲಿ ಕಳೆದ ಬಾರಿ 25ರಲ್ಲಿ ಟಿಎಂಸಿ ಗೆದ್ದಿತ್ತು, ಬಿಜೆಪಿ 2ರಲ್ಲಿ ಗೆದ್ದಿತ್ತು. ಈ ಬಾರಿ ಟಿಎಂಸಿ 15ರಲ್ಲಿ ಗೆದ್ದಿದೆ, ಅಂದರೆ ೧೦ಸೀಟುಗಳನ್ನು ಕಳೆದುಕೊಂಡಿದೆ. ಬಿಜೆಪಿ 11ರಲ್ಲಿ ಗೆದ್ದಿದೆ, ಅಂದರೆ ೯ ಸೀಟುಗಳ ಹೆಚ್ಚಳ ಪಡೆದಿದೆ.
“ತಾರ್ಕಿಕ ಅಸಾಮಂಜಸ್ಯ”ದ ಬಗ್ಗೆ ಟಿಪ್ಪಣಿ ಮಾಡುತ್ತ ಎಸ್ಐಆರ್ ವಿಚಾರಣೆಯ ವೇಳೆಯಲ್ಲಿ ನ್ಯಾಯಪೀಠದಲ್ಲಿರುವ ಒಬ್ಬ ನ್ಯಾಯಾಧೀಶರು “ ಮತದಾರ ಪಟ್ಟಿಯಲ್ಲಿರುವ 10% ಮತನೀಡದಿದ್ದರೆ, ಮತ್ತು ಗೆಲುವಿನ ಅಂತರ 10%ಕ್ಕಿಂತ ಹೆಚ್ಚಿದ್ದರೆ… ಏನಾಗುತ್ತದೆ? ಗೆಲುವಿನ ಅಂತರ 2% ಮತ್ತು ಮತನೀಡಲಾರದವರ
ಪ್ರಮಾಣ 15% ಇದ್ದರೆ, ಆಗ ಬಹುಶಃ ನಾವು ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ, ಆದರೆ ಖಂಡಿತವಾಗಿಯೂ ನಾವು ಈ ಬಗ್ಗೆ ಯೋಚಿಸುತ್ತೇವೆ..” ಎಂದಿದ್ದರಂತೆ! ಚುನಾವಣಾ ಫಲಿತಾಂಶಗಳ ನಂತರ ಕೈಬಿಟ್ಟ ಮತದಾರರ ಅರ್ಜಿಗಳು ನ್ಯಾಯಮಂಡಳಿಗಳ ಮುಂದಿರುವ ಕ್ಷೇತ್ರಗಳಲ್ಲಿ ಸೋಲಿನ ಅಂತರ ಹೀಗೆ ಕೈಬಿಟ್ಟ ಮತದಾರರ ಸಂಖ್ಯೆಗಿಂತ ಕಡಿಮೆಯಿದ್ದಲ್ಲಿ ಅರ್ಜಿಗಳನ್ನು ಹಾಕಬಹುದು ಎಂದು ಟಿಎಂಸಿಗೆ ಸುಪ್ರಿಂ ಕೋರ್ಟ್ ಅನುಮತಿ ನೀಡಿರುವುದಾಗಿ ವರದಿಯಾಗಿದೆ. ದೇಶದ ಸರ್ವೋಚ್ಚ ನ್ಯಾಯಾಲಯ ಈಗಲಾದರೂ ಮಧ್ಯಪ್ರವೇಶಿಸುತ್ತದೆಯೇ, ಈಗಾಗಲೇ ಆಗಿರುವುದನ್ನು ಸರಿಪಡಿಸಬಲ್ಲುದೇ ಎಂದು ಕಾದು ನೋಡಬೇಕಾಗಿದೆ.

ಈ ನಡುವೆ ಈ ರಾಜ್ಯದಲ್ಲಿ 90 ಲಕ್ಷದಷ್ಟು ಮತದಾರರ ಹೆಸರುಗಳನ್ನು ತೆಗೆದು ಹಾಕಿದ ಎಸ್ಐಆರ್ನ್ನು “ಯಶಸ್ವಿ”ಯಾಗಿ ನಡೆಸಿದ “ಪ್ರಶಂಸೆʼಗೆ ಪಾತ್ರರಾದ ರಾಜ್ಯದ ಮುಖ್ಯ ಚುನಾವಣಾಧಿಕಾರಿ(ಸಿಇಒ) ಮನೋಜ್ ಕುಮಾರ್ ಅಗರ್ವಾಲ್ರನ್ನು ಬಿಜೆಪಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಇದರ ಎರಡು ದಿನಗಳ ಹಿಂದೆ ಚುನಾವಣಾ ಆಯೋಗದ “ವಿಶೇಷ ಮತದಾರ ಪಟ್ಟಿ ವೀಕಕ್ಷಕ”ರಾಗಿ ಕೆಲಸ ಮಾಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಸುಬ್ರತ ಗುಪ್ತರನ್ನು ಮುಖ್ಯಮಂತ್ರಿಗಳ ಸಲಹಾಕಾರರಾಗಿ ನೇಮಿಸಲಾಗಿದೆ! ಇದು ಈ ಚುನಾವಣೆಯಲ್ಲಿ ಚುನಾವಣಾ ಆಯೋಗದ ಮಂದಿ ಕೇಂದ್ರದ ಆಳುವ ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂಬ ಆರೋಪವನ್ನು ಇನ್ನಷ್ಟು ಬಲಪಡಿಸಿದೆ.
ಕೋಮುವಾದೀ ಪ್ರಚಾರದ ಸ್ಪರ್ಧೆ
ಕೋಮುವಾದೀ ಪ್ರಚಾರದಲ್ಲಿ ಕೇಂದ್ರದ ಆಳುವ ಪಕ್ಷ ಮತ್ತು ರಾಜ್ಯ ಆಳುವ ಪಕ್ಷದ ನಡುವೆ ಸ್ಪರ್ಧೆ ಈ ಚುನಾವಣೆಗಳ ಇನ್ನೊಂದು ಪ್ರಮುಖ ಅಂಶ ಎಂದು ವಿಶ್ಲೇಷಣಾಕಾರರಿಗೆ ಕಂಡು ಬಂದಿದೆ. ಮುಸ್ಲಿಮ್ ಮತದಾರರು 25%ಕ್ಕಿಂತ ಹೆಚ್ಚಿರುವ 166 ಕ್ಷೇತ್ರಗಳಲ್ಲಿ ಕಳೆದ ಬಾರಿ ಟಿಎಂಸಿ 132 ಕ್ಷೇತ್ರಗಳಲ್ಲಿ ಗೆದ್ದಿತ್ತು, 33.42% ಮತ ಗಳಿಸಿತ್ತು; ಬಿಜೆಪಿ 33ರಲ್ಲಿ ಗೆದ್ದು 34.91% ಮತ ಗಳಿಸಿತ್ತು. ಈ ಬಾರಿ ಟಿಎಂಸಿ 68ರಲ್ಲಿ ಮಾತ್ರ ಗೆದ್ದಿದೆ, ಮತಗಳಿಕೆಯಲ್ಲಿ 8.29% ಇಳಿಕೆಯಾಗಿದೆ. ಬಿಜೆಪಿ ೯೧ರಲ್ಲಿ ಗೆದ್ದು 6.68% ಹೆಚ್ಚು ಮತಗಳನ್ನು ಪಡೆದಿದೆ. ಅಂದರೆ ಇದರಲ್ಲಿಯೂ ಬಿಜೆಪಿಯೇ ಮುಂದೆ.
ಇಷ್ಟೇ ಅಲ್ಲ, ಈಗ ಈ ರಾಜ್ಯದ ಮುಖ್ಯಮಂತ್ರಿಗಳಾಗಿರುವವರು, ಬಿಜೆಪಿಯ ಕೋಮುವಾದೀ ಪ್ರಚಾರದ ಸಂಕೇತವೇ ಆಗಿರುವವರು. 2021ರಿಂದ 2026ರ ನಡುವೆ ಅವರ ಭಾಷಣಗಳು ಮತ್ತು ಹೇಳಿಕೆಗಳ ಅಧ್ಯಯನ ಮಾಡಿದವರು, ಇವುಗಳಲ್ಲಿ ಕೋಮುವಾದದಿಂದ ತುಂಬಿದ ಮತ್ತು ವಿಭಜನಕಾರೀ ಟಿಪ್ಪಣಿಗಳ ಒಂದು ಸ್ಪಷ್ಟ
ಮಾದರಿಯನ್ನು ಕಾಣಬಹುದು ಎಂದಿದ್ದಾರೆ (ದಿ ವೈರ್, ಮೇ 12). ಇವರನ್ನು ಬಿಜೆಪಿಯ ಕೇಂದ್ರ ನಾಯಕತ್ವ ಮುಖ್ಯಮಂತ್ರಿಯಾಗಿ ಆರಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಬಿಜೆಪಿ ವಾಷಿಂಗ್ ಮೆಷಿನ್ನಲ್ಲಿ “ಶುಭ್ರ” ಗೊಂಡವರು
ಈ ಹೊಸ ಮುಖ್ಯಮಂತ್ರಿಗಳು ಬಿಜೆಪಿ ಆರಂಭಿಸಿದ ಹೊಸ ರಾಜಕಾರಣದ ಒಂದು ಮಾದರಿಯಾಗಿರುವುದು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಭಾರೀ ಗೆಲುವಿನ ಸ್ವರೂಪಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಮೂಲತಃ ಬೇರೆ ಪಕ್ಷಗಳಲ್ಲಿದ್ದು, ಹಗರಣಕ್ಕೆ ಸಿಲುಕಿದಾಗ ಬಿಜೆಪಿ ಸೇರಿ ಮುಖ್ಯಮಂತ್ರಿಗಳಾದವರಲ್ಲಿ ಇವರು ಐದನೆಯವರು ಎನ್ನಲಾಗಿದೆ.

ಸುವೇಂದು ಅಧಿಕಾರಿ ರಾಜಕೀಯ ಕುಟುಂಬದಿಂದ ಬಂದವರು. ಅವರ ರಾಜಕೀಯ ಜೀವನ ಆರಂಭವಾದದ್ದು ಕಾಂಗ್ರೆಸಿನ ವಿದ್ಯಾರ್ಥಿ ಸಂಘಟನೆ ʼಛಾತ್ರ ಪರಿಷದ್ʼ ನೊಂದಿಗೆ, ನಂತರ ಕಾಂಗ್ರೆಸ್ ಪಕ್ಷದಲ್ಲಿ. 1998ರಲ್ಲಿ ಅವರು ಮಮತಾ ಬ್ಯಾನರ್ಜಿ ಸ್ಥಾಪಿಸಿದ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸೇರಿ ಅವರ ಅತ್ಯಂತ ವಿಶ್ವಾಸಪಾತ್ರ
ಮುಖಂಡರಾಗಿ ಬೆಳೆದರು. 2009 ಮತ್ತು 2014ರಲ್ಲಿ ಟಿಎಂಸಿಯಿಂದ ಲೋಕಸಭೆಗೆ ಆಯ್ಕೆಯಾದರು.
2016ರಲ್ಲಿ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿ ಗೆದ್ದು ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಮಂತ್ರಿಗಳಾದರು. ಆದರೆ 25000 ಕೋಟಿ ರೂ.ಗಳ ಶಾರ್ಧಾ ಹಗರಣ ಮತ್ತು ನಾರದ ಕುಟುಕು ಕಾರ್ಯಾಚರಣೆಯಲ್ಲಿ ನಗದು ಲಂಚ ಸ್ವೀಕಾರದ ಚಿತ್ರದೊಂದಿಗೆ ಭ್ರಷ್ಟಾಚಾರದ ಆರೋಪಕ್ಕೆ ಒಳಗಾದ ಹಲವು ಟಿಎಂಸಿ ನಾಯಕರಂತೆ ಇವರೂ ಬಿಜೆಪಿಯ ಪ್ರಚಾರದ ದಾಳಿಗೆ ಗುರಿಯಾದರೂ, ಇತರ ಹಲವರಂತೆ ಇವರ ಬಂಧನವಾಗಲಿಲ್ಲ. 2020ರಲ್ಲಿ ಇವರು ಬಿಜೆಪಿ ಸೇರಿದಾಗ ಚಿತ್ರ ಸ್ಪಷ್ಟವಾಯಿತು. ಅವರ ವಿರುದ್ಧ ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿದ ಕುಟುಕು ಟಿಪ್ಪಣಿಗಳೆಲ್ಲವೂ ಈಗ ಮಾಯವಾಗಿವೆ ಎನ್ನಲಾಗಿದೆ.
ಫಲಿತಾಂಶೋತ್ತರ ಹಿಂಸಾಚಾರ
ಸುವೇಂದು ಅಧಿಕಾರಿಯವರು 2021ರ ವಿಧಾನಸಭಾ ಚುನಾವಣಾ ಫಲಿತಾಂಶಗಳಲ್ಲಿ ನಿರೀಕ್ಷಿಸಿದ್ದ ಗೆಲುವು ಬರದಿದ್ದಾಗ ಮಾಡಿದ್ದ ಒಂದು ಮುಖ್ಯ ಕೆಲಸವೆಂದರೆ ಫಲಿತಾಂಶಗಳ ನಂತರ ನಡೆದ ಹಿಂಸಾಚಾರಗಳ ದಾಖಲೆ ತಯಾರಿಸಿದ್ದು ಎನ್ನಲಾಗಿದೆ. 2026ರಲ್ಲಿ ಅವರಿಗೆ ಅದು ಸಾಧ್ಯವಾಗಿಲ್ಲ-ಬಹುಶಃ ಬೇಕಾಗಿಯೂ ಇಲ್ಲ.
ಅವರು ರವೀಂದ್ರನಾಥ ಠಾಗೋರರ ಜನ್ಮದಿನವನ್ನು ಆರಿಸಿಕೊಂಡು ಪ್ರತಿಜ್ಞೆ ಸ್ವೀಕರಿಸುವ ಹಿಂದಿನ ದಿನವೇ ಅತ್ತ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿರುವ ವಿದ್ಯಾಸಾಗರ ವಿಶ್ವ ವಿದ್ಯಾಲಯದಲ್ಲಿ ತಾವು ಎಬಿವಿಪಿಯವರು ಎಂದು ಹೇಳಿಕೊಂಡ ಒಂದು ಗುಂಪು ಕ್ಯಾಂಪಸ್ ನೊಳಗೆ ನುಗ್ಗಿ ಜೈಶ್ರೀರಾಂ ಎನ್ನುತ್ತ ಧಾಂಧಲೆ ನಡೆಸಿ ರವೀಂದ್ರನಾಥ ಠಾಗೋರರ ಪ್ರತಿಮೆಯನ್ನು ಹಾಳುಗೆಡವಿದ ಘಟನೆ ವರದಿಯಾಗಿದೆ.
ಬಂಗಾಳದ ಪ್ರಸಿದ್ಧ ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ರವರ ನೆನಪಿನ ಈ ವಿಶ್ವವಿದ್ಯಾಲಯದಲ್ಲಿದ್ದ ಅವರ ಪ್ರತಿಮೆಯನ್ನೂ ಹಾಳುಗೆಡವಲಾಗಿದೆಯಂತೆ. ಇಂತಹ ಹಿಂಸಾಚಾರಗಳು ರಾಜ್ಯಾದ್ಯಂತ ನಡೆಯುತ್ತಿವೆ, ಬೋಂಗಾವ್ನಲ್ಲಿರುವ 1859ರ ಇಂಡಿಗೋ ಕ್ರಾಂತಿಯ ಸ್ವಾರಕವನ್ನು ಕಿತ್ತು ಹಾಕಲಾಗಿದೆ. ದಕ್ಷಿಣ ದಿನಾಜ್ಪುರದಲ್ಲಿರುವ ಸಂತಾಲ್ ಬಂಡಾಯದ ವೀರರ ಪ್ರತಿಮೆಗಳನ್ನು ಹಾಳುಗೆಡವಲಾಗಿದೆ. ಅಂದರೆ ವಸಾಹತುಶಾಹಿ-ವಿರೋಧಿ ಹೋರಾಟಗಳ ನೆನಪುಗಳನ್ನು ಅಳಿಸಿ ಹಾಕುವ ಪ್ರಯತ್ನ ಆರಂಭವಾಗಿರುವಂತೆ ಕಾಣುತ್ತಿದೆ. .ಕೊಲ್ಕತ ಮಾರ್ಕೆಟ್ ಪ್ರದೇಶದಲ್ಲಿ ಬುಲ್ ಡೋಜರಿನಿಂದ ಟಿಎಂಸಿ ಕಚೇರಿಯನ್ನು ಮತ್ತು ಮಾಂಸದ ಅಂಗಡಿಗಳನ್ನು ಮುರಿಯುವ ಪ್ರಯತ್ನ ನಡೆದಿದೆ.
ವಿಶೇಷವಾಗಿ ಅಲ್ಪಸಂಖ್ಯಾತರರು ಮತ್ತು ದುಡಿಯುವ ಜನರು ವಾಸಿಸುವ ಪ್ರದೇಶಗಳಲ್ಲಿ ಹಿಂಸಾಚಾರ ಹೆಚ್ಚಾಗಿ ನಡೆಯುತ್ತಿದೆ ಎಂದು ವರದಿಯಾಗಿದೆ. ರೈಲ್ವೆ ಹಳಿಗಳ ಗುಂಟ ಬೆಳೆದು ಬಂದ ವಾಸಪ್ರದೇಶಗಳಲ್ಲಿ ಅವರನ್ನು ಒಕ್ಕಲೆಬ್ಬಿಸಲು ಇಂತಹ ಹಿಂಸಾಚಾರಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಹೆಚ್ಚಾದ ಹಿಂಸಾಚಾರ Janashakthi Media
